ಈ ವರ್ಷದ ಜನವರಿಯಲ್ಲಿ (2022) ಒಂದು ಡಾಲರಿಗೆ, ರೂಪಾಯಿ ಮೌಲ್ಯ 74.50 ಇದ್ದದ್ದು ಆರು ತಿಂಗಳಲ್ಲಿ ನಿರಂತರ ಕುಸಿತ ಕಂಡು ಈಗ ಕೆಲವು ದಿನಗಳ ಹಿಂದೆ ಒಂದು ಡಾಲರಿಗೆ 80 ರೂಪಾಯಿ ದಾಟಿದೆ.
ನಮ್ಮ ದೇಶ ಹೊರದೇಶಗಳೊಂದಿಗೆ ಮಾಡುವ ಒಟ್ಟು ಆಮದು ರಫ್ತಿನಲ್ಲಿ ಶೇ.85.6ರಷ್ಟು ವ್ಯವಹಾರವನ್ನು ಡಾಲರಿನಲ್ಲಿ ಮಾಡುತ್ತದೆ. ಹಾಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರಿಗೆ ಬೇಡಿಕೆ ಜಾಸ್ತಿಯಾದಷ್ಟೂ ರೂಪಾಯಿಯ ಬೆಲೆ ಕುಸಿಯತೊಡಗುತ್ತದೆ. ಹಾಗೆಯೇ ಭಾರತ ತಾನು ಮಾಡುವ ರಫ್ತಿಗಿಂತ ಆಮದು ಜಾಸ್ತಿಯಾಗುತ್ತಾ ಹೋದಂತೆ ವ್ಯಾಪಾರದ ಕೊರತೆ ಜಾಸ್ತಿಯಾಗುವ ಜೊತೆಗೆ ಡಾಲರಿನ ಮುಂದೆ ರೂಪಾಯಿ ಬೆಲೆಯೂ ಕುಸಿಯುತ್ತಾ ಹೋಗುತ್ತದೆ.
2021ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಜೂನ್) 31 ಬಿಲಿಯನ್ ಡಾಲರುಗಳಷ್ಟಿದ್ದ ವ್ಯಾಪಾರದ ಕೊರತೆಯು (Trade deficit) ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 71 ಬಿಲಿಯನ್ ಡಾಲರುಗಳಷ್ಟಾಗಿದೆ. (ರಪ್ತು $119 ಬಿಲಿಯನ್ ಮತ್ತು ಆಮದು $190 ಬಿಲಿಯನ್). ಇದು ದಾಖಲೆ ಮಟ್ಟದ ವ್ಯಾಪಾರದ ಕೊರತೆಯಾಗಿದ್ದು ಡಾಲರಿನ ಮುಂದೆ ರೂಪಾಯಿ ಕುಸಿಯಲು ಒಂದು ಮುಖ್ಯ ಕಾರಣವಾದಂತಿದೆ.
ಹಾಗೆಯೇ ಕಡೆಯ ಎಂಟು ತಿಂಗಳುಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors, FII) ಭಾರತದ ಮಾರುಕಟ್ಟೆಯಿಂದ 2.65 ಲಕ್ಷ ಕೋಟಿಯಷ್ಟು ಭಾರೀ ಮೊತ್ತದ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಅವರುಗಳು ಈ ಹಿಂತೆಗೆದಿರುವ ಹಣವನ್ನು ಡಾಲರಿಗೆ ಬದಲಾಯಿಸಿಕೊಳ್ಳುತ್ತಿರುವುದರಿಂದ ಡಾಲರಿಗೆ ಬೇಡಿಕೆ ಹೆಚ್ಚಾಗಿ, ಇದರಿಂದಲೂ ರೂಪಾಯಿ ಬೆಲೆ ಕುಸಿಯುತ್ತಾ ಬಂದಿದೆ.
ಒಂದು ಪಕ್ಷದಲ್ಲಿ ಇದೇ ಪರಿಸ್ಥಿತಿ ಉಲ್ಟಾ ಆಗಿದ್ದು, ಹೆಚ್ಚು ಡಾಲರು ಭಾರತದ ಮಾರುಕಟ್ಟಯಲ್ಲಿ ಹೂಡಿಕೆಯಾಗಿದ್ದರೆ ಆಗ ರೂಪಾಯಿಗೆ ಬೇಡಿಕೆ ಜಾಸ್ತಿಯಾಗಿರುತ್ತಿತ್ತು.
ಹೀಗೆ ಡಾಲರಿನ ಮುಂದೆ ರೂಪಾಯಿ ಬೆಲೆ ಕುಸಿಯುತ್ತಿರುವುದರಿಂದ ನಮ್ಮ ಮೇಲೆ ಏನು ಪರಿಣಾಮ ಬೀರುತ್ತಿದೆ?
2021-22ರಲ್ಲಿ ನಮಗೆ ಬೇಕಾದ ಒಟ್ಟು ಕಚ್ಚಾತೈಲದಲ್ಲಿ ಶೇ.85.6ರಷ್ಟನ್ನು ಆಮದು ಮಾಡಿಕೊಂಡಿದ್ದೇವೆ. ಈ ಕಚ್ಚಾತೈಲಕ್ಕೆ ನಾವು ಡಾಲರಿನಲ್ಲಿಯೆ ಪಾವತಿಸುತ್ತಿದ್ದೇವೆ. (ರಷ್ಯಾದಿಂದ ಶೇ.10ರಷ್ಟು ತೈಲ ಮಾತ್ರ ಖರೀದಿಸುತ್ತಿದ್ದೇವೆ, ಅದೂ ಕೇವಲ ಶೇ.6ರಷ್ಟು ಮಾತ್ರ ಕಡಿಮೆ ಬೆಲೆಗೆ).
ಡಾಲರಿನ ಎದುರು ರೂಪಾಯಿ ಕುಸಿದಷ್ಟೂ ಕಚ್ಚಾತೈಲಕ್ಕೆ ನಾವು ಕೊಡಬೇಕಾಗಿರುವ ಬೆಲೆ ಜಾಸ್ತಿಯಾಗುತ್ತಲೇ ಹೋಗುತ್ತದೆ. ಇದರಿಂದಾಗಿ ದೇಶದೊಳಗೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಗ್ಯಾಸ್‌ನ ಬೆಲೆ ಜಾಸ್ತಿಯಾಗುತ್ತಲೇ ಹೋಗುತ್ತದೆ (ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿದಾಗ್ಯೂ ಕೂಡ).
ಈ ಕಾರಣಕ್ಕೇ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಪೆಟ್ರೋಲ್ ಬೆಲೆ ಶೇ.14ರಷ್ಟು ಮತ್ತು ಡೀಸೆಲ್ ಬೆಲೆ ಶೇ.9.3ರಷ್ಟು ಜಾಸ್ತಿಯಾಗಿದೆ. ನಮಗೆಲ್ಲಾ ತಿಳಿದಿರುವಂತೆ ಇದು ಎಲ್ಲಾ ದೈನಂದಿನ ಅಗತ್ಯ ವಸ್ತುಗಳ ಬೆಲೆಯೇರಿಕೆಗೂ ಕಾರಣವಾಗುತ್ತದೆ.
ಹಾಗೆಯೇ ಭಾರತ ದೇಶವು ರಸಗೊಬ್ಬರವನ್ನೂ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದು ರೂಪಾಯಿ ಕುಸಿತದಿಂದಾಗಿ ರಸಗೊಬ್ಬರಕ್ಕೆ ಹೆಚ್ಚಿನ ಬೆಲೆ ತೆರಬೇಕಾಗಿ ಬರುತ್ತಿದೆ. ಇದು ಸರ್ಕಾರದ ಒಟ್ಟಾರೆ ವೆಚ್ಚವನ್ನು ಜಾಸ್ತಿ ಮಾಡುತ್ತಿದ್ದು, ಸರ್ಕಾರ ಸಾರ್ವಜನಿಕ ಸೇವೆಗಳಿಗೆ (ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಇತ್ಯಾದಿ) ಅಗತ್ಯವಾಗಿ ಮಾಡಬೇಕಾದ ವೆಚ್ಚಕ್ಕೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಬರುತ್ತದೆ. ಇದು ಇಡೀ ಸಮಾಜದ ಅಭಿವೃದ್ದಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ತಪ್ಪಿಸಿಕೊಳ್ಳಲು ಕಷ್ಟವಾಗುವಂತ ಆರ್ಥಿಕ ವಿಷವರ್ತುಲದಲ್ಲಿ ಇಡೀ ದೇಶವನ್ನು ಸಿಲುಕಿಸುತ್ತದೆ.
ರೂಪಾಯಿ ಕುಸಿತದಿಂದ ಲಾಭವೇನಾದರೂ ಇದೆಯೆ?
ಡಾಲರಿನ ಮುಂದೆ ರೂಪಾಯಿಯ ಬೆಲೆ ಕಡಿಮೆಯಾದಷ್ಟೂ ನಾವು ರಫ್ತು ಮಾಡುವ ಸರಕು ಸೇವೆಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಬೆಲೆಗೆ ನಮ್ಮಿಂದ ರಫ್ತಾಗುವ ಸರಕು ಸೇವೆಗಳು ಲಭ್ಯವಾಗಿ ಅದರಿಂದ ರಫ್ತು ಹೆಚ್ಚಾಗುತ್ತಾ ವ್ಯಾಪಾರದ ಕೊರತೆ ಕಡಿಮೆಯಾಗಿ ನಮ್ಮ
ಅರ್ಥವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂಬ ವಾದವಿದೆ (ಈ ವಾದ ಚೈನಾ, ಜಪಾನುಗಳ ವಿಷಯದಲ್ಲಿ ನಿಜವೂ ಆಗಿದೆ).
ಆದರೆ, ಚೈನಾ ಅಥವಾ ಜಪಾನ್‌ಗಳ ಮಟ್ಟಕ್ಕೆ ರಫ್ತು ವ್ಯವಹಾರದಲ್ಲಿ ಭಾರತ ತಲುಪುವ ಲಕ್ಷಣಗಳು ಹತ್ತಿರದಲ್ಲೆಲ್ಲೂ ಕಾಣಿಸುತ್ತಿಲ್ಲ.
ಹಾಗಿದ್ದರೆ, ಸದ್ಯದಲ್ಲಿ ರೂಪಾಯಿ ಕುಸಿತ ತಡೆಯುವ ದಾರಿಗಳು ಇವೆಯೆ?
ಡಾಲರಿನ ಮುಂದೆ ರೂಪಾಯಿ ಶಕ್ತವಾಗಲು ಸದ್ಯ ಎರಡು ದಾರಿಗಳು ಕಾಣಿಸುತ್ತಿದ್ದರೂ ಅವು ಕ್ಷೀಣವಾದ ಸಾಧ್ಯತೆಗಳಾಗಿವೆ.
ಒಂದು, ಭಾರತದಿಂದ ಹೆಚ್ಚಿನ ಮಟ್ಟದಲ್ಲಿ ರಫ್ತಾಗುತ್ತಿರುವ ಐ.ಟಿ ಸೇವೆಗಳಿಂದ ರೂಪಾಯಿ ಬೆಲೆ ಹೆಚ್ಚಿಸಲು ಸಾಧ್ಯವಿದೆ. ಆದರೆ, ಯೂರೋಪ್ ಮತ್ತು ಅಮೆರಿಕದಲ್ಲಿ ಆರ್ಥಿಕ ಕುಸಿತದ/ ಹಿಂಜರಿತದ ನಿರೀಕ್ಷೆಯಿರುವುದರಿಂದ ಭಾರತದ ಐ.ಟಿ ಸೇವೆಗಳು ನಿರೀಕ್ಷೆಯ ಮಟ್ಟಕ್ಕೆ ರಫ್ತಾಗುವ ಸಾಧ್ಯತೆ ಕ್ಷೀಣವಾಗಿದೆ.
ಹಾಗಾಗಿ, ಐ.ಟಿ ಸೇವೆಗಳ ಹೆಚ್ಚಿನ ರಫ್ತಿನಿಂದ ರೂಪಾಯಿ ಕುಸಿತ ತಡೆಯಬಹುದೆನ್ನುವ ಸಾಧ್ಯತೆಯೂ ಫಲ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದು, ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಡಾಲರಿನ ಮುಂದೆ ರೂಪಾಯಿ ಬೇಡಿಕೆ ಹೆಚ್ಚಿಸಬಹುದು. ಅದರೆ, ಆರ್ಥಿಕ ಸದೃಢತೆಯ ಕೊರತೆಯಿಂದ ವಿದೇಶಿ ನೇರ ಬಂಡವಾಳವೂ ನಿರೀಕ್ಷಿತ ಮಟ್ಟಕ್ಕೆ ಬರುವುದು ಅಸಾಧ್ಯವಾಗಿದೆ.
ಜೊತೆಗೆ, ನಿರೀಕ್ಷಿತ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ಎನ್‌ಆರ್‌ಐಗಳಿಂದ (ವಿದೇಶದಲ್ಲಿ ನೆಲೆಸಿರುವ ಭಾರತೀಯರು) ಭಾರತಕ್ಕೆ ಬರುವ ಹಣವೂ ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚಿದೆ.
ಹೀಗೆ ಈ ಎಲ್ಲ ವಾಸ್ತವದ ಹಿನ್ನೆಲೆಯಲ್ಲಿ ಸದ್ಯಕ್ಕೆ ರೂಪಾಯಿಯ ಕುಸಿತ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳೇ ಕಾಣಿಸುತ್ತಿವೆ ಮತ್ತು ಇದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುವ ಸಾಧ್ಯತೆಗಳೂ ನಿಚ್ಚಳವಾಗಿ ಗೋಚರಿಸುತ್ತಿವೆ.

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.
ಇದನ್ನೂ ಓದಿ: ಅಮೆರಿಕನ್ ಡಾಲರ್ ಮುಂದೆ 80ರೂ. ತಲುಪಲಿರುವ ಭಾರತೀಯ ರುಪಾಯಿ!


