ಕನ್ನಡಿಗರ ಹೃದಯದಲ್ಲಿ ನೆಲೆಸಿರುವ ಪುನೀತ್ ರಾಜ್‌ಕುಮಾರ್, ಎಲ್ಲರ ಪ್ರೀತಿಯ ನಟ ಅಪ್ಪು ಅವರು ಅಗಲಿ ಒಂದು ವರ್ಷವಾಗಿದೆ. ಪುನೀತ್ ಅವರ ಪ್ರಕೃತಿ ಪ್ರೀತಿಯನ್ನು ದಾಖಲಿಸಿರುವ ‘ಗಂಧದಗುಡಿ’ ಸಾಕ್ಷ್ಯಚಿತ್ರವೂ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಅಪ್ಪು ನಮ್ಮನ್ನು ನಿನ್ನೆ ಮೊನ್ನೆಯೋ ಬಿಟ್ಟು ಹೋದರೇನೋ ಎಂಬಂತೆ ಭಾಸವಾಗುತ್ತಿದೆ. ಅವರ ಕುರಿತು ಯಾರಾದರೂ ಹಗುರವಾಗಿ ಮಾತನಾಡುವುದನ್ನು ಕನ್ನಡಿಗರು ಊಹಿಸುವುದೂ ಇಲ್ಲ, ಸಹಿಸುವುದಿಲ್ಲ ಇಲ್ಲ. ಈ ಹೊತ್ತಿನಲ್ಲಿ ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆಯವರು ಹಗುರವಾಗಿ ಮಾತನಾಡಿದ್ದಾರೆಂದು ಪ್ರತಿಪಾದಿಸಿ ಪೋಸ್ಟರ್‌ವೊಂದು ವೈರಲ್ ಆಗುತ್ತಿದೆ.
“ಪುನೀತ್ ಅವರನ್ನು ಇಷ್ಟೊಂದು ಆರಾಧಿಸುವ ಅಗತ್ಯವೇನಿದೆ. ಅವರೇನು ಸೈನಿಕರೇ?- ಚಕ್ರವರ್ತಿ ಸೂಲಿಬೆಲೆ” ಎಂದಿರುವ ಪೋಸ್ಟರ್‌ಅನ್ನು ಸಾಕಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ‘ಬಿ ಟಿವಿ’ ಚಾನೆಲ್ ವರದಿ ಮಾಡಿರುವಂತೆ ಈ ಪೋಸ್ಟರ್ ರೂಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಾಟ್ಸ್‌ಅಪ್‌ನಲ್ಲಿ ಹರಿದಾಡಿರುವ ಈ ಪೋಸ್ಟರ್ ಅನ್ನು ಅನೇಕರು ಫೇಸ್‌ಬುಕ್‌ನಲ್ಲೂ ಹಂಚಿಕೊಂಡಿದ್ದಾರೆ. ಕೆಲವರು ಡಿಲೀಟ್ ಕೂಡ ಮಾಡಿದ್ದಾರೆ. ವಾಟ್ಸ್‌ಅಪ್ ಗ್ರೂಪ್‌ಗಳಲ್ಲಿ ಸೂಲಿಬೆಲೆಯವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

“ಮೊದಲು ಹಂಸಲೇಖ. ಆಮೇಲೆ ಚೇತನ್ ಅಹಿಂಸಾ. ಇವಾಗ ಡಾಲಿ ಧನಂಜಯ. ಮತ್ತೆ ಪುನೀತ್ ರಾಜ್ ಕುಮಾರ್ ರವರ ಬಳಿ ಬರ್ತಿದಾರೆ. ಇದಕ್ಕೆ ಅಭಿಮಾನಿಗಳೇ ಉತ್ತರ ನೀಡ್ತಾರೆ. ಇದ್ಯಾಕೋ ಅತಿ ಅಯ್ತು ಅನ್ಸಲ್ವಾ?” ಎಂದು ಅಪ್ಪು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಡಾ.ಪುನೀತ್ ರಾಜ್ ಕುಮಾರ್ ನಮಗೆಲ್ಲ ಸ್ಪೂರ್ತಿ. ಅವರನ್ನು ಕಳೆದುಕೊಂಡಾಗ ಕರ್ನಾಟಕದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ. ನಮ್ಮ ಅಪ್ಪು ಬಗ್ಗೆ ಮಾತನಾಡುವ ಅರ್ಹತೆಯೂ ನಿಮಗಿಲ್ಲ. ನಮ್ಮ ಪರಮಾತ್ಮ, ನಿಮ್ಮಂತೆ ನಮಗೆ ಸುಳ್ಳು ಹೇಳಿಲ್ಲ” ಎಂದು ಯೂತ್ ಕಾಂಗ್ರೆಸ್ ಕರ್ನಾಟಕ ಘಟಕವು ಟ್ವೀಟ್ ಮಾಡಿದೆ. (ಅರ್ಕೈವ್ ಲಿಂಕ್)
ಡಾ ಪುನೀತ್ ರಾಜ್ ಕುಮಾರ್ ನಮಗೆಲ್ಲ ಸ್ಪೂರ್ತಿ.
ಅವರನ್ನು ಕಳೆದುಕೊಂಡಾಗ ಕರ್ನಾಟಕದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ.ನಮ್ಮ ಅಪ್ಪು ಬಗ್ಗೆ ಮಾತನಾಡುವ ಅರ್ಹತೆಯೂ ನಿಮಗಿಲ್ಲ.
ನಮ್ಮ ಪರಮಾತ್ಮ, ನಿಮ್ಮಂತೆ ನಮಗೆ ಸುಳ್ಳು ಹೇಳಿಲ್ಲ!#ChakravarthiSulibele#40PercentSarkara #BJPBrashtotsava #be… https://t.co/rjbDufpqnl pic.twitter.com/Ya3kHcDgdD
— IYC Karnataka (@IYCKarnataka) October 29, 2022
“ಈ ರೀತಿಯಲ್ಲಿ ಬಿಟಿವಿ ವರದಿ ಮಾಡಿದೆಯೇ?” “ಸುದ್ದಿ ನಿಜವೇ?” ಎಂದು ‘ನಾನುಗೌರಿ.ಕಾಂ’ ಪರಿಶೀಲಿಸಿದೆ. ‘ಬಿ ಟಿವಿ’ಯ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಸಂಪರ್ಕಿಸಿದಾಗ, “ಈ ರೀತಿಯ ಶೀರ್ಷಿಕೆಯಲ್ಲಿ ಯಾವುದೇ ಸುದ್ದಿಯನ್ನು ನಾವು ಮಾಡಿಲ್ಲ. ಆದರೆ ಬಿ.ಟಿ.ಯ ಮಾದರಿಯಲ್ಲೇ ಪೋಸ್ಟರ್ ಎಡಿಟ್ ಮಾಡಲಾಗಿದೆ. ಹಿಂದೊಮ್ಮೆ ಆಗಿದ್ದ ಸುದ್ದಿಯಲ್ಲಿ ಶೀರ್ಷಿಕೆಯನ್ನು ಅಳಸಿ, ಬೇರೆ ಶೀರ್ಷಿಕೆ ನೀಡಿ ವೈರಲ್ ಮಾಡಿದ್ದಾರೆ. ಸೂಲಿಬೆಲೆಯವರು ಪುನೀತ್ ರಾಜ್‌ಕುಮಾರ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದು ಚರ್ಚೆಯಾಗಿತ್ತು. ಈಗ ವೈರಲ್ ಆಗುತ್ತಿರುವ ಪೋಸ್ಟರ್‌ಗೂ ಬಿಟಿವಿಗೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು. ಬಿಟಿವಿ ಮಾಡಿದ್ದ ಹಳೆಯ ಸುದ್ದಿ ತುಣುಕನ್ನು ‘ನಾನುಗೌರಿ.ಕಾಂ’ ಗಮನಕ್ಕೆ ತಂದರು.
“ಹಿಂದೂಗಳ ರಕ್ಷಣೆ ನೀವೇ ಮಾಡುತ್ತೀರೋ, ನಾವೇ ಮಾಡಿಕೊಳ್ಳಬೇಕಾ… ಗೃಹ ಸಚಿವರಿಗೆ ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ…” ಎಂಬ ಶೀರ್ಷಿಕೆಯಲ್ಲಿ ‘ಬಿ ಟಿವಿ’ ಮಾಡಿರುವ ವರದಿಯಲ್ಲಿ ಬಳಸಲಾಗಿರುವ ಪೋಸ್ಟರ್‌ನಲ್ಲಿ ‘ಸರ್ಕಾರ ಹಾಗೂ ಇಂಟೆಲಿಜೆನ್ಸ್ ವಿಫಲವಾಗಿದೆ’ ಎಂದು ಬರೆದಿರುವುದನ್ನು ಕಾಣಬಹುದು.

ಅಪ್ಪು ಬಗ್ಗೆ ಹಗುರವಾಗಿ ಮಾತನಾಡಿದ ಆರೋಪ; ನಂತರ ಕ್ಷಮೆಯಾಚಿಸಿದ್ದ ಸೂಲಿಬೆಲೆ
“ಚಕ್ರವರ್ತಿ ಸೂಲಿಬೆಲೆ ಅಪ್ಪು ಬಗ್ಗೆ ಹಗುರವಾಗಿ ಟ್ವೀಟ್ ಮಾಡಿದ ಆರೋಪಕ್ಕೆ ಈ ಹಿಂದೆ ಗುರಿಯಾಗಿದ್ದರು.” ಬೊಮ್ಮಾಯಿಯವರನ್ನು ಟೀಕಿಸುವ ಭರದಲ್ಲಿ ಅಪ್ಪು ಅವರ ಸಾವಿನ ಸಂದರ್ಭದ ಬಗ್ಗೆ ಲಘುವಾಗಿ ಟ್ವೀಟ್ ಮಾಡಿದ್ದು ಆಕ್ಷೇಪಗಳಿಗೆ ಕಾರಣವಾಗಿತ್ತು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಟೀಕಿಸುತ್ತಾ ಚಕ್ರವರ್ತಿ ಸೂಲಿಬೆಲೆ, ಪುನೀತ್ ರಾಜ್‌ಕುಮಾರ್‌ರನ್ನು ಅವಮಾನಿಸಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ತದನಂತರ ಸೂಲಿಬೆಲೆ ಕ್ಷಮೆಯಾಚಿಸಿದ್ದರು.
ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ಸಂಸದ ಜಿ.ಎಂ ಸಿದ್ದೇಶ್ವರರವರು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ಕೊಟ್ಟರೆ ತೊಂದರೆಯಿಲ್ಲ, ಬೇಕಾದಷ್ಟು ಜನರಿದ್ದಾರೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ಚಕ್ರವರ್ತಿ ಸೂಲಿಬೆಲೆ, ರಾಜ್ಯ ಬಿಜೆಪಿ ಸರ್ಕಾರ ಮತ್ತು ಸಿಎಂ ಬಸವರಾಜ ಬೊಮ್ಮಾಯಿಯವರ ವಿರುದ್ಧ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ ಅಪ್ಪು ಸಾವಿನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೂರು ದಿನ ಸಮಯ ಏಕೆ ನೀಡಬೇಕಿತ್ತು ಎಂಬರ್ಥದಲ್ಲಿ ಬರೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
“ನಮ್ಮ ಫೈಲ್‌ಗಳಿಗೆ ಸಹಿ ಹಾಕುವಷ್ಟು ಸಿಎಂಗೆ ಸಮಯವಿಲ್ಲವೆ ಎಂದು ಕೆಲ ಶಾಸಕರು ದೂರುತ್ತಿದ್ದಾರೆ. ಆದರೆ ಪ್ರೀಮಿಯರ್ ಸಿನಿಮಾಗಳನ್ನು ನೋಡಿ ಕಣ್ಣೀರು ಹಾಕಲು ಅವರಿಗೆ ಸಮಯವಿದೆ. ಸಿನಿಮಾ ನಟರೊಬ್ಬರ ಸಾವಿನ ಸಂದರ್ಭದಲ್ಲಿ ಅದರಲ್ಲಿ ತೊಡಗಿಸಿಕೊಳ್ಳಲು ಮೂರು ದಿನ ಸಮಯ ನೀಡಿದ್ದರು. ಈಗಲೂ ಸಾಕಷ್ಟು ಪ್ರತಿರೋಧ ಬಾರದಿದ್ದರೆ ಅವರು ಖಂಡಿತ ವಿಕ್ರಾಂತ್ ರೋಣ ಸಿನಿಮಾ ನೋಡುತ್ತಿದ್ದರು” ಎಂದು ಸೂಲಿಬೆಲೆ ಅಣಕ ಮಾಡಿದ್ದರು.
“ಉಪಯೋಗಕ್ಕೆ ಬಾರದ ಸಿಎಂನ ಏನಾದ್ರೂ ಬೈದುಕೊ. ಆದ್ರೆ ಪುನೀತ್ ರಾಜ್ಕುಮಾರ್ ಅವರನ್ನು ಕೇವಲ ಒಬ್ಬ ನಟ ಅನ್ನಬೇಡ ಮೂರ್ಖ. ಅವರು ನಮ್ಮ ರಾಜ್ಯದ ಸಾಂಸ್ಕೃತಿಕ ರಾಯಭಾರಿ. ನಿಮ್ಮ ಧರ್ಮಾಂಧತೆ ವಿಷಯಕ್ಕೆ ಅವರು ಯಾವತ್ತೂ ಸೊಪ್ಪು ಹಾಕಿಲ್ಲ. ಅಮಾಯಕರು ಸಾಯ್ತಾ ಇರೋದು ನಿನ್ನಂಥ ಅಯೋಗ್ಯರಿಂದ. ಜನರನ್ನು ಕೊಂದು ಉಳಿಸುವ ಧರ್ಮ ಯಾವುದು ಇಲ್ಲ” ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
MLAs complain that CM not even signs file may be lack of time😂
But he has all the time to watch Premier movies and shed tears. During the death of Movie Actor, he gave his three days to get involved.
If not this outrage he would have watched VIkrantRona for sure 14/n— Chakravarty Sulibele (@astitvam) August 1, 2022
ಇದನ್ನೂ ಓದಿರಿ: ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ
ಜನರ ವಿರೋಧದ ಬಳಿಕ ಸೂಲಿಬೆಲೆ, “ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು” ಎಂದು ಸ್ಪಷ್ಟಪಡಿಸಿದ್ದರು.
ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು.🙏 pic.twitter.com/JRd3Bt4g8o
— Chakravarty Sulibele (@astitvam) August 1, 2022


