ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ 18 ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದರ ಭಾಗವಾಗಿ ಇಂದು ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್, “ಈ ಕಾನೂನುಗಳು ರೈತರಿಗೆ ಉಡುಗೊರೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ರೈತರಿಗೆ ಈ ಉಡುಗೊರೆ ಬೇಡವಾಗಿದೆ” ಎಂದು ಹೇಳಿದರು.
“ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಬಯಸುವ ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿದೆ. ಯಾಕೆಂದರೆ ರೈತರ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ಕೇಂದ್ರಕ್ಕೆ ಮನಸ್ಸಿಲ್ಲ” ಎಂದು ಯೋಗೇಂದ್ರ ಯಾದವ್ ಹೇಳಿದರು.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ, ನೀವು ಉಪವಾಸ ಕೈಗೊಳ್ಳಿ: ಅರವಿಂದ್ ಕೇಜ್ರಿವಾಲ್ ಕರೆ
“ಇದು ವಿಚಿತ್ರ. ಅವರು ಉಡುಗೊರೆಯನ್ನು ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಅದು ರೈತರಿಗೆ ಅನಗತ್ಯ. ಇದು ಐತಿಹಾಸಿಕ ಉಡುಗೊರೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ರೈತರು ಇದನ್ನು ಬಯಸಿಲ್ಲ. ಪ್ರಧಾನಮಂತ್ರಿ ರೈತರ ಕಲ್ಯಾಣದ ಬಗ್ಗೆ ಯೋಚಿಸಬೇಕು ಮತ್ತು ಕಾನೂನುಗಳನ್ನು ರದ್ದುಪಡಿಸಬೇಕು. ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಬಿಡುವುದಿಲ್ಲ” ಎಂದು ಯೋಗೇಂದ್ರ ಯಾದವ್ ಎನ್‌ಡಿಟಿವಿಗೆ ತಿಳಿಸಿದರು.
“ನಾವು ರಸ್ತೆಗಳನ್ನು ತಡೆದಿಲ್ಲ. ಇದು ನಮ್ಮನ್ನು ನಿರ್ಬಂಧಿಸಲು ಪೊಲೀಸರು ಹಾಕಿರುವ ಅಡೆತಡೆಗಳ ಪರಿಣಾಮವಾಗಿದೆ. ಸರ್ಕಾರವು ನಮ್ಮ ಮಾತುಗಳನ್ನು ಕೇಳಲಿ ಎಂದು ನಾವು ದೆಹಲಿಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ: ತಿಗಳ ಸಮುದಾಯದ ತೀರ್ಮಾನ
ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದು ಕೇಂದ್ರ ಸರ್ಕಾರವು ರೈತ ಸಂಘಟನೆಗಳೊಂದಿಗೆ ಹಲವು ಸುತ್ತಿನ ಮಾತಕತೆ ಮತ್ತು ಸಂಧಾನ ಸಭೆಗಳನ್ನು ನಡೆಸಿದರೂ ಸಹ ಅವುಗಳೆಲ್ಲಾ ವಿಫಲಾಗಿವೆ.
ಇತ್ತೀಚೆಗೆ ಅಮಿತ್ ಶಾ ರೈತ ಮುಖಂಡರನ್ನು ಮಾತುಕತೆಗೆ ಕರೆದು, ಕಾನೂನುಗಳಲ್ಲಿ ಕೆಲವು ತಿದ್ದುಪಡಿಗಳನ್ನು ತರುವುದಾಗಿ ಪ್ರಸ್ತಾವವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು. ಆದರೆ ರೈತರು ಇದನ್ನೂ ಒಪ್ಪಿರಲಿಲ್ಲ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ, ನೀವು ಉಪವಾಸ ಕೈಗೊಳ್ಳಿ: ಅರವಿಂದ್ ಕೇಜ್ರಿವಾಲ್ ಕರೆ


