ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಜಯಪುರ ಪೊಲೀಸರು ಬುಧವಾರ (ಅ.29) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಗೊಳಗಾದ ಶಿಕ್ಷಕಿಯ ಸಂಬಂಧಿಕನೇ ಆಗಿರುವ ಭವಿತ್ (28) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಸಂತ್ರಸ್ತೆ ಕೊಪ್ಪ ತಾಲೂಕಿನ ಬಸರೀಕಟ್ಟೆ ಗ್ರಾಮದ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿತ್ಯ ಕೊಗ್ರೆ ಗ್ರಾಮದಿಂದ ಬಸರೀಕಟ್ಟೆ ಗ್ರಾಮಕ್ಕೆ ಹೋಗಿ ಬರುತ್ತಿದ್ದರು.
ಮಂಗಳವಾರ (ಅ.28) ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ದಾರಿಮಧ್ಯೆ ಅಡ್ಡಗಟ್ಟಿದ ಭವಿತ್ ಹಲ್ಲೆ ನಡೆಸಿದ್ದಾನೆ. ಅಡಿಕೆಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವ ಪ್ರಜ್ವಾಹೀನ ಸ್ಥಿತಿಗೆ ತಲುಪಿದ್ದರು. ಸ್ಥಳೀಯರು ಗಮನಿಸಿ ಆಕೆಯನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಕ್ಕೆ ಭವಿತ್ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ. ನಾನುಗೌರಿ ಜೊತೆ ಮಾತನಾಡಿರುವ ಸಂತ್ರಸ್ತೆಯ ಸಂಬಂಧಿಕರೊಬ್ಬರು ಕೂಡ ಹಲ್ಲೆಗೆ ಇದೇ ಕಾರಣವನ್ನು ಉಲ್ಲೇಖಿಸಿದ್ದಾರೆ. ಘಟನೆಯ ಸ್ಪಷ್ಟ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಕೇರಳ | ‘ಬಡತನ ಮುಕ್ತ ಘೋಷಣೆ’ ಕಾರ್ಯಕ್ರಮದಿಂದ ಹಿಂದೆ ಸರಿಯಿರಿ : ಹೋರಾಟ ನಿರತ ಆಶಾಗಳಿಂದ ನಟರಿಗೆ ಮನವಿ


