ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವಿರೋಧಿಸಿ ಸಿಂಧನೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಫ್ಯಾಸಿಸ್ಟ್ ಟ್ರಂಪ್ ಗೋ ಬ್ಯಾಕ್ ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆದಿದೆ.
ಅಮೆರಿಕಾದ ಹಾಲು, ಚಿಕನ್ ನಮಗೆ ಬೇಕಾಗಿಲ್ಲ, ಭಾರತದಲ್ಲಿ ರೈತರು ದಿವಾಳಿಯಾಗಲು ಬಿಡುವುದಿಲ್ಲ, ಲೂಟಿಕೋರರಿಗೆ ಭಾರತ ಮಾರಟಕ್ಕಿಲ್ಲ, ರೈತವಿರೋಧಿ ಮೋದಿ ಸರ್ಕಾರಕ್ಕೆ ಎಂಬ ಘೋಷಣೆಗಳ ಮೂಲಕ ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಅಲ್ಲದೇ ಟ್ರಂಪ್ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೂ ಮೆರವಣಿಗೆ ನಡೆಸಿದ ಹಲವಾರು ರೈತರು “ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಮಾಡುತ್ತಿರುವ ಅಮೆರಿಕಾ ಭಾರತದ ಮಾರುಕಟ್ಟೆಯನ್ನು ಲೂಟಿಹೊಡೆಯಲು ಬರುತ್ತಿದೆ. ಕುಕ್ಕಟೋಧ್ಯಮ ಮತ್ತು ಹೈನುಗಾರಿಕೆಯನ್ನು ವಶಕ್ಕೆ ಪಡೆಯಲು ಟ್ರಂಪ್ ಯೋಜಿಸಿದ್ದಾರೆ. ಹಾಗಾಗಿ ಅವರ ಭೇಟಿಯನ್ನು ವಿರೋಧಿಸುತ್ತಿದ್ದೇವೆ” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಗತಿಪರ ಹೋರಾಟಗಾರರಾದ ಚಂದ್ರಶೇಖರ್ ಗೋರೆಬಾಳ್ ಮಾತನಾಡಿ “ದೇಶದ ಜನರು ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ ತೊಡಗಿದ್ದರೆ, ಇದೇ ಸಂದರ್ಭದಲ್ಲಿ ಭಾರತವನ್ನು ಲೂಟಿ ಹೊಡೆಯಲು ಅಮೆರಿಕಾದ ಅಧ್ಯಕ್ಷರನ್ನು ಆಹ್ವಾನ ಮಾಡಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವ ಹುನ್ನಾರ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.

2002ರಲ್ಲಿ ನರಮೇಧದ ಮೂಲಕ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದರು ಎಂದು ಅಮೇರಿಕ 10 ವರ್ಷಗಳ ಕಾಲ ನರೇಂದ್ರ ಮೋದಿಯವರಿಗೆ ವೀಸಾ ಕೊಡದೇ ಅಮೆರಿಕಾ ಭೇಟಿಗೆ ತಡೆಯೊಡ್ಡಿತ್ತು. ಆದರೆ ಪ್ರಧಾನಿಯಾದ ಕೂಡಲೇ ಅವರನ್ನು ಹೌಡಿ ಮೋದಿ ಎಂಬ ಕಾರ್ಯಕ್ರಮದ ಮೂಲಕ ಆಹ್ವಾನ ಮಾಡುತ್ತಾರೆ. ಏಕೆಂದರೆ ಅಮೆರಿಕಕ್ಕೆ ಲಾಭ ಮತ್ತು ಮಾರುಕಟ್ಟೆ ಮುಖ್ಯವೇ ಹೊರತು ಬೇರೇನಲ್ಲ ಎಂದಿದ್ದಾರೆ.
ಭಾರತದ ದೇಶದ ಬ್ಲಾಕ್‌ಬೆರ್‍ರಿ, ಚೆರ್‍ರಿ ಹಣ್ಣುಗಳಿಗೆ, ಹೈನುಗಾರಿಕೆಗೆ ಮಾರುಕಟ್ಟೆಯನ್ನು ಅಮೆರಿಕಾಕ್ಕೆ ಮುಕ್ತವಾಗಿ ತೆರಿಗೆ ರಹಿತವಾಗಿ ತೆರೆದಿಡಬೇಕೆಂದು ಆ ದೇಶ ಬಯಸುತ್ತಿದೆ. ನಮ್ಮ ದೇಶದಲ್ಲಿ 8 ಕೋಟಿ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೇಕಾದಷ್ಟು ಕುಕ್ಕೊಟೋಧ್ಯಮ ಇದೆ. ಹಾಗಿರುವಾಗಲೇ ಬಲವಂತದ ಆಮದು ಮಾಡಿಕೊಳ್ಳಲು ಒತ್ತಾಯಿಸಲಾಗುತ್ತಿದೆ ಎಂದು ದೂರಿದರು.
ಅಲ್ಲದೇ ನಮ್ಮ ದೇಶದಿಂದ ಅಲ್ಯುಮಿಲಿಯಂ ಮತ್ತು ಉಕ್ಕಿನ ವಸ್ತುಗಳನ್ನು ಅಮೆರಿಕಾಕಕ್ಕೆ ಕಡಿಮೆ ತೆರಿಗೆಯಲ್ಲಿ ರಫ್ತು ಮಾಡಲಾಗುತ್ತಿತ್ತು. ಅದನ್ನು ಅಮೆರಿಕಾ ನಿಲ್ಲಿಸದೆ. ಅಲ್ಲದೇ ಅಭಿವೃದ್ಧಿ ಶೀಲ ದೇಶಗಳ ಪಟ್ಟಿಯಿಂದ ಭಾರತವನ್ನು ಅಮೆರಿಕ ಕೈಬಿಟ್ಟಿದೆ. ಹೀಗಿದ್ದರೂ ಅವರನ್ನು ಆಹ್ವಾನಿಸುತ್ತಿರುವುದು ಯಾವ ಉದ್ದೇಶಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.
ಯುದ್ಧ ಸಾಮಾಗ್ರಿಗಳನ್ನು ಯಥೇಚ್ಚವಾಗಿ ಭಾರತ ಆಮದು ಮಾಡಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಈಗಾಗಲೇ 6 ಅಪಾಚಿ ಹೆಲಿಕ್ಯಾಪ್ಟರ್‌ಗಳನ್ನು ಖರೀದಿಸಲಾಗಿದ್ದು, ಇನ್ನು 72ನ್ನು ಖರೀದಿಸಲು ಮುಂದಾಗಿದೆ. ಅದೂ ಕೂಡ ಡಬಲ್ ಬೆಲೆಗೆ ಕೊಂಡುಕೊಳ್ಳುವ ಮೂಲಕ ದೇಶದ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಯುವ ಹೋರಾಟಗಾರ ನಾಗರಾಜ್ ಪೂಜಾರ್ ಮಾತನಾಡಿ “ದೇಶವನ್ನು ಲೂಟಿ ಹೊಡೆಯಲು ಬರುತ್ತಿರುವ ಟ್ರಂಪ್ ಭೇಟಿಗೆ ನೂರಾರು ಕೋಟಿ ಖರ್ಚು ಮಾಡುತ್ತಿರುವ ಮೋದಿ ಸರ್ಕಾರದ ನಡೆಯನ್ನು ವಿರೋಧಿಸುತ್ತೇವೆ” ರೈತ ವಿರೋಧಿ ಟ್ರಂಪ್‌ಗೆ ನಮ್ಮ ನೆಲವನ್ನು ಲೂಟಿ ಹೊಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.


