ನಮ್ಮ ದೇಶವು ಇಂದು ಹಿಂದೆಂದೂ ಕೇಳರಿಯದ ರೀತಿಯ ಮಹಾದುರಂತವನ್ನು ಎದುರಿಸುತ್ತಿದೆ. ಇದೊಂದು ನೈಸರ್ಗಿಕ ದುರಂತ ಎಂಬುದು ಅರ್ಧ ಸತ್ಯವಾದರೆ ಇದನ್ನು ನಿರ್ವಹಿಸುವುದರಲ್ಲಿ ಸರ್ಕಾರದ ವೈಫಲ್ಯವು ಸಾವಿರಾರು ಜನರ ಸಾವಿಗೆ ಕಾರಣವಾಗಿದೆ ಎಂಬುದು ಉಳಿದರ್ಧ ಸತ್ಯವಾಗಿದೆ. ಇವೆಲ್ಲ ತಪ್ಪಿಸಬಹುದಾಗಿದ್ದ ಸಾವುಗಳು. ಒಟ್ಟು ಕೊರೊನಾ ಸಾವುಗಳಲ್ಲಿ ಆಮ್ಲಜನಕದ ಅಲಭ್ಯತೆ/ಕೊರತೆ, ಹಾಸಿಗೆಗಳ ಅಲಭ್ಯತೆ/ಕೊರತೆ, ವೆಂಟಿಲೇಟರ್‌ಗಳ ಕೊರತೆ, ಜೀವವುಳಿಸುವ ಔಷಧಿಗಳ ಕೊರತೆ ಮುಂತಾದವುಗಳಿಂದ ಅರ್ಧದಷ್ಟು ಸಾವುಗಳು ಸಂಭವಿಸಿವೆ. ಕೋವಿಡ್ ವೈರಸ್ ಮೊದಲನೇ ದಾಳಿಯು ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳಲಿಲ್ಲ. ಆದರೆ ’ಕೋವಿಡ್ ಮಹಾರೋಗವನ್ನು ತಡೆಯುವುದರಲ್ಲಿ ನಾವು ಗೆದ್ದಿದ್ದೇವೆ’ ಎಂದು ಉದಾಸೀನ ತಳೆದ ಒಕ್ಕೂಟ ಸರ್ಕಾರದ ಧೋರಣೆಯ ಪರಿಣಾಮವಾಗಿ ಇಂದು ಎರಡನೆಯ ಅಲೆಯ ಸಂದರ್ಭದಲ್ಲಿ ’ಹೆಣಗಳ ಮೆರವಣಿಗೆ’ಯನ್ನು ದೇಶದಾದ್ಯಂತ ಕಾಣುತ್ತಿದ್ದೇವೆ. ಸರ್ಕಾರವೇನೋ ವ್ಯಾಕ್ಸಿನ್ ಉತ್ಸವವನ್ನು (ಟಿಕ ಉತ್ಸವ) ಘೋಷಿಸಿತು. ಹೀಗೆ ಘೋಷಿಸುವಾಗ ವ್ಯಾಕ್ಸಿನ್‌ಗಳ ಪೂರೈಕೆ-ಬೇಡಿಕೆಗಳ ನಡುವಿನ ಅಂತರವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೇಡಿಕೆಯು ವ್ಯಾಕ್ಸಿನ್‌ಗಳ ಪೂರೈಕೆಗಿಂತ ಅದೆಷ್ಟೋ ಪಟ್ಟು ಅಧಿಕವಾಗಿದೆ. ಇದರಿಂದಾಗಿ ಈಗ ಎಲ್ಲೆಲ್ಲೂ ವ್ಯಾಕ್ಸಿನ್ನುಗಳ ಕೊರತೆಯ ಹಾಹಾಕಾರ ಉಂಟಾಗಿದೆ ಮತ್ತು ವ್ಯಾಕ್ಸಿನ್ ಆಂದೋಲನವು ಗೊಂದಲದ ಗೂಡಾಗಿದೆ. ಸಮಸ್ಯೆಯು ಎಷ್ಟೊಂದು ಭೀಕರವಾಗಿದೆಯೆಂದರೆ ಬೀದಿಬೀದಿಗಳಲ್ಲಿ, ಆಸ್ಪತ್ರೆಗಳಲ್ಲಿ, ರಸ್ತೆಗಳಲ್ಲಿ, ಆಸ್ಪತ್ರೆಗಳ ಗೇಟಿನ ಬಳಿ ಹೆಣಗಳನ್ನು ನೋಡುವ ದುರಂತವನ್ನು ನಾವು ಎದುರಿಸಬೇಕಾಗಿದೆ ಮತ್ತು ಚಿತಾಗಾರದ ಕೊರತೆಯ ಸಮಸ್ಯೆಯುಂಟಾಗಿದೆ.
ಕೋವಿಡ್ ಮೊದಲ ಅಲೆಯ ನಂತರ ಎರಡನೆಯ ಅಲೆ ಆರಂಭವಾಗುವುದರ ನಡುವೆ ಸುಮಾರು ಒಂದು ವರ್ಷದ ಅವಧಿಯಿತ್ತು. ಕೋವಿಡ್ ಎರಡನೆಯ ಅಲೆಯ ತೀವ್ರತೆಯ ಬಗ್ಗೆ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಅವಧಿಯಲ್ಲಿ ಸರ್ಕಾರವು ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸಲು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕಾಗಿತ್ತು. ಆದರೆ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ/ಉದಾಸೀನ ತಳೆದ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗಳಲ್ಲಿ ಮತ್ತು ಜಾತ್ರೆ-ಕುಂಭಮೇಳ ನಡೆಸುವುದರಲ್ಲಿ ಮಗ್ನವಾಗಿದ್ದವು. ಇದರ ಪರಿಣಾಮವಾಗಿ ದೇಶದಲ್ಲಿ ಇಂದು 4 ಲಕ್ಷ ಮೀರಿ ಪ್ರತಿನಿತ್ಯ ಸೋಂಕಿತರ ಸಂಖ್ಯೆ ವರದಿಯಾಗುತ್ತಿದ್ದರೆ ನಿತ್ಯ 4 ಸಾವಿರಕ್ಕಿಂತ ಅಧಿಕ ಜನರ ಸಾವಿಗೀಡಾಗುತ್ತಿದ್ದಾರೆ (ಮೇ 08, 2021).
ಜಾಗತಿಕವಾಗಿ ಭಾರತದ ವೈಫಲ್ಯದ ಚರ್ಚೆ
ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವುದರಲ್ಲಿನ ಭಾರತದ ವೈಫಲ್ಯವು ಪ್ರಸಿದ್ಧ ಅಂತಾರಾಷ್ಟ್ರೀಯ ಪತ್ರಿಕೆಗಳು-ನಿಯತಕಾಲಿಕೆಗಳಲ್ಲಿ ಚರ್ಚೆಯ ವಿಷಯವಾಗಿದೆ. ದಿ ವಾಷಿಂಗ್‌ಟನ್ ಪೋಸ್ಟ್, ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್, ದಿ ಲ್ಯಾನ್ಸೆಟ್ ಮುಂತಾದವು ಭಾರತದಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವುದರಲ್ಲಿನ ವೈಫಲ್ಯಕ್ಕೆ ಒಕ್ಕೂಟ ಸರ್ಕಾರವೇ ಕಾರಣ ಎಂದು ಗಟ್ಟಿಯಾಗಿ ಹೇಳುತ್ತಿವೆ. ಈ ಹಿಮಾಲಯಸದೃಶ ವೈಫಲ್ಯದಿಂದ ನಮ್ಮ ಪ್ರಧಾನಮಂತ್ರಿ ಅವರ ವರ್ಚಸ್ಸು ಜಾಗತಿಕವಾಗಿ ಕುಸಿದಿದೆ ಎಂದು ಅವು ವ್ಯಾಖ್ಯಾನ ಮಾಡಿವೆ. ಕೋವಿಡ್ ಎರಡನೇ ಅಲೆಯ ಸಮಸ್ಯೆಯ ತೀವ್ರತೆಗನುಗುಣವಾಗಿ ಒಕ್ಕೂಟ ಸರ್ಕಾರದ ಆರೋಗ್ಯ ವ್ಯವಸ್ಥೆ ಸರಿಸಮನಾಗಿಲ್ಲ. ಈ ಎಲ್ಲ ಪತ್ರಿಕೆಗಳ ಪ್ರಕಾರ, ಒಕ್ಕೂಟ ಸರ್ಕಾರವು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಬರುತ್ತಿದ್ದ ಸರ್ಕಾರದ ವೈಫಲ್ಯದ ಬಗೆಗಿನ ಟೀಕೆಗಳ ಮೇಲೆ ಸೆನ್ಸಾರ್ ಹೇರುವುದಕ್ಕೆ ತೋರಿದಷ್ಟು ಕಾಳಜಿ-ಉತ್ಸುಕತೆಯನ್ನು ಮಹಾರೋಗವನ್ನು ತಡೆಯುವುದಕ್ಕೆ ನೀಡಲಿಲ್ಲ ಎಂದು ಒಕ್ಕೊರಲಿನ ಅಭಿಪ್ರಾಯಪಟ್ಟಿವೆ.
ಮೊದಲ ಅಲೆಯ ನಂತರ ಒಕ್ಕೂಟ ಸರ್ಕಾರವು ’ಕೊರೊನಾ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಿದ್ದೇವೆ’ (ಎಂಡ್‌ಗೇಮ್) ಎಂದು ಸಂತೃಪ್ತ ಭಾವನೆ ತಳೆಯಿತು. ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿ ಅವರು ಕೋವಿಡ್ ಮೊದಲನೇ ಅಲೆಯನ್ನು ಗೆದ್ದುದರ ಬಗ್ಗೆ ನೀಡಿದ ಹೇಳಿಕೆಗಳು ಹೀಗಿವೆ:
’ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ’ ತೆಗೆದುಕೊಂಡಿದ್ದರಿಂದ ಭಾರತವು ಕೋವಿಡ್ ನಿಯಂತ್ರಣದಲ್ಲಿ ಬೇರೆ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ’: ಪ್ರಧಾನಮಂತ್ರಿ. ಜುಲೈ 17, 2020.
’ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಗತ್ತಿನಲ್ಲಿ ಕೋವಿಡ್ ವಿರುದ್ಧ ಅತ್ಯಂತ ಯಶಸ್ವಿಯಾಗಿ ಹೋರಾಟ ಮಾಡಿದ ದೇಶ ಭಾರತ’: ಅಮಿತ್ ಶಾ. (2021 ಜನವರಿ 16, ಭದ್ರಾವತಿ).
ಇಂತಹ ಹೇಳಿಕೆ ನೀಡುವ ಮೂಲಕ ಎರಡನೆಯ ಅಲೆಯನ್ನು ಎದುರಿಸಲು ಅಗತ್ಯವಾದ ರೀತಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಿದ್ಧಪಡಿಸುವುದರಲ್ಲಿ ಉದಾಸೀನ ತಳೆದದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರವೇ ಮುಂದೆ ನಿಂತು ಅವಕಾಶ ನೀಡಿದ್ದು (ಕುಂಭಮೇಳ), ಪ್ರಧಾನಮಂತ್ರಿಗಳೇ ಚುನಾವಣಾ ಕಾರ್ಯಕ್ರಮಗಳ ಬೃಹತ್ ರ್‍ಯಾಲಿಗಳಲ್ಲಿ ಭಾಗವಹಿಸಿದ್ದು ಮುಖ್ಯ ಕಾರಣವೆಂದು ಜಾಗತಿಕ ಪತ್ರಿಕೆಗಳು ಸರ್ಕಾರವನ್ನು ಟೀಕಿಸಿವೆ. ಚೆನ್ನೈ ಉಚ್ಚ ನ್ಯಾಯಾಲಯವು ಕೋವಿಡ್ ಎರಡನೆ ಅಲೆ ಗಂಭೀರ ಸ್ವರೂಪ ತಳೆಯುವುದಕ್ಕೆ ಚುನಾವಣಾ ಆಯೋಗ ಕೋವಿಡ್ ಪ್ರ್ರೊಟೋಕಾಲ್ ಪಾಲಿಸದೆ, ಚುನಾವಣಾ ಪ್ರಚಾರದ ಬೃಹತ್ ಸಭೆಗಳಿಗೆ ಅನುಮತಿ ನೀಡಿದ್ದೇ ಒಂದು ಪ್ರಮುಖ ಕಾರಣ ಎಂದು ಹೇಳಿದೆ. ದಿ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆಯು ತನ್ನ ಮೇ 08ನೆಯ ತಾರೀಖಿನ ಸಂಪಾದಕೀಯದಲ್ಲಿ ಪ್ರಸ್ತುತ ಕೋವಿಡ್ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜವಾಬ್ದಾರರನ್ನಾಗಿ ಮಾಡಿದೆ (ನೋಡಿ: ಪ್ರಜಾವಾಣಿ ಮೇ 10, 2021).
ಈ ಪತ್ರಿಕೆಗಳಲ್ಲಿ 2021ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬಂದ ಕೆಲವು ಅಭಿಪ್ರಾಯಗಳು
India`s Covid 19 crisis shakes Modi’s image of Strength: The New York Times.
India`s virus surge damages Modi`s image of Competence: The Washington Post
In India, Social Media is a lifeline, it is being Silenced. The Washington Post
We are witnessing a crime against humanity. Arundhati Roy, The Guardian.
Modi`s mistakes: a pandemic that is out of control. The Guardian.
Modi`s action inexcusable, Government needs own up Covid mistakes. The Lancet.
ಡಬಲ್ ಎಂಜಿನ್ ಸರ್ಕಾರ: ಕರ್ನಾಟಕಕ್ಕೆ ಡಬಲ್ ಅನ್ಯಾಯ
ಒಕ್ಕೂಟ ಸರ್ಕಾರದಲ್ಲಿ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಅಡಳಿತವಿದ್ದರೆ ಅಲ್ಲಿ ಅಭಿವೃದ್ಧಿಯು ವೇಗವಾಗಿ ನಡೆಯುವುದು ಸಾಧ್ಯ ಎಂದು ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳು ನೀಡಿದ ಆಶ್ವಾಸನೆ. ಇದನ್ನು ಪ್ರಧಾನಮಂತ್ರಿ ಅವರು ’ಡಬಲ್ ಎಂಜಿನ್’ ಎಂದು ಕರೆದಿದ್ದರು. ಇದರಲ್ಲಿ ಅಭಿವೃದ್ಧಿಯ ಕೀಲಿಕೈಯಿದೆ ಎಂದೂ ಹೇಳಿದರು. ಈಗ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ. ಎರಡೂ ಕಡೆ ಬಿಜೆಪಿ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿವೆ. ಆದರೆ ರಾಜ್ಯವು ಇನ್ನಿಲ್ಲದಂತೆ ಒಕ್ಕೂಟ ಸರ್ಕಾರದಿಂದ ತಾರತಮ್ಯ-ಅನ್ಯಾಯಗಳನ್ನು ಅನುಭವಿಸುತ್ತಿದೆ. ಕೋವಿಡ್ ಎರಡನೆ ಅಲೆಯಲ್ಲಿ ರಾಜ್ಯವು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ಹೆಚ್ಚಿಸಬೇಕೆಂದು ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರವನ್ನು ಕೇಳುವುದಕ್ಕೆ ಹೆದರಿ ಸುಮ್ಮನೆ ಕುಳಿತಿದ್ದಾಗ ಉಚ್ಚ ನ್ಯಾಯಾಲಯವು ಮಧ್ಯಪ್ರವೇಶಿಸಿ ಹೆಚ್ಚಿನ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಆದೇಶಿಸಬೇಕಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ಸದರಿ ಅದೇಶಕ್ಕೆ ತಡೆಯಾಜ್ಞೆ ನೀಡುವಂತೆ ಒಕ್ಕೂಟ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಯಿತು. ಆದರೆ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕದ ನ್ಯಾಯಾಲಯದ ಆದೇಶ ಕ್ರಮಬದ್ಧವಾಗಿದೆಯೆಂದು ಹೇಳಿ ಅದನ್ನು ಎತ್ತಿಹಿಡಿದಿದೆ. ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕೆ? ಡಬಲ್ ಎಂಜಿನ್ ಇದ್ದಾಗ ಇಂತಹ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಲಯಗಳು ಕಾರ್ಯಾಂಗದ ಕೆಲಸ ಮಾಡುವ ಸ್ಥಿತಿ ಬಂದಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕ ವಿತರಣೆಗೆ ಸಂಬಂಧಿಸಿದಂತೆ ಉಂಟಾದ ಗೊಂದಲವನ್ನು ಗಮನಿಸಿ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳ ನಡುವೆ ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ವೈದ್ಯಕೀಯ ಆಮ್ಲಜನಕ ವಿತರಣೆಯ ನಿರ್ವಹಣೆಗಾಗಿ ಮತ್ತು ಕೋವಿಡ್-19 ಇಂದ ಉಂಟಾಗುತ್ತಿರುವ ತಪ್ಪಿಸಬಹುದಾದ ಸಾವುಗಳನ್ನು ತಡೆಯುವ ದೃಷ್ಟಿಯಿಂದ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಿಸಿದೆ. (ಈ ಬಗ್ಗೆ ಒಕ್ಕೂಟ ಸರ್ಕಾರವು ತಕರಾರು ತೆಗೆದಿದೆ. ಇದು ಬೇರೆ ಸಂಗತಿ). ಇದು ಮೊದಲನೆಯದಾಗಿ ಒಕ್ಕೂಟ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಎರಡನೆಯದಾಗಿ ನ್ಯಾಯಾಲಯವು ಕಾರ್ಯಾಂಗದ ಕಾರ್ಯ ನಿರ್ವಹಿಸುವ ಸ್ಥಿತಿ ಬಂದಿರುವುದನ್ನು ಸೂಚಿಸುತ್ತಿದೆ. ಇದು ಜನತಂತ್ರವನ್ನು ಬಲಿಷ್ಟವಾಗಿ ಕಟ್ಟುವುದರ ದೃಷ್ಟಿಯಿಂದ ಆರೋಗ್ಯಕಾರಿ ಬೆಳವಣಿಗೆಯಲ್ಲ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ವೈದ್ಯಕೀಯ ಆಮ್ಲಜನಕದ ವಿತರಣೆಗೆ ಒಕ್ಕೂಟ ಸರ್ಕಾರವು ರೂಪಿಸಿದ್ದ ’ನಿಯಮ’ದಲ್ಲಿನ ಇತಿಮಿತಿಗಳನ್ನು ಗಮನಿಸಿ ಸರ್ವೋಚ್ಚ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.
ಸಂವಿಧಾನಾತ್ಮಕ ಒಕ್ಕೂಟ ತತ್ವದ ಉಲ್ಲಂಘನೆ
ಭಾರತ ಸರ್ಕಾರವು ಸಂವಿಧಾನಾತ್ಮಕ ಒಕ್ಕೂಟ ತತ್ವವನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುತ್ತಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಏಕೆಂದರೆ ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ರಾಜ್ಯವು ಗಟ್ಟಿಯಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಏನನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಡಬಲ್ ಎಂಜಿನ್ ಕಾರಣವಾಗಿ ರಾಜ್ಯವು ಒಕ್ಕೂಟ ಸರ್ಕಾರದ ಜೀತದಾಳಿನಂತೆ ಕೆಲಸ ಮಾಡುವಂತಾಗಿದೆ. ಜಿಎಸ್‌ಟಿಯಲ್ಲಿ ಕೊರತೆಯುಂಟಾದರೆ ಅದನ್ನು ಐದು ವರ್ಷಗಳ ಕಾಲ ಒಕ್ಕೂಟ ಸರ್ಕಾರ ಪರಿಹಾರ ತುಂಬಿಕೊಡುವ ನಿಯಮವಿತ್ತು. ಆದರೆ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರವು ಖುಲ್ಲಂಖುಲ್ಲಾ ಈ ತನ್ನ ಜಬಾವ್ದಾರಿಯನ್ನು ನಿರಾಕರಿಸುತ್ತಿದೆ. ಬರಪರಿಹಾರಕ್ಕೆ ಸಂಬಂಧಿಸಿದಂತೆ 2019ರಲ್ಲಿ ಅನುದಾನವನ್ನು ನೀಡುವುದರಲ್ಲಿ ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡಿತು. ರಾಜ್ಯಗಳ ಜೊತೆಯಲ್ಲಿ ಸಮಾಲೋಚಿಸದೆ ಕಳೆದ ವರ್ಷ ಏಕದಂ ಲಾಕ್‌ಡೌನ್ ಹೇರಿತು. ಲಕ್ಷಾಂತರ ವಲಸೆ ಕಾರ್ಮಿಕರನ್ನು ನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕಿತು.
ಸಂವಿಧಾನದ ಏಳನೆ ಅನುಸೂಚಿಯ ಪರಿಚ್ಛೇದ 246ರ ಪ್ರಕಾರ ಕೃಷಿಯು ರಾಜ್ಯ ಪಟ್ಟಿಯಲ್ಲಿ ಕ್ರಮ ಸಂಖ್ಯೆ 14ರಲ್ಲಿದೆ (ಒಟ್ಟು 66 ಬಾಬ್ತುಗಳು). ಒಕ್ಕೂಟ ಪಟ್ಟಿಯಲ್ಲಿನ ನೂರು ಬಾಬ್ತುಗಳಲ್ಲಿ ಕೃಷಿ ಯಾವುದರಲ್ಲಿಯೂ ಇಲ್ಲ. ಇಷ್ಟಾದರೂ ಒಕ್ಕೂಟ ಸರ್ಕಾರವು ಕೃಷಿಗೆ ಸಂಬಂಧಿಸಿದಂತೆ ಅತ್ಯಂತ ಪ್ರತಿಗಾಮಿಯಾದ ಮೂರು ಕರಾಳ ಕಾಯಿದೆಗಳನ್ನು ಜಾರಿಗೊಳಿಸಿದೆ. ಈ ಕಾಯಿದೆಗಳ ವಿರುದ್ಧ ದೇಶದಾದ್ಯಂತ ರೈತರು ಬೃಹತ್ ಚಳವಳಿ ನಡೆಸುತ್ತಿದ್ದಾರೆ. ಆದರೆ ಜನಾಭಿಪ್ರಾಯದ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ರವಷ್ಟೂ ಗೌರವವಿಲ್ಲ. ಕೇಂದ್ರದ ತೆರಿಗೆಗಳಲ್ಲಿ ಕರ್ನಾಟಕದ ಪಾಲು 2019-2020ರಲ್ಲಿ ರೂ.30919 ಕೋಟಿಯಷ್ಟಿದ್ದುದು 2020-21ರಲ್ಲಿ ಇದು ರೂ.20053 ಕೋಟಿಗಿಳಿದರೆ 2021-22ರಲ್ಲಿ ಇದು ರೂ.24273 ಕೋಟಿ ಎಂದು ಅಂದಾಜು ಮಾಡಲಾಗಿದೆ. ರಾಜ್ಯದ ಒಟ್ಟು ಬಜೆಟ್ ವೆಚ್ಚದಲ್ಲಿ ಕೇಂದ್ರದ ತೆರಿಗೆ ಪಾಲು 2019-2020ರಲ್ಲಿ ಶೇ.13.21 ರಷ್ಟಿದ್ದುದು 2021-22ರಲ್ಲಿ ಇದು ಶೇ.9.85ಕ್ಕಿಳಿದಿದೆ. ರಾಜ್ಯವು 2019ರಲ್ಲಿ ಎದುರಿಸಿದ ಅತಿವೃಷ್ಟಿಯಿಂದ ಉಂಟಾದ ಹಾನಿ ರೂ.35160 ಕೋಟಿ ಎಂದು ರಾಜ್ಯ ಅಂದಾಜು ಮಾಡಿತ್ತು. ಆದರೆ ಒಕ್ಕೂಟ ಸರ್ಕಾರ ನೀಡಿದ ಪ್ರವಾಹ ಪರಿಹಾರ ರೂ. 1869 ಕೋಟಿ (ಶೇ.5.32).
ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯಾನಂತರ ಮಹಾರೋಗಗಳನ್ನು ತಡೆಯುವ ಕಾರ್ಯಕ್ರಮವನ್ನು ಒಕ್ಕೂಟ ಸರ್ಕಾರವು ರಾಷ್ಟ್ರೀಯ ವ್ಯಾಕ್ಸಿನ್ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಅವುಗಳನ್ನು ರಾಜ್ಯಗಳಿಗೆ ನೀಡಿ ಅನುಷ್ಠಾನಗೊಳಿಸುತ್ತಿತ್ತು. (ಸಾರ್ವತ್ರಿಕ ಇಮ್ಯುನೈಸೇಶನ್ ಕಾರ್ಯಕ್ರಮ). ಆದರೆ ಇಂದು ಸುನಾಮಿಯೋಪಾದಿಯಲ್ಲಿ ಅಪ್ಪಳಿಸಿರುವ ಕೊರೊನಾ ವೈರಸ್ ತಡೆಗೆ ರಾಷ್ಟ್ರೀಯ ವ್ಯಾಕ್ಸಿನ್ ಕಾರ್ಯಕ್ರಮ ರೂಪಿಸುವುದಕ್ಕೆ ಪ್ರತಿಯಾಗಿ ರಾಜ್ಯಗಳೇ ವ್ಯಾಕ್ಸಿನ್ ಕೊಂಡು ಜನರಿಗೆ ನೀಡಬೇಕು ಎಂದು ಒಕ್ಕೂಟ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣಿಚಿಕೊಂಡಿದೆ. ಸಂವಿಧಾನದತ್ತ ಒಕ್ಕೂಟ ತತ್ವಕ್ಕೆ ಧಕ್ಕೆ ಉಂಟಾಗಿರುವುದಕ್ಕೆ ಇದಕ್ಕಿಂತ ಉತ್ತಮವಾದ ನಿದರ್ಶನ ಬೇಕಾಗಿಲ್ಲ. ಭಾರತ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿಲ್ಲದ ಕಾರಣವಾಗಿ ರಾಜ್ಯಗಳು, ವಿಶೇಷವಾಗಿ ಕರ್ನಾಟಕದ ಸಂಪನ್ಮೂಲಗಳ ಮಹಾಕೊರತೆಯನ್ನು ಅನುಭವಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಕೊರೊನಾ ತಡೆಯುವ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಿಕೊಡುವುದು ಅವುಗಳಿಗೆ ಮಾಡುವ ಮಹಾ ಅನ್ಯಾಯವಾಗಿದೆ. ಭಾರತ ಸರ್ಕಾರವು ಒಕ್ಕ್ಕೂಟ ಸರ್ಕಾರವಾಗಿ ಇಂದು ಉಳಿದಿಲ್ಲ. ಒಕ್ಕೂಟ ಸರ್ಕಾರವೆಂದರೆ ದೇಶದಲ್ಲಿನ 28 ರಾಜ್ಯಗಳನ್ನು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಒಂದು ಘಟಕ. ಭಾರತ ಸರ್ಕಾರವು ಇಂದು ಕೇಂದ್ರ ಸರ್ಕಾರವಾಗಿದೆ. ಅದು ರಾಜ್ಯಗಳ ಹಿತಾಸಕ್ತಿಯನ್ನು ಗಮನಿಸುತ್ತಿಲ್ಲ. ಕೇಂದ್ರ ಸರ್ಕಾರ ಎನ್ನುವ ನುಡಿಯನ್ನು ಸಂವಿಧಾನದಲ್ಲಿ ಬಳಸಿಲ್ಲ. ಅಲ್ಲಿ ಒಕ್ಕೂಟ ಸರ್ಕಾರ ಎನ್ನುವ ನುಡಿಯನ್ನು ಬಳಸಲಾಗಿದೆ. ಆದರೆ ಇಂದು ಭಾರತ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತಳೆದು ಎಲ್ಲ ಅಧಿಕಾರಗಳನ್ನು ಕೇಂದ್ರೀಕರಿಸುವ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದೆ. ಕೋವಿಡ್ ವೈರಸ್ ನಿಯಂತ್ರಣದಲ್ಲಿ ಭಾರತವು ಇಂದು ವಿಫಲವಾಗಿದ್ದರೆ ಇದಕ್ಕೆ ಒಂದು ಕಾರಣ ಸಂವಿಧಾನದತ್ತ ಒಕ್ಕೂಟ ತತ್ವವನ್ನು ಭಾರತ ಸರ್ಕಾರ ಪಾಲಿಸದಿರುವುದು. ಅದು ’ದೊಡ್ಡಣ್ಣ’ನಂತೆ ವರ್ತಿಸುತ್ತಿದೆ.
ಮುಂದಿನ ದಾರಿಯೇನು?
ಪ್ರಸಿದ್ಧ ಪತ್ರಕರ್ತ ಸಿ. ರಾಮಮನೋಹರ ರೆಡ್ಡಿ ಅವರು 2020ರ ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿಯೇ ಕೋವಿಡ್ ಮಹಾರೋಗವನ್ನು ಎದುರಿಸಲು ರಾಷ್ಟ್ರೀಯ ಸರ್ಕಾರದ ಅಗತ್ಯದ ಬಗ್ಗೆ ಚರ್ಚೆ ಮಾಡಿದ್ದರು. (ವಾಟೆಂಡ್ ಕಲೆಕ್ಟಿವ್ ನ್ಯಾಷನಲ್ ಎನ್‌ಡಿವೊರ್, ಏಪ್ರಿಲ್ 13, 2020, ದಿ ಹಿಂದು). ಮತ್ತೊಬ್ಬ ಪ್ರಸಿದ್ಧ ರಾಜ್ಯಶಾಸ್ತ್ರಜ್ಞ ಪ್ರತಾಪ್ ಭಾನು ಮೆಹತ ಅವರು ಇಂದಿನ ಕೋವಿಡ್ ದುರಂತವನ್ನು ನಿರ್ವಹಿಸಲು ರಾಷ್ಟ್ರೀಯ ಕಾರ್ಯಪಡೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. (ವಿ ನೀಡ್ ಎ ನ್ಯಾಷನಲ್ ಪ್ಲಾನ್ ಫಾರ್ ಕೋವಿಡ್. ಪಿಎಮ್ ಮಸ್ಟ್ ಟೇಕ್ ಲೀಡ್, ದಿ ಇಂಡಿಯನ್ ಎಕ್ಸಪ್ರೆಸ್, ಮೇ 10, 2021). ಇಂದು ಕೋವಿಡ್ ಎರಡನೇ ಅಲೆಯಲ್ಲಿ ಈ ಮಹಾರೋಗವು ಸರ್ಕಾರದ ಕೈಮೀರಿ ಹೋಗುತ್ತಿದೆ. ರೋಗದ ನಿರ್ವಹಣೆಗೆ ಅಗತ್ಯವಾದ ಕಾರ್ಯತಂತ್ರವನ್ನು ರೂಪಿಸುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ದೇಶದ ಎಲ್ಲ ರಾಜಕೀಯ ಪಕ್ಷಗಳನ್ನು ಹಾಗೂ ಎಲ್ಲ ಮುಖ್ಯಮಂತ್ರಿಗಳನ್ನು ಒಳಗೊಂಡ ರಾಷ್ಟ್ರೀಯ ಸರ್ಕಾರವನ್ನು ತಾತ್ಕಾಲಿಕವಾಗಿ ರಚಿಸುವುದು ಅಗತ್ಯ. ಇದರಲ್ಲಿ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನು ಸೇರಿಸಿಕೊಳ್ಳಬಹುದು. ಈ ದಿಶೆಯಲ್ಲಿ ನಮ್ಮ ಪ್ರಧಾನಮಂತ್ರಿಗಳು ಕಾರ್ಯಪ್ರವೃತ್ತರಾಗಬೇಕು.
ಎರಡನೆಯದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಇಲ್ಲಿ ಖಾಸಗಿ ವಲಯವನ್ನು ಅವಲಂಬಿಸುವುದು ಸೂಕ್ತವಲ್ಲ. ಸಾರ್ವಜನಿಕ ಆರೋಗ್ಯಕ್ಕೆ ಖಾಸಗಿ ವಲಯವನ್ನು ಅವಲಂಬಿಸಿದರೆ ಏನೆಲ್ಲ ಅಕ್ರಮಗಳು ನಡೆಯುತ್ತವೆ, ಬಡವರು ಹೇಗೆ ಶೋಷಣೆಗೆ ಒಳಗಾಗುತ್ತಾರೆ, ಹಣವು ಇಲ್ಲಿ ಆದ್ಯತೆಯಾಗಿ ಜನರ ಜೀವ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ ಎಂಬುದು ಕಳೆದ ವರ್ಷದಿಂದ ಕರ್ನಾಟಕದ ಅನುಭವಕ್ಕೆ ಬಂದಿದೆ. ಅಮರ್ತ್ಯ ಸೇನ್ ಅನೇಕ ವರ್ಷಗಳಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದರ ಬಗ್ಗೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದರ ಬಗ್ಗೆ ಸರ್ಕಾರಗಳನ್ನು ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ಖಾಸಗಿ ವಲಯದ ವ್ಯಸನಕ್ಕೆ ಬಲಿಯಾಗಿರುವ ಇಂದಿನ ಒಕ್ಕೂಟ ಸರ್ಕಾರವು ಸಾರ್ವಜನಿಕ ವಲಯವನ್ನು ನಿರ್ನಾಮ ಮಾಡುವ ಕಾರ್ಯಕ್ಕೆ ಕೈಹಾಕಿದೆ. ದೂರದೃಷ್ಟಿರಹಿತವಾದ ಇಂತಹ ಪ್ರತಿಗಾಮಿ ಕ್ರಮಗಳನ್ನು ನಾವು ತಡೆಯಬೇಕು.
ಮೂರನೆಯದಾಗಿ ಕೋವಿಡ್ ಮಹಾರೋಗ ತಡೆಯಲು ಇರುವ ಔಷಧಿ, ವೈದ್ಯಕೀಯ ಸಲಕರಣೆಗಳು, ಆಮ್ಲಜನಕ ಮುಂತಾದವುಗಳ ಮೇಲೆ ಒಕ್ಕೂಟ ಸರ್ಕಾರವು ಜಿಎಸ್‌ಟಿ ವಿಧಿಸುತ್ತಿದೆ. ಇದನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ವಿತ್ತ ಮಂತ್ರಿ ಹೇಳುತ್ತಾರೆ. ಸಂಪನ್ಮೂಲಕ್ಕೆ ತೆರಿಗೆಗಳು ಬೇಕು. ಆದರೆ ಇದಕ್ಕೆ ಅಪ್ರತ್ಯಕ್ಷ ತೆರಿಗೆಗಳೇ ಬೇಕೆಂದಿಲ್ಲ. ದೇಶದಲ್ಲಿ ಇಂದು ನೂರಾರು ಟ್ರಿಲಿಯನ್ನರುಗಳು, ಬಿಲಿಯನ್ನರುಗಳು ಮತ್ತು ಸಾವಿರಾರು ಮಿಲಿಯನ್ನರುಗಳಿದ್ದಾರೆ. ಕೋವಿಡ್ ದುರಂತದ ಕಾಲದಲ್ಲಿಯೂ ಅವರ ಲಾಭವು ವೇಗವಾಗಿ-ಮಜಬೂತಾಗಿ ಬೆಳೆಯುತ್ತಿದೆ. ಅವರ ಮೇಲೆ ಪ್ರತ್ಯಕ್ಷ ತೆರಿಗೆಗಳನ್ನು ಹೇರಬಹುದು.
ನಾಲ್ಕನೆಯದಾಗಿ ಸಮಾಜದಲ್ಲಿ ಕೋಮುಭಾವನೆಯನ್ನು ಕೆರಳಿಸುವ ಕಾಲ ಇದಲ್ಲ. ಕರ್ನಾಟಕದಲ್ಲಿ ಆಳುವ ವರ್ಗದ ಶಾಸಕರು-ಸಂಸದರಿಂದ ಇಂತಹ ಅಚಾತುರ್ಯ ನಡೆಯುತ್ತಿದೆ. ಇದನ್ನು ಹತ್ತಿಕ್ಕಬೇಕು. ದೇಶದಾದ್ಯಂತ ಧಾರ್ಮಿಕ ಗುರುತುಗಳನ್ನು ಮೀರಿ ಜನರು ಪರಸ್ಪರ ನೆರವಾಗುತ್ತಿದ್ದಾರೆ. ಚಿತಾಗಾರಗಳಲ್ಲಿ ದುಡಿಯುತ್ತಿದ್ದಾರೆ. ಕೋಮು ಭಾವನೆ ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಕರ್ನಾಟಕ ಸರ್ಕಾರವು, ವಿಶೇಷವಾಗಿ, ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ನೇರವಾಗಿ ವಿರೋಧಿಸಬೇಕು. ನೇರವಾಗಿ ಅನ್ಯಾಯ ಮಾಡುತ್ತಿದ್ದರೂ (ಆಮ್ಲಜನಕದ ಸರಬರಾಜು) ಬಾಯಿಮುಚ್ಚಿಕೊಂಡಿರುವುದು ಸೂಕ್ತವಲ್ಲ. ಭಾಷೆಯ ದೃಷ್ಟಿಯಿಂದಲೂ ಅದು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಜಿಎಸ್‌ಟಿ ಸಂಬಂಧಿಸಿದ ಪರಿಹಾರ ನೀಡುವಲ್ಲಿ, ಹಣಕಾಸು ಆಯೋಗದ ಮೂಲಕ ರಾಜ್ಯಕ್ಕೆ ವರ್ಗಾವಣೆಯಾಗಬೇಕಾದ ಸಂಪನ್ಮೂಲದಲ್ಲಿ, ನೀಟ್ (ಎನ್‌ಈಈಟಿ) ಪರೀಕ್ಷೆಯನ್ನು ಆಯೋಜಿಸುವುದರಲ್ಲಿ – ಹೀಗೆ ಎಲ್ಲ ರೀತಿಯಲ್ಲಿ ರಾಜ್ಯದ ಸಂವಿಧಾನದತ್ತ ಅಧಿಕಾರವನ್ನು ಹತ್ತಿಕ್ಕುವ ಮತ್ತು ಒಕ್ಕೂಟ ಸರ್ಕಾರದಲ್ಲಿ ಅಧಿಕಾರವನ್ನು ಕೇಂದ್ರೀಕರಿಸುವ ಕ್ರಮಗಳನ್ನು ಭಾರತ ಸರ್ಕಾರ ಬೇಕಾಬಿಟ್ಟಿ ತೆಗೆದುಕೊಳ್ಳುತ್ತಿದೆ. ಇದು ಒಕ್ಕೂಟ (ಫೆಡರಲ್) ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಇಂತಹ ಒಕ್ಕೂಟ ತತ್ವದ ಉಲ್ಲಂಘನೆಯನ್ನು ಭಾರತ ಸರ್ಕಾರ ನಿಲ್ಲಿಸಬೇಕು. ನಮ್ಮ ದೇಶದ ಅಭಿವೃದ್ಧಿಯು ಒಕ್ಕೂಟ ತತ್ವದ ಮೇಲೆ ನಿಂತಿದೆ. ಉದಾ: ದೇಶದ ಒಟ್ಟು ಜನಸಂಖ್ಯೆಯಲ್ಲಿ (2011) ದಕ್ಷಿಣ ಭಾರತದ ಐದು ರಾಜ್ಯಗಳ ಪಾಲು ಶೇ.20. ಆದರೆ ದೇಶದ 2018-19ರಲ್ಲಿನ ಜಿಡಿಪಿಗೆ ಇವುಗಳ ಕೊಡುಗೆ ಶೇ. 30ಕ್ಕಿಂತ ಅಧಿಕ (ಆರ್ಥಿಕ ಸಮೀಕ್ಷೆ: 2020-21). ರಾಜ್ಯಗಳು ಅಭಿವೃದ್ಧಿಯಲ್ಲಿ ತೊಂದರೆ ಅನುಭವಿಸಿದರೆ ಇದರ ತಾಪ ದೇಶದ ಅಭಿವೃದ್ಧಿಗೆ ತಟ್ಟುತ್ತದೆ. ಕೊರೊನಾ ಮಹಾರೋಗವು ನಮಗೆ ಕಲಿಸುತ್ತಿರುವ ಪಾಠ ಇದಾಗಿದೆ.
- ಡಾ. ಟಿ. ಆರ್. ಚಂದ್ರಶೇಖರ

ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು.


