ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಮಸೂದೆಗಳ ವಿರುದ್ಧ ದೇಶದ ರೈತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಇದು ವಿಪಕ್ಷಗಳ ಕೆಲಸ. ವಿಪಕ್ಷಗಳು ಮಸೂದೆ ಕುರಿತು ರೈತರಿಗೆ ಸುಳ್ಳು ವದಂತಿಗಳನ್ನು ನಂಬಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ರೈತರಿಗೆ ಸದಾ ಸುಳ್ಳು ಹೇಳುತ್ತಿದ್ದ ವಿರೋಧ ಪಕ್ಷಗಳು, ಈಗ ತಮ್ಮ ರಾಜಕೀಯ ಲಾಭಕ್ಕಾಗಿ ಆ ಕೃಷಿಕರನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಗ್ರೌಂಡ್ ಲೆವೆಲ್ಗೆ ಇಳಿದು, ಮಸೂದೆ ಬಗ್ಗೆ ಹರಿದಾಡುತ್ತಿರೋ ವದಂತಿ ಹಾಗೂ ಸುಳ್ಳುಗಳಿಗೆ ಅಂತ್ಯ ಹಾಡಬೇಕು. ಹೊಸ ಕೃಷಿ ಮಸೂದೆಗಳ ಮಹತ್ವದ ಬಗ್ಗೆ, ಅದು ಅವರನ್ನ ಹೇಗೆ ಸಶಕ್ತರನ್ನಾಗಿಮಾಡುತ್ತದೆ ಎಂಬ ಬಗ್ಗೆ ಸರಳವಾದ ಭಾಷೆಯಲ್ಲಿ ತಿಳಿಸಬೇಕು ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಿಂದ ಒಳ್ಳೆಯದಾಗಿದೆ: ಕಾರ್ಮಿಕ ಸಚಿವರ ಹೇಳಿಕೆಗೆ ತೀವ್ರ ವಿರೋಧ
ಈ ಮಸೂದೆ, ಎಪಿಎಂಸಿ ಹೊರಗೂ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಲಿದೆ. ಇದರಿಂದ ದೇಶದಲ್ಲಿರುವ ಶೇ 85ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಮಸೂದೆಗಳ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದ್ದು, ಇಂಥವುಗಳಿಂದ ರೈತರನ್ನು ರಕ್ಷಿಸಬೇಕಿದೆ. ಆ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸುಮಾರು 1 ಲಕ್ಷ ಕೋಟಿ ರೂಪಾಯಿ ಹಣವನ್ನ 10 ಕೋಟಿ ರೈತರಿಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಸಾಲ ಪಡೆಯಲು ಸಹಾಯಕವಾಗುವಂತೆ ಇನ್ನೂ ಹೆಚ್ಚು ಹೆಚ್ಚು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನ ನೀಡಬೇಕೆಂಬುದು ನಮ್ಮ ಉದ್ದೇಶ ಎಂದರು.
ದೇಶದಾದ್ಯಂತ ಮಸೂದೆಗಳ ಅಂಗೀಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಭಾರತ್ ಬಂದ್ ಆಚರಿಸಲಾಗಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಪಂಬಾಬ್‌ನಲ್ಲಿ ರಸ್ತೆ ತಡೆ, ರೈಲ್ ರೋಕೊ ಚಳುವಳಿಗಳನ್ನು ನಡೆಸಲಾಗಿದೆ. ಕರ್ನಾಟಕದಲ್ಲಿಯೂ ರಸ್ತೆ ಬಂದ್ ಮಾಡಲಾಗಿದ್ದು, ರೈತ ಸಂಘಟನೆಗಳು ಹೆದ್ದಾರಿಗಳನ್ನು ತಡೆದು, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.


