ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಫೆಡೆರಲ್ ಫ್ರಂಟ್ ಸ್ಥಾಪಿಸಲು ಕಳೆದ ವರ್ಷದಿಂದ ಯತ್ನಿಸುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಈಗ ಮತ್ತೆ ಫೀಲ್ಡಿಗೆ ಇಳಿದಿದ್ದಾರೆ. ಕಾಂಗ್ರೆಸ್‍ನ ಬಾಹ್ಯ ಬೆಂಬಲದೊಂದಿಗೆ ಫೆಡೆರಲ್ ಫ್ರಂಟ್ ಸರ್ಕಾರ ಸ್ಥಾಪಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ.

ಲೋಕಸಭಾ ಚುನಾವಣಾ ಫಲಿತಾಂಶ ಹತ್ತಿರವಾಗುತ್ತಿದ್ದಂತೆ ಕೇಂದ್ರದಲ್ಲಿ ಸರ್ಕಾರ ರಚಿಸಲು ತಂತ್ರ, ಮಾತುಕತೆಗಳು ತಣ್ಣಗೆ ಶುರುವಾಗಿವೆ. ಅದರಲ್ಲಿ ಈಗ ಚುರುಕಾಗಿರುವುದು ಉದ್ದೇಶಿತ ಫೆಡೆರಲ್ ಫ್ರಂಟ್. ಮಂಗಳವಾರವಷ್ಟೇ ಈ ಕುರಿತು ಮಾತಾಡಿರುವ ಟಿಆರ್‍ಎಸ್ ಪಕ್ಷದ ವಕ್ತಾರ ಅಬಿಲ್ ರಸೂಲ್ ಖಾನ್ ಐಎಎನ್‍ಎಸ್ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ.
ಉದ್ದೇಶಿತ ಫೆಡೆರಲ್ ಫ್ರಂಟ್ ಖಚಿತವಾಗಿ ಅಧಿಕಾರಕ್ಕೆ ಬರಲಿದೆ ಎಂದಿರುವ ಅವರು, ಒಂದು ವೇಳೆ ಬಹುಮತಕ್ಕೆ ತೊಂದರೆ ಆದರೆ, ಕಾಂಗ್ರೆಸ್‍ನ ಬಾಹ್ಯ ಬೆಂಬಲ ಕೊಡಬಹುದು ಎಂದು ಹೇಳುವ ಮೂಲಕ ಟಿಆರ್‍ಎಸ್ ನಾಯಕ ಚಂದ್ರಶೇಖರ್‍ರಾವ್ ನಡೆಸುತ್ತಿರುವ ಮಾತುಕತೆಗಳ ಹಿಂದಿನ ಉದ್ದೇಶವನ್ನು ತೆರೆದಿಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚಂದ್ರಶೇಖರ್‍ರಾವ್ ಫೆಡೆರಲ್ ಕುರಿತಂತೆ ಡಿಎಂಕೆ ನಾಯಕ ಸ್ಟಾಲಿನ್ ಮತ್ತು ಕೇರಳದ ಕಮ್ಯುನಿಸ್ಟ್ ನಾಯಕ, ಮುಖ್ಯಮಂತ್ರಿ ಪಣರಾಯಿ ವಿಜಯನ್ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈಗವರು ಬಿಎಸ್‍ಪಿಯ ಮಾಯಾವತಿ, ಎಸ್‍ಪಿಯ ಅಖಿಲೇಶ್ ಸಿಂಗ್ ಯಾದವ್, ತೃಣಮೂಲ ಕಾಂಗ್ರೆಸ್‍ನ ಮಮತಾ ಬ್ಯಾನರ್ಜಿಯವರ ಜೊತೆ ಸಂಪರ್ಕದಲ್ಲಿದ್ದಾರೆ. ಆಂಧ್ರದ ವೈಎಸ್‍ಆರ್ ಕಾಂಗ್ರೆಸ್‍ನ ಜಗನ್‍ರೆಡ್ಡಿ ಈ ಹಿಂದೆಯೇ ಫೆಡೆರಲ್ ಫ್ರಂಟ್ ವಿಚಾರಕ್ಕೆ ಸಮ್ಮತಿ ನೀಡಿದ್ದರು.
ಈ ಎಲ್ಲ ಪಕ್ಷಗಳ ಜೊತೆಗೆ ಇನ್ನು ಹಲವಾರು ಸಣ್ಣಪುಟ್ಟ ಪಕ್ಷಗಳು ಸೇರಿದರೆ ಫೆಡೆರಲ್ ಫ್ರಂಟ್ ಒಂದು ಗಮನಾರ್ಹ ಮಟ್ಟವನ್ನು ತಲುಪಲಿದ್ದು, ಕಾಂಗ್ರೆಸ್ ಬೆಂಬಲ ಸಿಕ್ಕರೆ ಸರ್ಕಾರ ರಚಿಸುವ ವಿಶ್ವಾಸವನ್ನು ಫ್ರಂಟ್ ಹೊಂದಿದೆ ಎಂದು ಟಿಆರ್‍ಎಸ್ ವಕ್ತಾರ ರಸೂಲ್ ಖಾನ್ ತಿಳಿಸಿದ್ದಾರೆ.
ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡುವ ಅಥವಾ ಬೆಂಬಲ ಪಡೆಯುವ ಪ್ರಮೇಯವೇ ಇಲ್ಲ ಎಂಬುದನ್ನೂ ಅವರು ಸ್ಪಷಟ್ಪಡಿಸಿದ್ದಾರೆ. ಎನ್‍ಡಿಎ ಮತ್ತು ಯುಪಿಎ ಎರಡಕ್ಕೂ ಬಹುಮತದ ಕೊರತೆಯಾದರೆ ಫೆಡೆರಲ್ ಫ್ರಂಟ್‍ಗೆ ಬಂಪರ್ ಹೊಡೆಯಲಿದೆ.

ಆದರೆ, ಮೇ 19ರ ಸಂಜೆ ಬರಲಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಸಾರದಂತಹ ರಾಜಕೀಯ ಚಟುವಟಿಕೆ ಇನ್ನಷ್ಟು ಗರಿಗೆದರಲಿದೆ.


