Homeಮುಖಪುಟಗುಲ್ಜಾರ್ ಅವರ ಪದ್ಯಗಳು

ಗುಲ್ಜಾರ್ ಅವರ ಪದ್ಯಗಳು

- Advertisement -
- Advertisement -

1.

ಯಾವ ಹೊಲದಿಂದ ರೈತನಿಗೆ ರೊಟ್ಟಿಯ ಅದೃಷ್ಟವಿಲ್ಲವೋ
ಆ ಹೊಲದ ಗೋಧಿಯ ತೆನೆಗಳನ್ನು
ಹುಡುಕಿ ಹುಡುಕಿ ಸುಟ್ಟುಬಿಡಿ

ಅಲ್ಲಮ ಇಕ್ಬಾಲ್

ಯಾರಾದರೂ ಹೋಗಿ ’ಅಲ್ಲಮ’ನಿಗೆ ಸುದ್ದಿ ಮುಟ್ಟಿಸಿ
ಯಾವ ಹೊಲದಿಂದ ರೈತನ ಮನೆಯ
ಹೊಟ್ಟೆ ತುಂಬಲಿಲ್ಲವೋ
ಯಾರೂ ಆ ಹೊಲಕ್ಕೆ ಹೋಗಿ ಬೆಂಕಿ ಹಚ್ಚಲಿಲ್ಲ
ಯಾರೂ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ
ಯಾವ ಕ್ರಾಂತಿಯ ಘೋಷಣೆಗಳೂ ಮೊಳಗಲಿಲ್ಲ.

ಶವಯಾತ್ರೆಗಳು ಹೊರಟಿವೆ
ಹಳ್ಳಿಗಳ ಮನೆಮನೆಯಿಂದ
ಪ್ರತಿ ಮೆರವಣಿಗೆಯೂ ಅನ್ನದಾತರದು
ಸಾಲದ ಹಂಗಿಗೆ ಧಿಕ್ಕಾರ ಹೇಳಿ ಅಮರರಾದ ಹುತಾತ್ಮರದು.

ಅಲ್ಲಮ – ಪ್ರಸಿದ್ಧ ಉರ್ದು ಕವಿ, ಅಲ್ಲಮ ಮೊಹಮ್ಮದ್ ಇಕ್ಬಾಲ್

***

2.

ಯಾರು ಈ ಮೂಕ?
ಎಷ್ಟೊಂದು ಕೆಮ್ಮುತ್ತಾನೆ?
ಪ್ರತೀ ಬಾರಿ ಕೆಮ್ಮಿದಾಗಲೂ
ಸಹಸ್ರಾರು ಶಬ್ದಗಳು.
ಬೇಸತ್ತು ಹೋಗಿದ್ದಾರೆ
ಊರು ಸ್ವಚ್ಛ ಮಾಡುವ
ಗುತ್ತಿಗೆ ತೆಗೆದುಕೊಂಡವರು.

ಚೌಕಿನಲ್ಲಿ ಜನ ಮಾತಾಡುತ್ತಿದ್ದರು
ಅವನು ಕವಿಯಂತೆ,

ಯಾರೋ ಪ್ರಶ್ನೆ ಕೇಳಿ
ಉತ್ತರ ಕೊಡುವುದಕ್ಕಿಂತ ಮುಂಚೆ
ಕತ್ತರಿಸಿಬಿಟ್ಟಿದ್ದಾರೆ ಅವನ
ನಾಲಿಗೆ.

***

3.

ಭಗವಂತ- 1

ನಾನು,
ಗೋಡೆಯ ಈ ಬದಿಯಲ್ಲಿದ್ದೇನೆ.
ಇಲ್ಲಿ ಬಿಸಿಲು ಬೀಳುತ್ತದೆ
ಹಸಿರು ಹಾಡುತ್ತದೆ.
ಎಲೆಗಳ ಮೇಲೆ
ಇಬ್ಬನಿ ಸವಾರಿ ಮಾಡುತ್ತದೆ,
ಸೋಮಾರಿ ಮಂಜು
ಠಿಕಾಣಿ ಹಾಕಿದರೆ
ಟೊಂಗೆಯ ಮೇಲೆ ಕುಳಿತು
ಗಂಟೆಗಟ್ಟಲೆ ತೂಕಡಿಸುತ್ತದೆ.

ಮಳೆ
ಹರೆಯದ ಹುಡುಗಿಯಂತೆ
ಕುಣಿದಾಡುತ್ತ ಬಂದು
ಕೈಚಾಚುತ್ತಿದ್ದಂತೆಯೇ
ಜಾರಿ ಹೋಗುತ್ತದೆ.
ಬಂದ ಪ್ರತಿ ಮಾಸವೂ
ಮೋಸ ಮಾಡದೇ
ಕಚಗುಳಿಯಿಡುತ್ತದೆ.

ಆದರೆ
ಈ ಹಸೀ ಗೋಡೆಯ
ಆ ಬದಿಯಲ್ಲಿ
ಯಾಕಿಷ್ಟು ನೀರವ ಮೌನ?
ಯಾರವರು?
ಸದ್ದು ಮಾಡದೇ
ಸುಮ್ಮನೇ ಕುಳಿತು
ಗೋಡೆಗೆ ಕಿವಿ ಹಚ್ಚಿರುವವರು?

***

4.

ಭಗವಂತ- 2

ಇಡೀ ಆಕಾಶ ಸುತ್ತಿ
ನೀನು ರಚಿಸಿರುವ ವ್ಯೂಹವನ್ನೊಮ್ಮೆ
ಜಾಗರೂಕತೆಯಿಂದ ಗಮನಿಸಿದೆ.

ಕಪ್ಪು ಮನೆಯಲ್ಲಿ
ಸೂರ್ಯನನ್ನು ಇಟ್ಟು
ನನ್ನ ಸೈನ್ಯವನ್ನು ಕಂಗೆಡಿಸಬೇಕೆಂದು
ಲೆಕ್ಕ ಹಾಕಿದ್ದಿಯಲ್ಲವೆ?
ನಾನು, ಒಂದು ಸಣ್ಣ ದೀಪ ಹಚ್ಚಿ
ನನ್ನ ದಾರಿ ಹುಡುಕಿಕೊಂಡೆ.

ನೀನು, ಸಮುದ್ರವನ್ನೆತ್ತಿ
ನನ್ನ ಮುಖದ ಮೇಲೆ ಅಪ್ಪಳಿಸಿದೆ.
ನಾನು ನಂಬಿಕೆಯ
ದೋಣಿಯನ್ನೇರಿ ಪಾರಾಗಿಬಿಟ್ಟೆ.

ನೀನು, ಕಾಲವನ್ನು
ಆಟದ ಅಂಗಳಕ್ಕಿಳಿಸಿ
ತೋಳು ಮೇಲಿರಿಸಿದೆ.
ನಾನು ಕಾಲವನ್ನು
ತುಂಡು ತುಂಡು ಮಾಡಿ
ಕ್ಷಣಗಳಲ್ಲಿ ಬದುಕುವುದನ್ನು
ರೂಢಿ ಮಾಡಿಕೊಂಡೆ.

ಕೆಲ ಚಮತ್ಕಾರಗಳನ್ನು ಮಾಡಿ
ನನ್ನ ಅಭಿಮಾನವನ್ನು ಕೊಲ್ಲಲು
ನೀನು ಶತಪ್ರಯತ್ನ ಮಾಡಿದೆ.
ನನ್ನ ಒಬ್ಬ ಸಣ್ಣ ಸೈನಿಕ ಮುಂದೆ ಬಂದು
ನಿನ್ನ ಅಸ್ತಿತ್ವಕ್ಕೇ ಸವಾಲು ಹಾಕಿದ.

ಸಾವನ್ನು ಎದುರು ನಿಲ್ಲಿಸಿ
ನನ್ನ ಆಟ ಮುಗಿಸಲು
ನೀನು ಹೊಂಚು ಹಾಕಿದೆ.
ದೇಹವನ್ನು ಪಣಕ್ಕಿಟ್ಟು
ನಾನು ಆತ್ಮ ಉಳಿಸಿಕೊಂಡೆ.

ಇಡೀ ಆಕಾಶ ಸುತ್ತಿ
ಮತ್ತೊಂದಿಷ್ಟು ಸಂಚು ಕಲಿತು ಬಾ
ನನ್ನ ಸೋಲಿಸುವುದು
ಅಷ್ಟು ಸುಲಭವಲ್ಲ ಭಗವಂತ.

***

5.

ಭಗವಂತ- 3

ಕಳೆದ ಬಾರಿ
ಭೆಟ್ಟಿಯಾದಾಗ ನೀನು
ಒಂದು ಭಯಂಕರ ಯುದ್ಧದಲ್ಲಿ
ಮಗ್ನನಾಗಿದ್ದೆ.
ಹೊಸ ಹೊಸ ಆಯುಧಗಳ
ಹೊಳಪಿಗೆ ತುಂಬ ಖುಷಿಯಾಗಿದ್ದೆ.
ಅದಕ್ಕೂ ಮೊದಲು
ಹಸಿವಿನಿಂದ ಸತ್ತ ಮಕ್ಕಳ
ಹೆಣಗಳನ್ನ ಹೂಳುವಾಗ
ನಿನ್ನ ನೋಡಿದ್ದೆ.
ಮತ್ತೊಮ್ಮೆ
ಭೂಮಿಯನ್ನು ನಡುಗಿಸಿ
ಇಡೀ ಊರಿಗೆ ಊರನ್ನೇ
ನೆಲಸಮ ಮಾಡಿ
ಇನ್ನೊಂದು ಕಡೆ
ಕೈ ಝಾಡಿಸಿಕೊಂಡು ಹೋಗುವಾಗ
ನಿನ್ನ ನೋಡಿದ್ದೆ.

ಸುತ್ತಮುತ್ತಲಿನ ನಕ್ಷತ್ರಗಳ ಮೇಲೆ
ಧೂಳು ಹಾರಿಸುತ್ತಾ
ಆಕಾಶದಿಂದ ಇಳಿದು ಬರುವಾಗಲೂ
ನಿನ್ನ ನೋಡಿದ್ದೆ.
ಬೇರೆ ಬೇರೆ ವಿಶ್ವಗಳ
ಆಕಾಶಗಳನ್ನು ಹಾಳುಗೆಡವಿ
ಉನ್ಮಾದದಿಂದ ನೀನು
ನೆಲಕ್ಕಿಳಿದು ಬರುತ್ತಿದ್ದರೆ
ಭೂಮಿ ನಡುಗುತ್ತದೆ
ಸಮುದ್ರ ಉಕ್ಕುತ್ತದೆ
ಆಗ ತುಂಬ ಇರ್ರಾಟಿಕ್ ಆಗಿ ಕಾಣಿಸುತ್ತಿ.

ನಿನ್ನ ಊರಿನಲ್ಲಿ ಎಂತೆಂಥವರ
ಸಹವಾಸದಲ್ಲಿರುತ್ತೀಯೋ ಏನೋ
ನನಗಂತೂ ಒಂದೂ ಗೊತ್ತಾಗುತ್ತಿಲ್ಲ.

***

6.

ಈಗ ನನಗೆ ರೂಢಿಯಾಗಿಬಿಟ್ಟಿದೆ.
ಪ್ರತೀಬಾರಿ ರಸ್ತೆ ದಾಟುವಾಗಲೂ
ಒಮ್ಮೆ ಆಕಾಶದತ್ತ ತಲೆ ಎತ್ತಿ ನೋಡಿ
ಖಾತ್ರಿ ಮಾಡಿಕೊಳ್ಳುತ್ತೇನೆ.
ಉರಿಯುತ್ತ, ಆರುತ್ತ
ಮಾರ್ಸ್, ಮರ್ಕ್ಯುರಿ, ವೀನಸ್ ಮುಂತಾದ
ಸೊಕ್ಕಿನ ಶ್ರೀಮಂತರು, ಆಕಾಶದಲ್ಲಿ
ಡೌಲಿನಿಂದ ಮೆರೆದಾಡುತ್ತಿರುತ್ತಾರೆ.

ಕಳೆದ ವಾರವಷ್ಟೇ,
ಬೇಕಾಬಿಟ್ಟಿಯಾಗಿ ಹಾರಾಡುತ್ತಿದ
ನಮ್ಮದೇ ಊರಿನ
ಉಡಾಳ ಕಾಮೆಟ್ ’ಲೇವಿ ಶೂಮಾಕರ್’
ಜ್ಯುಪಿಟರ್‌ನ ಎದೆಗೆ
ಬಲವಾಗಿ ಢಿಕ್ಕಿ ಹೊಡೆದಿದ್ದ.

ಬೆಂಕಿಯ ತುಣುಕುಗಳು
ಸಾವಿರಾರು ಮೈಲಿ ಚಿಮ್ಮಿ ಹೋಗಿದ್ದವು.
ನೀವೇ ಹೇಳಿ
ಜ್ಯುಪಿಟರ್‌ನ ಗಾಯ ಮಾಯಲು
ಎಷ್ಟು ಶತಮಾನಗಳು ಬೇಕಾಗಬಹುದು.

***

7.

ಒಂದಿಷ್ಟು ತಲೆ ಬೋಳಿಸಿದ ದನಿಗಳು
ಮೇಲಿಂದ ಮೇಲೆ
ದೇವರಮನೆಯ ಹಿತ್ತಲಿಗೆ ಬಂದು
ಇಟ್ಟಿಗೆಯ ಗೋಡೆಗೆ ಒರಗಿ
ಕಲ್ಲಾಗಿರುವ ಕಿವಿಗಳ ಮೇಲೆ,
ತಮ್ಮ ತುಟಿಗಳನ್ನಿಟ್ಟು
ಮನುಷ್ಯ ಜಾತಿಯ ಪೀಳಿಗೆಯನ್ನು
ತಮ್ಮ ಮಡಿಲಲ್ಲಿ ಹಾಕಿ
ನಿಶ್ಚಿಂತೆಯಿಂದ ಹೋಗಿ ಗೋರಿಯಲ್ಲಿ ಅಡ್ಡಾಗಿರುವ
ಒಬ್ಬ ಮುದುಕ ದೇವರಿಗೆ ಸಂತಾಪ ಹೇಳುತ್ತವೆ!!

***

8.

ಈ ದೃಶ್ಯವನ್ನು ಮೊದಲೂ ನೋಡಿದ್ದೆ.
ಬಂದೂಕನ್ನು ಎದೆಗೆ ನಾಟಿಸಿಕೊಂಡ
ಸೈನಿಕರ ದಂಡು
ಮತ್ತು ಎದುರಿಗೆ
ಎದೆ ಸೆಟೆಸಿ, ಘೋಷಣೆ ಕೂಗುತ್ತಿದ್ದ
ಜನಸಮೂಹ.
ಬಹುಶಃ ಅದು 1919ರ ವರ್ಷ
ಅಮೃತಸರ್‌ನ ಜಲಿಯನ್‌ವಾಲಾ ಬಾಗ್.

ಅಥವಾ 1936ರ
ಲಾಹೋರ್‌ನ ಒಂದು ಬೀದಿಯ ದೃಶ್ಯ,
ಸ್ವತಂತ್ರ ಹೋರಾಟದ ವರ್ಷಾಚರಣೆಯ
ಮಾರನೆಯ ರಾತ್ರಿ.

ಈ ಚಿತ್ರಗಳಲ್ಲಿ
ಎಷ್ಟು ಸಾಮ್ಯತೆ ಇದೆ ನೋಡಿ
ಇದರಲ್ಲಿನ ಜನರು,
ಅವರ ಮುಖದಲ್ಲಿನ ನೋವು,
ಎದೆಯಲ್ಲಿನ ಸಿಟ್ಟು,
ಆ ಹರೆಯ, ಆ ಭಾವನೆಗಳು
ಯಾವದೂ ನನಗೆ
ಅನಿಸುವುದಿಲ್ಲ ಅಪರಿಚಿತ.

ಅದು 1942ರ ವರ್ಷ ಇರಬಹುದು
ಅಲಹಾಬಾದ್‌ನ
ಒಂದು ಚೌಕದ ನಟ್ಟನಡುವೆ,
ಜನಸಾಗರವನ್ನು ಸುತ್ತುವರಿದಿದ್ದ
ಬ್ರಿಟಿಷ್ ಸೈನಿಕರು
ಅವರ ಕೈಯಲ್ಲಿ ಮತ್ತೆ ಅದೇ ಬಂದೂಕು
ಎದುರಿಗೆ ಮತ್ತೆ ಅದೇ ಜನ
ಅದೇ ಘೋಷಣೆಗಳು
ಅದೇ ಬಿಗಿದ ಮುಷ್ಟಿಗಳು,
ಅವತ್ತೂ ಜನರ ಕೈಯಲ್ಲಿ ಅದೇ ಧ್ವಜ.

ಇಂದೂ ಕೂಡ ಬಂದೂಕು
ಬೆಂಕಿ ಉಗುಳಿತು, ಜನ ಹಾಗೆ ಸತ್ತರು
ಮತ್ತೆ ಅದೇ ರಕ್ತ ಬೀದಿಯ ಮೇಲೆಲ್ಲ.
ಹೌದು, ಅದೇ ಚೌಕದ ನಟ್ಟನಡುವೆ
ಕಬ್ಬಿಣ, ಕಾಂಕ್ರೀಟುಗಳ ಕಾಡಿನಲ್ಲಿ.

ಮೊದಲೇನೋ ಇಲ್ಲೊಂದು
ಬ್ರಿಟಿಷ್ ಅಧಿಕಾರಿಯ ಮೂರ್ತಿ ಇತ್ತಂತೆ
ಇವತ್ತು ಗಾಂಧಿಯ ಮೂರ್ತಿ ಇದೆ
ಆದರೆ ಇದು
1992ರ ವರ್ಷ.
ನನಗೆ
ಯಾವದೂ ಅನಿಸುವುದಿಲ್ಲ ಅಪರಿಚಿತ.

***

9.

ದೇವರೆ,
ಪ್ರಾರ್ಥನೆ ಮಾಡುವಾಗ
ನಾನು ಆಕಳಿಸಿದ್ದನ್ನು ನೋಡಿ
ನಿನಗೆ ಸಿಟ್ಟು ಬಂದಿರಬೇಕಲ್ಲ?
ಈ ಕಾಟಾಚಾರ ಮಾಡಿ ಮಾಡಿ
ಬೇಜಾರಾಗಿಬಿಟ್ಟಿದೆ ನನಗಂತೂ.

ಬುದ್ಧಿ ಬಂದಾಗಿನಿಂದ
ಇದನ್ನೇ ಕೇಳುತ್ತಿದ್ದೇನೆ ನಾನು,
ಹಗಲು ರಾತ್ರಿ ಅವನ ದಯೆ,
ಒಳ್ಳೆಯದು ಕೆಟ್ಟದ್ದು ಎಲ್ಲ
ಅವನ ಕೈಯಲ್ಲೇ ಇದೆ.
ಪ್ರಾರ್ಥನೆ ಮಾಡು!

ಒಳ್ಳೆ ಗ್ರಹಚಾರ ಇದು.
ವಿಚಿತ್ರ ಸುಳ್ಳಿನ ಸಂಭಾಷಣೆ
ಅದೂ ಒಂದೇ ಕಡೆಯಿಂದ.
ಹೀಗೆ ಗುದ್ದಾಡುವುದಾದರೂ
ಯಾರೊಂದಿಗೆ?
ಅವನ ಮುಖ ಅಷ್ಟೇ ಅಲ್ಲ
ಅಸ್ತಿತ್ವವನ್ನೂ ಕೂಡ
ನಾವು
ಕಲ್ಪಿಸಿಕೊಳ್ಳಬೇಕಷ್ಟೆ.

***

10.

ತಂಗಳು ಉಸಿರಿಗೆ
ಜಾಗ ಕೊಡಬೇಡ ಎದೆಯಲ್ಲಿ,
ಉಸಿರು ದೀರ್ಘವಾದಷ್ಟು
ಸರಾಗವಂತೆ
ಸರ್ಪಗಳಿಗೆ ಬದುಕು.
ಇಂಥದೇ ಒಂದು ಉಸಿರು
ಒಮ್ಮೆ ಕಚ್ಚಿತ್ತು
ಕ್ಲಿಯೋಪಾತ್ರಾಳ ನಗೆಯನ್ನು.

ನನ್ನ ತುಟಿ ಮೇಲೊಮ್ಮೆ
ನಿನ್ನ ತುಟಿಗಳನ್ನಿಟ್ಟು
ಭುಸುಗುಟ್ಟಿಬಿಡು ಗೆಳತಿ.

ವಿಷ ಕುಡಿಯುವುದು
ಅಭ್ಯಾಸವಾಗಿಬಿಟ್ಟಿದೆ ನನಗೆ.

***

11.

ಒಬ್ಬ ಹಳ್ಳಿಯ ಹುಡುಗ
ತಲೆಯ ಮೇಲೆ
ಬೆಲ್ಲದ ಪೆಂಟಿಯನ್ನು ಹೊತ್ತು
ಹೊಲದಂಚಿನಲ್ಲಿ ನಡೆಯುತ್ತಾ
ಎಲ್ಲೋ ಹೋಗುತ್ತಿದ್ದಾನೆ.

ಬಿಸಿಲು ಏರಿದಂತೆಲ್ಲಾ
ಬೆಲ್ಲ ಕರಗಿ
ಹರಿಯತೊಡಗಿದೆ.

ಮುಗ್ಧ ಹಳ್ಳಿಯ ಹುಡುಗ
ಹಣೆಯಿಂದ
ಇಳಿಯುತ್ತಿರುವ
ಸಿಹಿ ರಸವನ್ನ
ಗಾಬರಿಯಿಂದ ಚಪ್ಪರಿಸುತ್ತಿದ್ದಾನೆ.

ನಾನೇ
ಆ ಹಳ್ಳಿಯ ಹುಡುಗ

ಯಾರು ನನ್ನ ತಲೆಯ ಮೇಲೆ
ಟಾಗೋರರ ಕವಿತೆಗಳ
ಗಂಟು ಇಟ್ಟದ್ದು?

***

12.

ಒಂದು ಹುಣ್ಣಿಮೆಯ ಸಂಜೆ
ಲಾಹೋರ್‌ನ ಸಣ್ಣಸಣ್ಣ ಗಲ್ಲಿಗಳಲ್ಲೆಲ್ಲ
ಅಮಾವಾಸ್ಯೆಯ ಭೀತಿ.

ಚಂದ್ರ
ಅವಸರದಿಂದ ಓಡುತ್ತಾ
ಜೈಲಿನ ಎತ್ತರದ ಗೋಡೆಗಳನ್ನ
ಕಮಾಂಡೊಗಳ ಥರ ಹಾರಿ
ಕತ್ತಲ ಸೆಲ್‌ನೊಳಗೆ ಪ್ರತ್ಯಕ್ಷನಾಗಿದ್ದಾನೆ.
ಒಂದಿಷ್ಟೂ ಸದ್ದಿಲ್ಲ
ಒಂದು ಹುಳಕ್ಕೂ ಗೊತ್ತಿಲ್ಲ.

ಚಂದ್ರ
ಫೈಜ್‌ನ ಭೆಟ್ಟಿಗೆ ಬಂದಿದ್ದಾನೆ.
ಒಂದೇ ಒಂದು ಹಾಡಿಗಾಗಿ
ಮನವಿ ಮಾಡಿಕೊಳ್ಳಲು.

ಕಾಲನ ನಾಡಿ ಮಿಡಿಯಬೇಕೆಂದರೆ
ಮತ್ತೆ ಫೈಜ್ ಹಾಡಲೇಬೇಕು.

***

ಗುಲ್ಜಾರ್
ಸಂಪೂರಣ್ ಸಿಂಗ ಕಾರ್ಲಾ, ಗುಲ್ಜಾರ್ ಅವರ ಮೂಲ ಹೆಸರು. ಉರ್ದುವಿನಲ್ಲಿ ಕವಿತೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಹಿಂದಿ ಸಿನಿಮಾಗಳಿಗೆ ಚಿತ್ರಗೀತೆಗಳನ್ನು ಬರೆದು, ಸಿನಿಪ್ರೇಮಿಗಳ ನಡುವೆ ಮನೆಮಾತಾಗಿದ್ದಾರೆ. ಅನುವಾದಕರೂ ಅಗಿರುವ ಗುಲ್ಜಾರ್ ಅವರಿಗೆ 2024ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು.

ಚಿದಂಬರ ನರೇಂದ್ರ

ಕನ್ನಡಕ್ಕೆ:ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡಿನಲ್ಲಿ ಎರಡು ಬಸ್ಸುಗಳು ಡಿಕ್ಕಿ:10ಕ್ಕೂ ಹೆಚ್ಚು ಜನರ ಸಾವು, 20 ಜನರಿಗೆ ಗಂಭೀರ ಗಾಯಗಳಾಗಿವೆ

ಚೆನ್ನೈ: ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಭಾನುವಾರ ಸಂಜೆ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ | ಸುಗಮ ಕಲಾಪಕ್ಕೆ ಸಹಕಾರ ಕೋರಿದ ಆಡಳಿತ : ಎಸ್‌ಐಆರ್ ಚರ್ಚೆ ಮುಂದಿಟ್ಟ ಪ್ರತಿಪಕ್ಷಗಳು

ನಾಳೆಯಿಂದ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಗೊಳ್ಳಲಿದೆ. ಅದಕ್ಕೂ ಮುನ್ನ ಇಂದು (ನವೆಂಬರ್ 30) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ. ಸಭೆಯಲ್ಲಿ ಸುಗಮ...

ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.  ನವೆಂಬರ್ 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು...

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ: ಮನನೊಂದು 22 ವರ್ಷದ ಯುವತಿ ಆತ್ಮಹತ್ಯೆ 

ಮದುವೆಯಾಗುವುದಾಗಿ ನಂಬಿಸಿದ್ದ ಯುವಕ, ಯುವತಿಗೆ ಮಾನಸಿಕ-ದೈಹಿಕ ಹಲ್ಲೆ ನಡೆಸಿದ್ದು, ಆತನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂಜಿನಿಯರಿಂಗ್ ಪದವೀಧರೆ...

ಮಹಾರಾಷ್ಟ್ರ : ಪ್ರಮುಖ ನಾಯಕ ಅನಂತ್ ಸೇರಿದಂತೆ 10 ಮಂದಿ ಮಾವೋವಾದಿಗಳು ಶರಣಾಗತಿ

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಶುಕ್ರವಾರ (ನ.28) ಪ್ರಮುಖ ಮಾವೋವಾದಿ ನಾಯಕ ವಿಕಾಸ್ ನಾಗಪುರೆ ಅಲಿಯಾಸ್ ನವಜ್ಯೋತ್ ಅಲಿಯಾಸ್ ಅನಂತ್ ಮತ್ತು ಇತರ 10 ಮಂದಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಅನಂತ್ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ...

ಎಸ್‌ಐಆರ್ : 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಗಡುವು ವಿಸ್ತರಿಸಿದ ಚು. ಆಯೋಗ

ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)ಯಲ್ಲಿ ಮತದಾರರು ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 4 ರಿಂದ 11ಕ್ಕೆ ಚುನಾವಣಾ ಆಯೋಗ...

ಗೆಳತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹ: 18ವರ್ಷದ ಪದವಿಪೂರ್ವ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಗೆಳತಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ಕಾರಣ ನವೆಂಬರ್ 29, ಶನಿವಾರ ಹೈದರಾಬಾದ್‌ನಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸುರರಾಮ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು 18 ವರ್ಷದ ಅಭಿಲಾಷ್ ಎಂದು...

ಅರ್ಫಾಝ್‌ನ ಮನೆ ಕೆಡವಿದ ಆಡಳಿತ : ತನ್ನ ಜಾಗ ಉಡುಗೊರೆಯಾಗಿ ಕೊಟ್ಟ ಕುಲ್ದೀಪ್ ಶರ್ಮಾ

ಅರ್ಫಾಝ್ ಎಂಬ ಪತ್ರಕರ್ತನ ಮನೆಯನ್ನು ಆಡಳಿತ ಕೆಡವಿದಾಗ, ತನ್ನ ಜಾಗವನ್ನು ಉಡುಗೊರೆಯಾಗಿ ಕೊಟ್ಟ ಜಮ್ಮು ಕಾಶ್ಮೀರದ ಸಾಮಾಜಿಕ ಹೋರಾಟಗಾರ ಕುಲ್ದೀಪ್ ಶರ್ಮಾ ನಡೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಮ್ಮುವಿನ ಜ್ಯುವೆಲ್ ಪ್ರದೇಶದ ನಿವಾಸಿ...

ತೆಲಂಗಾಣದಲ್ಲಿ ಭೀಕರ ಅಗ್ನಿ ಅವಘಡ, ಕೊಂಡಗಟ್ಟು ಪ್ರದೇಶದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಹೈದರಾಬಾದ್: ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕೊಂಡಗಟ್ಟು ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಕೊಂಡಗಟ್ಟು ಬೆಟ್ಟಗಳ ತಪ್ಪಲಿನಲ್ಲಿರುವ ಅಂಗಡಿಗಳ ಸಾಲಿಗೆ ಬೆಂಕಿ ವ್ಯಾಪಿಸಿದ್ದು, ತೀವ್ರ...

ಬಾಬರಿ ಮಸೀದಿ ಧ್ವಂಸದಂದು ಶಾಲೆಗಳಲ್ಲಿ ‘ಶೌರ್ಯ ದಿನಾಚರಣೆ’ಗೆ ಸೂಚಿಸಿದ ರಾಜಸ್ಥಾನದ ಬಿಜೆಪಿ ಸರ್ಕಾರ : 12 ಗಂಟೆಯೊಳಗೆ ಆದೇಶ ವಾಪಸ್

ಬಾಬರಿ ಮಸೀದಿ ಧ್ವಂಸ ದಿನವಾದ ಡಿಸೆಂಬರ್ 6ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ 'ಶೌರ್ಯ ದಿನ' ಆಚರಿಸುವಂತೆ ನೀಡಿದ್ದ ಆದೇಶವನ್ನು 12 ಗಂಟೆಗಳ ಒಳಗೆ ರಾಜಸ್ಥಾನದ ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಡಿಸೆಂಬರ್ 6ರಂದು ರಾಜ್ಯದ...