ಇತ್ತೀಚೆಗೆ ಆರ್ಥಿಕ ನಷ್ಟ, ಉದ್ಯೋಗವಿಲ್ಲದೆ ಯುವಜನತೆ ಅಲೆದಾಡುತ್ತಿದ್ದಾರೆ. ಎಲ್ಲ ಕಡೆ ಉದ್ಯೋಗದಿಂದ ನೌಕರರನ್ನು ತೆಗೆದು ಹಾಕಲಾಗುತ್ತಿದೆ. ಉದ್ಯಮದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಸಬೂಬು ಹೇಳಿ ಉದ್ಯೋಗಿಗಳನ್ನು ಕಂಪನಿಯಿಂದ ತೆಗೆದು ಹಾಕಲಾಗುತ್ತಿದೆ. ನೌಕರಿಯನ್ನೇ ನಂಬಿ ಬದುಕುತ್ತಿರುವ ಉದ್ಯೋಗಿಗಳು ಪರದಾಡುವಂತಾಗಿದೆ. ಅದರಲ್ಲೂ ತೆಲಂಗಾಣದಲ್ಲಿ ಮಹಿಳಾ ಟೆಕ್ಕಿಯೊಬ್ಬರು ಸೂಸೈಡ್ ಮಾಡಿಕೊಂಡಿದ್ದಾರೆ.
ತೆಲಂಗಾಣ ರಾಜಧಾನಿ ಹೈದರಾಬಾದ್ ಮಹಾನಗರದಲ್ಲಿ ಮಹಿಳಾ ಟೆಕ್ಕಿಯೊಬ್ಬರು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿಯನ್ನು 24 ವರ್ಷದ ಹರಿಣಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಭಾರತ ಮತ್ತು ವಿಶ್ವಾಸ ಕಳೆದುಕೊಂಡ ಆರ್ಥಿಕತೆ : ಕೌಶಿಕ್ ಬಸು
ನಗರದ ರಾಯದುರ್ಗಂ ಪ್ರದೇಶದಲ್ಲಿ ಹಾಸ್ಟೆಲ್ ನ ಕೊಠಡಿಯಲ್ಲಿ ಹರಿಣಿ ನೇಣಿಗೆ ಶರಣಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಾಫ್ಟ್‌ವೇರ್ ಕಂಪನಿಯಲ್ಲಿ ಹರಿಣಿ ಕೆಲಸ ಮಾಡುತ್ತಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಫ್ಟ್‌ವೇರ್ ಕಂಪನಿ ಉದ್ಯೋಗ ಕಡಿತ, ನೌಕರರನ್ನು ತೆಗೆದು ಹಾಕಲು ಮುಂದಾಗಿತ್ತು. ಹೀಗಾಗಿ ಕಂಪನಿಯ ಆಡಳಿತ ಮಂಡಳಿ ಕೆಲಸದಿಂದ ತೆಗೆಯುವವರ ಪಟ್ಟಿಯೊಂದನ್ನು ಸಿದ್ದಪಡಿಸಿತ್ತು. ಆ ಪಟ್ಟಿಯಲ್ಲಿ ಹರಿಣಿ ಹೆಸರಿತ್ತು ಎಂದು ತಿಳಿದು ಬಂದಿದೆ.
ಕೆಲಸದಿಂದ ಕೈಬಿಡುವವರ ಪಟ್ಟಿಯಲ್ಲಿ ಹರಿಣಿ ಹೆಸರಿದ್ದರಿಂದ ಈ ಬಗ್ಗೆ ತನ್ನ ಅಣ್ಣನ ಜತೆ ಚರ್ಚೆಯನ್ನೂ ಮಾಡಿದ್ದಳು. ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ತಿಳಿದ ನಂತರ ಆತಂಕಕ್ಕೆ ಒಳಗಾಗಿದ್ದ ಹರಿಣಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


