Homeಕರ್ನಾಟಕನುಡಿನಮನ: ಸಹಾಯ ಮಾಡಿದ್ದನ್ನು ‘ಅಪ್ಪು’ ಹೇಳಿಕೊಳ್ಳುತ್ತಿರಲಿಲ್ಲ

ನುಡಿನಮನ: ಸಹಾಯ ಮಾಡಿದ್ದನ್ನು ‘ಅಪ್ಪು’ ಹೇಳಿಕೊಳ್ಳುತ್ತಿರಲಿಲ್ಲ

ಪುನೀತ್‌ ರಾಜ್‌ಕುಮಾರ್‌ ಅವರೊಂದಿಗಿನ ಒಡನಾಟವನ್ನು ‘ಜಟ್ಟ’, ‘ಮೈತ್ರಿ’, ‘ಅಮರಾವತಿ’ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್‌ ಹಂಚಿಕೊಂಡಿದ್ದಾರೆ.

- Advertisement -
- Advertisement -

“ಪುನೀತ್‌ ರಾಜ್‌ಕುಮಾರ್‌ ಅವರ ದೊಡ್ಡತನವೆಂದರೆ ನೀವು ಅಪರಿಚಿತರಿದ್ದರೂ ಅವರ ಬಳಿ ಎರಡು ನಿಮಿಷ ಮಾತನಾಡಿದರೂ ಆ ಎರಡು ನಿಮಿಷ ನಿಮಗೆ ವಿಶೇಷವೆನಿಸುತ್ತಿತ್ತು” ಎಂದು ಪ್ರತಿಕ್ರಿಯಿಸಿದರು ಮೈತ್ರಿ ಸಿನಿಮಾ ನಿರ್ದೇಶಕ ಬಿ.ಎಂ.ಗಿರಿರಾಜ್‌.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಜಟ್ಟ, ಮೈತ್ರಿ, ಅಮರಾವತಿ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್‌, ಮೈತ್ರಿ ಸಿನಿಮಾ ನಿರ್ದೇಶಿಸುವಾಗ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡರು.

“ಈ ಸಮಯ ನಿಮಗಾಗಿ ಮೀಸಲಾಗಿದೆ ಎಂಬುದನ್ನು ಪುನೀತ್‌ ರಾಜ್‌ಕುಮಾರ್‌ ಅವರು ಮನದಟ್ಟು ಮಾಡಿ ಮಾತನಾಡುತ್ತಿದ್ದರು. ನಾನು ಅವರ ಮನೆಗೆ ಮೈತ್ರಿ ಸಿನಿಮಾದ ಕತೆ ಹೇಳಲು ಹೋದಾಗ ನಾನು ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆಗ ನನ್ನ ಯಾವ ಸಿನಿಮಾವೂ ಬಿಡುಗಡೆಯಾಗಿರಲಿಲ್ಲ. ಅವರೇ ಬಂದು ಕರೆದುಕೊಂಡು ಹೋಗಿ ಬಹಳ ಪ್ರೀತಿಯಿಂದ ಮಾತನಾಡಿದರು. ಅವರು ಯಾವುದಾದರೂ ವಿಷಯವನ್ನು ತಿರಸ್ಕರಿಸಿದರೂ ನಮಗೆ ಯಾರಿಗೂ ನೋವಾಗದಂತೆ ತಿರಸ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸುತ್ತಿದ್ದರು. ಅವರು ಹೇಳಿದ್ದನ್ನು ಅಲ್ಲಗಳೆಯಲು ಸಾಧ್ಯವಾಗದಂತೆ ಮನದಟ್ಟು ಮಾಡುತ್ತಿದ್ದರು” ಎಂದು ಗಿರಿರಾಜ್ ಸ್ಮರಿಸಿದರು.

ಮುಂದುವರಿದು, “ಮೈತ್ರಿ ಸಿನಿಮಾ ಹೆಸರಘಟ್ಟದಲ್ಲಿ ಶೂಟ್‌ ಆಗುತ್ತಿತ್ತು. ನೂರೈವತ್ತು ಮಕ್ಕಳು ಬಂದಿದ್ದರು. ಸಂಯೋಜಕರು ಮಕ್ಕಳನ್ನು ಎಲ್ಲಿಂದಲೋ ಕರೆತಂದಿದ್ದರು. ಪುನೀತ್‌ ರಾಜ್‌ ಕುಮಾರ್‌ ಅವರು ಮಕ್ಕಳನ್ನು ನೋಡಿ, ಅವರು ಬರಿಗಾಲಲ್ಲಿ ಓಡಾಡುತ್ತಿದ್ದಾರೆ ಎಂದು ಎಲ್ಲ ಮಕ್ಕಳಿಗೂ ಫುಟ್‌ವೇರ್‌ಗಳನ್ನು ತರಿಸಿಕೊಟ್ಟರು. ಅವರು ಮಾಡಿರುವ ಮೈತ್ರಿಯಂತಹ ಸಿನಿಮಾ- ಸ್ಟಾರ್‌ ನಟರು ರಿಸ್ಕ್‌ ತೆಗೆದುಕೊಳ್ಳುವಂತಹದ್ದು. ಹೊಸತನ ಬರಬೇಕೆಂಬುದು ಅವರ ಉದ್ದೇಶವಾಗಿತ್ತು. ಕೊನೆಗೆ ಅವರೇ ಪ್ರೊಡಕ್ಷನ್‌ ಹೌಸ್‌ ತೆರೆದರು. ಹೊಸ ಬರಹಗಾರರಿಗೆ ಒತ್ತು ನೀಡುತ್ತಿದ್ದರು. ಸ್ಟಾರ್‌ ನಟರಿಗಿಂತ ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದರು. ಜಂಟಲ್‌ ಮ್ಯಾನ್‌ ಎಂಬುದಕ್ಕೆ ಮೂರ್ತರೂಪ ಪುನೀತ್ ರಾಜ್‌ಕುಮಾರ್‌” ಎಂದು ಬಣ್ಣಿಸಿದರು.

“ಡಾ.ರಾಜ್‌ ಕುಮಾರ್‌ ಅವರು ನಿಧನರಾದಾಗ ಮನೆಯ ಹಿರಿಯ ಮಗ ನಮ್ಮನ್ನು ಅಗಲಿದ ಅನುಭವವಾಯಿತು. ನಮ್ಮ ಮನೆಯಲ್ಲಿ ಮಗು ಇಲ್ಲದಿದ್ದಾಗ ಸೃಷ್ಟಿಯಾಗುವ ನಿರ್ವಾತವನ್ನು ಅಪ್ಪು ನಿಧನ ತಂದಿದೆ. ಯಾರನ್ನೂ ಪುನೀತ್‌ ಅವರು ಕೀಳಾಗಿ ನೋಡುತ್ತಿರಲಿಲ್ಲ. ಅನಾಥಾಶ್ರಮಕ್ಕೆ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದದ್ದು ನಮಗೆಲ್ಲ ತಿಳಿದೇ ಇದೆ. ಮಾಡಿದ ಸಹಾಯವನ್ನು ಅಪ್ಪು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರಲಿಲ್ಲ.”

ಇದನ್ನೂ ಓದಿರಿ: ಹೊಸ ಪ್ರತಿಭೆಗಳ ಮಹಾನ್‌ ಪ್ರೋತ್ಸಾಹಕ ಪುನೀತ್‌ ರಾಜ್‌ಕುಮಾರ್

“ಮರಕ್ಕಿಂತ ಮರ ದೊಡ್ಡದು ಎಂಬ ರೀತಿ ದೊಡ್ಡ ದೊಡ್ಡ ಸ್ಟಾರ್‌ಗಳು ಮುಂದೆ ಬರಬಹುದು. ಒಂದು ಸಿನಿಮಾ ಸಾಧನೆಯನ್ನು ಮತ್ತೊಂದು ಸಿನಿಮಾ ಮುರಿಯಬಹುದು. ಆದರೆ ಅಷ್ಟೊಂದು ಯಶಸ್ಸು, ಸಾಧನೆ ಮಾಡಿದರೂ ಪ್ರೀತಿ ವಿಶ್ವಾಸದಲ್ಲೇ ಮನುಷ್ಯರನ್ನು ಗೆಲ್ಲುವುದಿದೆಯಲ್ಲ, ಅದು ಅತ್ಯಂತ ಅಪರೂಪದ ಗುಣ. ಅಂತಹ ಅಪರೂಪದ ಗುಣ ಪುನೀತ್‌ ಅವರಿಗಿತ್ತು. ಒಬ್ಬ ಸ್ಟಾರ್‌ ನಟ ನಿಧನರಾದರು ಎಂಬುದಕ್ಕಿಂತ, ಅಂತಹ ಒಳ್ಳೆಯ ಮನುಷ್ಯ ನಿಧನರಾದರು ಎಂಬುದು ನಮ್ಮನ್ನು ಸದಾ ಕಾಡುತ್ತದೆ” ಎನ್ನುತ್ತಾರೆ ಗಿರಿರಾಜ್‌.

ಮಲಯಾಳಂ ಚಿತ್ರರಂಗದ ಮೇರು ನಟ ಮೋಹನ್‌ ಲಾಲ್‌ ಸಂತಾಪ ಸೂಚಿಸಿದ್ದಾರೆ. ಪುನೀತ್‌ ಅವರ ಮೈತ್ರಿ ಸಿನಿಮಾದಲ್ಲಿ ಮೋಹನ್‌ ಲಾಲ್‌ ಅವರೂ ಅಭಿನಯಿಸಿದ್ದರು.

“ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ಸುದ್ದಿ ಆಘಾತ ತಂದಿದೆ. ಈ ಸುದ್ದಿಯನ್ನು ನಂಬಲು ಆಗುತ್ತಿಲ್ಲ. ನನ್ನ ಹಿರಿಯ ಸಹೋದರನನ್ನು ಕಳೆದುಕೊಂಡ ಅನುಭವವಾಗುತ್ತಿದೆ. ಈ ದುಃಖದಿಂದ ಪುನೀತ್‌ ಕುಟುಂಬ ಹೊರಬರಲಿ ಎಂದು ಪ್ರಾರ್ಥಿಸುವೆ” ಎಂದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸಂತಾಪ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಸಂತಾಪ ಸೂಚಿಸಿದ್ದು, “ಕನ್ನಡದ ಚಿತ್ರಂಗದ ದಂತಕತೆ ಡಾ.ರಾಜ್‌ಕುಮಾರ್‌ ಅವರ ಪುತ್ರ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರ ಹಠಾತ್‌ ನಿರ್ಗಮನವನ್ನು ಕೇಳಿ ಆಘಾತಕ್ಕೊಳಗಾಗಿದ್ದೇನೆ” ಎಂದಿದ್ದಾರೆ.

“ನಮ್ಮ ಮತ್ತು ಅವರ ಕುಟುಂಬದೊಂದಿಗೆ ಬಹಳ ವರ್ಷಗಳಿಂದ ಒಡನಾಟವಿತ್ತು. ಪುನೀತ್‌ ಅವರ ನಿಧನದಿಂದಾಗಿ ವೈಯಕ್ತಿಕ ನಷ್ಟವೂ ಆಗಿದೆ. ತಾರಾಪಟ್ಟದ ಹೊರತಾಗಿಯೂ ಅವರು ಮಹಾನ್‌ ವಿನಯವಂತರಾಗಿದ್ದರು. ರಾಜಕೀಯ ನಾಯಕ ಕಲೈಂಗರ್ ಅವರ ನಿಧನದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ನಮ್ಮ ಗೋಪಾಲಪುರಂ ನಿವಾಸಕ್ಕೆ ಭೇಟಿ ನೀಡಿದ್ದ ಪುನೀತ್ ಅವರ ವರ್ತನೆ ನನ್ನ ಹೃದಯದಲ್ಲಿ ಉಳಿದಿದೆ. ಕನ್ನಡ ಸಿನಿ ಉದ್ಯಮವು ತನ್ನ ಸಮಕಾಲೀನ ಶ್ರೇಷ್ಠ ಐಕಾನ್‌ಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಈ ತುಂಬಲಾರದ ನಷ್ಟದಲ್ಲಿ, ದುಃಖದಲ್ಲಿರುವ ಪುನೀತ್ ಅವರ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ನನ್ನ ಹೃದಯಪೂರ್ವಕ ಸಂತಾಪವನ್ನು ಅರ್ಪಿಸುತ್ತೇನೆ” ಎಂದು ಸ್ಟಾಲಿನ್‌ ತಿಳಿಸಿದ್ದಾರೆ.


ಇದನ್ನೂ ಓದಿರಿ: ಮತ್ತೆ ಮತ್ತೆ ಗುನುಗುವಂತೆ ಮಾಡುವ ಅಪ್ಪು ಕಂಠಸಿರಿಯಲ್ಲಿ ಮೂಡಿದ ಹಾಡುಗಳಿವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...