ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿಪೂಜೆ ನೆರವೇರಿದ ನಂತರ ರಾಮರಾಜ್ಯ ಶುರುವಾಗಿದೆ. ಕೇವಲ ಹಿಂದೂ ದೇವಾಲಯಗಳಿಂದ ಏಕೆ ಸರ್ಕಾರ ಕಾಣಿಕೆ ಹುಂಡಿ ಹಣ ತೆಗೆದುಕೊಳ್ಳುತ್ತದೆ? ಮುಸ್ಲಿಂ, ಕ್ರಿಶ್ಚಿಯನ್ ದೇವಾಲಯಗಳಿಂದ ಏಕೆ ಹಣ ತೆಗೆದುಕೊಳ್ಳುವುದಿಲ್ಲ? ಇದನ್ನು ದಿಟ್ಟವಾಗಿ ವಿರೋಧಿಸುತ್ತಿದ್ದಾರೆ ಎಂಬ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ರಾಮರಾಜ್ಯದಲ್ಲಿ ಬದಲಾವಣೆ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ, ಸರ್ಕಾರಿ ಅಧಿಕಾರಿಗಳು ಹುಂಡಿ ಹಣವನ್ನು ಸಂಗ್ರಹಿಸಲು ಬಂದಾಗ ಅವರು ಚರ್ಚ್ ಮತ್ತು ಮಸೀದಿಯಿಂದ ದೇಣಿಗೆ ಸಂಗ್ರಹಿಸಿ ಎಂದು ಒತ್ತಾಯಿಸಿದ್ದಾರೆ. ದಯವಿಟ್ಟು ಇದನ್ನು ವೈರಲ್ ಮಾಡಿ ಎಂಬ ಶೀರ್ಷಿಕೆಯಲ್ಲಿ ರಾಮರಾಜ್ಯ ಬಿಗಿನ್ಸ್ ಎಂಬ ಟ್ವಿಟ್ಟರ್ ಅಕೌಂಟ್‌ನಿಂದ ವಿಡಿಯೋವೊಂದನ್ನು ಆಗಸ್ಟ್ 8 ರಂದು ಪೋಸ್ಟ್ ಮಾಡಲಾಗಿದೆ.
Change started in #RamRajya
In Karnataka, when the govt servants came to collect the?hundi money they demanded them to get the donations from Church & Masjid
Please make this viral #RamBhakts pic.twitter.com/6BLQBb4EHW
— #RamRajya Begins?? (@TapasNiyama) August 7, 2020
ಅಲ್ಲದೇ ಅದ್ವೈತ ಕಾಲ ಎಂಬ ಟ್ವಿಟ್ಟರ್ ಅಕೌಂಟ್‌ನಿಂದ “ಕರ್ನಾಟಕದ ದೇವಸ್ಥಾನವೊಂದರಲ್ಲಿ ಕಾಣಿಕೆ ಹುಂಡಿಯನ್ನು ಅಧಿಕಾರಿಗಳು ಇಡಲು ಬಂದಾಗ ಅರ್ಚಕರು ತೀವ್ರವಾಗಿ ವಿರೋಧಿಸಿದ್ದಾರೆ. ಭಕ್ತರ ಕಾಣಿಕೆಯ ಹಣ ಹಿಂದೂಗಳಿಗೆ ಬಳಕೆಯಾಗದಿದ್ದರೆ ಹುಂಡಿ ಏಕೆ ಇಡಬೇಕು” ಎಂಬ ಶೀರ್ಷಿಕೆಯೊಂದಿಗೆ ಅದೇ ವಿಡಿಯೋವನ್ನು ಷೇರ್ ಮಾಡಲಾಗಿದೆ.
कर्नाटक के पुजारियों ने मंदिर से दान पेटी हटाना शुरू कर दी है। कहा यदि भक्तों का पैसा हिंदुओं के लिए प्रयोग नहीं हो तो दान पेटी क्यों?
मंदिर सरकारी नियंत्रण से मुक्त होएंगे? pic.twitter.com/SX86K7UJvp— अद्वैता काला #StayHome ? (@AdvaitaKala) August 8, 2020
ಈ ಎರಡು ಪೋಸ್ಟ್‌ಗಳು ಸಾವಿರಾರು ಲೈಕ್‌ಗಳನ್ನು ಗಳಿಸಿದ್ದು, ತಲಾ ಐದು ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿವೆ. ಜೊತೆಗೆ ಫೇಸ್‌ಬುಕ್‌ನಲ್ಲಿಯೂ ಸಹ ಇದೇ ರೀತಿ ಆರೋಪಿಸಿ ಆ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್:
ಈ ವಿಡಿಯೋ ಕರ್ನಾಟಕದ ಕೋಲಾರ ಟೌನ್‌ನಲ್ಲಿರುವ ಕೋಲಾರಮ್ಮ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದ್ದು, ಈ ಘಟನೆ ಅಕ್ಟೋಬರ್ 31, 2015 ರಂದು 5 ವರ್ಷಗಳ ಹಿಂದೆಯೇ ಸಂಭವಿಸಿದೆ. ಆದರೆ ಈ ವಿಡಿಯೋ ಪ್ರತಿ ವರ್ಷವೂ ಸಾಮಾಜಿಕ ಜಾಲಾತಾಣದಲ್ಲಿ ವಿವಿಧ ಶೀರ್ಷಿಕೆಗಳಲ್ಲಿ ವೈರಲ್ ಆಗುತ್ತಿದೆ.
ವಾಸ್ತವವೇನು?
ಕೋಲಾರಮ್ಮ ದೇವಾಲಯ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ. ಹಾಗಾಗಿ 2007ರಲ್ಲಿಯೇ ಅಲ್ಲಿ ಸರ್ಕಾರದ ವತಿಯಿಂದ ಕಾಣಿಕೆ ಹುಂಡಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ ಅಲ್ಲಿನ ಅರ್ಚಕರು ನಮಗೆ ಸರ್ಕಾರ ಸಂಬಳ ಕೊಡುವುದಿಲ್ಲ. ಭಕ್ತರು ಕೊಡುವ ಕಾಣಿಕೆಯಿಂದಲೇ ನಮ್ಮ ಜೀವನ ನಡೆಯುತ್ತದೆ ಹಾಗಾಗಿ ಹುಂಡಿ ಇಟ್ಟರೆ ಕಾಣಿಗೆ ನಮಗೆ ಸಿಗುವುದಿಲ್ಲ ಎಂದು ಹುಂಡಿಯನ್ನು ತೆರವುಗೊಳಿಸಿದ್ದರು. ವಿಷಯ ಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ಅರ್ಚಕರ ವಿರುದ್ಧ ತೀರ್ಪು ನೀಡಿತ್ತಲ್ಲದೇ ಅಲ್ಲಿ ಕಾಣಿಕೆ ಹುಂಡಿ ಇಡಲು ಸರ್ಕಾರಕ್ಕೆ ಆದೇಶಿಸಿತ್ತು.
ಕೋರ್ಟ್ ಆದೇಶದನ್ವಯ ಆಗಿನ ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ ತ್ರಿಲೋಕಚಂದ್ರ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳು ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಇಡಲು ಮುಂದಾಗಿದ್ದರು. ಆಗ ಸಿಡಿದೆದ್ದ ಅರ್ಚಕರು “ನಾವು ಸತ್ತರೂ ಸರಿಯೇ ಹುಂಡಿಯನ್ನು ಇಡಲು ಬಿಡುವುದಿಲ್ಲ” ಎಂದು ಅದನ್ನು ಹೊರತಳ್ಳಲು ಯತ್ನಸಿದ್ದರು. ಅಧಿಕಾರಿಗಳು ಮತ್ತು ಅರ್ಚಕರ ನಡುವೆ ಜಟಾಪಟಿ ನಡೆದಿತ್ತು.
ಈ ದೇವಸ್ಥಾನ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿದೆ. ಮುಜರಾಯಿ ಅಡಿಯಲ್ಲಿಲ್ಲ ನಾವು ಹಿಂದಿನಿಂದಲೂ ವಂಶಪಾರಂಪರ್ಯವಾಗಿ ಈ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸರ್ಕಾರದಿಂದ ಸಂಬಳ ಬರುತ್ತಿಲ್ಲ. ಭಕ್ತಾದಿಗಳು ಹಾಕುವ ತಟ್ಟೆ ಹಣದಲ್ಲೆ ಜೀವನ ಸಾಗಿಸುತ್ತಿದ್ದೇವೆ. 8 ಜನ ಅರ್ಚಕರಿದ್ದು ಸರ್ಕಾರ ಇಲ್ಲಿ ಹುಂಡಿ ಇಟ್ಟರೆ ನಾವು ಬದುಕುವುದೇಗೆ? ಸತ್ತರೂ ಸರಿಯೇ ಹುಂಡಿ ಇಡಲು ಬಿಡುವುದಿಲ್ಲ ಎಂದು ಪ್ರಧಾನ ಅರ್ಚಕ ಚಂದ್ರಶೇಖರ್ ದೀಕ್ಷಿತ್ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿಗಳು “ಅರ್ಚಕರನ್ನು ಮುಜರಾಯಿ ಇಲಾಖೆ ನೇಮಿಸಿಲ್ಲ. ಅವರಿಗೆ ಅನ್ಯಾಯವಾಗಿದ್ದರೆ ಕಾನೂನು ಹೋರಾಟ ನಡೆಸಲಿ. ಅದು ಬಿಟ್ಟು ಹೀಗೆ ಬೀದಿ ರಂಪಾಟ ಮಾಡುವುದು ಸರಿಯಲ್ಲ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
ಈ ಕುರಿತು ಕನ್ನಡದ ದಿನಪತ್ರಿಕೆ ಪ್ರಜಾವಾಣಿ ವಿವರವಾಗಿ ವರದಿ ಮಾಡಿತ್ತು.
ಅಲ್ಲದೇ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಈ ಹಿಂದೆಯೇ ಹುಂಡಿ ಇಡಲು ಅರ್ಚಕರು ವಿರೋಧಿಸಿದ್ದೇಕೆ ಎಂದು ವಿವರಿಸಿ ವಿಡಿಯೋ ಷೇರ್ ಮಾಡಿದ್ದಾರೆ.
ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿರುವ ಕೋಲಾರದ ಕೋಲಾರಮ್ಮ ದೇವಸ್ಥಾನದಲ್ಲಿ ದೇವರ ಹುಂಡಿ ಇಡಬಾರದೆಂದು, ಭಕ್ತರು ಹಾಕುವ ಕಾಣಿಕೆಗಾಗಿ ಪೊಲೀಸರ ವಿರುದ್ದವೆ ರೌಡಿಗಳಂತೆ ಎಗರಾಡುತ್ತಿರುವ ದೇವಸ್ಥಾನಗಳಲ್ಲಿ 90% ಮೀಸಲಾತಿ ಪಡೆದ ಫಲಾನುಭವಿಗಳು, ಇವರಿಗೆ ಬಿಜೆಪಿ ಮೋದಿ ಸರ್ಕಾರ ಮತ್ತೆ ಎಕ್ಸ್ ಟ್ರಾ 10% ಮೀಸಲಾತಿ ಕೊಡುತ್ತಿದೆ.ಇದು ನ್ಯಾಯ ಸಮ್ಮತವೇ!!!???ಮರಿದೇವಯ್ಯ.ಎಸ್ಅಧ್ಯಕ್ಷರುಮೈಸೂರು ವಿ.ವಿ ಸಂಶೋಧಕರ ಸಂಘ
Posted by Maridevu Devu on Monday, July 27, 2020
ಒಟ್ಟಿನಲ್ಲಿ ತಮ್ಮ ಜೀವನಕ್ಕೆ ಅನ್ಯಾಯವಾಗುತ್ತಿದೆ ಎಂದು ಅರ್ಚಕರು ವಿರೋಧ ವ್ಯಕ್ತಪಡಿಸಿದ 5 ವರ್ಷದಷ್ಟು ಹಳೆಯ ವಿಡಿಯೋವನ್ನು ರಾಮಮಂದಿರ ಶಿಲಾನ್ಯಾಸಕ್ಕೆ ಸಂಬಂಧಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ?


