Homeಮುಖಪುಟರೈತ ಹೋರಾಟ: ಇತಿಹಾಸದ ಕೆಲವು ಘಟ್ಟಗಳಲ್ಲಂತೂ ಮಧ್ಯದ ದಾರಿ ಇರುವುದಿಲ್ಲ

ರೈತ ಹೋರಾಟ: ಇತಿಹಾಸದ ಕೆಲವು ಘಟ್ಟಗಳಲ್ಲಂತೂ ಮಧ್ಯದ ದಾರಿ ಇರುವುದಿಲ್ಲ

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಮುಖಂಡರಲ್ಲಿ ಒಬ್ಬರಾದ, ಸ್ವರಾಜ್ ಇಂಡಿಯಾದ ಅಧ್ಯಕ್ಷರಾದ ಯೋಗೇಂದ್ರ ಯಾದವ್‌ರವರು ನಾನುಗೌರಿ.ಕಾಂಗಾಗಿ ಬರೆದ ವಿಶೇಷ ಲೇಖನ.

- Advertisement -

ಈಗ ರೈತರ ಜೊತೆಗೆ ನಡೆಯುತ್ತಿರುವ ಹಗ್ಗಜಗ್ಗಾಟದ ನಡುವೆ ನರೇಂದ್ರ ಮೋದಿ ಸರಕಾರ ಮತ್ತು ಮಾಧ್ಯಮದಲ್ಲಿ ಕುಳಿತಿರುವ ಸರಕಾರದ ಆಳುಗಳು ಅತ್ಯಂತ ವಿಸ್ಮಯಕಾರಿಯಾದ ವಾದವೊಂದನ್ನು ಮಂಡಿಸಿದ್ದಾರೆ; ಈ ಮೂರು ಕಾನೂನುಗಳ ರೂಪದಲ್ಲಿ ಬೇಡದ ಒಂದು ಉಡುಗೊರೆಯನ್ನು ನೀಡಿ, ಈಗ ಹೇಳಲಾಗುತ್ತಿರುವುದೇನೆಂದರೆ, ನೀವು ಒಂದಿಷ್ಟು ವಿವೇಕವನ್ನು ಪ್ರದರ್ಶಿಸಿ, ಈ ಉಡುಗೊರೆಯನ್ನು ಒಪ್ಪಿಕೊಳ್ಳಿ, ನಿರಾಕರಿಸಬೇಡಿ ಹಾಗೂ ಈಗ ನೀವೇ ಒಂದು ’ಮಧ್ಯದ ದಾರಿ’ಯನ್ನು ಹುಡುಕಿಕೊಡಿ ಎಂದು!

ಆಂದೋಲನನಿರತ ರೈತರಿಗೆ ಸರಕಾರವು ನೀಡಿದ ಹೊಸ ಪ್ರಸ್ತಾಪವನ್ನೇ ’ಮಧ್ಯದ ದಾರಿ’ ಎಂದು ಅವರು ಕರೆಯುತ್ತಿದ್ದಾರೆ. ದೆಹಲಿಗೆ ಹೊರಟಿದ್ದ ರೈತರನ್ನು ನಿಲ್ಲಿಸಲು ಎಲ್ಲಾ ಅಡೆತಡೆಗಳನ್ನು ತಂದು ನಿಲ್ಲಿಸಿದ ನಿರ್ದಯಿ ಸರಕಾರವನ್ನು ಈ ಮಾಧ್ಯಮಗಳು ಪ್ರಶಂಸೆ ಮಾಡುತ್ತಿವೆ ಮತ್ತು ಅದಕ್ಕೆ ಅವರು ನೀಡುತ್ತಿರುವ ಕಾರಣ, ಈ ಸರಕಾರ ಅತ್ಯಂತ ಸಂವೇದನಾಶೀಲವಾಗಿದೆ ಎಂದು! ರೈತರು ಮುಂಚಿನಿಂದಲೇ ಸ್ಪಷ್ಟವಾಗಿ ಹೇಳುತ್ತ ಬಂದಿರುವುದು: ಈ ಮೂರೂ ಕೃಷಿ ಕಾನೂನಗಳ ಹಿಂಪಡೆತ. ಹಾಗೂ ಅವರು ತಮ್ಮ ಈ ನಿಲುವನ್ನು ಬದಲಿಸದೇ ಅಚಲವಾಗಿದ್ದಾರೆ. ಆದರೂ ರೈತರು ಪದೇ ಪದೇ ತಮ್ಮ ಮಾತುಗಳನ್ನು ಬದಲಿಸುತ್ತಿದ್ದಾರೆ ಎಂದು ದೂಷಿಸಲಾಗುತ್ತಿದೆ. ಸರಕಾರ ಆಂದೋಲನನಿರತ ರೈತರೊಂದಿಗೆ ಯಾವ ರೀತಿ ವರ್ತಿಸಬೇಕು ಎನ್ನುವದನ್ನಂತೂ ನಿರ್ಧರಿಸುತ್ತದೆ ಆದರೆ ಈಗ ತಮ್ಮ ವರ್ತನೆಗೆ ಉತ್ತರವಾಗಿ ರೈತರು ಏನೇನು ಹೇಳಬೇಕು ಎನ್ನುವುದನ್ನೂ ನಿರ್ಧರಿಸುತ್ತಿದೆ. ಮೊಂಡುಹಠವನ್ನು ಸರಕಾರವೇ ಪ್ರದರ್ಶಿಸುತ್ತಿದ್ದರೂ ರೈತರೇ ಹಠಮಾರಿ ಧೋರಣೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರದ ಮದ ಏನೆಲ್ಲಾ ಮಾಡಿಸುತ್ತೆ ನೋಡಿ- ಅದು ತರ್ಕವನ್ನು, ಲಾಜಿಕ್‌ಅನ್ನು ತಲೆಕೆಳಗಾಗಿಸಿ ನಿಲ್ಲಿಸಬಹುದಾಗಿದೆ. ಎಲ್ಲಿಯೂ ಇಲ್ಲದಿರುವ ವಿಷಯವನ್ನೂ ಹುಡುಕಿ ತಂದು ನಿಲ್ಲಿಸುತ್ತಿದೆ ಹಾಗೂ ತರ್ಕಬದ್ಧ ಆಗಿರಬೇಕಾದರೆ ಏನೆಲ್ಲ ಮಾಡಬೇಕು ಎಂಬುದನ್ನೂ ತಾನೇ ನಿರ್ಧರಿಸುತ್ತಿದೆ.

ರೈತರ ಈ ಆಂದೋಲನ ಯಾವ ರೀತಿ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಆ ಸಮಯದಲ್ಲಿ ಪ್ರಧಾನಿಗಳು ಈ ಕೃಷಿ ಕಾನೂನುಗಳ ಬಗ್ಗೆ ಹೇಳಿದ್ದೇನೆಂದರೆ, ರೈತರಿಗೆ ಉಡುಗೊರೆ ನೀಡಲಾಗುತ್ತಿದೆ ಎಂದು. ರೈತರ ಬೇಡಿಕೆಯನ್ನು ಪೂರ್ಣಗೊಳಿಸಲಾಗುತ್ತಿದೆ ಎಂಬಂತೆ ಈ ಮಾತನ್ನು ಹೇಳಿದ್ದರಲ್ಲದೆ, ಇತಿಹಾಸದಲ್ಲಿ ಹಿಂದೆಂದೂ ಇಂತಹ ಉಡುಗೊರೆ ನೀಡಲಾಗಿಲ್ಲ ಎಂಬಂತೆ ಬಿಂಬಿಸಿದರು. ಉಡುಗೊರೆಯನ್ನು ಸ್ವೀಕರಿಸಬೇಕೋ ಅಥವಾ ಇಲ್ಲವೋ ಎಂಬುದು ಆಯಾ ವ್ಯಕ್ತಿಯ ಇಚ್ಛೆಯ ವಿಷಯ. ಉಡುಗೊರೆ ನೀಡುವನಿ/ಳಿಗೆ ತಾನು ನೀಡುತ್ತಿರುವ ಉಡುಗೊರೆ ತೆಗೆದುಕೊಳ್ಳುತ್ತಿರುವ ವ್ಯಕ್ತಿಗೆ ಅದು ಬೇಕಾಗಿದೆ ಅಥವಾ ಅದು ಇಷ್ಟ ಎಂಬುದು ಮುಂಚೆಯೇ ಗೊತ್ತಿರುತ್ತೆ ಅಥವಾ ಗೊತ್ತಿಲ್ಲದಿದ್ದರೆ ಅವಳ/ನನ್ನು ಕೇಳಿಕೊಂಡು ತಿಳಿದುಕೊಳ್ಳುತ್ತಾಳೆ/ನೆ. ಒಂದು ವೇಳೆ ವಿಷಯ ಹೀಗಿರದೇ ಇದ್ದಲ್ಲಿ, ತರ್ಕ ಏನು ಹೇಳುತ್ತದೆಂದರೆ, ಉಡುಗೊರೆ ಪಡೆಯುವ ವ್ಯಕ್ತಿ ನಿಮ್ಮ ವಿಶಾಲಹೃದಯವಂತಿಕೆಗೆ ತುಂಬಾ ಧನ್ಯವಾದ ಹೇಳಿ, ಆದರೆ ನನಗಿದು ಬೇಕಿಲ್ಲ ಎಂದು ಹೇಳಬಹುದು. ಉಡಗೊರೆ ಎಂದರೆ ಉಡುಗೊರೆಯೇ ಅಲ್ಲವೇ, ಅದೇನು, ಒಬ್ಬ ರೋಗಿಯು ಇಷ್ಟಪಡಲಿ ಇಷ್ಟಪಡದಿರಲಿ ಅವಳ/ನ ಗಂಟಲಲ್ಲಿ ತುರುಕಲೇಬೇಕಾಗಿರುವ, ಜೇನುತುಪ್ಪದಲ್ಲಿ ಅದ್ದಿ ತೆಗೆದ ಕಹಿ ಮಾತ್ರೆ ಅಲ್ಲವಲ್ಲ. (ಎಂತಹ ಸಂಯೋಗ ನೋಡಿ, ಸರಕಾರವನ್ನು ಸಮರ್ಥಿಸುವ ಕೆಲವು ಆರ್ಥಿಕ ತಜ್ಞರು, ಈ ಕೃಷಿ ಕಾನೂನುಗಳನ್ನು ಇದೇ ರೀತಿಯಲ್ಲಿ ಬೆಂಬಲಿಸುತ್ತಿದ್ದಾರೆ.)

ರೈತರಿಗೆ ಇಂತಹ ಉಡುಗೊರೆ ಬೇಕಾಗಿಯೇ ಇಲ್ಲ

ಈ ಉಡುಗೊರೆ ಕೊಡುವ ವಿಷಯದಲ್ಲಿ ಎಲ್ಲರಿಗೂ ತಿಳಿಯಬಹುದಾದ ತರ್ಕವನ್ನು ಕೈಬಿಡಲಾಗಿದೆ. ಈ ’ಉಡುಗೊರೆ’ಯನ್ನು ನೀಡುವುದಕ್ಕಿಂತ ಮುಂಚೆ ಅಂದರೆ ಈ ಮೂರು ಕೃಷಿ ಕಾನೂನುಗಳನ್ನು ತರುವುದಕ್ಕಿಂತ ಮುಂಚೆ ಸರಕಾರವು ಯಾವುದೇ ಕೃಷಿ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಿದ್ದಿಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಇತರ ಸಂಘಟನೆಗಳನ್ನು ಬಿಡಿ, ತನ್ನದೇ ಆದ ಭಾರತೀಯ ಕಿಸಾನ್ ಸಂಘಕ್ಕೂ ’ನಿಮಗೆ ಈ ಉಡುಗೊರೆ ಬೇಕಾ ಬೇಡವಾ’ ಎಂದು ಕೇಳಿರಲಿಲ್ಲ. ಈಗಂತೂ ಈ ಆಂದೋಲನ ಇಂತಹ ಹಂತಕ್ಕೆ ತಲುಪಿದ ಮೇಲೆ ಹಗಲಿನ ಬೆಳಕಿನಂತೆ ಸ್ಪಷ್ಟವಾಗಿದ್ದೇನೆಂದರೆ, ಸಾವಿರಾರು ಸಂಖ್ಯೆಯಲ್ಲಿರುವ ರೈತ ಸಂಘಟನೆಗಳಲ್ಲಿ ಯಾರಿಗೂ ಈ ಉಡುಗೊರೆ ಬೇಕಾಗಿಲ್ಲ.

ಈಗ ಸ್ವತಃ ರೈತರ ಬಗ್ಗೆಯೇ ಹೇಳಬೇಕೆಂದರೆ, ’ಗಾಂವ್ ಕನೆಕ್ಷನ್ ಮಾಡಿದ ಸಮೀಕ್ಷೆಯನ್ನು ನೋಡೋಣ. ಈ ಸಮೀಕ್ಷೆಯನ್ನು ಎರಡು ತಿಂಗಳ ಹಿಂದೆ ಮಾಡಲಾಗಿತ್ತು, ಆಗಿನ್ನೂ ಈ ಆಂದೋಲನ ಈ ಮಟ್ಟಕ್ಕೆ ಬೆಳೆದಿರಲಿಲ್ಲ. ಆ ಸಮೀಕ್ಷೆಯಲ್ಲಿ ಕಂಡಿದ್ದು, ರೈತರಿಗೆ ಈ ಕಾನೂನುಗಳ ಬಗ್ಗೆ ಆತಂಕವಿತ್ತೆಂದು. ಆಗ ರೈತರು ಹೇಳುತ್ತಿದ್ದದ್ದು, ’ತುಂಬಾ ಧನ್ಯವಾದಗಳು, ಆದರೆ ನೀವು ನಿಮ್ಮ ಉಡುಗೊರೆಯನ್ನು ವಾಪಸ್ ತೆಗೆದುಕೊಂಡು ಹೋಗಿ, ನಮಗದು ಬೇಕಿಲ್ಲ, ದಯವಿಟ್ಟು ನಮಗೇನು ಬೇಕೋ ಅದನ್ನು ಕೊಡಿ, ನಮಗೆ ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಬೇಕು, ಅದನ್ನು ಕೊಡಿ’ ಎಂದು ರೈತರೆಲ್ಲರೂ ಹೇಳಿದ್ದರು. ಈಗ ನಡೆಯುತ್ತಿರುವ ಆಂದೋಲನದ ಮುಂದಾಳತ್ವ ವಹಿಸಿದ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ ಸಹ ನಿರಂತರವಾಗಿ ಈ ಮೂರೂ ಕಾನೂನುಗಳನ್ನು ರದ್ದು ಮಾಡುವ ಬೇಡಿಕೆಯನ್ನೇ ಇಟ್ಟಿದ್ದಾರೆ. ಅವರು ತಮ್ಮ ಬೇಡಿಕೆಯನ್ನಿಟ್ಟು ಚೌಕಾಸಿ ಮಾಡಲು ಸಿದ್ಧರಿಲ್ಲ, ಅದೊಂದೇ ತಮ್ಮ ಬೇಡಿಕೆ, ಅದರಲ್ಲಿ ಮಾರ್ಪಾಡು ಮಾಡುವುದಿಲ್ಲ ಎಂತಲೂ ಪದೇ ಪದೇ ಸ್ಪಷ್ಟಪಡಿಸಿದ್ದಾರೆ. ಆದರೂ, ಮೋದಿ ಸರಕಾರ ಮತ್ತು ಮಾಧ್ಯಮದ ಒಂದು ದೊಡ್ಡ ವಲಯವು ರೈತರು ತಮ್ಮ ಈ ಬೇಡಿಕೆಯ ಬಗ್ಗೆ ಒತ್ತು ನೀಡಿ ಮಾತನಾಡಿದಾಗ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಸರಕಾರದ ಹೊಸ ಪ್ರಸ್ತಾಪವನ್ನು ರೈತರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಸರಕಾರವು ಕಳುಹಿಸಿದ 20 ಪುಟಗಳ ದಾಖಲೆಯು ಹೊಸದೇನೂ ಹೇಳುವುದಿಲ್ಲ. ಕಳೆದ ಕೆಲವು ತಿಂಗಳಿಂದ ಆಡಳಿತ ವರ್ಗವು ಬಳಸುತ್ತಿರುವ ಪ್ರಚಾರ ಮತ್ತು ಸವಕಲು ಮಾತುಗಳನ್ನೇ ಸರಕಾರ ಪುನರುಚ್ಚರಿಸಿದೆ. ಅದರೊಂದಿಗೆ, ಅತೀ ಜಾಣತನವನ್ನು ಪ್ರದರ್ಶಿಸುತ್ತ, ಕಾಂಗ್ರೆಸ್ ನಾಯಕರನ್ನು ಒಳಗೊಂಡಿದ್ದ ಕೆಲವು ಹಳೆಯ ಸಮಿತಿಗಳನ್ನು ಹೆಸರಿಸಿದ್ದಾರೆ. ಅಂದರೆ, ಅವರು ತಮ್ಮ ಈ ಕ್ರಮಕ್ಕೆ ವಿರೋಧಪಕ್ಷಗಳನ್ನೂ ದೂಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಒಂದನ್ನು ಮಾತ್ರ ಹೆಸರಿಸಲು ಮರೆತಿದ್ದಾರೆ; ಅದು ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಮುಖ್ಯಮಂತ್ರಿಗಳ ಸಮಿತಿಯ 2011ರ ವರದಿ. ಆ ಸಮಿತಿಯು ಕನಿಷ್ಠ ಬೆಂಬಲ ಬೆಲೆಗಾಗಿ ಕಾನೂನಾತ್ಮಕ ಮಾನ್ಯತೆಯನ್ನು ಶಿಫಾರಸು ಮಾಡಿತ್ತು. ಅದನ್ನು ಬಿಟ್ಟಿರುವುದು ಯಾವ ಕಾರಣಕ್ಕಾಗಿ ಎಂದು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ರೈತರ ನಿಯೋಗವು ಸಚಿವರೊಂದಿಗೆ ಡಿಸೆಂಬರ್ 5ರಂದು ಭೇಟಿಯಾದಾಗ ಅಂದು ಸಚಿವರು ಏನು ಹೇಳಿದ್ದರೋ ಅದನ್ನೇ ಈ ’ಹೊಸ’ ಪ್ರಸ್ತಾಪದಲ್ಲಿ ಹೇಳಲಾಗಿದೆ.

ಸರಕಾರದ ಒಂಬತ್ತು ಅಂಶಗಳ ಪ್ರಸ್ತಾಪದಲ್ಲಿ ಎಸೆನ್ಷಿಯಲ್ ಕಮಾಡಿಟೀಸ್ ಆಕ್ಟ್‌ಗೆ ತಂದ ತಿದ್ದುಪಡಿಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ಈ ತಿದ್ದುಪಡಿಯಿಂದ ಧಾನ್ಯಗಳ ಅಕ್ರಮ ದಾಸ್ತಾನಿಗೆ ಎಡೆಮಾಡಿಕೊಡುತ್ತದೆ ಮತ್ತು ಬೆಲೆಗಳನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸುವುದು ಅಥವಾ ಇಳಿಸುವುದನ್ನು ಪ್ರೋತ್ಸಾಹಿಸುತ್ತದೆ ಎಂದು ರೈತರು ದೂರಿದ್ದರು. ಆದರೆ ಬಹುಶಃ ಸರಕಾರವು ಈ ಕಾನೂನಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ನಿರ್ಧರಿಸಿದೆ, ಏಕೆಂದರೆ ಈ ಕಾನೂನು ಅತಿದೊಡ್ಡ ಕಾರ್ಪೋರೆಟ್‌ಗಳ ಕೃಷಿ-ಬಿಸಿನೆಸ್‌ನ ಯೋಜನೆಗಳಿಗೆ ಸಹಕಾರಿಯಾಗಿದೆ. ಅದೇ ರೀತಿಯಲ್ಲಿ, ವಾಯುಮಾಲಿನ್ಯದ ಕಾನೂನಿನಲ್ಲಿ ರೈತರಿಗೆ ದಂಡ ವಿಧಿಸುವುದರ ಬಗ್ಗೆಯೂ ಹೆಚ್ಚೇನು ಬರೆದಿಲ್ಲ. ರೈತರ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದು ಎಂದಷ್ಟೇ ಹೇಳಲಾಗಿದೆ. ಎಲೆಕ್ಟ್ರಿಸಿಟಿ ಅಮೆಂಡ್‌ಮೆಂಟ್ ಮಸೂದೆಯ ಬಗ್ಗೆ ಹೇಳುತ್ತ, ರೈತರ ಮೇಲೆ ಅದರಿಂದ ಪರಿಣಾಮ ಬೀರುವುದಿಲ್ಲ ಎಂದಷ್ಟೇ ಹೇಳಲಾಗಿದೆ, ಆದರೆ ಹೇಗೆ ಎಂಬುದರ ಬಗ್ಗೆ ಜಾಣಮೌನ ವಹಿಸಲಾಗಿದೆ. ಸ್ವಾಭಾವಿಕವಾಗಿಯೇ ರೈತರಿಗೆ ಈ ಪ್ರಸ್ತಾಪದಿಂದ ಯಾವುದೇ ನಂಬಿಕೆ ಬಂದಿಲ್ಲ.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)- ಕಾನೂನಾತ್ಮಕ ಭರವಸೆ ಕಾಣಿಸುತ್ತಿಲ್ಲ

ಕನಿಷ್ಠ ಬೆಂಬಲ ಬೆಲೆಯ ವಿಷಯದ ಮೇಲೆ ಅತ್ಯಂತ ಹೆಚ್ಚಿನ ಪ್ರಚಾರ ನೀಡಲಾದ ’ರಿಯಾಯತಿ’ಯ ಅಂಶ ಅತ್ಯಂತ ನಿರಾಶಾದಾಯಕವಾಗಿದೆ. ಸರಕಾರವು ’ಎಂಎಸ್‌ಪಿ ಆಧಾರಿತ ಖರೀದಿ ವ್ಯವಸ್ಥೆಗೆ ಸಂಬಂಧಿಸಿದಂತೆ ಲಿಖಿತ ಆಶ್ವಾಸನೆ ನೀಡುತ್ತೇವೆ’ ಎಂದು ಪ್ರಸ್ತಾಪದಲ್ಲಿ ಹೇಳಿದೆ. ಅಂದರೆ, ರೈತರು ಕೇಳುತ್ತಿರುವ ಕಾನೂನಾತ್ಮಕ ಖಾತ್ರಿಯನ್ನು ಸರಕಾರ ನೀಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಎಂಎಸ್‌ಪಿ ಎಷ್ಟಿರಬೇಕೆಂದು ಲೆಕ್ಕ ಹಾಕಲು ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದ ವೆಚ್ಚ ಆಧಾರಿತ (ಸಿ2 + 50%) ಸಮಗ್ರ ಫಾರ್ಮುಲಾವನ್ನು ಒಪ್ಪಿಕೊಳ್ಳುವ ಬಗ್ಗೆಯಾಗಲಿ, ಜಾರಿ ಮಾಡುವ ಬಗ್ಗೆಯಾಗಲೀ ಯಾವುದೇ ಪ್ರಸ್ತಾಪ ಕಾಣಿಸಿಲ್ಲ. ಅಂದರೆ, ಈಗಿರುವ ಅತ್ಯಂತ ಅಲ್ಪ ಪ್ರಮಾಣದ ಖರೀದಿಯ ಮಟ್ಟವನ್ನು ಮೀರುವುದಕ್ಕೆ ಸರಕಾರ ಬದ್ಧವಾಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟವಾಗುತ್ತದೆ. ಇದರಿಂದ ರೈತರು ತಮಗೆ ಅಪಮಾನ ಮಾಡಲಾಗಿದೆ ಎಂದು ಭಾವಿಸಿದ್ದಾರೆ.

ಈಗ ಪ್ರಸ್ತಾಪ ಮಾಡಲಾಗಿರುವ ತಿದ್ದುಪಡಿಗಳಲ್ಲಿ ಎಪಿಎಂಸಿ ಬೈಪಾಸ್ ಕಾನೂನು [ಫಾರ್ಮರ್ಸ್ ಪ್ರೊಡ್ಯೂಸ್ ಟ್ರೇಡ್ & ಕಾಮರ್ಸ್ (ಪ್ರಮೋಷನ್ & ಫೆಸಿಲಿಟೇಷನ್)ಕಾಯಿದೆ] ಹಾಗೂ ಗುತ್ತಿಗೆ ಕೃಷಿ ಕಾಯಿದೆ [ದಿ ಫಾರ್ಮರ್ಸ್ (ಎಂಪವರ್‌ಮೆಂಟ್ & ಪ್ರೊಟೆಕ್ಷನ್) ಅಗ್ರೀಮೆಂಟ್ ಆನ್ ಪ್ರೈಸ್ ಅಷ್ಯೂರನ್ಸ್ ಆಂಡ್ ಫಾರ್ಮ್ ಸರ್ವೀಸಸ್ ಆಕ್ಟ್] ಮಹತ್ವದ್ದಾಗಿ ಕಂಡುಬರುತ್ತವೆ. ಮಾಧ್ಯಮದ ವರದಿಗಳು ಹೇಳುವುದೇನೆಂದರೆ, ಖಾಸಗಿ ಮಾರುಕಟ್ಟೆಗಳಿಗೂ ಎಪಿಎಂಸಿಯಲ್ಲಿರುವ ಅದೇ ಶುಲ್ಕ ವಿಧಿಸಲಾಗುವುದು ಮತ್ತು ಅದಕ್ಕಿರುವ ನಿಯಮಾವಳಿಗಳ ಅಡಿಯಲ್ಲಿಯೇ ಖಾಸಗಿ ಮಾರುಕಟ್ಟೆಗಳೂ ಬರುವವು ಎಂದು. ಆದರೆ ಸರಕಾರದ ಪ್ರಸ್ತಾಪ ಅವುಗಳನ್ನು ಹೇಳಿಯೇ ಇಲ್ಲ. ಅದು ಹೇಳಿದ್ದು ಇಷ್ಟನ್ನು ಮಾತ್ರ: ರಾಜ್ಯ ಸರಕಾರಗಳಿಗೆ ಈ ಮೇಲೆ ಹೇಳಿದವುಗಳನ್ನು ಜಾರಿ ಮಾಡಲು ಅಧಿಕಾರ ನೀಡಲಾಗುವುದು ಎಂದು.

ಈ ಪ್ರಸ್ತಾಪವು ಎಪಿಎಂಸಿಯು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂಬ ರೈತರ ನಿಜವಾದ ಅವಶ್ಯಕತೆಯನ್ನು ಉದ್ದೇಶಿಸುವುದಿಲ್ಲ ಹಾಗೂ ಎಪಿಎಂಸಿಗಳು ನಶಿಸಿಹೋಗಬಹುದು ಎಂಬ ಆತಂಕಗಳನ್ನೂ ಉದ್ದೇಶಿಸುವುದಿಲ್ಲ. ಗುತ್ತಿಗೆ ಕೃಷಿಯ ಅಡಿಯಲ್ಲಿ ಭೂಮಿಯ ಮೇಲಿನ ತಮ್ಮ ಹಕ್ಕು ಕಸಿದುಕೊಳ್ಳಲಾಗುವುದು ಎಂಬ ಆತಂಕವನ್ನೂ ಸರಕಾರ ಇದೇ ರೀತಿಯಲ್ಲಿ ಉದ್ದೇಶಿಸಿದೆ. ಆದರೆ ಕಾರ್ಪೊರೆಟ್‌ಗಳೊಂದಿಗಿನ ಗುತ್ತಿಗೆಯಾಧಾರಿತ ವ್ಯವಸ್ಥೆಯಲ್ಲಿ ರೈತರು ದುರ್ಬಲ ಸ್ಥಿತಿಯಲ್ಲಿರುವರು ಮತ್ತು ತಮ್ಮ ಹಕ್ಕು ಸಾಧಿಸುವುದಕ್ಕೆ, ಚೌಕಾಸಿ ಮಾಡುವುದಕ್ಕೆ ಅವರ ದುರ್ಬಲ ಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂಬುದನ್ನು ಸರಿಪಡಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಈ ಪ್ರಸ್ತಾಪ ಏನನ್ನೂ ಹೇಳಿಲ್ಲ. ಇದರಿಂದ ಸ್ವಾಭಾವಿಕವಾಗಿಯೇ ರೈತರಿಗೆ ಅನಿಸಿದ್ದೇನೆಂದರೆ, ಸರಕಾರ ಉದ್ದೇಶಪೂರ್ವಕವಾಗಿ ಅವರನ್ನು ಗೊಂದಲಕ್ಕೀಡು ಮಾಡಲುಪ್ರಯತ್ನಿಸುತ್ತಿದೆ ಎಂದು.

ಇಷ್ಟೆಲ್ಲಾ ಗೊತ್ತಿದ್ದರೂ, ಮಾಧ್ಯಮಗಳು ರೈತರ ಮೇಲೆಯೇ ಗೂಬೆ ಕೂರಿಸಲು ಪ್ರಯತ್ನಿಸುತ್ತಿವೆ; ಸರಕಾರ ಈಗ ತಿದ್ದುಪಡಿ ಮಾಡಲು ಸಿದ್ಧವಾಗಿದೆ, ಹಾಗಿದ್ದಲ್ಲಿ ಇವುಗಳನ್ನು ರದ್ದುಪಡಿಸಬೇಕು ಎಂದು ಏಕೆ ಹಠ ಹಿಡಿದಿದ್ದೀರಿ ಎಂದು ಕೇಳುತ್ತಾರೆ. ರೈತರು ತಾವು ಪದೇಪದೇ ಹೇಳಿದ್ದನ್ನೇ ಇನ್ನೊಮ್ಮೆ ಹೇಳಬಹುದಷ್ಟೆ; ನಾವು ತಿದ್ದುಪಡಿ ಮಾಡಬೇಕೆಂಬ ಬೇಡಿಕೆಯನ್ನು ಎಂದೂ ಇಟ್ಟಿದ್ದಿಲ್ಲ. ಈ ಕಾಯಿದೆಗಳ ಮೂಲ ರಚನೆ ಮತ್ತು ಉದ್ದೇಶಗಳೊಂದಿಗೆ ನಮ್ಮ ಒಪ್ಪಿಗೆ ಇಲ್ಲವಾದ ಕಾರಣದಿಂದ, ನಾವು ತಿದ್ದುಪಡಿಗಳಿಗೆ, ಅವು ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ, ನಾವು ಒಪ್ಪುವುದಿಲ್ಲ. ನಿಮ್ಮ ಉಡುಗೊರೆಗೆ ನಾವು ’ಬೇಡ’ ಎನ್ನಲು ಸಾಧ್ಯವೇ ಇಲ್ಲವೇ? ಇದು ನಮ್ಮ ಬಗ್ಗೆ ಮತ್ತು ನಮ್ಮ ಯೋಗಕ್ಷೇಮದ ಬಗ್ಗೆ ಇದೆಯೋ ಅಥವಾ ಪ್ರಧಾನಮಂತ್ರಿಗಳ ಅಹಂ ಬಗ್ಗೆ ಇದೆಯೋ? ಎನ್ನುತ್ತಿದ್ದಾರೆ.

ರೈತರು ಪಂಜಾಬಿನ ಖ್ಯಾತ ಕ್ರಾಂತಿಕಾರಿ ಕವಿ, ಖಲಿಸ್ತಾನಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಅವತಾರ್ ಸಿಂಗ್ ಪಾಶ್ ಅವರನ್ನು ಉಲ್ಲೇಖಿಸಬಹುದು. ’ಮಧ್ಯದಲ್ಲಿ ಯಾವುದೇ ದಾರಿ ಇರುವುದಿಲ್ಲ. ಕೆಲವು ವಿಷಯಗಳಲ್ಲಂತೂ, ಇತಿಹಾಸದ ಕೆಲವು ಘಟ್ಟಗಳಲ್ಲಂತೂ ಮಧ್ಯದ ದಾರಿ ಇರುವುದಿಲ್ಲ ಹಾಗೂ ಆ ಮಧ್ಯದ ದಾರಿಯನ್ನು ಹಡುಕಲೂಬಾರದು.

  • ಯೋಗೇಂದ್ರ ಯಾದವ್

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ದೇಶದ ಪ್ರಸಕ್ತ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವ ಜೊತೆಗೆ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ರೈತರ ಹೋರಾಟ ಮುಂದುವರೆಯಲಿ. ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್
ಯೋಗೇಂದ್ರ ಯಾದವ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares