Homeಅಂಕಣಗಳುಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

- Advertisement -
- Advertisement -

ದೆಹಲಿಯ ಗಡಿಗಳಿಗೆ ಲಗ್ಗೆ ಹಾಕಿದ್ದ ರೈತ ಚಳವಳಿಯ ಕತೆ ಇನ್ನೇನು ಮುಗಿದೇ ಹೋಯಿತೆಂದು ಗಹಗಹಿಸಿದ್ದ ಕೇಂದ್ರ ಸರ್ಕಾರ ಮತ್ತು ಅದರ ಮಡಿಲಲ್ಲಿ ಆಡುವ ಜನದ್ರೋಹಿ ಮೀಡಿಯಾದ ಕಪಾಳಕ್ಕೆ ಏಟು ಬಿದ್ದಿದೆ. ಆಳುವವರ ಕುತಂತ್ರ, ಷಡ್ಯಂತ್ರ, ದಮನ ದೌರ್ಜನ್ಯಗಳ ಬೂದಿಯಿಂದ ಫೀನಿಕ್ಸ್ ಹಕ್ಕಿಯಂತೆ ಜಿಗಿದೆದ್ದು ಹಾರಿದೆ ರೈತ ಹೋರಾಟ. ರೈತನ ಹಾದಿಗೆ ಪ್ರಭುತ್ವ ಮುಳ್ಳು ಹಾಸಿದರೆ, ರೈತ ಮುಳ್ಳುಗಳ ಪಕ್ಕದಲ್ಲಿ ಮಣ್ಣು ಚೆಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದಾನೆ.

ಈ ಆಂದೋಲನ ಪಶ್ಚಿಮ ಯುಪಿಯ 2013ರ ಕೋಮು ಧ್ರುವೀಕರಣವನ್ನು ಕರಗಿಸುತ್ತಿರುವ ಸೂಚನೆಗಳಿವೆ. ದೆಹಲಿ ಗಡಿಗಳಲ್ಲಿ ಅದುಮಲಾಗುತ್ತಿರುವ ರೈತರ ಆಂದೋಲನ ಒಳನಾಡುಗಳಿಗೆ ಪಸರಿಸಿ ಪುಟಿದೇಳತೊಡಗಿದೆ. ಒಂದರ ನಂತರ ಮತ್ತೊಂದರಂತೆ ನಡೆಯತೊಡಗಿರುವ ಕಿಸಾನ್ ಮಹಾ ಪಂಚಾಯತ್‌ಗಳಿಗೆ ಭಾರೀ ಸಂಖ್ಯೆಯ ರೈತರು ಹರಿದು ಸೇರುತ್ತಿದ್ದಾರೆ. 1980-90ರ ದಶಕಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್ ಸಮಾವೇಶಗಳಲ್ಲಿ ಕೇಳಿಬರುತ್ತಿದ್ದ ಹರಹರ ಮಹಾದೇವ್-ಅಲ್ಲಾಹು ಅಕ್ಬರ್ ಘೋಷಣೆಗೆ ಹೊಸ ಜೀವ ಸಿಗುವ ಸಾಧ್ಯತೆ ಕಂಡುಬಂದಿದೆ.

ವೇದಿಕೆಗಳ ಮೇಲೆ ಮತ್ತು ಸಭೆಗಳಲ್ಲಿ ಜಾಟ್-ಮುಸ್ಲಿಮ್ ಏಕತೆ ಮತ್ತೆ ಕಾಣತೊಡಗಿದೆ. ಮುಸಲ್ಮಾನ ರೈತರು ರೈತ ಸಮಾವೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮೋದಿಯವರತ್ತ ತಿರುಗಿದ್ದ ಯುವಜನರಲ್ಲಿ ಭ್ರಮನಿರಸನ ಮತ್ತು ಸಿಟ್ಟು ಹುಟ್ಟಿದೆ. 2013ರಲ್ಲಿ ಆಗಿದ್ದು ತಪ್ಪೆಂಬ ಪಶ್ಚಾತ್ತಾಪ ಪ್ರಕಟವಾಗತೊಡಗಿದೆ. ಹರಿಯಾಣ, ಪಂಜಾಬ್, ಪಶ್ಚಿಮ ಯುಪಿ, ಮಧ್ಯ ಯುಪಿ ರಾಜಸ್ತಾನದಲ್ಲಿ ರೈತ ಆಂದೋಲನ ರಭಸ ಪಡೆಯತೊಡಗಿದೆ..

2013ರಲ್ಲಿ ಮುಝಫರ್‌ನಗರ್-ಶಾಮ್ಲಿಯ ಹಿಂದು-ಮುಸ್ಲಿಮ್ ಕೋಮು ಗಲಭೆಗಳಿಗೆ 60 ಮಂದಿ ಬಲಿಯಾಗಿದ್ದರು. ಈ ಗಲಭೆಗಳು ಅರವತ್ತು ಸಾವಿರಕ್ಕೂ ಹೆಚ್ಚು ಮಂದಿ ಮುಸಲ್ಮಾನರನ್ನು ನಿರಾಶ್ರಿತರ ಶಿಬಿರಗಳ ಸಂಕಟಕ್ಕೆ ತಳ್ಳಿದ್ದವು. ಘಾಜಿಯಾಬಾದ್, ಮೇರಠ್, ಮುಝಫರ್‌ನಗರ್, ಹಸ್ತಿನಾಪುರ, ಮವಾನ, ಶಾಮ್ಲಿ, ಕೈರಾನ, ಬಾಘ್ಪತ್, ಸಹಾರಣಪುರ, ದೇವಬಂದ್ ಉದ್ದಗಲಗಳಿಗೆ ಕೋಮುವಾದಿ ಕನ್ನಾಲಿಗೆ ಚಾಚಿ ಉರಿದಿತ್ತು.

ಕಬ್ಬು ಬೆಳೆಯುವ ಬೆಲ್ಲ- ಸಕ್ಕರೆಯ ಸಿಹಿ ಸೀಮೆ ಪಶ್ಚಿಮಿ ಉತ್ತರಪ್ರದೇಶ. ಗಂಗೆ-ಯಮುನೆಯರ ಹೇರಳ ನೀರುಂಡು ಮಲೆತ ಸದಾ ಹಸಿರಿನ ನಾಡು. ನೆರೆಯ ಹರಿಯಾಣ-ಪಂಜಾಬನ್ನೂ ಮೀರಿಸಿದ ಹಸಿರು ಕ್ರಾಂತಿ ಇಲ್ಲಿ ಜರುಗಿದೆ. ಇಲ್ಲಿನ ಜಾಟರ ಜನಸಂಖ್ಯೆಯ ಪ್ರಮಾಣ ಶೇ.6ರಷ್ಟು ಮಾತ್ರ. ಆದರೂ ಈ ನಾಡನ್ನು ಜಾಟಸೀಮೆ ಎಂದು ಕರೆಯುವುದುಂಟು. ಶೇ. ಏಳರಷ್ಟು ರಜಪೂತರು ಮತ್ತು ಶೇ.4ರಷ್ಟು ಗುಜ್ಜರರು ಇಲ್ಲಿನ ಇತರೆ ಪ್ರಭಾವಿ ಜಾತಿಗಳು.

ಮೋ-ಶಾ ಜೋಡಿಗೆ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಸೀಟುಗಳನ್ನು ಗೆಲ್ಲುವ ಸವಾಲು ಎದುರಾದಾಗ ಅವರು ಆರಿಸಿಕೊಂಡ ನೆಲ ’ಫಲವತ್ತಾದ’ ಪಶ್ಚಿಮ ಯುಪಿ. ಯಾಕೆಂದರೆ, ಇಲ್ಲಿ ಮುಸಲ್ಮಾನರ ಜನಸಂಖ್ಯೆ ಯುಪಿಯಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳಲ್ಲಿ ಮುಸಲ್ಮಾನರ ಶೇಕಡಾವಾರು ಪ್ರಮಾಣ ಶೇ.35ಕ್ಕೂ ಹೆಚ್ಚು. ಬಿಜನೂರ್ ಜಿಲ್ಲೆಯಲ್ಲಿ ಮುಸಲ್ಮಾನರ ಪ್ರಮಾಣ ಶೇ.49.14. ಮೊರಾದಾಬಾದಿನಲ್ಲಿ ಶೇ.45.54, ಅಮರೋಹ ಮತ್ತು ಸಹಾರಣಪುರದಲ್ಲಿ ತಲಾ ಶೇ.29. ಮುಝಫರ್‌ನಗರ್‌ನಲ್ಲಿ ಶೇ.38. ಮೇರಠ್‌ನಲ್ಲಿ ಶೇ.33. ಬಾಘಪತದಲ್ಲಿ ಶೇ.25. ಇಲ್ಲಿನ ಮುಸಲ್ಮಾನರು ಲಾಗಾಯಿತಿನಿಂದ ಚರಣ್ ಸಿಂಗ್ ಅವರ ಭಾರತೀಯ ಲೋಕದಳದ ಬೆಂಬಲಿಗರು. ಚರಣಸಿಂಗ್ ಬದುಕಿರುವ ತನಕ ಜಾಟರು ಮತ್ತು ಮುಸಲ್ಮಾನರೇ ಲೋಕದಳದ ಅಡಿಪಾಯ ಆಗಿದ್ದರು. ಪಶ್ಚಿಮ ಉತ್ತರಪ್ರದೇಶದ ಮುಸಲ್ಮಾನರು ಬಹುತೇಕ ರೈತರು. ಜಾಟ ರೈತರನ್ನು ಬಾಧಿಸುತ್ತಿದ್ದ ಅವೇ ಸಮಸ್ಯೆಗಳು ಮುಸಲ್ಮಾನ ರೈತರನ್ನೂ ಕಾಡಿದ್ದವು.

ಚೌಧರಿ ಚರಣಸಿಂಗ್ ಅವರು ಮಧ್ಯಮವರ್ಗದ ರೈತಾಪಿಗಳನ್ನು ಸಂಘಟಿಸಿ ಬೆಳೆಸಿದ್ದ MAJGAR (ಮುಸ್ಲಿಮ್-ಆಹಿರ್ (ಯಾದವ್)- ಜಾಟ್- ಗುಜ್ಜರ್-ರಜಪೂತ) ಎಂಬ ಸಾಮಾಜಿಕ ಮೈತ್ರಿಕೂಟ ಚೆದುರಿ ಹೋಗಿತ್ತು. ಒಮ್ಮೆ ಬಿಜೆಪಿ, ಮತ್ತೊಮ್ಮೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ಸಿನ ಜೊತೆಗೆ ಚರಣಸಿಂಗ್ ಮಗ ಅಜಿತ್ ಸಿಂಗ್ ಮಾಡಿಕೊಂಡ ಅವಕಾಶವಾದಿ ಚುನಾವಣಾ ಮೈತ್ರಿಗಳು MAJGAR ಮೈತ್ರಿಕೂಟದ ಅಡಿಗಲ್ಲುಗಳನ್ನು ಕದಲಿಸಿಬಿಟ್ಟಿತ್ತು. 2013ರ ಕೋಮು ಗಲಭೆಗಳ ಹಾದಿ ಸಲೀಸಾಗಿತ್ತು. 2009ರಲ್ಲಿ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಐದು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರು. ಆದರೆ ಮುಸಲ್ಮಾನರು ಅವರಿಂದ ದೂರವಾಗಿದ್ದರು. ಚರಣಸಿಂಗ್ ನಿಧನದ ನಂತರ ಮೊದಲ ಬಾರಿಗೆ ಅವರ ಸೀಮೆಯ ಜಾಟರು ಮತ್ತು ಮುಸಲ್ಮಾನರು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಮತ ಚಲಾಯಿಸಿದ್ದರು.

PC : No Filter

ಮಾಜಿ ಪ್ರಧಾನಿ ಮತ್ತು ರೈತನಾಯಕ ಚೌಧರಿ ಚರಣಸಿಂಗ್ 1985ರಲ್ಲಿ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದವರು 1987ರಲ್ಲಿ ತೀರಿಹೋದರು.

ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರಸಿಂಗ್ ಟಿಕೇತ್ ಪಶ್ಚಿಮ ಯುಪಿಯಲ್ಲಿ ಚರಣಸಿಂಗ್ ಮತ್ತು ಅವರ ಪಕ್ಷ ಲೋಕದಳ ತೆರವು ಮಾಡಿದ್ದ ಸ್ಥಾನವನ್ನು ತುಂಬಿದ್ದರು.

ಮಹೇಂದ್ರಸಿಂಗ್ ಟಿಕೇತ್ ಅವರ ಮಕ್ಕಳಿಬ್ಬರು ನರೇಶ್ ಮತ್ತು ರಾಕೇಶ್ ಟಿಕೇತ್. ಪಶ್ಚಿಮ ಉತ್ತರಪ್ರದೇಶದ ಕೋಮುಗಲಭೆಗಳಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಪಾಲ್ಗೊಂಡಿದ್ದುಂಟು. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದು ಹೌದು. ದೆಹಲಿ ಗಡಿಗಳಿಗೆ ಲಗ್ಗೆ ಹಾಕಿ ಕುಳಿತ ರೈತ ಆಂದೋಲನದ ದುರ್ಬಲ ಕೊಂಡಿ ಎಂದೇ ಆರಂಭದ ದಿನಗಳಲ್ಲಿ ರಾಕೇಶ್ ಟಿಕೇತ್ ಅವರನ್ನು ಅನುಮಾನಿಸಲಾಗಿತ್ತು. ಸರ್ಕಾರದ ಪರವಾಗಿ ಯಾವಾಗ ಚಾಪೆ ಸುತ್ತುವರೋ ಎಂಬ ಗುಮಾನಿಯೂ ಅವರ ಕುರಿತು ಇತ್ತು.

ಆದರೆ ಜನವರಿ 26ರ ಗಣರಾಜ್ಯ ದಿನದ ಕೆಂಪುಕೋಟೆಯ ಘಟನಾವಳಿಗಳು ಮತ್ತು ಮರುದಿನ ರೈತರ ಮೇಲೆ ನಡೆದ ಹಿಂಸಾಚಾರ ರಾಕೇಶ್-ನರೇಶ್ ಮಾತ್ರವಲ್ಲದೆ ಇಡೀ ಪಶ್ಚಿಮ ಉತ್ತರಪ್ರದೇಶ ಮತ್ತು ಹರಿಯಾಣದ ಜಾಟರು ಮತ್ತಿತರೆ ರೈತ ಸಮುದಾಯವನ್ನು ಬಿಜೆಪಿ ವಿರುದ್ಧ ತಿರುಗಿಸಿ ನಿಲ್ಲಿಸಿದೆ.

ಜನವರಿ 28ರಂದು ಮುಝಫರ್‌ನಗರ್‌ನಲ್ಲಿ ಜರುಗಿದ ಮೊದಲನೆಯ ಕಿಸಾನ್ ಮಹಾ ಪಂಚಾಯತ್ ಐತಿಹಾಸಿಕ ಎನಿಸಿತು. ಲಕ್ಷೆಪಾದಿಯಾಗಿ ನೆರೆದಿದ್ದ ರೈತರು ಈ ಸಭೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಮ್ ರೈತರು ಪಾಲ್ಗೊಂಡಿದ್ದರು. ಚರಣ್ ಸಿಂಗ್ ಅವರ ಮಗ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ವಿರುದ್ಧ 2019ರ ಲೋಕಸಭಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಕ್ಕೆ ಮತ್ತು 2013ರ ಕೋಮುಗಲಭೆಗಳಲ್ಲಿ ಮುಸಲ್ಮಾನ ಸೋದರರ ಕೈಬಿಟ್ಟಿದ್ದಕ್ಕೆ ತಮ್ಮನ್ನು ಕ್ಷಮಿಸುವಂತೆ ನರೇಶ್ ಟಿಕೇತ್ ವಿನಂತಿಸಿದರು. ನಾಯಕರು ರೈತರಲ್ಲಿ ಹಿಂದು-ಮುಸ್ಲಿಮ್ ಏಕತೆಯನ್ನು ಸಾರಿದರು. ಮಹೇಂದ್ರ ಸಿಂಗ್ ಟಿಕೇತ್ ಅವರ ಬಲಗೈಯಂತೆ ಕೆಲಸ ಮಾಡಿದ್ದ ರೈತ ನಾಯಕ ಗುಲಾಮ್ ಮಹಮ್ಮದ್ ಜೋಲಾಗೆ ಈಗ 85ರ ವಯಸ್ಸು. ತಮ್ಮ ಮಾತಿನ ಸರದಿ ಬಂದಾಗ ಮುಲಾಜಿಲ್ಲದೆ ನೆರೆದಿದ್ದವರ ಮುಖಕ್ಕೆ ಹೊಡೆದಂತೆ ಜೋಲಾ ಹೇಳಿದ್ದರು- ’ಈವರೆಗೆ ನೀವು ಎರಡು ಬಹುದೊಡ್ಡ ತಪ್ಪುಗಳನ್ನು ಮಾಡಿದ್ದೀರಿ. ಒಂದನೆಯದು ನೀವು ಅಜಿತ್ ಸಿಂಗ್ ಅವರನ್ನು ಸೋಲಿಸಿದಿರಿ. ಎರಡನೆಯದಾಗಿ ಮುಸಲ್ಮಾನರನ್ನು ಕೊಂದಿರಿ’. ಜೋಲಾ ಮಾತನ್ನು ಸಭೆ ತಿರಸ್ಕರಿಸಲಿಲ್ಲ, ಅಣಕಿಸಲಿಲ್ಲ. ಬದಲಾಗಿ ಸದ್ದಿಲ್ಲದೆ ಆತ್ಮನಿರೀಕ್ಷೆ ಮಾಡಿಕೊಳ್ಳುತ್ತಿದೆ ಎಂಬಂತೆ ಸದ್ದಿಲ್ಲದೆ ಆಲಿಸಿತು.

ಮಹಾಪಂಚಾಯತ್‌

2013ರ ಕೋಮು ಗಲಭೆಗಳ ನಂತರ ಅವರು ಭಾರತೀಯ ಕಿಸಾನ್ ಯೂನಿಯನ್‌ನಿಂದ ದೂರವಾಗಿ ಭಾರತೀಯ ಕಿಸಾನ್ ಮಜ್ದೂರ್ ಮಂಚ್ ಕಟ್ಟಿಕೊಂಡಿದ್ದರು. ನರೇಶ್ ಕ್ಷಮೆ ಕೋರಿದ ನಂತರ ಅಜಿತ್ ಸಿಂಗ್ ಅವರ ಮಗ ಜಯಂತ್ ಚೌಧರಿ ಮಹಮ್ಮದ್ ಜೋಲಾ ಅವರ ಕಾಲು ಮುಟ್ಟಿ ನಮಸ್ಕರಿಸಿದರು. 60 ಮಂದಿಯನ್ನು ಬಲಿತೆಗೆದುಕೊಂಡು 65 ಸಾವಿರ ಮಂದಿ ಮುಸಲ್ಮಾನರನ್ನು ನಿರಾಶ್ರಿತರನ್ನಾಗಿ ಮಾಡಿದ ಕೋಮುಗಲಭೆಗಳ ಗಾಯಗಳು ಇನ್ನು ಮಾಯುತ್ತವೆ ಎಂಬ ವಿಶ್ವಾಸವನ್ನು ಮಹಮ್ಮದ್ ಜೋಲಾ ವ್ಯಕ್ತಪಡಿಸಿದರು.

ಜನಪರ ಚಳವಳಿಯೊಂದು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುವ ಜೊತೆಜೊತೆಗೆ ಜನತಾಂತ್ರಿಕ ಮತ್ತು ಮಾನವೀಯ ಗುಣಗಳ ಮರುಸ್ಥಾಪನೆಗೆ ಸದ್ದಿಲ್ಲದೆ ಕೊಡುಗೆ ನೀಡುತ್ತಿರುತ್ತದೆ. ಆಳುವ ಪಟ್ಟಭದ್ರರು ಮತ್ತು ಅವರೊಂದಿಗೆ ಕೈ ಜೋಡಿಸಿದ ಕಾರ್ಪೊರೇಟ್ ಖೂಳರನ್ನು ಹಾಲಿ ರೈತ ಚಳವಳಿ ಹೆಸರು ಹಿಡಿದು ಕರೆದು ಗುರುತಿಸಿದೆ. ಅದೇ ರೀತಿ ಆಳುವವರ ಮಡಿಲಿನಲ್ಲಿ ಆಡತೊಡಗಿರುವ ಜನದ್ರೋಹಿ ಪತ್ರಿಕೋದ್ಯಮವನ್ನೂ ರೈತ ಚಳವಳಿ ಬೆತ್ತಲೆ ಮಾಡಿದೆ. ಅದನ್ನು ಎದುರಿಸುವ ಬಗೆ ಹೇಗೆಂದು ಸಮಾಜಕ್ಕೆ ಪಾಠ ಹೇಳಿಕೊಡತೊಡಗಿದೆ.


ಇದನ್ನೂ ಓದಿ: ಟೋಲ್ ಪ್ಲಾಜಾ ಮುತ್ತಿಗೆ, ದೇಶಾದ್ಯಂತ ರೈಲು ತಡೆ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂವಿಧಾನ-ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಆರಂಭ: ಮಲ್ಲಿಕಾರ್ಜುನ ಖರ್ಗೆ

0
2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭಗೊಂಡಿದ್ದು, ಮತದಾರರು ಎಚ್ಚರಿಕೆಯಿಂದ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. "ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ...