ಪಂಜಾಬ್ ಹರಿಯಾಣ ಸೇರಿದಂತೆ ದೇಶದ 250 ಸ್ಥಳಗಳಲ್ಲಿ ರೈತರು ಶನಿವಾರ ಕ್ರಾಂತಿದಿನವನ್ನು ಆಚರಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (SKM) ರೈತ ಸಂಘಟನೆಯ ಅಡಿಯಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹರಿಯಾಣ ಉಪ ಮುಖ್ಯಮಂತ್ರಿ ದುಶ್ಯಂತ್ ಸಿಂಗ್ ಚೌಟಾಲ ಮತ್ತು ಇತರ ಬಿಜೆಪಿ ನಾಯಕರ ಮನೆ ಮುಂದೆ ಸರ್ಕಾರದ ರೈತ ವಿರೋಧಿ ಕಾನೂನಿನ ಪ್ರತಿಯನ್ನು ಸುಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಸುಗ್ರೀವಾಜ್ಞೆಗಳನ್ನು ಹೊರಡಿಸಿ ಜೂನ್ 5 ಕ್ಕೆ ಒಂದು ವರ್ಷ ತುಂಬಿದೆ. ರೈತ ಹೋರಾಟ ಮತ್ತು ರೈತ ವಿರೋಧಿ ಕಾನೂನಿಗೆ ಒಂದು ವರ್ಷ ಕಳೆದ ಸಂದರ್ಭದಲ್ಲಿ ರೈತರು ತಮ್ಮ ಪ್ರತಿಭಟನೆಗಳನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ. ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಗಳು ಮತ್ತೆ ತೀವ್ರ ಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ವರ್ಷ ಅಂದರೆ 2020 ರ ಜೂನ್ 6 ರಂದು ರೈತರ ಮೊದಲ ಪ್ರತಿಭಟನೆ ನಡೆದಿತ್ತು.
2020 ರ ಅಕ್ಟೋಬರ್ 1 ರಿಂದ ಪಂಜಾಬ್‌ನಲ್ಲಿ ರೈತರು ಪ್ರತಿಭಟನೆಯನ್ನು ಆರಂಭಿಸಿದ್ದರು. ನಂತರ ನವೆಂಬರ್ 26 ರಿಂದ ದೆಹಲಿಯ ಗಡಿಭಾಗಗಳಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿತ್ತು.
ಭಾರತೀಯ ಕಿಸಾನ್ ಯೂನಿಯನ್ (BKU) ನಿನ್ನೆ 49 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದೆ.
ಕಳೆದ ವರ್ಷ ಜೂನ್ 14 ರಿಂದ ಜೂನ್ 30 ರ ವರೆಗೆ ನಮ್ಮ ಸಾವಿರಾರು ರೈತರು ತಮ್ಮ ಮನೆಯ ಮಹಡಿಯ ಮೇಲೆ ಭಿತ್ತಿ ಪತ್ರ ಹಿಡಿದು ನಿಂತು ಪ್ರತಿಭಟನೆ ನಡೆಸಿದ್ದರು. ಆಗ ರಾಜ್ಯದಲ್ಲಿ ಕರ್ಪ್ಯೂ ಜಾರಿ ಮಾಡಲಾಗಿತ್ತು. ನಮ್ಮ ಬಹಿರಂಗ ಪ್ರತಿಭಟನೆಗೆ ಸರ್ಕಾರ ಅವಕಾಶ ಮಾಡಿಕೊಡಲಿಲ್ಲ ಎಂದು ಬಿಕೆಯು ರಾಷ್ಟ್ರೀಯ ಕಾರ್ಯದರ್ಶಿ ಸುಖದೇವ್ ಸಿಂಗ್ ಕೋಕ್ರಿ ಹಿಂದಿನ ವರ್ಷದ ಘಟನೆಯನ್ನು ನೆನೆಸಿಕೊಂಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ನಾವು ನಿಧಾನಕ್ಕೆ ಹಳ್ಳಿಗಳಲ್ಲಿ ಪ್ರತಿಭಟನೆಯನ್ನು ನಡೆಸಲು ಆರಂಭಿಸಿದೆವು. ನಿಧಾನಕ್ಕೆ ಅದು ಟ್ರಾಕ್ಟರ್ ಪರೇಡ್, ಜೈಲ್ ಭರೋ ಆಂದೋಲನ, ರೈಲ್ ರೋಖೋ ಅಭಿಯಾನವಾಗಿ ಬೆಳೆಯಿತು ಎಂದು ಸುಖದೇವ್ ಸಿಂಗ್ ಕೋಕ್ರಿ ಕಳೆದ ವರ್ಷದ ಪ್ರತಿಭಟನೆ ಹೇಗೆ ಆರಂಭವಾಯಿತು ಎಂದು ತಿಳಿಸಿದ್ದಾರೆ.
ಜೂನ್ 5 ಶನಿವಾರ ರೈತರು ಅನೇಕ ಬಿಜೆಪಿ ಎಂಪಿ, ಎಮ್‌ಎಲ್‌ಎಗಳ ಮನೆ ಮುಂದೆ ರೈತ ವಿರೋಧಿ ಕಾನೂನುಗಳನ್ನು ಸುಡುವ ಮೂಲಕ ಪಂಜಾಬ್ ಹರಿಯಾಣ ಮೂಲದ ಬಿಜೆಪಿ ನಾಯಕರುಗಳಿಗೆ ಕೊನೆಯ ಎಚ್ಚರಿಕೆಯನ್ನು ನೀಡಿದ್ದಾರೆ.

2021 ರ ಮೇ 26 ಬುಧವಾರದಂದು ರೈತರು ದೇಶಾದ್ಯಂತ ಕರಾಳ ದಿನವನ್ನು ಆಚರಿಸಿದ್ದರು. ಗಾಝಿಪುರ್, ಸಿಂಘು, ಟಿಕ್ರಿ ಗಡಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಪಂಜಾಬ್ ನ ರೈತರು ತಮ್ಮ ಮನೆಗಳ ಛಾವಣಿ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ಲಾಕ್‌ಡೌನ್ ನಡುವೆಯೂ ಕೇಂದ್ರದ ರೈತವಿರೋಧಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ; ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ರೈತರು: ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಜೆಜೆಪಿ ಶಾಸಕ


