ಸ್ವತಃ ಕಾಂಗ್ರೆಸ್ ವಕ್ತಾರರೊಬ್ಬರು ಪ್ರಧಾನಿ ನರೇಂದ್ರ ಮೋದಿಯನ್ನು “ಹೀರೋ” ಎಂದು ಹೊಗಳಿದ್ದಾರೆ; ರಾಹುಲ್ ಗಾಂಧಿಯವರು ಮೋದಿಯವರೊಂದಿಗೆ ಸ್ಪರ್ಧಿಸುವುದು “ಬಹಳ ಕಷ್ಟ” ಎಂದು ಒಪ್ಪಿಕೊಂಡಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಸತ್ಯಾಂಶವೇನು?
ಕಾಶಿ-ವಿಶ್ವನಾಥ ಕಾರಿಡಾರ್ ಉದ್ಘಾಟನಾ ಸಮಾರಂಭದ ನಂತರ ತಮ್ಮ ವಿಶ್ಲೇಷಣೆಗಳನ್ನು ವ್ಯಕ್ತಿಯೊಬ್ಬರು ಹಂಚಿಕೊಳ್ಳುತ್ತಿರುವುದನ್ನು ಇಲ್ಲಿ ಕಾಣಬಹುದು.
ವೈರಲ್ ವಿಡಿಯೋದಲ್ಲಿ ಚಾನೆಲ್ ಲೋಗೋ ಸ್ಪಷ್ಟವಾಗಿ ಕಾಣಿಸದ ಕಾರಣ, ಕಾಂಗ್ರೆಸ್ ವಕ್ತಾರ ಎಂದು ಹೇಳಲಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಯತ್ನಿಸಲಾಯಿತು. ಮಾತನಾಡುತ್ತಿರುವ ವ್ಯಕ್ತಿಯ ಸ್ಕ್ರೀನ್‌ಶಾಟ್ ತೆಗೆದುಕೊಂಡು ರಿವರ್ಸ್ ಸರ್ಚ್ ಮಾಡಿದಾಗ ಇದೇ ವ್ಯಕ್ತಿಯನ್ನು ಹೋಲುವ ಒಬ್ಬರು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ವಿವಾದದ ಕುರಿತು ಮಾತನಾಡುವ ವಿಡಿಯೊ ಕ್ಲಿಪ್ ಕೂಡ ಸಿಕ್ಕಿತು.
ಈ ವಿಡಿಯೊ ಕ್ಲಿಪ್‌ನಲ್ಲಿ ವ್ಯಕ್ತಿಯ ಹೆಸರು ಅಥವಾ ಪದನಾಮವನ್ನು ಉಲ್ಲೇಖಿಸದಿದ್ದರೂ ಚಾನೆಲ್ ಲೋಗೋ “ಫಸ್ಟ್‌ಇಂಡಿಯಾ ನ್ಯೂಸ್” ಎಂದಿರುವುದು ಕಂಡುಬಂತು. ವೈರಲ್ ಆಗಿರುವ ವಿಡಿಯೊ ಕ್ಲಿಪ್‌ನ ಮೂಲ ವಿಡಿಯೊವನ್ನು ಸರ್ಚ್‌ಮಾಡಿದಾಗ ಮೂಲ ವೀಡಿಯೊ ಡಿಸೆಂಬರ್ 14ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊದಿಂದ ಈಗ ವೈರಲ್ ಆಗಿರುವ ವಿಡಿಯೊ ಕ್ಲಿಪ್ ಕಟ್ ಮಾಡಲಾಗಿದೆ. ಈ ವೀಡಿಯೊದ ಆರಂಭದಲ್ಲಿ, ಸುದ್ದಿ ವಾಹಿನಿಯ ನಿರೂಪಕರು ಚರ್ಚೆಯಲ್ಲಿ ಭಾಗವಹಿಸಿರುವ ವ್ಯಕ್ತಿಯನ್ನು ಫಸ್ಟ್ ಇಂಡಿಯಾ ನ್ಯೂಸ್ ಚಾನೆಲ್ ಮುಖ್ಯಸ್ಥ ಜಗದೀಶ್ ಚಂದ್ರ ಎಂದು ಪರಿಚಯಿಸುವುದನ್ನು ಕೇಳಬಹುದು.
ಈ ಚಾನಲ್‌ನ ಟ್ವೀಟರ್ ಖಾತೆಯಲ್ಲಿ ಮತ್ತೊಂದು ವೀಡಿಯೊ ಗಮನಿಸಿದಾಗ ಜಗದೀಶ್ ಚಂದ್ರ ಅವರ ಪರಿಚಯವನ್ನು ಕಾಣಬಹುದು. ಜಗದೀಶ್ ಚಂದ್ರ ಅವರು ಫಸ್ಟ್‌ಇಂಡಿಯಾ ನ್ಯೂಸ್‌ಚಾನೆಲ್ ಮುಖ್ಯಸ್ಥ ಎಂದು ಇಲ್ಲಿ ಬರೆಯಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅವರ ಹೆಸರನ್ನು ಗೂಗಲ್ ಮಾಡಿದಾಗ “ಟೈಕೂನ್ ಮ್ಯಾಗಜೀನ್”ನಲ್ಲಿ ಜುಲೈ 2021ರಲ್ಲಿ ಪ್ರಕಟವಾದ ಲೇಖನವನ್ನು ಗಮನಿಸಿದೆವು. ಲೇಖನದಲ್ಲಿ ಜಗದೀಶ್‌ಚಂದ್ರ ಅವರನ್ನು “ಫಸ್ಟ್ ಇಂಡಿಯಾ ನ್ಯೂಸ್”ನ CMD ಮತ್ತು “ಫಸ್ಟ್ ಇಂಡಿಯಾ” ಸಂಪಾದಕ ಎಂದು ಪರಿಚಯಿಸಲಾಗಿದೆ. ಚಂದ್ರ ಅವರು ರಾಜಸ್ಥಾನದ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು, ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದರು ಎಂದು ಅಲ್ಲಿ ತಿಳಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿ ಕಾಂಗ್ರೆಸ್ ವಕ್ತಾರರಲ್ಲ, ರಾಜಸ್ಥಾನ ಮೂಲದ ಸುದ್ದಿವಾಹಿನಿಯೊಂದರ ಮುಖ್ಯಸ್ಥ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ರಾಷ್ಟ್ರೀಯ ಹೆದ್ದಾರಿಗಳು, ವಾಹನಗಳ ಮೇಲೆ ಮುಸ್ಲಿಮರು ನಮಾಜ್ ಮಾಡಿದ್ದು ನಿಜವೇ..?


