ಜುಲೈ 26, 2024ರಂದು ಬೆಂಗಳೂರಿನ ಮಾಂಸ ವ್ಯಾಪಾರಿ ಅಬ್ದುಲ್ ರಝಾಕ್ ಎಂಬವರು ರಾಜಸ್ಥಾನದಿಂದ ರೈಲಿನ ಮೂಲಕ ತಂದ ಕುರಿ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಮತ್ತು ತಂಡ ಆರೋಪಿಸಿತ್ತು. ಈ ಸಂಬಂಧ ಬೆಂಗಳೂರಿನ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಝಾಕ್ ಮತ್ತು ಪುನೀತ್ ತಂಡದ ನಡುವೆ ಮಾತಿನ ಚಕಮಕಿ ನಡೆದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಿ ಪುನೀತ್ ಕೆರೆಹಳ್ಳಿ ಸೇರಿದಂತೆ ಕೆಲವರನ್ನು ಬಂಧಿಸಿದ್ದರು.
ಇದೇ ವೇಳೆ ಬಿಬಿಎಂಪಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಮಾಂಸದ ಮಾದರಿಯನ್ನು ತೆಗೆದುಕೊಂಡು ಹೋಗಿದ್ದರು. ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರು.
“ಬೆಂಗಳೂರು ನಗರಕ್ಕೆ ಬಂದ ಜೈಪುರ–ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ 120 ಬಾಕ್ಸ್‌ಗಳಲ್ಲಿ 4,500 ಕೆ.ಜಿಯಷ್ಟು ನಾಯಿಯ ಮಾಂಸ ತರಲಾಗಿದೆ. ಇದನ್ನು ಅಬ್ದುಲ್ ರಝಾಕ್ ಮಾಲೀಕತ್ವದ ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನಿತ್ಯ ನೂರಾರು ಬಾಕ್ಸ್‌ನಲ್ಲಿ ಮಾಂಸ ತರಲಾಗುತ್ತಿದೆ” ಎಂದು ಪುನೀತ್ ಕೆರೆಹಳ್ಳಿ ಮತ್ತು ತಂಡ ಆರೋಪಿಸಿತ್ತು.
ಈ ಆರೋಪವನ್ನೆ ಆಧಾರವಾಗಿಟ್ಟುಕೊಂಡು ಬಲಪಂಥೀಯ ಯೂಟ್ಯೂಬ್ ಚಾನೆಲ್ ಟಿವಿ ವಿಕ್ರಮ “ಮುಸ್ಲಿಂ ವ್ಯಾಪಾರಿಗಳು ಹಿಂದೂಗಳಿಗೆ ನಾಯಿ ಮಾಂಸ ತಿನ್ನಿಸುವ ಮೂಲಕ ಮೋಸ ಮಾಡುತ್ತಿದ್ದಾರೆ” ಎಂಬ ಕೋಮು ದ್ವೇಷದ ನಿರೂಪಣೆಯೊಂದಿಗೆ ಕಾರ್ಯಕ್ರಮ ರೂಪಿಸುವುದಲ್ಲದೆ, ಮುಸ್ಲಿಮರೇ ಈ ಕೃತ್ಯದ ವಿರುದ್ದ ಧನಿ ಎತ್ತಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿತ್ತು.

ಸುದ್ದಿಯಲ್ಲಿ ಟಿವಿ ವಿಕ್ರಮದ ನಿರೂಪಕಿ ಹೀಗೆ ಹೇಳುತ್ತಾರೆ, “ಇಲ್ಲಿಯವರೆಗೆ ರಾಜ್ಯದಲ್ಲಿ ಗೋವುಗಳು ಮಾತ್ರ ಸೇಫ್ ಅಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ನಾಯಿಗಳಿಗೂ ಸೇಫ್ ಇಲ್ಲ. ಬೀದಿ ನಾಯಿಗಳು ಖಾಲಿಯಾದ ಮೇಲೆ ಅಬ್ದುಲ್ ರಝಾಕ್ ಆಂಡ್ ಗ್ಯಾಂಗ್ ಮನೆಯಲ್ಲಿ ಸಾಕು ನಾಯಿಗಳನ್ನು ಕದ್ದು ನಾಯಿ ಮಾಂಸ ಮಾರಾಟ ಮಾಡಬಹುದು”.
ಹಾಗಿದ್ದರೆ ಟಿವಿ ವಿಕ್ರಮ ನಿರೂಪಕಿ ಆರೋಪಿಸಿದಂತೆ ಪುನೀತ್ ಕೆರೆಹಳ್ಳಿ ಮತ್ತು ತಂಡ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಗಲಾಟೆ ಮಾಡಿದ ವೇಳೆ ಸಿಕ್ಕ ಬಾಕ್ಸ್‌ಗಳಲ್ಲಿ ಇದ್ದದ್ದು ನಾಯಿ ಮಾಂಸ ಎಂಬುವುದು ನಿಜವೇ? ಎಂದು ನೋಡೋಣ.
ಫ್ಯಾಕ್ಟ್‌ಚೆಕ್ : ಪುನೀತ್ ಕೆರೆಹಳ್ಳಿ ಮತ್ತು ತಂಡ ಆರೋಪಿಸಿದಂತೆ ಅಬ್ದುಲ್ ರಝಾಕ್ ರಾಜಸ್ಥಾನದಿಂದ ಬೆಂಗಳೂರಿಗೆ ತಂದಿರುವುದು ಮೇಕೆ ಮಾಂಸ. ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂಬುವುದು ಸುಳ್ಳು ಎಂದು ಗೊತ್ತಾಗಿದೆ. ಸ್ವತಃ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ ಈ ವಿಚಾರವನ್ನು ದೃಢಪಡಿಸಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, “ಮಾಂಸದ ವ್ಯಾಪಾರಿ ರಾಜಸ್ಥಾನದಿಂದ ಪ್ರತಿ ವಾರಕ್ಕೆ, 15 ದಿನಗಳಿಗೊಮ್ಮೆ ಅಥವಾ ಬೇಕಾದ ಸಂದರ್ಭದಲ್ಲಿ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಅನಾವಶ್ಯಕವಾಗಿ ಏನೇನೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಕೆ ರವಾನಿಸಿದ್ದಾರೆ.

ರಾಜ್ಯದ ಗೃಹ ಸಚಿವರೇ ಹೇಳಿರುವಂತೆ ಪ್ರಯೋಗಾಲಯದಿಂದ ಬಂದಿರುವ ವರದಿಯಲ್ಲಿ ರಾಜಸ್ಥಾನದಿಂದ ಬಂದಿರುವುದು ನಾಯಿ ಮಾಂಸವಲ್ಲ ಮೇಕೆ ಮಾಂಸ ಎಂದು ದೃಢಪಟ್ಟಿದೆ. ಹಾಗಾದರೆ, ಟಿವಿ ವಿಕ್ರಮ ತಂಡ ಹೀಗೆ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಹಿಂದಿನ ಉದ್ದೇಶವಾದರೂ ಏನು? ಇವರ ಮೇಲೆ ಯಾವುದೇ ಕ್ರಮವಿಲ್ಲವೇ ಎಂದು ಸಾರ್ಜವನಿಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ : FACT CHECK : ಬಾಂಗ್ಲಾದೇಶದಲ್ಲಿ ರಸ್ತೆಯಲ್ಲಿ ನಮಾಝ್ ಮಾಡಿದ ಕಾರಣಕ್ಕೆ ಮುಸ್ಲಿಂ ಧರ್ಮಗುರುವನ್ನು ಬಂಧಿಸಲಾಗಿದೆ ಎಂಬುವುದು ಸುಳ್ಳು


