ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮಗೇನು ಬೇಕಿದೆ ಎಂಬುವುದು ತಿಳಿದಿಲ್ಲ, ಅವರನ್ನು ಯಾರೋ ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಹಾಗೂ ಬಾಲಿವುಡ್‌ನ ಹಿರಿಯ ನಟಿ ಹೇಮಾ ಮಾಲಿನಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಅವರು ಕೃಷಿ ಕಾನೂನಿನ ಬಗ್ಗೆ ಸುಪ್ರೀಂಕೋರ್ಟ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೂಡಾ ಸಹಮತ ವ್ಯಕ್ತಪಡಿಸಿದ್ದು, ಈ ನಿರ್ಧಾರವು ರೈತರ ಆಕ್ರೋಶವನ್ನು ತಣಿಸಲು ಸಹಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಸಮಯದಲ್ಲಿ ಅವರು ಪಂಜಾಬ್‍ನಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಮೊಬೈಲ್ ಫೋನ್ ಟವರ್‌ಗಳಿಗೆ ಮಾಡಿರುವ ಹಾನಿಯನ್ನು ಖಂಡಿಸಿದ್ದಾರೆ.
ಅಷ್ಟೆಲ್ಲಾ ಮಾತುಕತೆಗಳು ನಡೆದ ನಂತರವೂ ರೈತರು ಸಹಮತಕ್ಕೆ ಬರುತ್ತಿಲ್ಲ. ಅವರಿಗೇನು ಬೇಕೆಂದು ಅಥವಾ ಈ ಕಾನೂನುಗಳಲ್ಲಿ ಏನು ಸಮಸ್ಯೆಯಿದೆ ಎಂಬುದು ಅವರಿಗೆ ತಿಳಿದಿಲ್ಲ. ಇದರರ್ಥ ಯಾರೊ ಹೇಳಿದ್ದರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲೆ ಲೋಹ್ರಿ (ಸಂಕ್ರಾಂತಿ) ಆಚರಿಸಿ, ಕೇಂದ್ರಕ್ಕೆ ತಲೆ ಬಾಗುವುದಿಲ್ಲವೆಂದ ರೈತರು
“ಪಂಜಾಬ್ ಸಾಕಷ್ಟು ನಷ್ಟ ಅನುಭವಿಸಿದೆ. ರೈತರು ಮೊಬೈಲ್ ಟವರ್‌ಗಳನ್ನು ಧ್ವಂಸಗೊಳಿಸಿರುವುದು ಉತ್ತಮ ನಡೆಯಲ್ಲ. ಸರ್ಕಾರವು ಹಲವು ಬಾರಿ ಮಾತುಕತೆಗೆ ಆಹ್ವಾನಿಸಿದೆ. ಆದರೆ ಅವರಿಗೆ ಯಾವ ಅಜೆಂಡಾ ಕೂಡಾ ಇಲ್ಲ” ಎಂದು ಹೇಳಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ವಾಪಾಸು ಪಡೆಯಬೇಕೆಂದು ರೈತರು 49 ದಿನದಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಇದುವರೆಗೂ ಎಂಟು ಬಾರಿ ಮಾತುಕತೆ ನಡೆಸಿದ್ದರೂ ಅವರ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಹೇಳುತ್ತಿಲ್ಲ. ಇದರಿಂದ ಆಕ್ರೋಶಗೊಂಡಿರುವ ರೈತರು ಜನವರಿ 26 ರಂದು ದೆಹಲಿಗೆ ಟ್ರಾಕ್ಟರ್ ರ್‍ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.
ಈ ನಡುವೆ ಸುಪ್ರೀಂಕೋರ್ಟ್ ಮೂರು ಕೃಷಿ ಕಾನೂನುಗಳನ್ನು ಮುಂದಿನ ಆದೇಶದವರೆಗೂ ಅಮಾನತು ಮಾಡಿದೆ. ಕಾನೂನಿನ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ಕೋರ್ಟ್ ರಚಿಸಿದ್ದು, ಅದರಲ್ಲಿ ಕಾನೂನನ್ನು ಸಮರ್ಥಿಸುವವರೇ ಇರುವುದರಿಂದ ಅದನ್ನು ಪ್ರತಿಭಟನಾ ನಿರತ ರೈತರು ಬಹಿಷ್ಕರಿಸಿದ್ದಾರೆ.
ಇದನ್ನೂ ಓದಿ: ರೈತರ ಕೊರಳಿಗೆ ಬಿದ್ದ ರೇಶಿಮೆ ಕುಣಿಕೆ; ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಅವಲೋಕನ


