HomeUncategorizedಆಸ್ಕರ್ ಪ್ರಶಸ್ತಿಯ ಘನತೆ ಹೆಚ್ಚಿಸಿದ ’ನೊಮ್ಯಾಡ್‌ಲ್ಯಾಂಡ್' ಸಿನಿಮಾ

ಆಸ್ಕರ್ ಪ್ರಶಸ್ತಿಯ ಘನತೆ ಹೆಚ್ಚಿಸಿದ ’ನೊಮ್ಯಾಡ್‌ಲ್ಯಾಂಡ್’ ಸಿನಿಮಾ

- Advertisement -
- Advertisement -

’ಸಿನಿಮಾ’ ಎಷ್ಟು ಜನಪ್ರಿಯವೋ ಬಹುತೇಕ ಅಷ್ಟೇ ಜನಪ್ರಿಯ ’ಆಸ್ಕರ್ ಪ್ರಶಸ್ತಿ. ಅಷ್ಟರಮಟ್ಟಿಗೆ ಈ ಪ್ರಶಸ್ತಿಯ ಬಗ್ಗೆ ಪ್ರಚಾರ ವ್ಯಾಪಕವಾಗಿದೆ. ಒಂದು ಸಿನಿಮಾಗೆ ಬೇರೆ ಯಾವ ಮನ್ನಣೆಗಿಂತಲೂ ಈ ’ಆಸ್ಕರ್ ಪ್ರಶಸ್ತಿ ದೊರೆತರೆ ಆ ಸಿನಿಮಾವನ್ನೂ ಮತ್ತು ಅದರ ಭಾಗವಾಗಿರುವ ಎಲ್ಲರನ್ನೂ ಜಾಗತಿಕವಾಗಿ ಹೆಸರುವಾಸಿ ಮಾಡಿಬಿಡುತ್ತದೆ. ಈ ಪ್ರಶಸ್ತಿ ಬಗ್ಗೆ ಸಾಕಷ್ಟು ತಕರಾರುಗಳಿವೆ. ಸಿನಿಮಾವನ್ನ ಕೇವಲ ಮನರಂಜನೆಯ ಸರಕಾಗಿಸುವಲ್ಲಿ ಇದರ ಕೊಡುಗೆ ಸಾಕಷ್ಟಿದೆ ಎನ್ನುವ ಚರ್ಚೆಯೂ ಒಂದುಕಡೆ ಇದೆ. ಇದನ್ನು ನಂತರ ಚರ್ಚೆ ಮಾಡಬಹುದು. ಆದರೆ, ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಕೆಲವಾದರೂ ಸಿನಿಮಾಗಳು ಮತ್ತು ವ್ಯಕ್ತಿಗಳಿಗಾಗಿ ಅದು ನೆನಪಿನಲ್ಲಿಡಬೇಕಾದ ಸಂಗತಿಯಾಗುತ್ತೆ. ಆ ತರಹದ ನೆನಪನನ್ನು ಕಾಪಿಟ್ಟುಕೊಳ್ಳಲು ಈ ಬಾರಿಯ ’ಆಸ್ಕರ್ ಪ್ರಶಸ್ತಿ’ ಕಾರಣವಾಗಿದೆ.

ಖ್ಲೋಯಿ ಝಾಹೊ (Khloe Zhao) ನಿರ್ದೇಶನದ ’ನೊಮ್ಯಾಡ್‌ಲ್ಯಾಂಡ್ (Nomadland) ಸಿನಿಮಾಗೆ ಈ ಬಾರಿಯ ಅಂದರೆ ೯೩ನೇ ಸಾಲಿನ ಮೂರು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ನೊಮಡ್‌ಲ್ಯಾಂಡ್ ನೋಡಿ ಮುಗಿಸಿದ ಮೇಲೆ ಇನ್ನೆರಡು ಕೆಟಗರಿಯಲ್ಲಿ (ಹಿನ್ನಲೆ ಸಂಗೀತ ಮತ್ತು ಸಂಕನ) ಈ ಸಿನಿಮಾವನ್ನ ಪರಿಗಣಿಸಬೇಕಿತ್ತು ಅನಿಸುತ್ತದೆ. ಉತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದ ಖ್ಲೋಯಿ ಝಾಹೊ ಈ ಕೆಟಗರಿಯಲ್ಲಿ ಆಸ್ಕರ್ ಪಡೆದ ಮೊದಲ ಏಷ್ಯಾ ಮೂಲದ ಮಹಿಳೆ. ಇಡೀ ಸಿನಿಮಾದಲ್ಲಿ ತಮ್ಮ ಅತ್ಯದ್ಭುತ ನಟನೆಯಿಂದ ಬಹಳವಾಗಿ ಕಾಡುವ ನಟಿ ಫ್ರಾನ್ಸೆಸ್ ಮೆಕ್ ಡೊರ್ಮಾಂಡ್ (Frances McDormand) ಅವರಿಗೆ ಉತ್ತಮ ನಟಿ ಕೆಟಗರಿಯಲ್ಲಿ ಪ್ರಶಸ್ತಿ ಲಭಿಸಿದೆ. ಕ್ಯಾಥರಿನ್ ಹೆಪ್‌ಬರ್ನ್ ಅವರನ್ನು ಬಿಟ್ಟರೆ ಈ ವಿಭಾಗದಲ್ಲಿ ಮೂರು ಬಾರಿ ಪ್ರಶಸ್ತಿ ಪಡೆದ ಎರಡನೇ ನಟಿ ಎಂಬ ಹೆಗ್ಗಳಿಕೆ ಕೂಡ ಇವರದ್ದು. ಉತ್ತಮ ಚಲನಚಿತ್ರ ವಿಭಾಗದಲ್ಲೂ ಪ್ರಶಸ್ತಿ ಗಳಿಸಿದೆ.

ಟರ್ಕಿ ಮೂಲದ ಜರ್ಮನ್‌ನ ಖ್ಯಾತ ಸಿನಿಮಾ ನಿರ್ದೇಶಕ ಫತೇ ಅಕಿನ್ ಒಂದು ಕಡೆ ಹೀಗೆನ್ನುತ್ತಾರೆ: ’ನನ್ನ ತಂದೆ ಕಾಲಕ್ಕೆ ಜರ್ಮನ್‌ಗೆ ವಲಸೆ ಬಂದ ಸಾವಿರಾರು ಕುಟುಂಬಗಳು ಇವತ್ತು ಜರ್ಮನ್ನಿಗರೆ ಆಗಿಹೋಗಿದ್ದೇವೆ. ಅಷ್ಟಾಗಿಯೂ ನಾವು ಇಲ್ಲಿ ಎರಡನೇ ದರ್ಜೆಯ ಪ್ರಜೆಗಳು, ಪರಕೀಯರು, ಅನ್ಯರು ಅನ್ನುವ ಭಾವ ಕಾಡುತ್ತದೆ’ ಎನ್ನುತ್ತಾರೆ. ’ನೊಮ್ಯಾಡ್‌ಲ್ಯಾಂಡ್ ಸಿನಿಮಾಗೆ ಜೆಸ್ಸಿಕಾ ಬ್ರಡರ್ ಬರೆದಿರುವ ಅದೇ ಹೆಸರಿನ ನಾನ್‌ಫಿಕ್ಷನ್ ಕೃತಿ ಆಧಾರವಾಗಿದ್ದಾಗಿಯೂ, ಖ್ಲೋಯಿ ಝಾವೊಗೆ ಕೂಡ ಈ ತರದ ಪರಕೀಯತೆಯ ಅಲೆಮಾರಿತನದ ಭಾವನೆ ಆಳವಾಗಿರಬೇಕು. ಆದರೆ ನೊಮ್ಯಾಡ್‌ಲ್ಯಾಂಡ್ ಸಿನಿಮಾ ಬಹಳ ವಿಶಿಷ್ಟ ಯಾಕಂದ್ರೆ, ಇಲ್ಲಿ ಹೊರದೇಶದ ವಲಸಿಗರ ಸಂಕಷ್ಟಗಳ ಕಥೆಗಿಂತ ಅಮೆರಿಕಾದವರೆ ತಮ್ಮ ಬದುಕಿಗೆ ಯಾವುದೇ ಭದ್ರತೆ ಇಲ್ಲದೆ ತಮ್ಮದೇ ನೆಲದಲ್ಲಿ ಪರದೇಶಿಗಳಾಗಿ ಅಥವಾ ಅಲೆಮಾರಿಗಳಾಗಿಬಿಡುವ ಹೃದಯ ಹಿಂಡುವ ಕಥೆಯನ್ನ ನಿರ್ದೇಶಕಿ ಹೇಳಹೊರಟಿದ್ದಾರೆ.

ಇಡೀ ಸಿನಿಮಾ ತನ್ನ ಗಮ್ಯ, ಓಗ, ಲಯದಲ್ಲಿ ಎಲ್ಲಿಯೂ ಕರ್ಕಶ ಅನಿಸದೇ, ಪ್ರತಿಯೊಂದು ದೃಶ್ಯವೂ, ಪಾತ್ರಗಳ ನಟನೆ, ನಿಶ್ಯಬ್ದ, ಹಿನ್ನೆಲೆ ಸಂಗೀತ, ದೃಶ್ಯಗಳ ಸಂಕಲನಗಳಿಂದ ಪರಿಣಾಮಕಾರಿಯಾಗಿದೆ. ನಿರ್ದೇಶಕಿ ತಮ್ಮ ಅಲೋಚನೆಯನ್ನ ಬಹಳ ಸಶಕ್ತವಾಗಿ ದೃಶ್ಯರೂಪಕ್ಕೆ ತಂದಿದ್ದಾರೆ. ಝಾವೊ ತಮ್ಮ ನಿರ್ದೇಶನದ ಐದನೇ ಸಿನಿಮಾದಲ್ಲಿಯೇ ಪ್ರತಿ ವಿಭಾಗದಲ್ಲೂ ಈ ರೀತಿಯ ಪಕ್ವತೆ ಪಡೆದಿರುವುದು ಬಹಳ ವಿಶಿಷ್ಟವಾದದ್ದು. ಝಾಹೊ ಈ ಸಿನಿಮಾದ ನಿರ್ದೇಶಕಿ ಮಾತ್ರ ಅಲ್ಲ. ಚಿತ್ರಕಥೆ ರಚಿಸಿರುವುದರ ಜೊತೆಗೆ ಸಂಕಲನವನ್ನೂ ತಾವೇ ಮಾಡಿದ್ದು, ಸಹ ನಿರ್ಮಾಪಕಿಯೂ ಹೌದು.

Alexandria, Egypt – September 12, 2014 – Wedding Bridesmaids Competition, reward for Best Bridesmaids for participation in competitions. Prize for victory; Shutterstock ID 1178502259; Purchase Order: FIX0005828 ; Project: Tentpoles; Client/Licensee: encyclopedia britannica

ಫ್ರಾನ್ಸೆಸ್ ಮೆಕ್‌ಡೊರ್ಮಾಂಡ್ ಹಾಲಿವುಡ್ ಗ್ಲಾಮರ್‌ಗೆ ಸೆಡ್ಡು ಹೊಡೆದು ತನ್ನ ಪ್ರತಿಭೆಯಿಂದಲೆ ಅಪ್ಪಟ ಕಲಾವಿದೆಯಾಗಿ ಉಳಿದ ಕೆಲವೆ ಕೆಲವು ಕಲಾವಿದರಲ್ಲಿ ಒಬ್ಬರು. ಮೊದಲೇ ತಿಳಿಸಿದಂತೆ ಡೊರ್ಮಾಂಡ್‌ಗೆ ಉತ್ತಮ ನಟಿ ಕೆಟಗರಿಯಲ್ಲಿ ಇದು ಮೂರನೇ ಆಸ್ಕರ್. ಕ್ಯಾಥರಿನ್ ಹೆಪ್‌ಬರ್ನ್ ಮತ್ತು ಡೇವಿಡ್ ಡೆ ಲೂಯಿಸ್ ಬಿಟ್ಟರೆ ಈ ಗೌರವಕ್ಕೆ ಭಾಜನರಾಗಿರುವ ಮೂರನೆಯವರು. ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಅವಳಿಗಳಾದ ಕೊಯಿನ್ ಬ್ರದರ್‍ಸ್ ನಿರ್ದೇಶನದ 1996ರ ’ಫಾರ್ಗೊ (Fargo) ಸಿನಿಮಾದಲ್ಲಿನ ಗರ್ಭಿಣಿ ಪೊಲೀಸ್ ಕಾಪ್ ನಟನೆಗೆ ಮೊದಲನೆಯದು ಮತ್ತು ಎರಡನೆಯದು 2017ರ ’ಥ್ರೀ ಬಿಲ್‌ಬೋರ್‍ಡ್ಸ್ ಔಟ್‌ಸೈಡ್ ಎಬ್ಬಿಂಗ್, ಮಿಸ್ಸೊರಿ’ (Three Billboards outside Ebbing Missouri) ಸಿನಿಮಾದಲ್ಲಿನ ನಟನೆಗಾಗಿ ಆಸ್ಕರ್ ದೊರೆತಿತ್ತು. ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ತನ್ನ ಮಗಳಿಗಾದ ಅನ್ಯಾಯಕ್ಕೆ, ವ್ಯವಸ್ಥೆಯ ವಿರುದ್ಧ ವಿಶಿಷ್ಟ ರೀತಿಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸುವ ’ಥ್ರೀ ಬಿಲ್‌ಬೋರ್‍ಡ್ಸ್’ ಸಿನಿಮಾದಲ್ಲಿನ ಏಕಾಂಗಿ ತಾಯಿಯ ಪಾತ್ರದ ನಟನೆ ಅದ್ಭುತವಾದದ್ದು. ಸಿನಿಮಾದಿಂದ ಸಿನಿಮಾಕ್ಕೆ ಡೊರ್ಮಾಂಡ್ ನಟನೆಯಲ್ಲಿ ಮಾಗಿದ್ದಾರೆ ಅನಿಸುತ್ತದೆ. ಈ ಮೇಲಿನ ಎರಡು ಸಿನಿಮಾಗಿಂತಲೂ ನೊಮ್ಯಾಡ್‌ಲ್ಯಾಂಡ್‌ನಲ್ಲಿ ಮನೆ ಕಳೆದುಕೊಂಡು ಅಲೆಮಾರಿಯಾದ ಫರ್ನ್ ಎಂಬ ಇಳಿವಯಸ್ಸಿನ ಮಹಿಳೆಯ ಪಾತ್ರದ ನಟನೆಯಂತೂ ಅತ್ಯಂತ ಮನೋಜ್ಞವಾದದ್ದು. ವೈಯಕ್ತಿಕವಾಗಿ ನಾನು ಮೆಚ್ಚುವ ಫ್ರೆಂಚ್‌ನ ಇಸಬೆಲ್ಲೆ ಹೂಪರ್ಟ್, ಜ್ಯೂಲಿಯೆಟ್ ಬ್ಯೂನೊಷೆ, ಜೂಲಿಯೆ ಡೆಲ್ಫಿ, ಇರಾನಿನ ತರನ್ಹೆ ಅಲ್ದೋಸ್ತಿ, ಚೀನಾದ ತಾವೊ ಝಾವೊ, ಜಪಾನಿನ ಕಿರಿನ್ ಕಿಕಿ, ಈ ಎಲ್ಲರ ನಟನೆಯನ್ನು ನೊಮ್ಯಾಡ್‌ಲ್ಯಾಂಡ್ ಸಿನಿಮಾದ ಫರ್ನ್ ಪಾತ್ರದಲ್ಲಿ ಡೊರ್ಮಾಂಡ್ ಅವರ ನಟನೆ ಮೀರಿಸಿದೆ ಅನ್ನಿಸಿಬಿಟ್ಟಿತು.

ಆಸ್ಕರ್ ಬಗ್ಗೆ ಎರಡು ಮಾತು..
ಜಪಾನಿನ ಅಕಿರ ಕುರಸೊವಾ ಆದಿಯಾಗಿ ನಮ್ಮವರೆ ಆದ ಸತ್ಯಜಿತ್‌ರೇ ಅಂತವರು ಕೂಡ ಈ ಪ್ರಶಸ್ತಿ ಪಡೆದಿದ್ದಾರೆ. (ತಮ್ಮ ವೃತ್ತಿಜೀವನದ ಒಂದೂ ಸಿನಿಮಾವನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲವಾದರೂ ಅವರ ಒಟ್ಟು ಜೀವನದ ಶ್ರೇಷ್ಠ ಸಾಧನೆಯ ಕಾರಣ ನೀಡಿ ಈ ಪ್ರಶಸ್ತಿ ನೀಡಲಾಗಿದೆ). ಈ ಪ್ರಶಸ್ತಿಯ ಜಾಗತಿಕ ಮಹಿಮೆಯೇ ಅಂತದ್ದು. ಆಸ್ಕರ್ ಪ್ರಶಸ್ತಿಯ ಇತಿಹಾಸವನ್ನು ಮತ್ತು ಆ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿಯನ್ನ ಗಮನಿಸಿದರೆ ತಿಳಿಯುವ ಸಂಗತಿ, ಈ ಪ್ರಶಸ್ತಿ ಮನರಂಜನೆಗೆ ಹೆಚ್ಚು ಒತ್ತು ನೀಡುವ, ಅಮೆರಿಕದ ಪ್ರತಿಷ್ಠೆಯನ್ನು ಎತ್ತಿಹಿಡಿಯುವ, ಆ ದೇಶದ ಯಜಮಾನಿಕೆಯನ್ನು ಸಾರುವ ಸಿನಿಮಾಗಳಿಗೆ ನೀಡಿದ್ದೆ ಹೆಚ್ಚು. ಅಲ್ಲಿನ ಕಪ್ಪು ಜನಾಂಗದ ಕಲಾವಿದರನ್ನಾಗಲಿ ಮತ್ತು ಮಹಿಳಾ ಕಲಾವಿದರನ್ನು ಪರಿಗಣಿಸಿದ್ದಾಗಲಿ ಹೆಚ್ಚಾಗಿ ಕಾಣಸಿಗುವುದಿಲ್ಲ. ಇನ್ನು ಜಾಗತಿಕ ಪ್ರಶಸ್ತಿ ಎಂದು ಕೊಚ್ಚಿಕೊಳ್ಳುವ ’ಆಸ್ಕರ್ ಇಂಗ್ಲಿಷ್ ಭಾಷೆಯ ಸಿನಿಮಾಗಳ ಹೊರತಾಗಿ ಪ್ರಪಂಚದ ಬೇರೆ ಭಾಷೆಗಳ ಸಿನಿಮಾಗಳಿಗೆ ಪ್ರಾತಿನಿಧ್ಯ ನೀಡಿದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಕಾನ್, ಬರ್ಲಿನ್, ವೆನ್ನಿಸ್, ಸುಡಾನ್, ಕೇರಳ ಮುಂತಾದ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಪಂಚದ ಎಲ್ಲಾ ಭಾಗಗಳ ಸಿನಿಮಾಗಳನ್ನು (ಒಂದಷ್ಟು ಅಪವಾದಗಳ ನಡುವೆಯು) ಪ್ರಶಸ್ತಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಸಿನಿಮಾ ಎಂಬ ದೃಶ್ಯ ಮಾಧ್ಯಮದ ಹೊಸ ಹೊಸ ಸಾಧ್ಯತೆಗಳನ್ನು ಹೆಚ್ಚೆಚ್ಚು ಶೋಧಿಸುವ ಸಿನಿಮಾಗಳಿಗೆ ಈ ಸಿನಿಮೋತ್ಸವಗಳಲ್ಲಿ ಮನ್ನಣೆ ಇದೆ. ಈ ಪ್ರಶಸ್ತಿಗಳಿಗೆ ಮನರಂಜನೆ ಎಂಬುದು ದೊಡ್ಡ ಮಾನದಂಡವೇ ಅಲ್ಲ. ಇತಿಹಾಸ, ಸಮಕಾಲಿನ ಪ್ರಪಂಚ ಮತ್ತು ಅದರ ಬಿಕ್ಕಟ್ಟುಗಳನ್ನ ಹೇಗೆ ಗ್ರಹಿಸಲಾಗಿದೆ ಮತ್ತು ಅವುಗಳನ್ನು ದೃಶ್ಯದಲ್ಲಿ ಹೇಗೆ ಕಟ್ಟಿಕೊಡಲಾಗಿದೆ ಎಂಬುದು ಮುಖ್ಯವಾಗುತ್ತವೆ. ಈ ಎಲ್ಲಾ ಪ್ರಶಸ್ತಿಗಳು ನೂರಕ್ಕೆ ನೂರು ಸಾಚ ಎಂದು ಹೇಳುತ್ತಿಲ್ಲ. ಆದರೆ, ಆಸ್ಕರ್ ಪ್ರಶಸ್ತಿಗೆ ಹೋಲಿಸಿಕೊಂಡರೆ ಇವುಗಳು ಪ್ರಶಸ್ತಿ ನೀಡುವುದಕ್ಕೆ ಇಟ್ಟುಕೊಂಡಿರುವ ಮಾನದಂಡ ಹೆಚ್ಚು ಸಹ್ಯವಾಗಿದೆ.

ಇಷ್ಟಾಗಿಯೂ ಈ ಪ್ರಶಸ್ತಿ ಬಂದರೆ ಸಿಗುವ ಜಾಗತಿಕ ಮನ್ನಣೆಯ ಕಾರಣಕ್ಕಾಗಿಯೋ ಅಥವಾ ತಮ್ಮ ಸಿನಿಮಾಗೆ ಸಿಗುವ ಮಾರುಕಟ್ಟೆಯ ಕಾರಣಕ್ಕಾಗಿಯೋ ಬೇರೆಲ್ಲಾ ಪ್ರಶಸ್ತಿಗಳಿಗಿಂತ ಈ ಪ್ರಶಸ್ತಿ ಸಿಕ್ಕರೆ ಎಂತಹ ಸಿನಿಮಾ ನಿರ್ಮಾತೃಗಳದ್ದರೂ ಪುಳಕಿತರಾಗುತ್ತಾರೆ. ಜಾಗತಿಕ ಸಿನಿಮಾ ವಲಯದಲ್ಲಿ ಕಾನ್ ಅಂತಾರಾಷ್ಟ್ರೀಯ ಸಿನಿಮೊತ್ಸವದಲ್ಲಿ ನೀಡುವ ’ಪಾಮ್‌ಡೆ’ಓರ್ (Palme d’Or), ಫಿಪ್ರೆಸ್ಕಿ (Fipresci) ಪ್ರಶಸ್ತಿಗಳು ಬಹಳ ವಿಶಿಷ್ಟವಾದವು ಎಂದು ಪರಿಗಣಿಸಲಾಗುತ್ತೆ. ವಿಚಿತ್ರ ಅಂದರೆ 92ನೇ ಸಾಲಿನ ಆಸ್ಕರ್‌ನಲ್ಲಿ, ಈ ಪ್ರಶಸ್ತಿಯ ಹಲವು ನಿಯಮ ಮತ್ತು ಮಾನದಂಡಗಳನ್ನು ಮೀರಿ ದಕ್ಷಿಣ ಕೊರಿಯಾದ ಬಾಂಗ್ ಜೂನ್ ಹೊ ನಿರ್ದೇಶನದ ’ಪ್ಯಾರಸೈಟ್ ಸಿನಿಮಾವನ್ನ ಹಲವು ವಿಭಾಗಗಳಲ್ಲಿ ಪರಿಗಣಿಸಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ನೀಡಲಾಯಿತು. ಇದಕ್ಕೂ ಮೊದಲೆ ಈ ಸಿನಿಮಾಕ್ಕೆ ಕಾನ್‌ನಲ್ಲಿ ಪ್ರತಿಷ್ಠಿತ Palme d’Or ’ಔಡಿ ಪ್ರಶಸ್ತಿ ನೀಡಲಾಗಿದ್ದರೂ, ಹೆಚ್ಚು ಸಂಭ್ರಮಿಸಿದ್ದು ಮಾತ್ರ ಆಸ್ಕರ್‌ಗಾಗಿ.

ಕಳೆದ ಹನ್ನೆರಡು ಹದಿಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬೆಂಗಳೂರಿನ ಅಂತರರಾಷ್ಟ್ರೀಯ ಸಿನಿಮೊತ್ಸವದಲ್ಲಿ, ಅಲ್ಲಿ ಪ್ರದರ್ಶನವಾಗುವ ಸಿನಿಮಾಗಳ ಪರಿಚಿಯವಿರುವ ಒಂದು ಪುಸ್ತಕವನ್ನು ಸಿದ್ಧಪಡಿಸಲಾಗುತ್ತದೆ. ಸಿನಿಮಾದ ಪರಿಚಯ ಮತ್ತು ನಿರ್ದೇಶಕನ ಪರಿಚಯದ ಜೊತೆಗೆ ಆ ಸಿನಿಮಾಗೆ ಜಾಗತಿಕ ಮಟ್ಟದಲ್ಲಿ ಯಾವಯಾವ ಪ್ರಶಸ್ತಿಗಳು ಬಂದಿದೆ ಎಂಬ ಪಟ್ಟಿಯೊಂದನ್ನು ಕೂಡ ಸೂಚಿಸಲಾಗಿರುತ್ತದೆ. ಆ ಪಟ್ಟಿಯಲ್ಲಿ ಅಗ್ರಸ್ಥಾನ ಮಾತ್ರ ಆಸ್ಕರ್ ಪ್ರಶಸ್ತಿಗೆ. ಸಿನಿಮೋತ್ಸವಕ್ಕೆ ಬರುವ ಬಹಳಷ್ಟು ಮಂದಿಗೆ ಯಾವ ಸಿನಿಮಾ ನೋಡಬೇಕು ಎಂಬುದಕ್ಕೆ ಮಾನದಂಡ ಕೂಡ ಈ ಪ್ರಶಸ್ತಿಯೇ!

ಖ್ಲೋಯಿ ಝಾಹೊ ನಿರ್ದೇಶನದ ’ನೊಮ್ಯಾಡ್‌ಲ್ಯಾಂಡ್ ಸಿನಿಮಾಗೆ ಪ್ರಶಸ್ತಿ ಕೊಡುವ ಮುಖಾಂತರ ಆಸ್ಕರ್ ತನ್ನ ಘನತೆಯನ್ನ ಹೆಚ್ಚಿಸಿಕೊಂಡಿದೆ. ಈ ತರಹದ ಆಯ್ಕೆ ಹಿಂದೆ ಮಾಡಿಯೇ ಇಲ್ಲವೆಂದಲ್ಲ. ಈ ತರಹದ ಆಯ್ಕೆಗಳು ಆಸ್ಕರ್‌ನ ಮಾನದಂಡವಾಗಲಿ ಎಂಬುದು ಆಳದ ಆಶಯ. ಏಷ್ಯಾದ ಒಬ್ಬ ಮಹಿಳಾ ಪ್ರತಿಭಾವಂತ ನಿರ್ದೇಶಕಿಗೆ ಈ ಪ್ರಶಸ್ತಿ ಬಂದಿದ್ದು ಬಹಳ ಸಂತಸ ಉಂಟುಮಾಡಿದೆ. ನಿರ್ದೇಶನ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿರುವ ಎರಡನೇ ಮಹಿಳೆ ಇವರು ಎಂಬುದೂ ವಿಶಿಷ್ಟತೆಯೇ!

ಈ ಸಿನಿಮಾ ಭಾಗವಾದ ಎಲ್ಲರಿಗೂ ಹಾಗು ವಿಶೇಷವಾಗಿ ಸಿನಿಮಾದ ಸಹ ನಿರ್ಮಾಪಕಿಯರಾದ, ನಿರ್ದೇಶಕಿ ಖ್ಲೋಯಿ ಝಾಹೊ ಮತ್ತು ನಟಿ ಫ್ರಾನ್ಸೆಸ್ ಮೆಕ್‌ಡೊರ್ಮಾಂಡ್‌ರಿಗೆ ಹೃದಯಪೂರ್ವಕ ಅಭಿನಂದನೆಗಳು.

  • ಯದುನಂದನ್ ಕೀಲಾರ, ಸಿನೆಮಾಗಳನ್ನು ಧ್ಯಾನಿಸುವ ಯದುನಂದನ್, ಸಿನೆಮಾ ಶಿಕ್ಷಣದ ಹಲವು ಚಳವಳಿಗಳಲ್ಲಿ ಭಾಗಿಯಾಗಿದ್ದಾರೆ.   

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...