ಚಂಡಿಗಡ: ಪಂಜಾಬ್ ಮತ್ತು ಹರಿಯಾಣದಿಂದ ರೈತರ ಗುಂಪುವೊಂದು ಇಂದು (ಭಾನುವಾರ) ದೆಹಲಿಯತ್ತ ಮೆರವಣಿಗೆ ನಡೆಸಲಿದೆ. ಕೇಂದ್ರ ಸರ್ಕಾರವು ಶುಕ್ರವಾರದಂದು ನಡೆಸಿದ ನಮ್ಮ ಪ್ರತಿಭಟನೆಗೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಮತ್ತು ನಮ್ಮ ಜೊತೆ ಮಾತುಕತೆ ನಡೆಸಿಲ್ಲವೆಂದು ರೈತ ನಾಯಕರು ಆರೋಪಿಸಿದ್ದಾರೆ.
ದೆಹಲಿ ತಲುಪಲು ರೈತ ಹೋರಾಟಗಾರರು ಹೊಸ ಪ್ರಯತ್ನದ ನಿರೀಕ್ಷೆಯಲ್ಲಿರುವುದರಿಂದ ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತ ಹೋರಾಟಗಾರರನ್ನು ತಡೆಯಲು ಮುಂಗಡವಾಗಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ.
ಇಂದು ನಡೆಯುವ ಹೊಸತನದ ರೈತ ಪ್ರತಿಭಟನಾ ಮೆರವಣಿಗೆಯು ಶುಕ್ರವಾರದ ರೀತಿಯಲ್ಲಿಯೇ ಇರಲಿದೆ. ಶುಕ್ರವಾರದಂದು ರೈತರು ರಾಷ್ಟ್ರ ರಾಜಧಾನಿಯತ್ತ ಸಾಗಲು ಪ್ರಯತ್ನಿಸಿದರು. ಆದರೆ ಭದ್ರತಾ ಸಿಬ್ಬಂದಿ ಗಡಿಯಲ್ಲಿ ಅಶ್ರುವಾಯು ಶೆಲ್ ಗಳನ್ನು ಹಾರಿಸಿದಾಗ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದರು.
ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ನಮ್ಮ ಜೊತೆ ಮಾತುಕತೆಗೆ ಬಂದಿಲ್ಲ. 101 ರೈತರ ಗುಂಪು ಇಂದು (ಡಿ.8) ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ
ರೈತರು ಮತ್ತು ಕಾರ್ಮಿಕರೊಂದಿಗೆ ಮಾತುಕತೆಯಾಡಬಾರದೆಂದು ಕೇಂದ್ರವು ತೀರ್ಮಾನಿಸಿದಂತೆ ಕಾಣುತ್ತದೆ. ಅವರು ನಮ್ಮನ್ನು ತಡೆಯಲು ಬಲಪ್ರಯೋಗ ಮಾಡುತ್ತಿದ್ದಾರೆ. ಶುಕ್ರವಾರದಂತೆ ನಾವು ಶಾಂತಿಯುತವಾಗಿ ಮತ್ತು ಶಿಸ್ತಿನಿಂದ ದೆಹಲಿಗೆ ಹೋಗುತ್ತೇವೆ. ನರೇಂದ್ರ ಮೋದಿ ಸರ್ಕಾರವು ಮಾತುಕತೆಯಾಡುವ ಮನಸ್ಥಿತಿಯಲ್ಲಿಲ್ಲ. ಮಧ್ಯಾಹ್ನ 12 ಗಂಟೆ ಸುಮಾರಿಗೆ 101 ರೈತರ ನಿಯೋಗವನ್ನು ಪ್ರತಿಭಟನಾ ಮೆರವಣಿಗೆಯೊಂದಿಗೆ ದೆಹಲಿಗೆ ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಪಾಂಡರ್ ಹೇಳಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂಸತ್ತಿನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೃಷಿ ಸಚಿವರು ಸಂಸತ್ತಿನ ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಎಂಎಸ್‌ಪಿ ಮೇಲೆ ಕಾನೂನು ಮೂಲಕ ಭರವಸೆ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಆದರೆ ಸಚಿವರು ಮೌನವಾಗಿದ್ದಾರೆ ಎಂದು ಪಂಧೇರ್ ಹೇಳಿದರು.
ಪಂಜಾಬ್‌ಗೆ ಬಿಜೆಪಿ ನಾಯಕರ ಪ್ರವೇಶವನ್ನು ರೈತರಾದ ನಾವು ವಿರೋಧಿಸುತ್ತೇವೆ ಎಂದು ಇದೇ ಸಮಯದಲ್ಲಿ ಪಂಧೇರ್ ಘೋಷಿಸಿದರು.
ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ದಿಂದ ನಡೆಸುತ್ತಿರುವ ಈ ಪ್ರತಿಭಟನೆಯು ಈಗ 300 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಹಠಮಾರಿ ಧೋರಣೆಯಲ್ಲಿಯೇ ಇದೆ. ಪಂಜಾಬ್‌ಗೆ ಬಿಜೆಪಿ ನಾಯಕರ ಪ್ರವೇಶವನ್ನು ಪ್ರತಿಭಟಿಸುವ ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದೇವೆ. ಇಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಪಂಜಾಬಿನ ಅಮೃತಸರಕ್ಕೆ ಹೋಗುತ್ತಿದ್ದಾರೆ ಎಂದು ನಾವು ಕೇಳಿದ್ದೇವೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಇವರು ರಾಜ್ಯಕ್ಕೆ ಪ್ರವೇಶಿಸುವುದನ್ನು ಪ್ರತಿಭಟಿಸುವಂತೆ ನಾವು ಪಂಜಾಬ್‌ನ ರೈತರಿಗೆ ಕರೆ ನೀಡುತ್ತೇವೆ ಎಂದು ಅವರು ಹೇಳಿದರು.

ಹರಿಯಾಣ ಭದ್ರತಾ ಸಿಬ್ಬಂದಿಯಿಂದ ಶುಕ್ರವಾರದಂದು ಬಹುಪದರದ ಬ್ಯಾರಿಕೇಡ್ ನಿರ್ಮಿಸಿ ನಮ್ಮ ಜಾಥಾವನ್ನು ನಿಲ್ಲಿಸಲಾಯಿತು. ನಿಷೇಧಾಜ್ಞೆಗಳ ಹೊರತಾಗಿಯೂ, ರೈತರು ಬ್ಯಾರಿಕೇಡ್ ಗಳನ್ನು ಭೇದಿಸಲು ಪ್ರಯತ್ನಿಸಿದರು. ಆದರೆ ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರಿಂದ ಪ್ರತಿರೋಧವನ್ನು ಎದುರಿಸಬೇಕಾಯಿತು. ಪಂಜಾಬ್‌ನ ಶಂಭುವಿನ ನಮ್ಮ ಪ್ರತಿಭಟನಾ ಸ್ಥಳಕ್ಕೆ ಮರಳುವಂತೆ ಅವರು ಒತ್ತಾಯಿಸಿದರು.
ರೈತರು ಈ ಹಿಂದೆ ಫೆಬ್ರವರಿ 13 ಮತ್ತು ಫೆಬ್ರವರಿ 21 ರಂದು ದೆಹಲಿ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು. ಆದರೆ ಆಗ ಗಡಿ ಕೇಂದ್ರಗಳಲ್ಲಿ ಭದ್ರತಾ ಪಡೆಗಳು ತಡೆದಿದ್ದರು.
ಎಂಎಸ್‌ಪಿ ಜೊತೆಗೆ, ರೈತರು ಕೃಷಿ ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಏರಿಕೆಯನ್ನು ಸ್ಥಗಿತಗೊಳಿಸುವುದು, ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ ಮತ್ತು 2020-21ರ ಪ್ರತಿಭಟನೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ರೈತ ಹೋರಾಟಗಾರರ ಬೇಡಿಕೆಗಳಲ್ಲಿ ಸೇರಿವೆ.
ಇದನ್ನೂ ಓದಿ…ಬಾಂಗ್ಲಾದೇಶದ ದಲಿತರ ಬಗ್ಗೆ ಮೌನವಾಗಿರುವ ಕಾಂಗ್ರೆಸ್, ಸಂಭಾಲ್ ಮೂಲಕ ಮುಸ್ಲಿಮರನ್ನು ಓಲೈಸುತ್ತಿದೆ: ಮಾಯಾವತಿ


