HomeUncategorizedರೈತರ ಕೊರಳಿಗೆ ಬಿದ್ದ ರೇಶಿಮೆ ಕುಣಿಕೆ; ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಅವಲೋಕನ

ರೈತರ ಕೊರಳಿಗೆ ಬಿದ್ದ ರೇಶಿಮೆ ಕುಣಿಕೆ; ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಅವಲೋಕನ

- Advertisement -
- Advertisement -

ನಿರೀಕ್ಷೆ ನಿಜವಾಗಿದೆ. ಕೃಷಿ ಕಾನೂನುಗಳ ಕುರಿತು ಸೋಮವಾರ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಂತೆ ತೋರಿಬಂದಿತ್ತು. ರೈತರ ಕುರಿತು ಅಪಾರ ಸಹಾನುಭೂತಿ ಪ್ರಕಟಿಸಿತ್ತು. ಸುಪ್ರೀಮ್ ಕೋರ್ಟು ಅಮಾಯಕ ಜನವರ್ಗಗಳಲ್ಲಿ ಆಶಾಕಿರಣ ಹುಟ್ಟಿಸಿತ್ತು. ಆದರೆ ಆ ಮಾತುಗಳೆಲ್ಲ ಮೌಖಿಕ ಟಿಪ್ಪಣಿಗಳು. ಮಂಗಳವಾರ ಆದೇಶ ನೀಡುವ ಹೊತ್ತಿಗೆ ಈ ಕಿರಣ ಮರೆಯಾಗಿದೆ. ರೈತ ಸಮೂಹಕ್ಕೆ ನಿರಾಸೆ ಉಂಟು ಮಾಡಿದೆ.

ಸರ್ಕಾರ ಮತ್ತು ರೈತರ ನಡುವೆ ನಡೆದ ಎಂಟನೆಯ ಸುತ್ತಿನ ಮಾತುಕತೆಯಲ್ಲಿ ಕೃಷಿ ಕಾನೂನುಗಳನ್ನು ವಾಪಸು ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರ ಆಖೈರಾಗಿ ಘೋಷಿಸಿತು. ಮುಂದಿನ ಸುತ್ತಿನ ಮಾತುಕತೆಯ ದಿನಾಂಕವನ್ನು ಜನವರಿ 15 ಎಂದು ಪ್ರಕಟಿಸಿತು. ಇನ್ನು ಸಮಸ್ಯೆಯನ್ನು ಸುಪ್ರೀಮ್ ಕೋರ್ಟೇ ಬಗೆಹರಿಸಲಿದೆ ಎಂದು ಕೇಂದ್ರ ಕೃಷಿ ಮಂತ್ರಿ ಅಂದಿನ ಸಭೆಯಲ್ಲಿ ಹೇಳಿದ್ದರು. ಸಮಸ್ಯೆಯನ್ನು ನ್ಯಾಯಾಲಯ ಬಗೆಹರಿಸಲಿದೆ ಎಂಬ ಸಂಗತಿ ಅವರಿಗೆ ಹೇಗೆ ಗೊತ್ತಿತ್ತು ಎಂಬುದು ಆಳದ ಆಲೋಚನೆಗೆ ಹಚ್ಚುವ ಸಂಗತಿ.

ರೈತ ಮುಂದಾಳುಗಳು ಸುಪ್ರೀಮ್ ಕೋರ್ಟ್ ತೀರ್ಮಾನ ಕುರಿತು ಭರವಸೆಯನ್ನೇನೂ ಇರಿಸಿಕೊಂಡಿರಲಿಲ್ಲ. ಬದಲಾಗಿ ಸರ್ಕಾರಕ್ಕೆ ಅನುಕೂಲಕರ ಆದೇಶ ಹೊರಬೀಳುವುದೆಂದು ಮುಂದಾಗಿಯೇ ನಿರೀಕ್ಷಿಸಿದ್ದರು. ನಾವೇನೂ ನ್ಯಾಯ ಕೋರಿ ಕೋರ್ಟ್ ಕಟ್ಟೆ ಹತ್ತಿಲ್ಲ. ಈ ವಿನಾಶಕಾರಿ ಕಾನೂನುಗಳನ್ನು ತಂದಿರುವುದು ಕಾರ್ಯಾಂಗ. ಅದೇ ವಾಪಸು ಪಡೆಯಬೇಕು ಎಂಬುದು ಅವರ ನಿಲುವು.

ನಾಳೆ ನ್ಯಾಯಾಲಯದ ಆದೇಶ ಆಶಾಕಿರಣವಾಗುವುದೋ ಅಥವಾ ರೈತರ ಕೊರಳಿಗೆ ಬಿಗಿಯುವ ರೇಶಿಮೆಯ ಕುಣಿಕೆಯಾಗುವುದೋ ಕಾದು ನೋಡಬೇಕಿದೆ ಎಂಬ ಆತಂಕವನ್ನು ರೈತರ ವಕ್ತಾರರಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ಸೋಮವಾರ ರಾತ್ರಿಯೇ ವ್ಯಕ್ತಪಡಿಸಿದ್ದುಂಟು.

ಹೊಸ ಸಂಸತ್ ಭವನ ಮತ್ತು ಅದಕ್ಕೆ ಸಂಬಂಧಿಸಿದ ಸಮುಚ್ಚಯಗಳಾದ ಸೆಂಟ್ರಲ್ ವಿಸ್ಟಾ ನಿರ್ಮಾಣಕ್ಕೂ ನ್ಯಾಯಾಲಯ ತಡೆ ನೀಡಿತ್ತು. ಆದರೆ ಅಂತಿಮವಾಗಿ ಅದಕ್ಕೆ ಅನುಮತಿ ನೀಡಿತು. ಇಂತಹ ಹತ್ತು ಹಲವು ಉದಾಹರಣೆಗಳಿವೆ. ಕೃಷಿ ಕಾನೂನುಗಳ ಪರಿಸ್ಥಿತಿಯೂ ಹಾಗೇ ಆದಲ್ಲಿ ಆಶ್ಚರ್ಯವಿಲ್ಲ ಎಂಬುದು ರೈತರ ಅನುಮಾನ.

ಅಂತೆಯೇ ಆಗಿದೆ. ಸುಪ್ರೀಮ್ ಕೋರ್ಟಿನ ಆದೇಶದಲ್ಲಿ ತಮ್ಮ ಕೊರಳಿಗೆ ಬಿಗಿಯುವ ರೇಶಿಮೆಯ ಕುಣಿಕೆಯನ್ನೇ ಕಂಡಿದ್ದಾರೆ ರೈತರು. ತಮ್ಮ ಹೋರಾಟವನ್ನು ಯಾವುದೇ ಬದಲಾವಣೆಯಿಲ್ಲದೆ ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಜನವರಿ 26 ರಂದು ಎಲ್ಲ ಅಡೆತಡೆಗಳನ್ನು ಮುರಿದು ದೆಹಲಿಯನ್ನು ಪ್ರವೇಶಿಸಿ ಬದಲಿ ಗಣತಂತ್ರ ದಿನ ಆಚರಿಸುವುದು ನಿಶ್ಚಿತ. ಸರ್ಕಾರಿ ಗಣತಂತ್ರ ದಿನಾಚರಣೆ ಪರೇಡಿಗೆ ಯಾವುದೇ ಅಡಚಣೆ ಒಡ್ಡುವ ಇರಾದೆ ತಮಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಜಾರಿಯನ್ನು ಸುಪ್ರೀಮ್ ಕೋರ್ಟು ಸದ್ಯಕ್ಕೆ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಈ ತಡೆಯಾಜ್ಞೆ ಅನಿರ್ದಿಷ್ಟ ಕಾಲದ್ದಲ್ಲ ಎಂದು ತಾನೇ ಸ್ಪಷ್ಟಪಡಿಸಿದೆ. ಕೃಷಿ ಕಾನೂನುಗಳ ಕುರಿತು ರೈತರ ಆತಂಕಗಳನ್ನು ಆಲಿಸಲು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿದೆ.

ಭೂಪೀಂದರ್ ಸಿಂಗ್ ಮಾನ್, ಅಶೋಕ್ ಗುಲಾಟಿ, ಡಾ.ಪ್ರಮೋದ್ ಕುಮಾರ್ ಜೋಶಿ, ಹಾಗೂ ಅನಿಲ್ ಘನ್ವತ್ ಅವರನ್ನು ಒಳಗೊಂಡ ಈ ಸಮಿತಿ ನ್ಯಾಯಾಲಯಕ್ಕೆ ತನ್ನ ವರದಿ ಸಲ್ಲಿಸಬೇಕಿದೆ.

’ಸ್ವತಂತ್ರ ಸಮಿತಿಯೊಂದನ್ನು ನಾವು ರಚಿಸುತ್ತಿದ್ದೇವೆ. ಭೂಮಂಡಲದ ಮೇಲಿನ ಯಾವ ಶಕ್ತಿಯೂ ನಮ್ಮನ್ನು ತಡೆಯುವುದು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯೇನು ಎಂಬುದನ್ನು ನಾವು ತಿಳಿಯಬಯಸಿದ್ದೇವೆ. ಇದರಲ್ಲಿ ರಾಜಕೀಯವಿಲ್ಲ. ನೀವು ಸಹಕರಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿಯವರು ರೈತರನ್ನು ಕೋರಿದ್ದಾರೆ.
ಕಾನೂನಿನ ಯಾವ ಅಂಶ ಬದಲಾಗಬೇಕು ಮತ್ತು ನಿಮ್ಮ ಸಮಸ್ಯೆಗಳೇನು ಎಂಬುದನ್ನು ಒಂದೊಂದಾಗಿ ಸಮಿತಿಗೆ ತಿಳಿಸಿ ಎಂದಿದ್ದಾರೆ.

ನಾವು ಕೇಳದಿದ್ದರೂ ಉಡುಗೊರೆಯೆಂದು ಮರಣಶಾಸನವನ್ನು ವಿಧಿಸಿದ್ದೀರಿ. ಅದನ್ನು ರದ್ದುಗೊಳಿಸಿ ಎಂಬುದು ರೈತರ ಆಗ್ರಹ. ಆದರೆ ಮರಣದಂಡನೆಯನ್ನು ರದ್ದುಗೊಳಿಸುವ ಬೇಡಿಕೆಯನ್ನು ಬದಿಗೆ ಸರಿಸಿದೆ ಸುಪ್ರೀಮ್ ಕೋರ್ಟು. ಮರಣದಂಡನೆ ಕಾನೂನಿನ ಯಾವ ಅಂಶ ಬದಲಾಗಬೇಕು ಮತ್ತು ಮರಣದಂಡನೆ ಕುರಿತ ನಿಮ್ಮ ಸಮಸ್ಯೆಯೇನು ತಿಳಿಸಿ ಎಂದು ಹೇಳಿದಂತಾಗಿದೆ.

ಸುಪ್ರೀಮ್ ಕೋರ್ಟು ನೆಲಮಟ್ಟದ ವಾಸ್ತವವನ್ನು ತಿಳಿದುಕೊಳ್ಳಲೆಂದು ತಾನು ಸಮಿತಿ ರಚಿಸಿರುವುದಾಗಿ ಹೇಳಿದೆ.

ಆದರೆ ಸುಪ್ರೀಮ್ ಕೋರ್ಟ್ ರಚಿಸಿರುವ ಸಮಿತಿಯ ಸ್ವತಂತ್ರ ಸ್ವರೂಪ ಮತ್ತು ನಿಷ್ಪಕ್ಷಪಾತ ಗುಣಗಳ ಕುರಿತು ಪರ್ವತ ಗಾತ್ರದ ಪ್ರಶ್ನಾರ್ಥಕ ಚಿಹ್ನೆ ಇದೆ. ಎಲ್ಲ ನಾಲ್ವರು ಸದಸ್ಯರೂ ಪ್ರಶ್ನಿತ ಕೃಷಿ ಕಾನೂನುಗಳ ಪ್ರಬಲ ಸಮರ್ಥಕರು. ಈ ಕಾನೂನುಗಳನ್ನು ರೂಪಿಸಿದವರೇ ಅಶೋಕ್ ಗುಲಾಟಿ. ಉಳಿದ ಮೂವರೂ ಬಹಿರಂಗವಾಗಿ ಈ ಕಾನೂನುಗಳನ್ನು ಎತ್ತಿ ಹಿಡಿದಿದ್ದಾರೆ. ಕೃಷಿ ಸಚಿವರನ್ನು ಭೇಟಿ ಮಾಡಿ ಈ ಕಾನೂನುಗಳನ್ನು ಯಾವುದೇ ಕಾರಣಕ್ಕೂ ವಾಪಸು ಪಡೆಯಕೂಡದೆಂದು ಆಗ್ರಹಪಡಿಸಿದ್ದಾರೆ. ಇಂತಹವರು ಸಲ್ಲಿಸುವ ವರದಿ ನೆಲಮಟ್ಟದ ವಾಸ್ತವವನ್ನು ಹೇಗೆ ಬಿಂಬಿಸೀತು ಎಂಬುದು ಬಹುದೊಡ್ಡ ಪ್ರಶ್ನೆ. ಈ ಬಹುಮುಖ್ಯ ಅಂಶವನ್ನು ನ್ಯಾಯಾಲಯ ಕಡೆಗಣಿಸಿದ್ದಾದರೂ ಹೇಗೆ? ತನ್ನ ಬಾಲಬಡುಕರ ಸಮಿತಿಯನ್ನು ರಚಿಸುವುದು ಸರ್ಕಾರಗಳ ಚಾಳಿ. ಆದರೆ ನ್ಯಾಯದಾನದ ಹೊಣೆ ಹೊತ್ತಿರುವ ನ್ಯಾಯಾಲಯ ಇಂತಹ ಸಮಿತಿಯನ್ನು ರಚಿಸುವುದು ಊಹೆಗೂ ನಿಲುಕದ ವಿಡಂಬನೆ. ದೇಶದ ಗ್ರಾಮೀಣ ಸಂಕಟವನ್ನು ಮತ್ತು ಕೃಷಿವಲಯದ ಬಿಕ್ಕಟ್ಟನ್ನು ಅಧ್ಯಯನ ಮಾಡಿರುವ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರಂತಹವರನ್ನು ಒಳಗೊಂಡ ಸಮಿತಿ ರಚಿಸುವುದಾಗಿ ನ್ಯಾಯಾಲಯ ಈ ಹಿಂದೆ ಆಡಿದ್ದುಂಟು. ಇಂದು ಹೊರಬಿದ್ದ ಸದಸ್ಯರ ಪಟ್ಟಿಯಲ್ಲಿ ಸಾಯಿನಾಥ್ ಅವರಂತಹವರ ಸುಳಿವೇ ಕಾಣಲಿಲ್ಲ.

ರೈತರ ಪ್ರತಿಭಟನೆಗೆ ಖಾಲಿಸ್ತಾನಿಗಳ ಪ್ರತಿಭಟನೆಯೆಂದು ಆಳುವ ಪಕ್ಷ ಹಣೆಪಟ್ಟಿ ಹಚ್ಚಿತ್ತು. ಮಂಗಳವಾರ ನ್ಯಾಯಾಲಯ ತಾನಾಗಿಯೇ ಈ ಕುರಿತು ಪ್ರಸ್ತಾಪಿಸಿದ್ದು ಕುತೂಹಲಕರ. ಯಾವುದಾದರೂ ನಿಷೇಧಿತ ಸಂಘಟನೆಗಳು ರೈತ ಪ್ರತಿಭಟನೆಯೊಳಕ್ಕೆ ನುಸುಳಿವೆಯೇ ಕಂಡು ಹಿಡಿದು ಪ್ರಮಾಣಪತ್ರ ಸಲ್ಲಿಸಿ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದೆ. ಖಾಲಿಸ್ತಾನಿಗಳು ನುಸುಳಿದ್ದಾರೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಕೃಷಿ ಕಾನೂನುಗಳ ರಚನೆ ಸಂವಿಧಾನಬದ್ಧವೇ? ಕೃಷಿ ರಾಜ್ಯಗಳ ಅಧಿಕಾರ ಪಟ್ಟಿಗೆ ಸೇರಿದ ವಿಷಯ ಎಂದು ಸಂವಿಧಾನ ವಿಧಿಸಿದೆ. ಈ ಕುರಿತು ಕಾನೂನು ರಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ? ಕೃಷಿ ಕಾನೂನುಗಳ ಸುಗ್ರೀವಾಜ್ಞೆಯನ್ನು ಲಾಕ್‌ಡೌನ್ ಸಂದರ್ಭದಲ್ಲಿ ಹೊರಡಿಸುವ ತುರ್ತು ಏನಿತ್ತು? ತನಗೆ ಬಹುಮತ ಇಲ್ಲದಿರುವ ರಾಜ್ಯಸಭೆಯಲ್ಲಿ ಕೃಷಿ ಕಾಯಿದೆ ತಿದ್ದುಪಡಿ ವಿಧೇಯಕವನ್ನು ಮತಕ್ಕೆ ಹಾಕುವುದನ್ನು ಬಿಟ್ಟು ಧ್ವನಿಮತದಿಂದ ತರಾತುರಿಯಲ್ಲಿ ಪಾಸು ಮಾಡಿಸಿಕೊಂಡ ಕ್ರಮ ಸರಿಯೇ? ಕಾನೂನು ರಚಿಸುವ ಮುನ್ನ ರೈತರೊಂದಿಗೆ ವ್ಯಾಪಕ ಸಮಾಲೋಚನೆ ಯಾಕೆ ನಡೆಯಲಿಲ್ಲ ಎಂಬ ಮಹತ್ವದ ಪ್ರಶ್ನೆಗಳನ್ನು ನ್ಯಾಯಾಲಯ ಕೇಳಬೇಕಿತ್ತು. ಬದಲಿಗೆ ರೈತ ಚಳವಳಿಯಲ್ಲಿ ವೃದ್ಧರು, ಮಹಿಳೆಯರು ಯಾಕೆ ಭಾಗವಹಿಸಿದ್ದಾರೆ, ನಿಷೇಧಿತ ಸಂಘಟನೆಗಳು ನುಸುಳಿವೆಯೇ ಎಂಬಂತಹ ಪ್ರಶ್ನೆಗಳನ್ನು ಮಾತ್ರವೇ ಎತ್ತಿದ್ದು ಆಶ್ಚರ್ಯಕರ.

ಸಚಿವರ
PC: AP Photo/Altaf Qadri

ಸುಪ್ರೀಮ್ ಕೋರ್ಟು ಸಂವಿಧಾನವನ್ನು ವ್ಯಾಖ್ಯಾನಿಸುವ ಮತ್ತು ಅದರ ಆಶಯಗಳನ್ನು ಎತ್ತಿ ಹಿಡಿದು ಕಾಯುವ ನ್ಯಾಯಾಲಯ ಎಂಬುದನ್ನು ಮರೆಯಕೂಡದು.

ಇತ್ತೀಚಿನ ವರ್ಷಗಳಲ್ಲಿ ಆಳುವವರ ಆದ್ಯತೆಗಳಿಗೆ ಅದು ಶರಣಾಗಿದೆ. ಕಾರ್ಯಾಂಗದ ಇರಾದೆಯ ಮೇರೆಗೆ ಝಳಪಿಸಿ ಬೀಸುವ ಖಡ್ಗವಾಗಿ ಪರಿಣಮಿಸಿದೆ ಎಂಬ ಟೀಕೆಯನ್ನು ಎದುರಿಸಿದೆ ಭಾರತದ ನ್ಯಾಯಾಂಗ.

ನೋಟು ರದ್ದತಿಯಂತಹ ವಿವಾದಾತ್ಮಕ ದುರಂತ ಕುರಿತು ಸುಪ್ರೀಮ್ ಕೋರ್ಟು ತುಟಿ ಬಿಚ್ಚಿಲ್ಲ. ಪ್ರಶ್ನಿಸಿದ ಅರ್ಜಿಗಳು ವಿಚಾರಣೆಯ ಬೆಳಕು ಕಾಣದೆ ಕೊಳೆಯುತ್ತಿವೆ. ’ಎಲೆಕ್ಟೊರಲ್ ಬಾಂಡ್‌ಗಳು’ ಬಿಜೆಪಿಯ ಪಾಲಿಗೆ ಅಪಾರ ಚುನಾವಾಣ ನಿಧಿ ಒದಗಿಸುವ ವರವಾಗಿ ಪರಿಣಮಿಸಿವೆ. ಈ ಬಾಂಡ್‌ಗಳನ್ನು ಪ್ರಶ್ನಿಸಿರುವ ಅರ್ಜಿಗಳಿಗೂ ವಿಚಾರಣೆಯ ಅದೃಷ್ಟ ಒದಗಿಲ್ಲ. ದೇಶದೆಲ್ಲೆಡೆ ಧಾರ್ಮಿಕ ಅಸಹಿಷ್ಣುತೆಯ ವಿಷಗಾಳಿಯನ್ನು ಹಬ್ಬಿಸಿದ ಪೌರತ್ವ ಕಾಯಿದೆ ತಿದ್ದುಪಡಿಯನ್ನು ಮತ್ತು ಕಾಶ್ಮೀರವನ್ನು ಸಾಮೂಹಿಕ ಸೆರೆಮನೆಯಾಗಿಸಿದ ನೀತಿ ನಿರ್ಧಾರಗಳನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯೇ ನಡೆಯುತ್ತಿಲ್ಲ. ಭೀಮಾ ಕೋರೆಗಾಂವ್, ಆಧಾರ್‌ನಂತಹ ವಿಷಯಗಳಲ್ಲಿ ನ್ಯಾಯಾಲಯದ ತೀರ್ಪು ನಿರಾಶಾದಾಯಕ. ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಿಸಿ ಲಕ್ಷಾಂತರ ಬಡ ಕಾರ್ಮಿಕರು ಸಾವಿರಾರು ಕಿ.ಮೀ.ಗಳ ದೂರವನ್ನು ಕಾಲು ನಡಿಗೆಯಲ್ಲಿ ಸವೆಸಬೇಕಾದ ವಲಸೆಯ ದುರಂತ ಜರುಗಿತು. ಈ ಕುರಿತು ಸರ್ಕಾರದ ನೀತಿ ನಿರ್ಧಾರದ ವಿರುದ್ಧ ದನಿ ಎತ್ತಲು ಮೀನಮೇಷ ಎಣಿಸಲಾಯಿತು. ಸರ್ಕಾರವನ್ನು ಅಸಂತೋಷಗೊಳಿಸೀತು ಎಂಬ ಹಿಂಜರಿಕೆ ಎದ್ದು ಕಾಣತೊಡಗಿದೆ.

ಆಳುವವರ ಮಗ್ಗುಲ ಮುಳ್ಳೆನಿಸುವ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳದೆ ಬದಿಗೆ ಸರಿಸಿರುವ ನಿದರ್ಶನಗಳಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ನೀಡಲಾಗಿರುವ ತೀರ್ಪುಗಳು ಪ್ರಶ್ನಾರ್ಹ ಎನಿಸಿವೆ.

2018ರ ಜನವರಿಯಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದು ಇದೇ ಅಂಶವನ್ನು. ಸುಪ್ರೀಮ್ ಕೋರ್ಟ್ ಆಡಳಿತ ಕೊಳೆತಿದ್ದು, ದೇಶದಲ್ಲಿ ಜನತಂತ್ರ ಉಳಿಯಬೇಕೆಂದಿದ್ದರೆ ಅದನ್ನು ಸರಿಪಡಿಸಬೇಕು ಎಂದು ಅವರು ಹೇಳಿಕೆ ನೀಡಿದ್ದರು.

ನ್ಯಾಯಮೂರ್ತಿಗಳು ನಿವೃತ್ತಿಯ ನಂತರದ ’ಪುನರ್ವಸತಿ’ಯ ಆಮಿಷಕ್ಕೆ ಒಳಗಾಗಿ ತೀರ್ಪುಗಳನ್ನು ನೀಡುವುದನ್ನು ತಡೆಯಬೇಕು. ಈ ದಿಕ್ಕಿನಲ್ಲಿ ನಿಯಮವೊಂದನ್ನು ರೂಪಿಸಿ ನಿವೃತ್ತಿ ನಂತರ ಎರಡು ವರ್ಷಗಳ ಕಾಲ ಅವರು ಯಾವುದೇ ಹುದ್ದೆಗಳನ್ನು ಒಪ್ಪಿಕೊಳ್ಳದಂತೆ ನಿರ್ಬಂಧಿಸಬೇಕು ಎಂಬುದು ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ಮಾಡಿದ್ದ ಪ್ರತಿಪಾದನೆ. ಆದರೆ ಆಡಳಿತ ಕೈಗೆ ಬಂದಾಗ ತಾನೇ ಹೇಳಿದ್ದ ನೀತಿಯನ್ನು ಗಾಳಿಗೆ ತೂರಿತ್ತು.

ಇನ್ನೂ ಎರಡು ವಾರಗಳ ಕಾಲಾವಕಾಶ ಮೋದಿ ಸರ್ಕಾರದ ಮುಂದಿದೆ. ಹುಸಿಪ್ರತಿಷ್ಠೆಯನ್ನು ಬದಿಗಿಟ್ಟು ರೈತರ ಬೇಡಿಕೆಗಳನ್ನು ಈಡೇರಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕಿದೆ. ಜನತಂತ್ರದ ದೇಗುಲ ಎಂದು ಸಂಸತ್ ಭವನವನ್ನೂ, ತಮ್ಮ ಪಾಲಿನ ಭಗವದ್ಗೀತೆ ಎಂದು ಸಂವಿಧಾನವನ್ನೂ ಬಣ್ಣಿಸಿದ್ದಾರೆ ಮೋದಿ. ದೇಗುಲದ ಪರಿಸರ ಅನ್ನ ಬೆಳೆವ ರೈತರ ನೆತ್ತರು ನಿಟ್ಟುಸಿರುಗಳಿಂದ ತೋಯದಿರಲಿ. ತಾವು ಭಗವದ್ಗೀತೆ ಎಂದು ಭಾವಿಸುವ ಸಂವಿಧಾನದ ನಿಜ ಆಶಯಗಳನ್ನು ಅವರು ಎತ್ತಿ ಹಿಡಿಯಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...