Homeಚಳವಳಿಮಗಳನ್ನೇ ಕೊಂದ ತಂದೆ: ಚಿಕ್ಕಮಗಳೂರಿನಲ್ಲಿ ಕ್ರೂರ ಮರ್ಯಾದಾಗೇಡು ಹತ್ಯೆ

ಮಗಳನ್ನೇ ಕೊಂದ ತಂದೆ: ಚಿಕ್ಕಮಗಳೂರಿನಲ್ಲಿ ಕ್ರೂರ ಮರ್ಯಾದಾಗೇಡು ಹತ್ಯೆ

ನಾಗರೀಕ ಸಮಾಜ ಇಂತಹ ಅಮಾನವೀಯವಾದ ಕೃತ್ಯಗಳ ವಿರುದ್ಧ ಜನರಲ್ಲಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.

- Advertisement -

ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕೊರೊನಾದಂತಹ ಮಾರಣಾಂತಿಕ ಕಾಯಿಲೆಗಳು ಅಪ್ಪಳಿಸಿದರೂ ಸಹ ಜಾತಿ ಜಾತಿಗ್ರಸ್ಥರಾಗಿಯೇ ಉಳಿದಿರುವುದು ದುರಂತ. ಕ್ರೂರ ಜಾತೀಯತೆಯಲ್ಲಿ ನರಳುತ್ತಿರುವ ಜನರು ಮರ್ಯಾದೆ ಹೆಸರಿನಲ್ಲಿ ರಕ್ತಸಂಬಂಧಿಗಳನ್ನು ಹತ್ಯೆಗೈದು ಜೀವನಪೂರ್ತಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಅಂಥದ್ದೆ ದುರಂತವೊಂದು ಕರ್ನಾಟಕದಲ್ಲಿ ಮತ್ತೆ ಸಂಭವಿಸಿದೆ. ಅನ್ಯಜಾತಿಯ ಯುವಕನನ್ನು ಪ್ರೇಮಿಸಿದ್ದ ಕಾರಣಕ್ಕೆ ಮಗಳನ್ನೇ ತಂದೆಯೇ ಮರ್ಯಾದಾಗೇಡು ಹತ್ಯೆ ಮಾಡಿರುವ ಅಮಾನವೀಯ ಘಟನೆ ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ. ಆರೋಪಿ ಚಂದ್ರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕೆಂಚಿಗೊಂಡನಕೊಪ್ಪದವರಾಗಿದ್ದು ಆತನ ಮಗಳು ರಾಧಾ (18) ಹತ್ಯೆಯಾದ ದುರ್ದೈವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕೆಂಚಿಗೊಂಡನಕೊಪ್ಪದ ಹೆಳವ ಸಮುದಾಯದ ರಾಧಾ ಮತ್ತು ಅದೇ ಊರಿನ ಗಂಗಾಮತಸ್ಥ ಸಮುದಾಯದ ಯುವಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಮನೆಯವರ ವಿರೋಧವಿತ್ತು. ಈ ವಿರೋಧದ ನಡುವೆಯೂ ಇಬ್ಬರು ಪ್ರೀತಿಸುತ್ತಿದ್ದರು. ಸ್ಥಳ ಬದಲಾವಣೆ ಮಾಡಿದರೆ ಮಗಳು ಯುವಕನನ್ನು ಮರೆಯಬಹುದು ಎಂದು ಚಂದ್ರಪ್ಪ ಅವರು ಮಗಳನ್ನು ಚನ್ನಗಿರಿ ತಾಲ್ಲೂಕಿನ ಮಲ್ಲಿಗೆರೆಯ ತನ್ನ ಸಹೋದರಿ ಶಾಂತಮ್ಮ ಅವರ ಮನೆಯಲ್ಲಿ ಇರಿಸಿದ್ದರು.

ಹಬ್ಬಕ್ಕೆ ಮಗಳನ್ನು ಮನೆಗೆ ಕರೆತರಲು ಚಂದ್ರಪ್ಪ ಬುಧವಾರ ಮಲ್ಲಿಗೆರೆಗೆ ಹೋಗಿದ್ದರು. ಮಗಳನ್ನು ಕರೆದುಕೊಂಡು ಬೈಕಿನಲ್ಲಿ ಚನ್ನಗಿರಿ-ಬೀರೂರು ಮಾರ್ಗದಲ್ಲಿ ಬರುವಾಗ, ಯುವಕನನ್ನು ಮರೆಯುವಂತೆ ಮಗಳಿಗೆ ಬುದ್ದಿವಾದ ಹೇಳಿದ್ದಾರೆ. ಪ್ರೇಮಿಸಿರುವ ಯುವಕನನ್ನೇ ವಿವಾಹವಾಗುವುದಾಗಿ ರಾಧಾ ವಾದ ಮಾಡಿದ್ದಾರೆ. ಕೋಪಗೊಂಡ ಚಂದ್ರಪ್ಪ ಬೀರೂರು ಹೊರವಲಯದ ರೈಲ್ವೆ ಗೇಟ್‌ ಬಳಿ ಜನಸಂಚಾರವಿಲ್ಲದ್ದನ್ನು ಗಮನಿಸಿ ಬೈಕ್‌ ನಿಲ್ಲಿಸಿ ಗೇಟ್‌ ಪಕ್ಕದ ಬಂಡಿ ಜಾಡಿನಲ್ಲಿ ಮಗಳ ತಲೆ ಮೇಲಿದ್ದ ಬಟ್ಟೆಯನ್ನೇ ಕುತ್ತಿಗೆಗೆ ಬಿಗಿದು, ಅಲ್ಲಿಯೇ ಇದ್ದ ಗುಂಡಿಯಲ್ಲಿ ಅದುಮಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

ನಡೆದ ಘಟನೆಯನ್ನು ಫೋನ್‌ನಲ್ಲಿ ಕುಟುಂಬದವರಿಗೆ ತಿಳಿಸಿರುವ ಚಂದ್ರಪ್ಪ, ಘಟನೆ ನಂತರ ರಾತ್ರಿ 2.30ರ ಸುಮಾರಿಗೆ ಊರು ತಲುಪಿದ್ದಾರೆ. ಮಗಳನ್ನು ಕೊಲೆ ಮಾಡಿದ ತಾನೂ ಬದುಕಬಾರದು ಎಂದು ಅತ್ತಿದ್ದಾರೆ. ಇದನ್ನು ಕಂಡು ಮಗ ಪಕ್ಕದ ಮನೆಯ ಸಂಬಂಧಿಕರನ್ನು ಕರೆತಂದಿದ್ದಾರೆ. ಅವರ ಮುಂದೆ ಚಂದ್ರಪ್ಪ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಮನೆಯವರು ಸಂಬಂಧಿಕರೊಂದಿಗೆ ಚಂದ್ರಪ್ಪನನ್ನು ಶಿಕಾರಿಪುರ ಠಾಣೆಗೆ ಕರೆದೊಯ್ದಿದ್ದಾರೆ. ಶರಣಾದ ನಂತರ ಅಲ್ಲಿನ ಪೊಲೀಸರು ಚಂದ್ರಪ್ಪನನ್ನು ಬೀರೂರು ಠಾಣೆಗೆ ಕಳಿಸಿದ್ದಾರೆ.

ಬೀರೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಯುವತಿಯ ಶವ ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಿವಮೊಗ್ಗದ ಪತ್ರಕರ್ತ, ಕವಿ ರವಿಕುಮಾರ್‌ ಟೆಲೆಕ್ಸ್‌, “ವಿದ್ಯಾವಂತರಾಗಿರುವ ನಾವು ಜಾತಿ ಸಮಾನತೆ ಬಗ್ಗೆ ಜಾಗೃತಿ ಮುಡಿಸಬೇಕಿದ್ದ ಕಾಲದಲ್ಲಿಯೂ ಜೀವ ಹತ್ಯೆ ಮಾಡುವಂತಹದ್ದು ನಮ್ಮ ಹಿಮ್ಮುಖ ನಡೆಯನ್ನು ತೋರಿಸುತ್ತದೆ. ಜೀವಕ್ಕಿಂತ ಜಾತಿ ಶ್ರೇಷ್ಠ, ಜಾತಿ ಆಧಾರಿತ ಮದುವೆ  ಶ್ರೇಷ್ಠ ಎಂಬ ಭ್ರಮೆಯಲ್ಲಿ ಈ ಸಮಾಜ ಬದುಕುತ್ತಿದೆ. ಅದರಿಂದ ಹೊರಗೆ ಬರಬೇಕು. ಜೀವವೂ ಅಮೂಲ್ಯ ಪ್ರೀತಿಯೂ ಅಮೂಲ್ಯ. ಯಾರನ್ನೂ ಕೊಲ್ಲುವಂತಹ ಹಕ್ಕು ನಮಗ್ಯಾರು ಕೊಟ್ಟಿಲ್ಲ. ಎಲ್ಲರಿಗೂ ಬದುಕಿನ ಹಕ್ಕಿದೆ. ಎಲ್ಲರಿಗೂ ಅವರದ್ದೇ ಆದಂತಹ ಹಕ್ಕುಗಳಿವೆ. ಸಮಾಜ ಅದನ್ನು ಗೌರವಿಸಬೇಕು. ಜೀವ ತೆಗೆಯುವುದೇ ಒಂದು ಮಾರ್ಗವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು ಖಂಡಿಸಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಮಲ್ಲಿಗೆಯವರು, ’ಮರ್ಯಾದಾಗೇಡು ಹತ್ಯೆಗಳು ಪದೇ ಪದೇ ಮರುಕಳಿಸುತ್ತಿರುವುದು ಆಘಾತಕಾರಿ ವಿಷಯ. ಇಂತಹ ಘಟನೆಗಳು ಸರಣಿ ರೂಪದಲ್ಲಿ ನಡೆಯುತ್ತಿರುವಾಗಲೂ ಇದರ ಬಗ್ಗೆ ಯೋಚಿಸಬೇಕು ಎಂದು ಆಡಳಿತಕ್ಕೆ ಏಕೆ ಅನಿಸುತ್ತಿಲ್ಲ ಎಂಬುದು ಬಹಳ ದೊಡ್ಡ ಆಶ್ಚರ್ಯ! ಬಹುಶಃ ಜನರ ಜೀವನ ಮತ್ತು ಇಂತಹ ಮೋಸಗಳಿಂದ ಜನರನ್ನು ಹೊರತರುವುದು ಈಗಿನ ಸರ್ಕಾರಕ್ಕೆ ಆದ್ಯತೆ ಅಲ್ಲದೇ ಇರಬಹುದು. ಮುಖ್ಯಮಂತ್ರಿಗಳ ಇತ್ತೀಚಿನ ಹೇಳಿಕೆಗಳನ್ನು ನೋಡಿದರೆ ಅವರು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುವುದಕ್ಕಿಂತ ಆರ್‌ಎಸ್‌ಎಸ್‌ ಅನ್ನು ಸಮರ್ಥಿಸುವಲ್ಲಿ ಹೆಚ್ಚಿನ ಸಮಯ ವ್ಯಯಿಸುತ್ತಿರುವಂತೆ ಕಾಣುತ್ತಿದೆ. ಇದು ಅಕ್ಷಮ್ಯ. ಆಡಳಿತ ನಡೆಸುವವರು ಸಂವಿಧಾನಬದ್ಧವಾಗಿ ಆಡಳಿತ ನಡೆಸಬೇಕು. ಜಾತಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕೊಲೆಗಳು ಸಂವಿಧಾನಕ್ಕೆ ವಿರುದ್ಧ ಎಂದು ಗೊತ್ತಿದ್ದ ಮೇಲೂ ಇದರ ಬಗ್ಗೆ ಗಂಭೀರವಾದ ಕ್ರಮಗಳನ್ನು ಕೈಗೊಳ್ಳದೇ ಇರುವುದು ಇಂತಹ ಕ್ರೌರ್ಯ ಹೆಚ್ಚಾಗಲು ಕಾರಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದಿರುವ ಅವರು ‘ಸರ್ಕಾರಗಳು ಈ ತಕ್ಷಣದಲ್ಲಿ ಮರ್ಯಾದಾಗೇಡು ಹತ್ಯೆಗಳ ವಿಚಾರವಾಗಿ ಪ್ರತ್ಯೇಕವಾದ ತನಿಖೆಯನ್ನು ನಡೆಸಬೇಕು. ಇಂತಹ ಘಟನೆಗಳ ತನಿಖೆ ನಡೆಸಲು ಒಂದು ವಿಶೇಷ ಸಮಿತಿಯನ್ನು ರಚಿಸಿಬೇಕು. ಈವರೆಗೆ ಇಂತಹ ಘಟನೆ ನಡೆದಿರುವಂತಹ ಎಲ್ಲಾ ಗ್ರಾಮಗಳ ನೊಂದಂತಹ ಕುಟುಂಬದವರೊಂದಿಗೆ ಚರ್ಚಿಸಿ ಅವರ ಹೇಳಿಕೆಗಳನ್ನು ಆಧರಿಸಿ ಸರಿಯಾದ ಮತ್ತು ದೂರಗಾಮಿಯಾದಂತಹ ಪರಿಹಾರೋಪಾಯವನ್ನು ರೂಪಿಸಬೇಕಾಗಿದಡೆ. ನಾಗರೀಕ ಸಮಾಜ ಇಂತಹ ಅಮಾನವೀಯವಾದ ಕೃತ್ಯಗಳ ವಿರುದ್ಧ ಜನರಲ್ಲಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಎಲ್ಲಾ ಸಮುದಾಯಗಳ ಮಠಾಧೀಶರು ಮತ್ತು ಧಾರ್ಮಿಕ ಮುಖಂಡರುಗಳು ಅವರು ಕೇವಲ ಧಾರ್ಮಿಕ ವಿಷಯಗಳಿಗಷ್ಟೆ ತಮ್ಮನ್ನು ತೊಡಗಿಸಿಕೊಳ್ಳುವುದಲ್ಲದೇ ಇಂತಹ ಕೃತ್ಯಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಪ್ರಕರಣದ ಕುರಿತು ಮಾತನಾಡಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚೀಂದ್ರ ಅವರು, ’ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಇಂತಹ ಹತ್ತೆನ್ನರಡು ಘಟನೆಗಳು ನಡೆದಿದ್ದು, ಜೂನ್‌ ತಿಂಗಳೊಂದರಲ್ಲಿಯೇ ನಾಲ್ಕು ಘಟನೆಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂತಹ ಘಟನೆಗಳು ಹೆಚ್ಚುತ್ತಿದ್ದರೂ ಸರ್ಕಾರಗಳು ಇಂತಹ ಕ್ರೌರ್ಯಗಳನ್ನು ತಡೆಗಟ್ಟುವತ್ತ ಗಮನ ಹರಿಸದೇ ಇರುವುದು ಬೇಸರದ ಸಂಗತಿ.

ಈ ದೇಶದ ಕ್ರೂರ, ಕರಾಳ ಜಾತಿವ್ಯವಸ್ಥೆಯ ಬಲೆಯಲ್ಲಿ ಸಿಕ್ಕಿಕೊಂಡ ಸಾವಿರಾರು ತಂದೆ ತಾಯಿಯರು ತಮ್ಮ ಮಗಳು ಅನ್ಯಜಾತೀಯ ಯುವಕನನ್ನು ಪ್ರೀತಿಸಿದರೆಂಬ ಏಕೈಕ ಕಾರಣಕ್ಕೆ ಮಗಳನ್ನೇ ಅಮಾನವೀಯವಾಗಿ ಕೊಂದುಹಾಕಿ ಜೈಲು ಸೇರಿದ್ದಾರೆ. ಮರ್ಯಾದೆ ಉಳಿಸಿಕೊಳ್ಳಲು ಕೊಲೆ ಎಂಬ ಅಹಂಕಾರ, ಗರ್ವಕ್ಕೆ ತಮ್ಮ ಮಗಳ ಜೀವನದೊಂದಿಗೆ ತಮ್ಮ ಜೀವನವನ್ನು ನರಕ ಮಾಡಿಕೊಂಡಿದ್ದಾರೆ. ಇದುವರೆಗೂ ತನ್ನ ಮಗಳನ್ನು ಕೊಂದ ಒಬ್ಬ ಅಪ್ಪ-ಅಮ್ಮನು ನೆಮ್ಮದಿಯಾಗಿಲ್ಲ ಎಂಬುದು ಸತ್ಯ. ಹಾಗಾಗಿ ಇದರ ವಿರುದ್ಧ ಜಾಗೃತಿ ಅತಿ ಹೆಚ್ಚು ಅಗತ್ಯವಾಗಿದೆ.


ಇದನ್ನೂ ಓದಿ: ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial