Homeಮುಖಪುಟಸತ್ಯಜಿತ್ ರಾಯ್ ಶತಮಾನೋತ್ಸವ ವಿಶೇಷ: ’ಮಾಣಿಕ್ ದಾ’ರ ಹೆಣ್ಣು ಮಕ್ಕಳು

ಸತ್ಯಜಿತ್ ರಾಯ್ ಶತಮಾನೋತ್ಸವ ವಿಶೇಷ: ’ಮಾಣಿಕ್ ದಾ’ರ ಹೆಣ್ಣು ಮಕ್ಕಳು

ಗಂಡಾಳ್ವಿಕೆಯ ಕೌಟುಂಬಿಕ ಸನ್ನಿವೇಶದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಸಂಕಟಗಳ ಸ್ಥಿತಿಯನ್ನು ಮೀರಿ, ತಮ್ಮ ಸ್ವಂತ ಬದುಕಿನ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳಲು ಇರುವ ಗೋಜಲುಗಳನ್ನು ರಾಯ್ ತಮ್ಮ ಸಿನೆಮಾಗಳಲ್ಲಿ ನಿರೂಪಿಸಿರುವ ಬಗೆಯನ್ನು ಕೆ.ಫಣಿರಾಜ್ ಕಟ್ಟಿಕೊಟ್ಟಿದ್ದಾರೆ..

- Advertisement -
- Advertisement -

ಸತ್ಯಜಿತ್ ರಾಯ್ ಸುಸಂಸ್ಕೃತ ನಗರ ಜೀವಿ. ಕತೆ, ಕಾದಂಬರಿ, ಚಿತ್ರಕಲೆಗಳಲ್ಲಿ ಸೃಜನತೆ ತೋರಿದವರು. ಬಾಲ್ಯದಿಂದಲೇ ದಂಡೆಯಾಗಿ ಸಿನೆಮಾ ನೋಡುತ್ತಾ, ಸಿನೆಮಾ ಕಲೆಯ ಸೌಂದರ್ಯ ಮೀಮಾಂಸೆಯ ಸೂಕ್ಷ್ಮ ಸಂವೇದನೆಗಳನ್ನು ಪಡೆದು, ಲೋಕಪ್ರಸಿದ್ಧ ಸಿನೆಮಾ ಕಲೆಗಾರರ ಬಗ್ಗೆ ಅರಿವು ಮೂಡಿಸುವ ಬರಹಗಳನ್ನು ಬರೆದಿರುವರು. ಸಿನೆಮಾ ಕಲೆಯ ವ್ಯಾಕರಣ ವಿಶಿಷ್ಟತೆಗಳನ್ನು ಅರಿತು, ಸಿನಿಮಾ ನೋಡುವ ಪ್ರೇಕ್ಷಕ ಸಮುದಾಯ ಕಟ್ಟುವ ಉತ್ಸಾಹದಲ್ಲಿ ಚಲನಚಿತ್ರ ಸಮಾಜಗಳನ್ನು ಕಟ್ಟಿ ಬೆಳೆಸಿದವರು. ಕಲಕತ್ತೆಯ ನುರಿತ ಕಲಾಕಾರ, ಬುದ್ಧಿಜೀವಿ ಎಂದು ನೆನೆಯಲು ಇಷ್ಟು ಖ್ಯಾತಿ ಸಾಕಿತ್ತು. ಆದರೆ, 1930-60ರ ಮೂರು ದಶಕಗಳಲ್ಲಿ ಬಂಗಾಳ ಹಾಗು ಕಲಕತ್ತೆಯ ಕಲಾಕಾರ ವಲಯವನ್ನು ಪ್ರಭಾವಿಸಿದ ವಿಶ್ವಾತ್ಮಕ ಮಾನವ ಮೌಲ್ಯಗಳ ಸೂಕ್ಷ್ಮವಾದ ಪದರುಗಳನ್ನು, ’ಮಾಣಿಕ್ ದಾ’ರ 29 ಕಥಾ ಸಿನೆಮ, 5 ಸಾಕ್ಷ್ಯ ಸಿನೆಮ ಹಾಗು ಎರಡು ಕಿರು ಸಿನೆಮಾಗಳ ಕಟ್ಟು ಮಾತ್ರವೇ ಪ್ರಕಟಿಸಬಲ್ಲ ಅರಿವಿನ ಕೋಶವಾಗಿದೆ. ಅದರಲ್ಲೂ, ರವೀಂದ್ರನಾಥ ಟಾಕೂರರು ತಮ್ಮ ಬದುಕು-ಕಲೆಗಳ ಮೂಲಕ ಕಟ್ಟಿದ ವಿಶಿಷ್ಟ ವಿಶ್ವಾತ್ಮಕ ಮೌಲ್ಯಗಳನ್ನು ’ಮಾಣಿಕ್ ದಾ’ರಷ್ಟು ಹಚ್ಚಿಕೊಂಡು, ತಮ್ಮ ಸಿನೆಮಾ ಕಲೆಯ ಆಧ್ಯಾತ್ಮ ಮಾಡಿಕೊಂಡವರು ಕಡಿಮೆ.

’ಸ್ವಾತಂತ್ರ್ಯ-ಸಮಾನತೆ-ಸಹೋದರತ್ವ’-ಇವುಗಳನ್ನು ಆಧುನಿಕ ಪ್ರಪಂಚದ ವಿಶ್ವಾತ್ಮಕ ಮಾನವ ಮೌಲ್ಯಗಳು ಎನ್ನುತ್ತೇವೆ. ರವೀಂದ್ರನಾಥರ ವಿಶ್ವಾತ್ಮಕ ಮಾನವ ಮೌಲ್ಯಗಳು ಇದನ್ನು ನಿರಾಕರಿಸುವುದಿಲ್ಲ; ಆದರೆ, ಈ ಮೌಲ್ಯಗಳನ್ನು ಸಮಾಜದಲ್ಲಿ ರೂಢಿಸುವ ಮಾರ್ಗಗಳನ್ನು ಪರಿಶೀಲಿಸುತ್ತವೆ. ರವೀಂದ್ರರು ’ಮೃಣ್ಮಯ’ ಮತ್ತು ’ಚಿನ್ಮಯ’ ಎಂಬ ಎರಡು ಮೌಲ್ಯಗಳನ್ನು ಗುರುತಿಸುತ್ತಾರೆ. ಸರಳವಾಗಿ ವಿವರಿಸುವುದಾದರೆ: ಈಗ ನಮ್ಮ ಸಾಮಾಜಿಕ ಬದುಕಿನಲ್ಲಿ ನಾವು ರೂಢಿಸಿಕೊಂಡು ಆಚರಿಸುತ್ತಿರುವ ಮೌಲ್ಯಗಳು ’ಮೃಣ್ಮಯ’ [ನೆಲದ ರೂಢಿ, ಪರಂಪರಾನುಗತ ಬದುಕಿನ ರೂಢಿ]; ನಮ್ಮ ವರ್ತಮಾನದ ರೂಢಿಯ ಕೇಡುಗಳನ್ನು ಅರಿತು, ಅವುಗಳನ್ನು ನೀಗಿಸಿಕೊಂಡು ಕಟ್ಟಿಕೊಳ್ಳಬೇಕಾದ ಹೊಸ ಬದುಕಿನ ಆದರ್ಶ ’ಚಿನ್ಮಯ’. ’ಮೃಣ್ಮಯ’ ಜೀವನದಲ್ಲಿ ’ಚಿನ್ಮಯ’ದ ಅದರ್ಶಗಳನ್ನು ಸಾಧಿಸುವುದು ಹೇಗೆ?- ಇದು ಸತ್ಯಜಿತ್ ರಾಯ್ ತಮ್ಮ ಸಿನೆಮಾ ಕಲೆಯ ಮೂಲಕ ಕಂಡುಕೊಳ್ಳಲು ಬಯಸುವ ಅರಿವಿನ ಹುಡುಕಾಟ. ಅದರಲ್ಲೂ, ಗಂಡಾಳ್ವಿಕೆಯ ಕೌಟುಂಬಿಕ ಸನ್ನಿವೇಶದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಸಂಕಟಗಳ ಸ್ಥಿತಿಯನ್ನು (’ಮೃಣ್ಮಯ’) ಮೀರಿ, ತಮ್ಮ ಸ್ವಂತ ಬದುಕಿನ ಸ್ವಾತಂತ್ರ್ಯವನ್ನು (’ಚಿನ್ಮಯ’) ದಕ್ಕಿಸಿಕೊಳ್ಳಲು ಇರುವ ಗೋಜಲುಗಳನ್ನು, ರಾಯ್ ತಮ್ಮ ಸಿನೆಮಾಗಳಲ್ಲಿ ನಿರೂಪಿಸಿರುವ ಬಗೆಯು ’ಮಹಿಳಾವಾದದ ಚಿನ್ಮಯ’ಕ್ಕೆ ಬಹಳ ಮೌಲಿಕ ಕೊಡುಗೆಯಾಗಿದೆ. ’ಮಾಣಿಕ್ ದಾ’ರ 29 ಸಿನೆಮಾಗಳಿಂದ, 10 ಸಿನೆಮಾಗಳ ಹೆಣ್ಣು ಪಾತ್ರಗಳ ಕಿರು ಪರಿಚಯವನ್ನು ಕೋಷ್ಟಕದಲ್ಲಿ ಸಂಗ್ರಹಿಸಿ ಕೊಟ್ಟಿರುವೆನು. ಇದರಲ್ಲಿ:

* ಇಚ್ಛಿಸಿದ ’ಚಿನ್ಮಯ’ ದಕ್ಕದೆ ಗಂಡಾಳ್ವಿಕೆಯ ’ಮೃಣ್ಮಯ’ ಲೋಕದಲ್ಲಿ ಸಿಕ್ಕು ಬಿದ್ದು ನರಳುವ ದಯೋಮಯಿ, ರತನ್, ಬಿಮಲ ಇದ್ದಾರೆ.

* ನಗರದ ’ಮೃಣ್ಮಯ’ ಬದುಕಿನ ಮೂಲಕ ಪಡೆದ ಸ್ವಂತಿಕೆಯ ’ಚಿನ್ಮಯ’ವನ್ನು, ಗಂಡಸರಿಗೆ ಗಂಡಾಳ್ವಿಕೆಯ ಅಹಂಕಾರದ ವ್ಯರ್ಥತೆಯ ಅರಿವು ಮೂಡಿಸುವ ರಾವುಗನ್ನಡಿಯಾದ ಮೊನಿಷ, ಟುಟು, ಅಪರ್ಣರಂತಹ ಹೆಣ್ಣು ಮಕ್ಕಳಿದ್ದಾರೆ.

* ಬದುಕಿನ ಗೋಜಲು ಸಂಸಾರಿಕ ’ಮೃಣ್ಮಯ’ದಲ್ಲಿ ತಮ್ಮ ಸ್ವಂತಿಕೆಯ ’ಚಿನ್ಮಯ’ ಪಡೆವ ಮೃಣ್ಮಯಿ, ಇಂದ್ರಾಣಿ, ಅನಿಲಾ ಇದ್ದಾರೆ.

* ಸೋತ ಗಂಡಾಳ್ವಿಕೆಯ ಕುಟುಂಬಗಳ ’ಮೃಣ್ಮಯ’ ಸ್ಥಿತಿಯನ್ನು ಹೆಗಲಿಗೇರಿಸಿಕೊಂಡು, ಸಂಸಾರ ಪೋಷಿಸುವ ಧೀಮಂತಿಕೆಯಲ್ಲಿ ಇಡಿ ಜಗವು ಪಡೆಯಬೇಕಾದ ನ್ಯಾಯಯುತ ’ಚಿನ್ಮಯ’ವನ್ನು ಕಟ್ಟಿಕೊಡುವ ನಾಯಕಿರಾದ ಆರತಿ, ಚಾರುಲತ ಇದ್ದಾರೆ.

ಇದರಲ್ಲಿ ಮೊನಿಷ, ಅನಿಲಾ ಮಾತ್ರ ರಾಯ್ ಅವರ ’ಚಿನ್ಮಯ’ದಿಂದ ರೂಪದಾಳಿದವರು; ಬಾಕಿಯವರನ್ನು ತನಗಿಂತ ಹಿರಿಯರಾದ ಹಾಗು ತನ್ನ ಸಮಕಾಲೀನರಾದ ಕಲಾಕಾರರ ’ಚಿನ್ಮಯ’ವನ್ನು ಕಡೆದು ’ಮಾಣಿಕ್ ದಾ’ ಕಟ್ಟಿರುವರು.

ಸಿನಿಮಾ: ದೇವಿ
ವರ್ಷ: 1960
ಕಥೆ/ಕಾದಂಬರಿಕಾರ: ಪ್ರವೋತ್ಕುಮಾರ್ ಮುಖ್ಯೋಪಾಧ್ಯಾಯ್
ನಾಯಕಿ ಪಾತ್ರ : ದಯೋಮಯಿ

ಹದಿನೇಳನೇ ವಯಸ್ಸಿಗೆ ಮದುವೆಯಾಗಿ, ಕೂಡು ಕುಟುಂಬಕ್ಕೆ ಸೊಸೆಯಾಗಿ ಬಂದವಳು. ಮಾವ ಕಾಳಿಕಿಂಕರನ ಅಂಧ ಕಾಳಿಭಕ್ತಿಯ ಫಲವಾಗಿ, ದೇವಿಯ ಅವತಾರವೆಂದು ಪರಿಗಣಿತವಾಗಿ, ಸಾಮಾನ್ಯ ಸಂಸಾರ ಜೀವನದ ಪ್ರೀತಿಗಳನ್ನು ಕಳೆದುಕೊಂಡು ಮಾಸಿಕ ಹಿಂಸೆಗೆ ತುತ್ತಾಗಿ ನಲುಗುವವಳು.

ಸಿನಿಮಾ: ಥೀನ್ ಕನ್ಯಾ, ಕಿರುಚಿತ್ರ ಸಂಕಲನ
ವರ್ಷ: 1961
ಕಥೆ/ಕಾದಂಬರಿಕಾರ: ರವೀಂದ್ರನಾಥ ಟಾಕೂರ್
ನಾಯಕಿ ಪಾತ್ರ : ಪೋಸ್ಟ್ ಮಾಸ್ಟರ್’ನ ರತನ್

ಕುಗ್ರಾಮದ ಅನಾಥ ಎಳೆಹುಡುಗಿ. ಕುಗ್ರಾಮದಲ್ಲಿ ಆಧುನಿಕ ಭಾರತದ ಸಂಕೇತವೆಂದರೆ ಪೋಸ್ಟ್ ಆಫೀಸ್. ನಗರದಿಂದ ಬರುವ ಪೋಸ್ಟ್ ಮಾಸ್ಟರ್‌ಗಳ ಮನೆಯ ಬಿಟ್ಟಿ ಚಾಕರಿ ಮಾಡಿ ಹೊಟ್ಟೆ ಹೊರೆಯುವ ದುಸ್ಥಿತಿಯಲ್ಲಿರುವ ಪೋರಿ. ನಂದಲಾಲ್ ಎಂಬ ಪೋಸ್ಟ್ ಮಾಸ್ಟರ್ ಅವಳ ಬಗ್ಗೆ ವಾತ್ಸಲ್ಯ ತೋರಿ, ಅವಳಿಗೆ ವಿದ್ಯಾಭ್ಯಾಸ ಮಾಡಿಸಲು ಶುರು ಮಾಡುತ್ತಾನೆ. ಅವನು ಮಲೇರಿಯಕ್ಕೆ ತುತ್ತಾಗಿ ನರಳುವಾಗ, ಪುಟ್ಟಿ ರತನ್ ತಾಯಿಯಂತೆ ಅವನನ್ನು ಸಲಹುತ್ತಾಳೆ. ಆ ಅನಾಥ ಹುಡುಗಿ ತನಗೊಬ್ಬ ವಾತ್ಸಲ್ಯದ ತಂದೆ ಮತ್ತು ಸಮಾನ ಬಂಧುತ್ವ ಸಿಕ್ಕಿದೆ ಎಂದು ಖುಷಿಗೊಳ್ಳುತ್ತಿರುವಾಗಲೇ, ನಂದಲಾಲ್, ಇದ್ಯಾವ ವಾತ್ಸಲ್ಯವೂ ಚಿಗುರು ಒಡೆದಿಲ್ಲವೆಂಬಂತೆ, ಹಳ್ಳಿ ತೊರೆದು ಹೊರಡುತ್ತಾನೆ; ಹೊರಡುವಾಗ ಚಾಕರಿಗೆ ಭಕ್ಷೀಸು ನೀಡಲು ಹೋದಾಗ, ರತನ್ ದುಃಖ- ಆಕ್ರೋಶಗಳಿಂದ ನಿರಾಕರಿಸುತ್ತಾಳೆ.

’ಸಂಪತ್ತಿ’ಯ ಮೃಣ್ಮಯಿ: ತುಂಟತನ, ಜೀವಂತಿಕೆಗಳು ಪುಟಿವ ಹಳ್ಳಿಯ ಹುಡುಗಿಯೊಬ್ಬಳು, ನಗರ ವಾಸಿ ಯುವಕನನ್ನು ಸತಾಯಿಸಿ ಸೆಳೆಯುವಳು. ಸಾಂಪ್ರದಾಯಿಕ ಸಮಾಜದ ರಿವಾಜುಗಳ ಪ್ರಕಾರ ಯುವಕ ಅವಳನ್ನು ಇಚ್ಛಿಸಿ ಮದುವೆಯಾದಾಗ, ಸಂಸಾರದ ಅರಿವಿರದ ಬಾಲಕಿ, ಬೆಚ್ಚಿ ತವರು ಮನೆಗೋಡುವಳು. ನಿಧಾನಕ್ಕೆ ಮಾಗಿ, ಯುವಕನ ಜೊತೆಗೂಡುವಳು.

ಸಿನಿಮಾ : ಕಾಂಚನಜುಂಗ ಕಿರುಚಿತ್ರ ಸಂಕಲನ
ವರ್ಷ : 1962
ಕಥೆ/ಕಾದಂಬರಿಕಾರ: ಸತ್ಯಜಿತ್ ರಾಯ್
ನಾಯಕಿ ಪಾತ್ರ : ಮೊನಿಷಾ

ಸಿರಿವಂತ ತಂದೆಯು, ತನ್ನ ವ್ಯವಹಾರ ದೃಷ್ಟಿಯಿಂದ, ಕುದುರಿಸಲು ಹೊರಟಿರುವ ಮದುವೆಯ ಸಂಬಂಧವನ್ನು ನಿರಾಕರಿಸಿ, ತನ್ನ ಇಚ್ಛೆಯ ಸಂಗಾತಿಯನ್ನು ಹುಡುಕಬಲ್ಲೆನೆಂದು ದಿಟ್ಟತನವನ್ನು ಪ್ರದರ್ಶಿಸುವ ತೋರುವ ಯುವತಿ.

ಸಿನಿಮಾ: ಮಹಾನಗರ್
ವರ್ಷ: 1963
ಕಥೆ/ಕಾದಂಬರಿಕಾರ: ನರೇಂದ್ರನಾಥ ಮಿಶ್ರಾ
ನಾಯಕಿ ಪಾತ್ರ : ಆರತಿ

ಸಾಂಪ್ರದಾಯಿಕ ಗಂಡಾಳ್ವಿಕೆಯ ಮೇಲ್ಜಾತಿ, ನಗರ ಮಧ್ಯಮ ವರ್ಗದ ಕುಟುಂಬದಲ್ಲಿ ಗೃಹಿಣಿಯಾಗಿ, ಸೀಮಿತ ಬದುಕು ನಡೆಸುತ್ತಿರುವ ಹೆಣ್ಣು. ಮಾವನ ಪಿಂಚಣಿ, ಗಂಡನ ಖಾಸಗಿ ಕಂಪೆನಿಯ ನೌಕರಿ ಸಂಬಳದಲ್ಲಿ ಹೊಂದಿಕೊಂಡು ಸಂಸಾರ ತೂಗಿಸುತ್ತಿರುವವಳು. ಗಂಡ ಸುಬ್ರಾತೋ ನೌಕರಿ ಕಳೆದುಕೊಂಡು, ಸಂಸಾರ ಜೀವನ ಕಷ್ಟವಾಗುತ್ತದೆ. ಆರತಿ, ಸಂಸಾರಕ್ಕೆ ಆಧಾರವಾಗಲು, ಮನೆ, ಮನೆ ತಿರುಗಿ ಸರಕು ಮಾರಾಟ ಮಾಡುವ ’ಮಾರುವ ಹುಡುಗಿ’ಯ ಉದ್ಯೋಗ ಸಂಪಾದಿಸಿಕೊಳ್ಳುತ್ತಾಳೆ. ಅವಳ ಮಾವನಿಗೆ ಅದು ಅಪತ್ಯ; ನಿರುದ್ಯೋಗಿ ಗಂಡನಿಗೆ ಕಸಿವಿಸಿಯ ಅನಿವಾರ್ಯ; ಮನೆಯ ಗಂಡಸರು ಅವಳ ನೈತಿಕತೆಯ ಬಗ್ಗೆ ಪಡುವ ಸಂಶಯಗಳನ್ನು ನುಂಗಿ, ಸಂಸಾರ ಕಾಪಾಡುವ ಹೊಣೆ ಹೊತ್ತ ಆರತಿಯು, ನಿಧಾನಕ್ಕೆ ಕಸುಬಿನ ಕುಶಲತೆಯನ್ನೂ ಹೊಸ ನಗರದ ಹೆಣ್ಣಿನ ವಿಶ್ವಾಸವನ್ನೂ ಪಡೆಯುತ್ತ ಹೋಗುತ್ತಾಳೆ; ಎಷ್ಟು ವಿಶ್ವಾಸ ಪಡೆಯುತ್ತಾಳೆಂದರೆ, ಉದ್ಯೋಗದ ಉನ್ನತಿ ತಲುಪಿರುವಾಗಲೇ, ಸಹೋದ್ಯೋಗಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿ ರಾಜಿನಾಮೆ ಪತ್ರ ಕೊಟ್ಟು, ಎದೆ ಸೆಟಿಸಿ ಬದುಕುವಷ್ಟು.

ಸಿನಿಮಾ : ಚಾರುಲತ
ವರ್ಷ : 1964
ಕಥೆ/ಕಾದಂಬರಿಕಾರ: ರವೀಂದ್ರನಾಥ ಟಾಕೂರ್
ನಾಯಕಿ ಪಾತ್ರ : ಚಾರುಲತ

ಬ್ರಿಟಿಷ್ ಭಾರತದಲ್ಲಿ, ಕಲ್ಕತ್ತೆಯ ಮೇಲ್ವರ್ಗದ ಕುಟುಂಬದ ಗೃಹಿಣಿ; ಬಹು ಕುಶಲೆ, ಸಾಹಿತ್ಯ ಸಂಪನ್ನೆ, ಸಕ್ಷಮ ಗೃಹಿಣಿ. ಗಂಡ ಭೂಪತಿ, ಖ್ಯಾತ ರಾಜಕೀಯ ಪತ್ರಿಕೆಯ ಮಾಲಿಕ-ಸಂಪಾದಕ, ಗೌರವಾನ್ವಿತ ಬುದ್ಧಿಜೀವಿ. ಚಾರು ಮೇಲ್ವರ್ಗದ ಪ್ರತಿಷ್ಠಿತ ಗಂಡಾಳ್ವಿಕೆಯ ಸಂಸಾರದಲ್ಲಿ ಬಂಧಿಯಾಗಿ, ತನ್ನ ಸ್ವಂತಿಕೆಯನ್ನು ಕಂಡುಕೊಳ್ಳಲು ಹಾತೊರೆಯುತ್ತಿರುವವಳು; ಗಂಡ ಭೂಪತಿಗೆ ಅದರ ಪರಿವೇ ಇಲ್ಲ; ಅವನಿಗೆ ಅವಳು ಸುಸಂಸ್ಕೃತ ಸುಂದರ ಹೆಂಡತಿ ಮಾತ್ರ. ಗಂಡನ ಸೋದರ ಸಂಬಂಧಿ ಅಮಲ್, ಕುಟುಂಬ ಪ್ರವೇಶ ಮಾಡಿ, ಅವಳ ಪ್ರತಿಭೆಗೆ ಸಾಂಗತ್ಯ ದೊರೆತಾಗ, ಚಾರುಲತಳ ಒಳಗಿರುವ ಸ್ವಾತಂತ್ರ್ಯದ ಅಭಿಲಾಷೆಯು ಗರಿಗೆದರುತ್ತದೆ; ಅವಳ ಸ್ವಾತಂತ್ರ್ಯ ಪ್ರಕಟಣೆಯ ಪರಿಯು ಅಮಲನನ್ನೂ ದಂಗು ಬಡಿಸುತ್ತದೆ. ಅವಳ ಸ್ವತಂತ್ರ ವ್ಯಕ್ತಿತ್ವಕ್ಕೆ ಸಾಂಗತ್ಯ ನೀಡುವ ಧೈರ್ಯ ಧೀಮಂತಿಕೆ ಇರದ ಅಮಲ್, ಅವಳಿಂದ ದೂರ ಓಡುತ್ತಾನೆ. ವ್ಯವಹಾರದಲ್ಲಿ ಸೋತ ಭೂಪತಿಗೆ, ಚಾರುಲತಳ ನವ ಸ್ವಾತಂತ್ರ್ಯವೂ ಒಂದು ಸವಾಲಾಗುತ್ತದೆ. ಈಗ ಚಾರುಲತ ಬಿಡುಗಡೆ, ಸಂಬಂಧಗಳ ಅಭದ್ರತೆಗಳನ್ನೂ ಎರಡು ಕೈಗಳಲ್ಲಿ ಹಿಡಿದ, ಹೊಸ ಅಸ್ತಿತ್ವ ಪಡೆದ ಮಹಿಳೆ.

ಸಿನಿಮಾ: ಅರಣ್ಯೇರ್ ದಿನ್ ರಾತ್ರಿ
ವರ್ಷ: 1970
ಕಥೆ/ಕಾದಂಬರಿಕಾರ: ಸುನೀಲ್ ಗಂಗೋಪಾಧ್ಯಾಯ
ನಾಯಕಿ ಪಾತ್ರ : ಅಪರ್ಣ

ನಗರದ ಗಂಡಸರ ಸ್ವಲೋಲುಪ್ತ ಅಹಂಕಾರಕ್ಕೆ ಕನ್ನಡಿ ಹಿಡಿದು, ಅವರ ಬದುಕಿನ ನಿರರ್ಥಕತೆಯನ್ನು ಬಹು ಸೂಕ್ಷ್ಮವಾದ ಸ್ನೇಹ ಸೂಚಕಗಳಲ್ಲಿ ತೋರುವ ನಗರದ ಯುವತಿ

ಸಿನಿಮಾ : ಸೀಮಾಬದ್ಧ್
ವರ್ಷ : 1971
ಕಥೆ/ಕಾದಂಬರಿಕಾರ: ಮಣಿಶಂಕರ್
ನಾಯಕಿ ಪಾತ್ರ : ಮುಖರ್ಜಿ ಟುಟುಲ್

ನಗರದ ಬಂಡವಾಳಶಾಹಿ ಬದುಕಿನಲ್ಲಿ, ಯಾವ ನೈತಿಕ ಮಾನದಂಡಗಳನ್ನೂ ಇಟ್ಟುಕೊಳ್ಳದೆ, ಹಣ ಸಂಪಾದನೆಯ ಏಣಿಯಾಟದಲ್ಲಿ ತೊಡಗಿರುವ ತನ್ನ ಭಾವನ ವ್ಯಕ್ತಿ ವಿಕಾರವನ್ನು ತೋರುವ ರಾವುಗನ್ನಡಿ.

ಸಿನಿಮಾ : ಘರೇ ಭೈರೇ
ವರ್ಷ : 1984
ಕಥೆ/ಕಾದಂಬರಿಕಾರ: ರವೀಂದ್ರನಾಥ ಟಾಕೂರ್
ನಾಯಕಿ ಪಾತ್ರ : ಬಿಮಲ

1907ರ ಕಾಲದ, ಪೂರ್ವ-ಪಶ್ಚಿಮ ಬಂಗಾಳಗಳ ಗಡಿ ಗ್ರಾಮದಲ್ಲಿ ದೊಡ್ಡ ಜಮೀನುದಾರನಾದ ನಿಖಿಲೇಶ್ ಚೌಧರಿಯ ಪತ್ನಿ. ನಿಖಿಲೇಶ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದವನು; ಹಳೆಯ ಜಮೀನ್‌ದಾರಿಕೆ ಬಿಟ್ಟು, ತನ್ನ ಸಂಪತ್ತಿನಿಂದ, ಹೊಸ ಕೈಗಾರಿಕೆಯನ್ನು ಪ್ರಾಂತ್ಯದಲ್ಲಿ ಸ್ಥಾಪಿಸುವ ಇರಾದೆ ಉಳ್ಳವನು; ತನ್ನ ಗೇಣಿದಾರರಾಗಿರುವ ಹಿಂದುಗಳು ಹಾಗು ಮುಸಲ್ಮಾನರ ನಡುವೆ ಭೇದವೆಣಿಸದೆ, ಸೌಹಾರ್ದ ಸಹಕಾರದ ಆಧುನಿಕ ಸಮಾಜದ ಆಸೆ ಇಟ್ಟುಕೊಂಡವನು; ಹಾಗೇ ಬಿಮಲ, ಬರಿ ಮನೆಗೆ ಸೀಮಿತವಾದ ಗೃಹಿಣಿಯಾಗಿರದೆ, ಕಲೆ-ಸಾಹಿತ್ಯಗಳಲ್ಲಿ ತರಬೇತಿ ಪಡೆದು ಸ್ವತಂತ್ರ ವಿಚಾರಧಾರೆಯ ಮಹಿಳೆಯಾಗುವಂತೆ ಒತ್ತಾಯಿಸುತ್ತಿರುವವನು. ಈ ಹೊತ್ತಲ್ಲಿ, ನಿಖಿಲೇಶನ ಗೆಳೆಯ, ಉಗ್ರವಾದಿ ಸ್ವಾತಂತ್ರ್ಯ ಹೋರಾಟಗಾರ ಸಂದೀಪನು ಕುಟುಂಬವನ್ನು ಪ್ರವೇಶಿಸುವವನು. ಸಂದೀಪನ ವಾಗ್ಮಯ ಹಾಗು ಮೋಹಕ ವ್ಯಕ್ತಿತ್ವಕ್ಕೆ ಮನಸೋತ ಬಿಮಲಳಿಗೆ ಅವನಲ್ಲಿ ಮೋಹ ಉಂಟಾಗಿ, ನಿಖಿಲೇಶ್ ಬಯಸುವ ಸ್ವತಂತ್ರ ಮಹಿಳೆಯ ವ್ಯಕ್ತಿತ್ವವು ಹರಳುಗಟ್ಟ ತೊಡಗುವುದು. ಆದರೆ, ಸಂದೀಪ ಅವಳ ಮೋಹವನ್ನೂ, ತನ್ನ ವಿಚಾರಧಾರೆಗೆ ವಿರುದ್ಧವಿದ್ದರೂ ನಿಖಿಲೇಶನ ಸ್ನೇಹ ಸೌಹಾರ್ದತೆಯನ್ನೂ ಬಂಡವಾಳ ಮಾಡಿಕೊಂಡು ತನ್ನ ರಾಜಕೀಯ ಗುರಿ ಸಾಧಿಸುವ ದುಸ್ಸಾಹಸ ಕೃತ್ಯಕ್ಕೆ ಇಳಿಯುವನು. ಅವನ ದುಸ್ಸಾಹಸದಿಂದ ಕೋಮುಗಲಭೆ ಪ್ರಚೋದಿತವಾಗಿ, ನಿಖಿಲೇಶನ ಹತ್ಯೆಯಾಗುವುದು. ಬಿಮಲ ಅತಂತ್ರ ವಿಧವೆಯಾಗುವಳು.

ಸಿನಿಮಾ : ಗಣಶತ್ರು
ವರ್ಷ: 1990
ಕಥೆ/ಕಾದಂಬರಿಕಾರ: ಹೆನ್ರಿಕ್ ಇಬ್ಸೆನ್
ನಾಯಕಿ ಪಾತ್ರ: ಇಂದ್ರಾಣಿ ಗುಪ್ತ

ಚಂದ್ರಾಪುರ ಎಂಬ ಊರಿನ ಪ್ರಖ್ಯಾತ ದೇವಸ್ಥಾನದ ಪವಿತ್ರ ಜಲವು ಕಾಮಲೆ ರೋಗ ಹರಡುವ ಮೂಲಸ್ಥಾನವಾಗಿದೆ ಎಂದು ಕಂಡುಕೊಂಡ ವೈದ್ಯ ಅಶೋಕ್ ಗುಪ್ತ, ಜನಜಾಗೃತಿಗೆ ಮುಂದಾಗುವನು. ದೇವಸ್ಥಾನದ ಕಾರಣ ವ್ಯಾವಹಾರಿಕ ಲಾಭ ಗಳಿಸುವ ಅವನ ತಮ್ಮನೂ ಸೇರಿದಂತೆ, ಊರಿನ ವ್ಯವಹಾರಸ್ಥರು ಅವನ ವಿರುದ್ಧ ಜನರನ್ನು ಎತ್ತಿಕಟ್ಟಿ ಅವನನ್ನು ಜನ ಶತ್ರುವಾಗಿಸುವರು. ಏಕಾಂಗಿಯಾಗಿ, ಹಲ್ಲೆಗಳಿಗೆ ತುತ್ತಾದ ಅಶೋಕ್ ಗುಪ್ತನ ಜೊತೆ ಊರ ಯಾವ ನ್ಯಾಯವಂತರೂ ಇರದಾದ ಸ್ಥಿತಿಯಲ್ಲಿ, ಅವನ ಮಗಳು ಇಂದ್ರಾಣಿ, ಊರ ಯುವಕರನ್ನು ಒಗ್ಗೂಡಿಸಿ, ಅಶೋಕ್ ಗುಪ್ತನ ಬೆನ್ನಿಗೆ ನಿಲ್ಲುವರು.

ಸಿನಿಮಾ: ಆಗಂತುಕ್
ವರ್ಷ: 1991
ಕಥೆ/ಕಾದಂಬರಿಕಾರ: ಸತ್ಯಜಿತ್ ರಾಯ್
ನಾಯಕಿ ಪಾತ್ರ: ಅನಿಲಾ

ಉನ್ನತ ಸರಕಾರಿ ಹುದ್ದೆಯಲ್ಲಿರುವ ಸುದೀಂದ್ರ ಬೋಸ್‌ನ ಸುಶಿಕ್ಷಿತ ಪತ್ನಿ. ಈ ಸರಕಾರಿ ಬಾಬುವಿನ ಸಂಸಾರವನ್ನು ಹೇಗೆ ಅಚ್ಚುಕಟ್ಟಾಗಿ ಇಡಬೇಕೆಂದು ಬಲ್ಲ ಜಾಣೆ. ಒಂದು ದಿನ, ವರ್ಷಾಂತರಗಳ ಹಿಂದೆ ಕಣ್ಮರೆಯಾಗಿದ್ದ ಅವಳ ಸೋದರ ಮಾವ ಮನಮೋಹನ ಮಿತ್ರ, ತನ್ನ ರಕ್ತಸಂಬಂಧಿಗಳಲ್ಲಿ ಉಳಿದಿರುವ ಸೊಸೆಯನ್ನು ಕಾಣುವ ಆಸೆಯಿಂದ ಮನೆಗೆ ಬರುತ್ತಿರುವುದಾಗಿ ತಿಳಿಸುವ ಪತ್ರ ಬರುತ್ತದೆ; ಬೆನ್ನಿಗೆ ಮಾವ ಬಂದೇಬಿಡುತ್ತಾನೆ. ಮಾವ ದೇಶಾಂತರ ಹೋದಾಗ ಅನಿಲಾಳು ಇನ್ನೂ ಪುಟ್ಟ ಹುಡುಗಿ; ಅವನ ಮುಖ-ಚರ್ಯೆಗಳ ಒಂದಿಷ್ಟೂ ಅವಳಿಗೆ ನೆನಪಿಲ್ಲ. ಗಂಡ, ಇವನೊಬ್ಬ ದಗಲ್ಬಾಜಿಯೇ ಇರಬೇಕು; ಕುಟುಂಬದ ಆಸ್ತಿ ಹೊಡೆಯುವ ಸಂಚು ಹೂಡಿ, ಮಾವ ಎಂದು ಯಾಮಾರಿಸುತ್ತಿದ್ದಾನೆ ಎಂಬ ಸಂಶಯವನ್ನು ಬಿತ್ತುವನು. ಒಂದು ಕಡೆ ಮನಮೋಹನನ ಒಡನಾಟವು ಅವಳಿಗೆ ಬಾಲ್ಯದ ಬಾಂಧವ್ಯ, ಹಿರಿಯನೊಬ್ಬನ ಅರಿವಿನ ಸಾಂಗತ್ಯದ ಬೆಚ್ಚಗಿನ ಭಾವ ಮೂಡಿಸುತ್ತದೆ; ಆ ಭಾವದಲ್ಲಿ ಅವಳು ತನ್ನಲ್ಲಿರುವ ಸುಪ್ತ ಸೃಜನಶೀಲತೆಯು ಹೊರಬಂದು ಪ್ರಕಟವಾಗುವ ಪುಳಕ ಅನುಭವಿಸುತ್ತಾಳೆ. ಮತ್ತೊಂದು ಕಡೆ ಸುಧೀಂದ್ರ ಬಿತ್ತಿದ ಸಂಶಯವೂ ಮುಳ್ಳಾಗಿ ಚುಚ್ಚುತ್ತಿರುತ್ತದೆ; ಆದರೆ ಸಂಶಯದಲ್ಲಿ ಸುಧೀಂದ್ರ ಮನಮೋಹನನಿಗೆ ಒಡ್ಡುವ ಪರೀಕ್ಷೆಗಳು, ನೋವು ಉಂಟು ಮಾಡುತ್ತಿರುತ್ತದೆ. ಸಂಬಂಧಗಳ ಗುರುತು ಹಚ್ಚುವಿಕೆಯ ಆಟವು, ಅನಿಲಾ ಮರೆತೇ ಬಿಟ್ಟಿದ್ದ ಸ್ವಂತದ ಗುರುತಿನ ಹುಡುಕಾಟವೂ ಆಗತೊಡಗುತ್ತದೆ.

  • ಕೆ.ಫಣಿರಾಜ್

ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟವಿಸ್ಟ್ ಆಗಿ ಕೆಲಸ ಮಾಡುತ್ತಾ, ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗ್ಯಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ ಅವರು ಮುನಿಸು ತೋರಬಹುದು.


ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಯ ಘನತೆ ಹೆಚ್ಚಿಸಿದ ’ನೊಮ್ಯಾಡ್‌ಲ್ಯಾಂಡ್’ ಸಿನಿಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...