ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ’ದೆಹಲಿ ಚಲೋ’ ಆಂದೋಲನ ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಹಿಂದಿ ಮಾಧ್ಯಮ ’ಆಜ್‌ತಕ್’ ರೈತ ಹೋರಾಟಗಾರರನ್ನು ಮಾತನಾಡಿಸಲು ಹೋಗಿ ’ಗೋದಿ ಮಿಡಿಯಾ’ ಎಂದು ಬೈಸಿಕೊಂಡಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಕೇಂದ್ರ ಸರ್ಕಾರ ತಂದಿರುವ ಕಾನೂನಿನ ವಿರುದ್ದ ಸೆಪ್ಟೆಂಬರ್‌ನಿಂದಲೂ ರೈತರು ಹೋರಾಟ ನಡೆಸುತ್ತಿದ್ದು ಮಾಧ್ಯಮಗಳು ಈ ಐತಿಹಾಸಿಕ ಹೋರಾಟವನ್ನು ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ. ಪ್ರಸ್ತುತ ’ದೆಹಲಿ ಚಲೋ’ ಹೋರಟದ ಬಗ್ಗೆ ನಕರತ್ಮಕವಾಗಿ ಬಿಂಬಿಸಿರುವುದು ಕೂಡಾ ರೈತರ ಆಕ್ರೋಶವನ್ನು ಇನ್ನೂ ಹೆಚ್ಚಿಸಿದೆ.
ಇದನ್ನೂ ಓದಿ: ನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ
ಇದೀಗ ಹಿಂದಿ ಸುದ್ದಿ ಮಾಧ್ಯಮ ಆಜ್‌ತಕ್ ವರದಿಗಾರರೊಬ್ಬರು ಹೋರಾಟ ನಿರತ ರೈತರೊಬ್ಬರನ್ನು ಮಾತನಾಡಿಸಿದಾಗ, “ಸತ್‌ಸ್ರೀ ಅಕಾಲ್ ಗೋದಿ ಮೀಡಿಯಾ” ಎಂದು ಅವರನ್ನು ಸ್ವಾಗತಿಸಿದ್ದಾರೆ. ವಿಡಿಯೋದಲ್ಲಿ, “ನಾವು ಪಂಜಾಬ್‌ನಲ್ಲಿ ಎರಡು ತಿಂಗಳಿನಿಂದ ಪ್ರತಿಭನೆ ಮಾಡುತ್ತಿದ್ದೇವೆ ನೀವು ಎಲ್ಲಿ ಹೋಗಿದ್ದೀರಿ” ಎಂದು ಪ್ರಶ್ನಿಸಿದ್ದು ಇದರಿಂದ ಮುಜುಗರಕ್ಕೊಳಗಾದ ಅವರು ಅಲ್ಲಿಂದ ತೆರಳಿದ್ದಾರೆ. ಜೊತೆಗೆ “ಗೋದಿ ಮೀಡಿಯಾ ಮುರ್ದಾಬಾದ್” ಎಂದು ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಬಂದ್ ಮಾಡುವುದಾಗಿ ರೈತರ ಎಚ್ಚರಿಕೆ: ತಡರಾತ್ರಿ BJP ಸಭೆ ನಡೆಸಿದ ಅಮಿತ್ ಶಾ
ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ಪರವಾಗಿ ನಿಂತು ನಿರಂತರ ಹೊಗಳುವ ಮಾಧ್ಯಮಗಳಿಗೆ ಬಳಸುವ ಪದವಾಗಿ ’ಗೋದಿ ಮೀಡಿಯಾ’ ಪದವನ್ನು ಬಳಸಲಾಗುತ್ತಿದೆ. ಈ ಹಿಂದೆ ಜೆಎನ್‌ಯುನಲ್ಲಿ ಕೂಡಾ ಕೇಂದ್ರ ಸರ್ಕಾರದ ಪರವಾಗಿರುವ ಮಾಧ್ಯಮಗಳನ್ನು ಇದೇ ರೀತಿ ಕರೆಯಲಾಗಿತ್ತು. ಸಿಎಎ ವಿರುದ್ದದ ಹೋರಾಟದ ಪ್ರತಿಭಟನಾಕಾರರು ಕೂಡಾ ”ಗೋದಿ ಮೀಡಿಯಾ” ಎಂದು ಕರೆದು ಹೋರಾಟವನ್ನು ನಿರ್ಲಕ್ಷ್ಯವಹಿಸುತ್ತಿರುವುದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಲಕ್ಷಾಂತರ ರೈತರು ದೆಹಲಿ ಪ್ರವೇಶಿಸಲು ದೆಹಲಿಯ ಗಡಿಗಳಲ್ಲಿ ಜಮಾಯಿಸಿದ್ದರಾದರೂ ಹಲವು ರಾಷ್ಟ್ರೀಯ ಮಾಧ್ಯಮಗಳು ಆಂದೋಲನವನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ. ಅದನ್ನೂ ಮೀರಿ ದೇಶದ ಹಲವು ರಾಜ್ಯದ ರೈತರು ದೆಹಲಿ ಚಲೋಗೆ ಹೊರಟಿದ್ದಾರೆ. ಚಳುವಳಿ ಐದನೇ ದಿನಕ್ಕೆ ಕಾಲಿಟ್ಟಿದ್ದು ಕೇಂದ್ರ ಸರ್ಕಾರದ ಷರತ್ತುಬದ್ದ ಮಾತುಕತೆಯನ್ನು ನಿನ್ನೆ ತಿರಸ್ಕರಿಸಿದ ಹೋರಾಟಗಾರರು, ಪ್ರತಿಭಟನೆಯನ್ನು ಬುರಾರಿಯ ನಿರಂಕಾರಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಕೇಳಿಕೊಂಡಿದ್ದ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ವಾಟರ್ ಜೆಟ್ ನಿಲ್ಲಿಸಿದ ರೈತ ಹೋರಾಟದ ‘ಹೀರೋ’ ಮೇಲೆ ಕೊಲೆಯತ್ನದ ಕೇಸು!


