ಯೂಟ್ಯೂಬರ್ ಒಬ್ಬರು ನಿರುದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಆಝಂಗಢ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅಥವಾ ನಿರಹುವಾ ಅವರು “ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಮಕ್ಕಳನ್ನು ಮಾಡಿಕೊಳ್ಳದೆ ನಿರುದ್ಯೋಗ ತಡೆದಿದ್ದಾರೆ. ಮಕ್ಕಳನ್ನು ಹೊಂದುವವರೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣ” ಎಂದು ಹೇಳಿದ್ದರು.
ಈ ಕುರಿತು ವಿಡಿಯೋವನ್ನು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
"मोदी जी-योगी जी ने एक भी बच्चा पैदा नही किया ताकि देश में बेरोजगारी न बढ़े': BJP सांसद निरहुआ 🤣 pic.twitter.com/5oSPa15yv4
— Srinivas BV (@srinivasiyc) April 15, 2024
ಶ್ರೀನಿವಾಸ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದ ನಿರಹುವಾ ಅವರು, “ಇದು ನಕಲಿ ವಿಡಿಯೋ. ಅದರಲ್ಲಿ ಆಡಿದ ಮಾತಿಗೆ ತುಟಿಗಳು ಹೊಂದಾಣಿಕೆಯಾಗುತ್ತಿಲ್ಲ (ಲಿಪ್ ಸಿಂಕ್ ಆಗುತ್ತಿಲ್ಲ) ಎಂದು ಯಾರಿಗೆ ಬೇಕಾದರೂ ಗೊತ್ತಾಗುತ್ತದೆ. ಧ್ವನಿಯನ್ನು ಕ್ಲೋನಿಂಗ್ ಮಾಡುವ ಮೂಲಕ ನೀವು ಏನನ್ನು ಸಾಬೀತುಪಡಿಸಲು ಬಯಸುತ್ತೀರಿ?” ಎಂದು ಪ್ರಶ್ನಿಸಿದ್ದರು.

ಬಿವಿ ಶ್ರೀನಿವಾಸ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, “ಜನರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಡೀಪ್ ಫೇಕ್‌ಗಳನ್ನು ಬಳಸುತ್ತಿದೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಒಡಕು ಮೂಡಿಸುತ್ತಿದ್ದಾರೆ. ಆಝಂಗಢದ ಬಿಜೆಪಿ ಸಂಸದರು ಯುವ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲಿಸಲಿದ್ದಾರೆ ಮತ್ತು ಈ ವಿಷಯವನ್ನು ಭಾರತದ ಚುನಾವಣಾ ಆಯೋಗದೊಂದಿಗೆ ದೂರು ನೀಡಲಿದ್ದಾರೆ” ಎಂದಿದ್ದರು.

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತಜೀಂದರ್ ಬಗ್ಗಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, “ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ಅವರ ‘ನಕಲಿ ವಿಡಿಯೋ’ ಶೇರ್ ಮಾಡಿರುವ ಕಾಂಗ್ರೆಸ್ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರನ್ನು ಒತ್ತಾಯಿಸಿದ್ದರು.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾನುಗೌರಿ.ಕಾಂ ಮೂಲ ವಿಡಿಯೋ ಹುಡುಕಿದೆ. ಈ ವೇಳೆ ‘Soul up Hindi’ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ವಿಡಿಯೋ ದೊರೆತಿದೆ.

ಒಟ್ಟು 11 ನಿಮಿಷ 51 ಸೆಕೆಂಡ್ ಅವಧಿಯ ವಿಡಿಯೋದಲ್ಲಿ 11 ನಿಮಿಷ 27 ಸೆಕೆಂಡ್‌ನಲ್ಲಿ ಬಿವಿ ಶ್ರೀನಿವಾಸ್ ಹಂಚಿಕೊಂಡಿರುವ ವೈರಲ್ ವಿಡಿಯೋ ಇದೆ. ಹಾಗಾಗಿ, ವೈರಲ್ ಆಗಿರುವುದು ನಿಜವಾದ ವಿಡಿಯೋ ಡೀಪ್ ಫೇಕ್ ಅಲ್ಲ ಎಂಬುವುದು ಖಚಿತ.
ವೈರಲ್ ವಿಡಿಯೋವನ್ನು ಆಝಂಗಢದಲ್ಲಿ ಚಿತ್ರೀಕರಿಸಿಲಾಗಿದ್ದು, ಏಪ್ರಿಲ್ 13, 2024ರಂದು ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಹೇಳುವಂತೆ ಸಂಸದ ಯಾದವ್ ಅವರು ಗ್ರಾಮ ಗ್ರಾಮಗಳಿಗೆ ಜನರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ವೇಳೆ ವಿಡಿಯೋ ಚಿತ್ರಿಸಲಾಗಿದೆ.
ಇದನ್ನೂ ಓದಿ : Fact Check : ಕೇರಳ ಸರ್ಕಾರ ಶಾಲಾ ಪಠ್ಯ ಪುಸ್ತಕದಲ್ಲಿ ಹಿಂದೂಗಳನ್ನು ಕೀಳಾಗಿ ಚಿತ್ರಿಸಿದೆ ಎಂಬುವುದು ಸುಳ್ಳು


