ಈ ದೇಶದ ದುರಂತವೆಂದರೆ ಇಡೀ ಜಗತ್ತು ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸಿ ಬಾಯಿಗೆ ಮಾಸ್ಕ್ ಹಾಕಿ ಮೂಕವಾಗಿದ್ದಾಗ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿ ತರಾತುರಿಯಲ್ಲಿ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ಬೆಳೆ ಬೆಲೆ ಖಾತರಿ ಒಪ್ಪಂದ ಮಸೂದೆ, ಹಾಗೂ ತೋಟಗಾರಿಕಾ ಸೇವೆಗಳ ಜೀವನಾವಶ್ಯಕ ಮಸೂದೆ – ಎಂಬೀ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಸಾವಧಾನವಾಗಿ ಚರ್ಚಿಸದೆ, ತೀವ್ರ ವಿರೋಧದ ನಡುವೆಯೂ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಅವಶ್ಯಕತೆ, ಅವಸರ ಏನಿತ್ತು?
ಇದು ಕೇವಲ ಕಾರ್ಪೊರೆಟ್ ವಲಯವನ್ನು ಸಂಪ್ರೀತೀತಗೊಳಿಸುವುದಕ್ಕಾಗಿ ಎಂಬುದು ಶಾಲಾಮಕ್ಕಳಿಗೂ ತಿಳಿದ ವಿಚಾರ. ದೂರಗಾಮಿ ಚಿಂತನೆ ಇಲ್ಲದ ಈ ಮಸೂದೆಗಳು ಕ್ರಮೇಣ ರೈತಾಪಿ ವರ್ಗದ ಸ್ವಾತಂತ್ರ್ಯವನ್ನು ಕಸಿದುಕೊಂಡು ಕಾರ್ಪೊರೆಟರ ಗುಲಾಮರನ್ನಾಗಿ ಮಾಡುತ್ತವೆಯಲ್ಲವೆ? ಬೆಂಬಲ ಬೆಲೆ ನೀಡುವ ಮಾರುಕಟ್ಟೆ ವ್ಯವಹಾರವನ್ನು ನಿಭಾಯಿಸುವ ಜವಾಬ್ದಾರಿಯಿಂದ ಸರ್ಕಾರ ತಪ್ಪಿಸಿಕೊಳ್ಳುವ ಹುನ್ನಾರವಲ್ಲದೆ ಇದು ಬೇರೆ ಅಲ್ಲ. ಈ ಮಸೂದೆಗಳು ಮೇಲುನೋಟಕ್ಕೆ ಆಕರ್ಷಕವಾಗಿ ಕಂಡುಬಂದರೂ ಕ್ರಮೇಣ ರೈತರನ್ನು ದಿವಾಳಿ ಎಬ್ಬಿಸಿ ವಲಸಿಗರನ್ನಾಗಿ ಮಾಡುತ್ತವೆಯಲ್ಲವೆ?
ಆಗ ಗತ್ಯಂತರವಿಲ್ಲದೆ ಈ ಕೃಷಿಕ ಕಾರ್ಮಿಕ ವರ್ಗವು ಪಟ್ಟಣಗಳತ್ತ ಪಯಣಿಸುತ್ತಾರೆ. ಇಲ್ಲಿ ಕೂಲಿ ಕಂಟ್ರಾಕ್ಟ್‌ದಾರರ ಮೌಸ್‌ಟ್ರ್ಯಾಪ್‌ಗೆ (ಇಲಿಬೋನು) ಅನಿವಾರ್ಯವಾಗಿ ಸಿಕ್ಕಿ ಬೀಳುತ್ತಾರೆ. ಇಲ್ಲಿಗೆ ಮುಗಿಯಿತು – ’ಸರ್ವರಿಗೆ ಸಮಬಾಳು; ಸರ್ವರಿಗೆ ಸಮಪಾಲು’ ಎಂಬ ಸಮಾಜವಾದ ಹಾಗೂ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು. ಇಂಥ ಸಂಘರ್ಷಾತ್ಮಕ ಮಸೂದೆಗಳನ್ನು ಜಾರಿಗೊಳಿಸುವ ಮುನ್ನ ಅದರ ಕರಡು ಪ್ರತಿಗಳನ್ನು ಸಾರ್ವಜನಿಕ ವಲಯಕ್ಕೆ ಬಿಟ್ಟು ಚರ್ಚಿಸುವುದು, ರೈತ ನಾಯಕರನ್ನು ಕರೆದು ಮಾತುಕತೆ ಆಡುವುದು ಇತ್ಯಾದಿ ಏನೂ ನಡೆಯಲಿಲ್ಲ. ’ಜಗವೆಲ್ಲ ಮೌನವಾಗಿರುವಾಗ ಇವನೊಬ್ಬನೆದ್ದ’ ಎಂಬಂತೆ ಕೇಂದ್ರ ಸರ್ಕಾರ ಏಕಾಏಕಿ ಈ ಮಸೂದೆಗಳನ್ನು ಜಾರಿಗೊಳಿಸಿ ರೈತ ವರ್ಗವನ್ನು ರೊಚ್ಚಿಗೇಳಿಸಿತು.
ಇದರ ಪರಿಣಾಮವಾಗಿ ಅಖಿಲ ಭಾರತ ರೈತಸಂಘಟನೆಗಳು ಈಗ ಒಟ್ಟಾಗಿ ನವೆಂಬರ್ 26ರಿಂದ ಸುರಿವ ಹಿಮದಲ್ಲಿ ಕೊರೆವ ಚಳಿಯಲ್ಲಿ ದೇಶದ ನಾನಾ ಭಾಗಗಳಿಂದ ಬಂದು ಸರ್ಕಾರದ ಅಡೆತಡೆ ಅಡ್ಡಿ ಆತಂಕ ಪೊಲೀಸರ ಲಾಠಿ ಏಟು ಯಾವುದಕ್ಕೂ ಜಗ್ಗದೆ ಕುಗ್ಗದೆ ನುಗ್ಗಿ ದಿಲ್ಲಿ ದರ್ಬಾರಿನ ದಿಡ್ಡಿ ಬಾಗಿಲ ಬಳಿ 15 ದಿನಗಳಿಂದ ಬೀಡುಬಿಟ್ಟಿದ್ದಾರೆ. ಒಂದಿಬ್ಬರ ಬಲಿದಾನವೂ ಆಗಿದೆ. ಇದಾಗಿ ವಾರಗಳು ಕಳೆಯುತ್ತ ಬಂದರೂ ಕೂಡ ಅನ್ನದಾತರನ್ನು ತಕ್ಷಣ ಕರೆದು ಅವರ ಅಹವಾಲನ್ನು ಆಲಿಸುವ ಸೌಜನ್ಯವಾಗಲಿ ವ್ಯವಧಾನವಾಗಲಿ ಸರ್ಕಾರಕ್ಕಿಲ್ಲವಾಗಿದೆ. ಈ ರೈತ ಪ್ರತಿಭಟನೆಯು ವಿರೋಧ ಪಕ್ಷಗಳ ಪಿತೂರಿ, ದೇಶದ್ರೋಹಿಗಳ ಕೈವಾಡ, ಇದರಲ್ಲಿ ನಕ್ಸಲರು, ಖಲಿಸ್ತಾನರು ಸೇರಿಕೊಂಡಿದ್ದಾರೆ ಎಂದು ಮುಂತಾಗಿ ಕೇಂದ್ರ ನಾಯಕರು ಲಘುವಾಗಿ ಮಾತಾಡಿದ್ದಾರೆ. ಈ ಧೋರಣೆ ನಿಜಕ್ಕೂ ಅಕ್ಷಮ್ಯ. ಯಾಕೆಂದರೆ ಪ್ರತಿಭಟನಾ ನಿರತ ರೈತರು ಈ ಸಂಚಿನ ನುಡಿಗಳನ್ನು ಮುಂಚಿತವಾಗಿಯೇ ಊಹಿಸಿದವರಾಗಿದ್ದಾರೆ. ಅವರ ಪ್ರತಿಭಟನೆಯಲ್ಲಿ ಕೇಂದ್ರಸರ್ಕಾರ ಆರೋಪಿಸಿರುವ ಯಾವ ವಿರೋಧ ಪಕ್ಷದವರಾಗಲಿ, ಯಾವ ದೇಶವಿರೋಧಿ ದುಷ್ಕರ್ಮಿಗಳಾಗಲಿ ತೂರಿ ಬರದಂತೆ ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ.
ಈಗ ರೈತರು ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಅವರ ಆಗುಹೋಗುಗಳನ್ನು ಅವರೇ ಕುಳಿತು ಚರ್ಚಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮರ್ಥರವರು. ಹೊಗಳಿಕೆಯ ಮೂಲಕ ಕಾಗೆಯ ಬಾಯಿ ಮಾಂಸದ ತುಂಡನ್ನು ಕಸಿಯುವ ಗುಳ್ಳೆ ನರಿಯಂತ ರಾಜಕಾರಣಿಗಳ ಮಸಲತ್ತು ಏನೆಂಬುದನ್ನು ಅವರು ಚೆನ್ನಾಗಿ ಬಲ್ಲರು. ಇದು ಶತಮಾನಗಳ ಅನುಭವದಿಂದ ಬಂದ ಪಾಠ. ಅವರಿಗೀಗ ಬೇರೆಯವರ ನೆರವು ಬೇಕಾಗಿಲ್ಲ. ಯಾವ ದೇಶದಲ್ಲಿ ರೈತರು, ದಲಿತ ಮಹಿಳೆಯರು, ಮಕ್ಕಳು ಶಾಂತಿ ಸಮಾಧಾನ ನೆಮ್ಮದಿಯಿಂದ ಬದುಕು ಸಾಗಿಸುತ್ತಾರೋ ಆ ದೇಶ ಸುಭಿಕ್ಷವಾಗಿರುತ್ತದೆ ಎಂಬುದು ನಮ್ಮ ಪೂರ್ವಿಕರ ಅನುಭವದ ನುಡಿ. ಆದರೆ ಅದಕ್ಕೀಗ ಭಂಗ ಬರುತ್ತಿದೆ.
ಆದ್ದರಿಂದ ಪ್ರಸ್ತುತ ಪ್ರಧಾನಿ ಮೋದಿ ಅವರ ಬಿಜೆಪಿ ಸರ್ಕಾರವು ತನ್ನ ಹಮ್ಮು-ಬಿಮ್ಮುಗಳನ್ನು ಬದಿಗಿಟ್ಟು ರೈತ ನಾಯಕರನ್ನು ಆಹ್ವಾನಿಸಿ ತಾವು ಕೈಗೊಂಡ ರೈತ ವಿರೋಧಿ ಮಸೂದೆಗಳನ್ನು ಬೇಷರತ್ತಾಗಿ ಹಿಂದೆ ತೆಗೆದುಕೊಳ್ಳಬೇಕು. ಬಾಯಿ ಮಾತಿಗೆ ಬದಲಾಗಿ ಬೆಂಬಲ ಬೆಲೆಗೆ ಲಿಖಿತ ವಾಗ್ದಾನ ನೀಡಬೇಕು. ಹಾಗೂ ಇದುವರೆಗೂ ತಮಗೆ ನೀಡಿದ ತೊಂದರೆಗೆ ಕ್ಷಮೆ ಇರಲಿ ಎಂದೂ ತನ್ನ ದೊಡ್ಡತನವನ್ನು ಮೆರೆಯಬೇಕು.
- ಪ್ರೊ. ಶಿವರಾಮಯ್ಯ

ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ. ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು.


