ಕೇಂದ್ರ ಕೃಷಿ ಸಚಿವಾಲಯದ ‘ರಾಷ್ಟ್ರೀಯ ಕೃಷಿ ಮಾರುಕಟ್ಟೆ ನೀತಿ’ (NPFAM) ಕರಡನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದು, ಇದರ ವಿರುದ್ದ ದೇಶದ ಎಲ್ಲಾ ರಾಜ್ಯಗಳಲ್ಲಿ ಮಹಾ ಪಂಚಾಯತ್, ಬೃಹತ್ ಪ್ರತಿಭಟನಾ ಸಭೆಗಳನ್ನು ನಡೆಸಲು ನಿರ್ಧರಿಸಿವೆ.
ಈ ಹಿಂದೆ ವಾಪಸ್ ಪಡೆದಿರುವ ಮೂರು ಕರಾಳ ಕೃಷಿ ಕಾನೂನುಗಳನ್ನು ಕೃಷಿ ಮಾರುಕಟ್ಟೆ ನೀತಿಯ ಹೆಸರಿನಲ್ಲಿ ಹಿಂಬಾಗಿಲ ಮೂಲಕ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಹೊಸ ನೀತಿಯ ವಿರುದ್ದ ಹೋರಾಟ ನಡೆಸುತ್ತಿರುವ ರೈತರನ್ನು ಬೆಂಬಲಿಸುವಂತೆ ಆಗ್ರಹಿಸಿ ಫೆಬ್ರವರಿ 8 ಮತ್ತು 9ರಂದು ದೇಶದಾದ್ಯಂತ ಎಲ್ಲಾ ಸಂಸದರ ನಿವಾಸ, ಕಚೇರಿಗಳ ಮುಂದೆ ಸಾಮೂಹಿಕ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಶುಕ್ರವಾರ (ಜನವರಿ 24, 2025) ನವದೆಹಲಿಯಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

“ಕೇಂದ್ರದ ಕೃಷಿ ಮಾರುಕಟ್ಟೆ ನೀತಿಯು ಈ ಹಿಂದೆ ಹಿಂಪಡೆಯಲಾದ ಮೂರು ಕೃಷಿ ಕಾನೂನುಗಳ ಹೊಸ ರೂಪವಾಗಿದೆ. ರಾಜ್ಯ ಸರ್ಕಾರಗಳ ಮೂಲಕ ಹಿಂಬಾಗಿಲಲ್ಲಿ ಬಲವಂತವಾಗಿ ಇದನ್ನು ಜಾರಿಗೆ ತರಲು ಕೇಂದ್ರ ಮುಂದಾಗಿದೆ. ಈ ನೀತಿಯು ರೈತ ವಿರೋಧಿ ಮತ್ತು ರಾಜ್ಯ ಸರ್ಕಾರಗಳ ವಿರೋಧಿಯಾಗಿದೆ” ಎಂದು 2020-21ರಲ್ಲಿ ಸಾಮೂಹಿಕ ರೈತ ಆಂದೋಲನದ ನೇತೃತ್ವ ವಹಿಸಿದ್ದ ಕೃಷಿ ಸಂಘಗಳ ಒಕ್ಕೂಟವಾದ ಎಸ್‌ಕೆಎಂ ಹೇಳಿದೆ.
ಮಾರ್ಚ್ 5ರಿಂದ ‘ಪ್ರತಿರೋಧ ರ್‍ಯಾಲಿ’
ಎಸ್‌ಕೆಎಂ ರಾಜ್ಯ ಸಮಿತಿಗಳ ನಾಯಕರು ಆಯಾ ರಾಜ್ಯಗಳ ಮುಖ್ಯಮಂತ್ರಿಯನ್ನು ಭೇಟಿಯಾಗಿ ಹೊಸ ಕೃಷಿ ಮಾರುಕಟ್ಟೆ ನೀತಿಯ ವಿರುದ್ದ ವಿಧಾನಸಭೆಗಳಲ್ಲಿ ನಿರ್ಣಯ ಅಂಗೀಕರಿಸುವಂತೆ ಮತ್ತು ಅದನ್ನು ವಾಪಸ್ ಹಿಂಪಡೆಯಲು ಕೇಂದ್ರವನ್ನು ಆಗ್ರಹಿಸುವಂತೆ ಮನವಿ ಮಾಡಲಿದ್ದಾರೆ. ಯಾವುದಾದರು ರಾಜ್ಯ ಸರ್ಕಾರ ರೈತರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಆ ರಾಜ್ಯದ ರಾಜಧಾನಿ, ಜಿಲ್ಲಾ ಕೇಂದ್ರಗಳು ಮತ್ತು ಉಪ ಜಿಲ್ಲಾ ಕೇಂದ್ರಗಳಲ್ಲಿ ಮಾರ್ಚ್ 5ರಿಂದ ಮಹಾಪಂಚಾಯತ್, ರೈತ ಸಮಾವೇಶಗಳನ್ನು
ಆಯೋಜಿಸುವ ಮೂಲಕ ಮಹಾ ಪ್ರತಿರೋಧ ರ್‍ಯಾಲಿ ನಡೆಸಲಾಗುವುದು ಎಂದು ಎಸ್‌ಕೆಂಎಂ ಎಚ್ಚರಿಸಿದೆ.

ಎಂಎನ್‌ಸಿಗಳಿಗೆ ಸಹಾಯ ಮಾಡುವ ಹುನ್ನಾರ
ಹೊಸ ನೀತಿಯು ಸರ್ಕಾರಿ ಬೆಂಬಲಿತ ಕೃಷಿ ಮಾರುಕಟ್ಟೆಗಳ ಮೇಲಿನ ನೇರ ದಾಳಿಯಾಗಿದೆ. ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ಸಹಾಯ ಮಾಡುವ ಸಲುವಾಗಿ ಮಾರುಕಟ್ಟೆಗಳನ್ನು ಖಾಸಗೀಕರಣಗೊಳಿಸುವ ಗುರಿಯನ್ನು ಹೊಂದಿದೆ. ದೊಡ್ಡ ಕಂಪನಿಗಳು ಕೃಷಿ ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಸಂಸ್ಕರಣಾ ಉದ್ಯಮವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ ಎಂದು ಎಸ್‌ಕೆಎಂ ಆರೋಪಿಸಿದೆ.
ಹೊಸ ಕೃಷಿ ಮಾರುಕಟ್ಟೆ ನೀತಿಯು ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಮತ್ತು ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಮೂಲಕ ಸ್ಥಳೀಯ ಗ್ರಾಮೀಣ ಮಂಡಿಗಳನ್ನು ಜೋಡಿಸುತ್ತದೆ. ಎಫ್‌ಪಿಒ, ಸಹಕಾರಿ ಸಂಘಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಒಪ್ಪಂದ ಕೃಷಿಯನ್ನು ಜಾರಿಗೊಳಿಸುತ್ತದೆ. ಆಹಾರ ಸಂಸ್ಕಾರಕ ಮೌಲ್ಯವರ್ಧಿತ ಸರಪಳಿಗಳಿಗೆ ಅಗ್ಗದ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಕೃಷಿಯನ್ನು ಭವಿಷ್ಯದ ವ್ಯಾಪಾರ ಮತ್ತು ಷೇರು ಮಾರುಕಟ್ಟೆಯೊಂದಿಗೆ ಸಂಪರ್ಕಿಸುತ್ತದೆ. ಇವೆಲ್ಲವೂ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಮತ್ತು ವಿಶ್ವಬ್ಯಾಂಕ್ ಅನತಿಯಂತೆ ನಡೆಯುತ್ತಿವೆ ಎಂದು ಎಸ್‌ಕೆಎಂ ಹೇಳಿದೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಣೆ, ಸರ್ಕಾರಿ ಸಂಗ್ರಹಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಪೂರೈಕೆಗಾಗಿ ಆಹಾರ ಸಂಗ್ರಹಣೆ ಸೇರಿದಂತೆ ಯಾವುದೇ ವಿಚಾರಗಳು ಹೊಸ ಕೃಷಿ ಮಾರುಕಟ್ಟೆ ನೀತಿಯಲ್ಲಿ ಇಲ್ಲ. ಇದು ಬಫರ್ ಸ್ಟಾಕ್‌ಗಳನ್ನು ಮಾತ್ರ ಪೂರೈಸುತ್ತದೆ ಎಂದು ಎಸ್‌ಕೆಂ ತಿಳಿಸಿದೆ.
ರೈತ ಸಂಘಗಳ ನಾಯಕರಾದ ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರನ್, ರಾಕೇಶ್ ಟಿಕಾಯತ್, ರೇವುಲಾ ವೆಂಕಯ್ಯ, ಸತ್ಯವಾನ್ ಮತ್ತು ಡಾ. ಸುನಿಲಂ ಜೊತೆ 12 ರಾಜ್ಯಗಳ 73 ರೈತ ಸಂಘಟನೆಗಳ 165 ಪ್ರತಿನಿಧಿಗಳು ಎಸ್‌ಕೆಎಂನ ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು.
ಸಭೆಯು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಕ್ರಮವನ್ನೂ ಖಂಡಿಸಿದೆ ಮತ್ತು ಕಾರ್ಮಿಕ ಸಂಘಗಳ ಪ್ರತಿರೋಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಆರ್‌ಎಸ್‌ಎಸ್ ಸೇರುವಂತೆ ಸರ್ಕಾರಿ ಕಾಲೇಜು ಆಡಳಿತದಿಂದ ಒತ್ತಡ : ಹೈಕೋರ್ಟ್ ಮೆಟ್ಟಿಲೇರಿದ ಉಪನ್ಯಾಸಕ


