ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂದು ಪ್ರಶ್ನಿಸಿ ಪೋಸ್ಟರ್‌, 17 FIR, 15 ಮಂದಿ ಬಂಧನ!
PC: Amarujala

ಕೊರೊನಾ ವಿರುದ್ಧದ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂಬ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು 17 ಎಫ್‌ಐಆರ್ ದಾಖಲಿಸಿ, ಈವರೆಗೆ 15 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮೋದಿಜಿ ಹುಮಾರೆ ಬಚ್ಚೋಂಕಿ ವ್ಯಾಕ್ಸಿನ್ ವಿದೇಶ್ ಕ್ಯು ಭೆಜ್ ದಿಯೇ” (ಪ್ರಧಾನಿ ಮೋದಿ ಅವರೇ ನಮ್ಮ ಮಕ್ಕಳ ಲಸಿಕೆಯನ್ನು ಏಕೆ ವಿದೇಶಗಳಿಗೆ ಕಳುಹಿಸಿದ್ದೀರಿ?) ಎಂಬ ಬರಹವುಳ್ಳ ಪೋಸ್ಟರ್‌ಗಳನ್ನು ದೆಹಲಿಯ ಹಲವು ಕಡೆಗಳಲ್ಲಿ ಅಂಟಿಸಲಾಗಿತ್ತು. ಮೋದಿಯವರನ್ನು ಟೀಕಿಸಿದ್ದ ಈ ಭಿತ್ತಿಪತ್ರಗಳ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಸಿಕೆ ವಿಚಾರವಾಗಿ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದ ಈ ಪೋಸ್ಟರ್‌ಗಳ ಬಗ್ಗೆ ಪೊಲೀಸರಿಗೆ ಗುರುವಾರ ಮಾಹಿತಿ ದೊರೆತಿದ್ದು, ದೂರುಗಳ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ 17 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಒಂದು ಜೀವಿ, ಅದಕ್ಕೂ ನಮ್ಮಂತೆ ಬದುಕುವ ಹಕ್ಕಿದೆ ಎಂದ ಬಿಜೆಪಿ ಮುಖಂಡ!

ವಿವಿಧ ಜಿಲ್ಲೆಗಳಾದ್ಯಂತ ಆಸ್ತಿ ವಿರೂಪಗೊಳಿಸುವಿಕೆ ಕಾಯ್ದೆಯ ಸೆಕ್ಷನ್ 3 ಅಡಿಯಲ್ಲಿ ದೆಹಲಿ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಈ ನಿಟ್ಟಿನಲ್ಲಿ ಹೆಚ್ಚಿನ ದೂರುಗಳು ಬಂದರೆ ಹೆಚ್ಚಿನ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಈಗಿನಂತೆ, ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ಈ ಪೋಸ್ಟರ್‌ಗಳನ್ನು ಯಾರು ಅಂಟಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಮೂರು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅಲ್ಲಿಂದಲೇ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ದೆಹಲಿಯಲ್ಲಿ ಮೂರು ಎಫ್‌ಐಆರ್ ಮತ್ತು ಹೊರಗಿನ ದೆಹಲಿಯಲ್ಲಿ ಇನ್ನೂ ಮೂರು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರ ದೆಹಲಿಯಲ್ಲಿ ಒಂದು ಎಫ್‌ಐಆರ್ ದಾಖಲಾಗಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಪೋಸ್ಟರ್‌ಗಳನ್ನು ಅಂಟಿಸಲು ತಮಗೆ 500 ರೂ.ಗಳನ್ನು ನೀಡಲಾಗಿದೆ ಎಂದು ಉತ್ತರ ದೆಹಲಿಯಿಂದ ಬಂಧಿಸಲ್ಪಟ್ಟಿರುವ ವ್ಯಕ್ತಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಹದ್ರಾದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಸಿಟಿ ರವಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಮತ್ತೆ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಚಿವ!

1 COMMENT

  1. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರ.

LEAVE A REPLY

Please enter your comment!
Please enter your name here