Homeಮುಖಪುಟಗುಲ್ಜಾರ್ ಅವರ ಪದ್ಯಗಳು

ಗುಲ್ಜಾರ್ ಅವರ ಪದ್ಯಗಳು

- Advertisement -
- Advertisement -

1.

ಯಾವ ಹೊಲದಿಂದ ರೈತನಿಗೆ ರೊಟ್ಟಿಯ ಅದೃಷ್ಟವಿಲ್ಲವೋ
ಆ ಹೊಲದ ಗೋಧಿಯ ತೆನೆಗಳನ್ನು
ಹುಡುಕಿ ಹುಡುಕಿ ಸುಟ್ಟುಬಿಡಿ

ಅಲ್ಲಮ ಇಕ್ಬಾಲ್

ಯಾರಾದರೂ ಹೋಗಿ ’ಅಲ್ಲಮ’ನಿಗೆ ಸುದ್ದಿ ಮುಟ್ಟಿಸಿ
ಯಾವ ಹೊಲದಿಂದ ರೈತನ ಮನೆಯ
ಹೊಟ್ಟೆ ತುಂಬಲಿಲ್ಲವೋ
ಯಾರೂ ಆ ಹೊಲಕ್ಕೆ ಹೋಗಿ ಬೆಂಕಿ ಹಚ್ಚಲಿಲ್ಲ
ಯಾರೂ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ
ಯಾವ ಕ್ರಾಂತಿಯ ಘೋಷಣೆಗಳೂ ಮೊಳಗಲಿಲ್ಲ.

ಶವಯಾತ್ರೆಗಳು ಹೊರಟಿವೆ
ಹಳ್ಳಿಗಳ ಮನೆಮನೆಯಿಂದ
ಪ್ರತಿ ಮೆರವಣಿಗೆಯೂ ಅನ್ನದಾತರದು
ಸಾಲದ ಹಂಗಿಗೆ ಧಿಕ್ಕಾರ ಹೇಳಿ ಅಮರರಾದ ಹುತಾತ್ಮರದು.

ಅಲ್ಲಮ – ಪ್ರಸಿದ್ಧ ಉರ್ದು ಕವಿ, ಅಲ್ಲಮ ಮೊಹಮ್ಮದ್ ಇಕ್ಬಾಲ್

***

2.

ಯಾರು ಈ ಮೂಕ?
ಎಷ್ಟೊಂದು ಕೆಮ್ಮುತ್ತಾನೆ?
ಪ್ರತೀ ಬಾರಿ ಕೆಮ್ಮಿದಾಗಲೂ
ಸಹಸ್ರಾರು ಶಬ್ದಗಳು.
ಬೇಸತ್ತು ಹೋಗಿದ್ದಾರೆ
ಊರು ಸ್ವಚ್ಛ ಮಾಡುವ
ಗುತ್ತಿಗೆ ತೆಗೆದುಕೊಂಡವರು.

ಚೌಕಿನಲ್ಲಿ ಜನ ಮಾತಾಡುತ್ತಿದ್ದರು
ಅವನು ಕವಿಯಂತೆ,

ಯಾರೋ ಪ್ರಶ್ನೆ ಕೇಳಿ
ಉತ್ತರ ಕೊಡುವುದಕ್ಕಿಂತ ಮುಂಚೆ
ಕತ್ತರಿಸಿಬಿಟ್ಟಿದ್ದಾರೆ ಅವನ
ನಾಲಿಗೆ.

***

3.

ಭಗವಂತ- 1

ನಾನು,
ಗೋಡೆಯ ಈ ಬದಿಯಲ್ಲಿದ್ದೇನೆ.
ಇಲ್ಲಿ ಬಿಸಿಲು ಬೀಳುತ್ತದೆ
ಹಸಿರು ಹಾಡುತ್ತದೆ.
ಎಲೆಗಳ ಮೇಲೆ
ಇಬ್ಬನಿ ಸವಾರಿ ಮಾಡುತ್ತದೆ,
ಸೋಮಾರಿ ಮಂಜು
ಠಿಕಾಣಿ ಹಾಕಿದರೆ
ಟೊಂಗೆಯ ಮೇಲೆ ಕುಳಿತು
ಗಂಟೆಗಟ್ಟಲೆ ತೂಕಡಿಸುತ್ತದೆ.

ಮಳೆ
ಹರೆಯದ ಹುಡುಗಿಯಂತೆ
ಕುಣಿದಾಡುತ್ತ ಬಂದು
ಕೈಚಾಚುತ್ತಿದ್ದಂತೆಯೇ
ಜಾರಿ ಹೋಗುತ್ತದೆ.
ಬಂದ ಪ್ರತಿ ಮಾಸವೂ
ಮೋಸ ಮಾಡದೇ
ಕಚಗುಳಿಯಿಡುತ್ತದೆ.

ಆದರೆ
ಈ ಹಸೀ ಗೋಡೆಯ
ಆ ಬದಿಯಲ್ಲಿ
ಯಾಕಿಷ್ಟು ನೀರವ ಮೌನ?
ಯಾರವರು?
ಸದ್ದು ಮಾಡದೇ
ಸುಮ್ಮನೇ ಕುಳಿತು
ಗೋಡೆಗೆ ಕಿವಿ ಹಚ್ಚಿರುವವರು?

***

4.

ಭಗವಂತ- 2

ಇಡೀ ಆಕಾಶ ಸುತ್ತಿ
ನೀನು ರಚಿಸಿರುವ ವ್ಯೂಹವನ್ನೊಮ್ಮೆ
ಜಾಗರೂಕತೆಯಿಂದ ಗಮನಿಸಿದೆ.

ಕಪ್ಪು ಮನೆಯಲ್ಲಿ
ಸೂರ್ಯನನ್ನು ಇಟ್ಟು
ನನ್ನ ಸೈನ್ಯವನ್ನು ಕಂಗೆಡಿಸಬೇಕೆಂದು
ಲೆಕ್ಕ ಹಾಕಿದ್ದಿಯಲ್ಲವೆ?
ನಾನು, ಒಂದು ಸಣ್ಣ ದೀಪ ಹಚ್ಚಿ
ನನ್ನ ದಾರಿ ಹುಡುಕಿಕೊಂಡೆ.

ನೀನು, ಸಮುದ್ರವನ್ನೆತ್ತಿ
ನನ್ನ ಮುಖದ ಮೇಲೆ ಅಪ್ಪಳಿಸಿದೆ.
ನಾನು ನಂಬಿಕೆಯ
ದೋಣಿಯನ್ನೇರಿ ಪಾರಾಗಿಬಿಟ್ಟೆ.

ನೀನು, ಕಾಲವನ್ನು
ಆಟದ ಅಂಗಳಕ್ಕಿಳಿಸಿ
ತೋಳು ಮೇಲಿರಿಸಿದೆ.
ನಾನು ಕಾಲವನ್ನು
ತುಂಡು ತುಂಡು ಮಾಡಿ
ಕ್ಷಣಗಳಲ್ಲಿ ಬದುಕುವುದನ್ನು
ರೂಢಿ ಮಾಡಿಕೊಂಡೆ.

ಕೆಲ ಚಮತ್ಕಾರಗಳನ್ನು ಮಾಡಿ
ನನ್ನ ಅಭಿಮಾನವನ್ನು ಕೊಲ್ಲಲು
ನೀನು ಶತಪ್ರಯತ್ನ ಮಾಡಿದೆ.
ನನ್ನ ಒಬ್ಬ ಸಣ್ಣ ಸೈನಿಕ ಮುಂದೆ ಬಂದು
ನಿನ್ನ ಅಸ್ತಿತ್ವಕ್ಕೇ ಸವಾಲು ಹಾಕಿದ.

ಸಾವನ್ನು ಎದುರು ನಿಲ್ಲಿಸಿ
ನನ್ನ ಆಟ ಮುಗಿಸಲು
ನೀನು ಹೊಂಚು ಹಾಕಿದೆ.
ದೇಹವನ್ನು ಪಣಕ್ಕಿಟ್ಟು
ನಾನು ಆತ್ಮ ಉಳಿಸಿಕೊಂಡೆ.

ಇಡೀ ಆಕಾಶ ಸುತ್ತಿ
ಮತ್ತೊಂದಿಷ್ಟು ಸಂಚು ಕಲಿತು ಬಾ
ನನ್ನ ಸೋಲಿಸುವುದು
ಅಷ್ಟು ಸುಲಭವಲ್ಲ ಭಗವಂತ.

***

5.

ಭಗವಂತ- 3

ಕಳೆದ ಬಾರಿ
ಭೆಟ್ಟಿಯಾದಾಗ ನೀನು
ಒಂದು ಭಯಂಕರ ಯುದ್ಧದಲ್ಲಿ
ಮಗ್ನನಾಗಿದ್ದೆ.
ಹೊಸ ಹೊಸ ಆಯುಧಗಳ
ಹೊಳಪಿಗೆ ತುಂಬ ಖುಷಿಯಾಗಿದ್ದೆ.
ಅದಕ್ಕೂ ಮೊದಲು
ಹಸಿವಿನಿಂದ ಸತ್ತ ಮಕ್ಕಳ
ಹೆಣಗಳನ್ನ ಹೂಳುವಾಗ
ನಿನ್ನ ನೋಡಿದ್ದೆ.
ಮತ್ತೊಮ್ಮೆ
ಭೂಮಿಯನ್ನು ನಡುಗಿಸಿ
ಇಡೀ ಊರಿಗೆ ಊರನ್ನೇ
ನೆಲಸಮ ಮಾಡಿ
ಇನ್ನೊಂದು ಕಡೆ
ಕೈ ಝಾಡಿಸಿಕೊಂಡು ಹೋಗುವಾಗ
ನಿನ್ನ ನೋಡಿದ್ದೆ.

ಸುತ್ತಮುತ್ತಲಿನ ನಕ್ಷತ್ರಗಳ ಮೇಲೆ
ಧೂಳು ಹಾರಿಸುತ್ತಾ
ಆಕಾಶದಿಂದ ಇಳಿದು ಬರುವಾಗಲೂ
ನಿನ್ನ ನೋಡಿದ್ದೆ.
ಬೇರೆ ಬೇರೆ ವಿಶ್ವಗಳ
ಆಕಾಶಗಳನ್ನು ಹಾಳುಗೆಡವಿ
ಉನ್ಮಾದದಿಂದ ನೀನು
ನೆಲಕ್ಕಿಳಿದು ಬರುತ್ತಿದ್ದರೆ
ಭೂಮಿ ನಡುಗುತ್ತದೆ
ಸಮುದ್ರ ಉಕ್ಕುತ್ತದೆ
ಆಗ ತುಂಬ ಇರ್ರಾಟಿಕ್ ಆಗಿ ಕಾಣಿಸುತ್ತಿ.

ನಿನ್ನ ಊರಿನಲ್ಲಿ ಎಂತೆಂಥವರ
ಸಹವಾಸದಲ್ಲಿರುತ್ತೀಯೋ ಏನೋ
ನನಗಂತೂ ಒಂದೂ ಗೊತ್ತಾಗುತ್ತಿಲ್ಲ.

***

6.

ಈಗ ನನಗೆ ರೂಢಿಯಾಗಿಬಿಟ್ಟಿದೆ.
ಪ್ರತೀಬಾರಿ ರಸ್ತೆ ದಾಟುವಾಗಲೂ
ಒಮ್ಮೆ ಆಕಾಶದತ್ತ ತಲೆ ಎತ್ತಿ ನೋಡಿ
ಖಾತ್ರಿ ಮಾಡಿಕೊಳ್ಳುತ್ತೇನೆ.
ಉರಿಯುತ್ತ, ಆರುತ್ತ
ಮಾರ್ಸ್, ಮರ್ಕ್ಯುರಿ, ವೀನಸ್ ಮುಂತಾದ
ಸೊಕ್ಕಿನ ಶ್ರೀಮಂತರು, ಆಕಾಶದಲ್ಲಿ
ಡೌಲಿನಿಂದ ಮೆರೆದಾಡುತ್ತಿರುತ್ತಾರೆ.

ಕಳೆದ ವಾರವಷ್ಟೇ,
ಬೇಕಾಬಿಟ್ಟಿಯಾಗಿ ಹಾರಾಡುತ್ತಿದ
ನಮ್ಮದೇ ಊರಿನ
ಉಡಾಳ ಕಾಮೆಟ್ ’ಲೇವಿ ಶೂಮಾಕರ್’
ಜ್ಯುಪಿಟರ್‌ನ ಎದೆಗೆ
ಬಲವಾಗಿ ಢಿಕ್ಕಿ ಹೊಡೆದಿದ್ದ.

ಬೆಂಕಿಯ ತುಣುಕುಗಳು
ಸಾವಿರಾರು ಮೈಲಿ ಚಿಮ್ಮಿ ಹೋಗಿದ್ದವು.
ನೀವೇ ಹೇಳಿ
ಜ್ಯುಪಿಟರ್‌ನ ಗಾಯ ಮಾಯಲು
ಎಷ್ಟು ಶತಮಾನಗಳು ಬೇಕಾಗಬಹುದು.

***

7.

ಒಂದಿಷ್ಟು ತಲೆ ಬೋಳಿಸಿದ ದನಿಗಳು
ಮೇಲಿಂದ ಮೇಲೆ
ದೇವರಮನೆಯ ಹಿತ್ತಲಿಗೆ ಬಂದು
ಇಟ್ಟಿಗೆಯ ಗೋಡೆಗೆ ಒರಗಿ
ಕಲ್ಲಾಗಿರುವ ಕಿವಿಗಳ ಮೇಲೆ,
ತಮ್ಮ ತುಟಿಗಳನ್ನಿಟ್ಟು
ಮನುಷ್ಯ ಜಾತಿಯ ಪೀಳಿಗೆಯನ್ನು
ತಮ್ಮ ಮಡಿಲಲ್ಲಿ ಹಾಕಿ
ನಿಶ್ಚಿಂತೆಯಿಂದ ಹೋಗಿ ಗೋರಿಯಲ್ಲಿ ಅಡ್ಡಾಗಿರುವ
ಒಬ್ಬ ಮುದುಕ ದೇವರಿಗೆ ಸಂತಾಪ ಹೇಳುತ್ತವೆ!!

***

8.

ಈ ದೃಶ್ಯವನ್ನು ಮೊದಲೂ ನೋಡಿದ್ದೆ.
ಬಂದೂಕನ್ನು ಎದೆಗೆ ನಾಟಿಸಿಕೊಂಡ
ಸೈನಿಕರ ದಂಡು
ಮತ್ತು ಎದುರಿಗೆ
ಎದೆ ಸೆಟೆಸಿ, ಘೋಷಣೆ ಕೂಗುತ್ತಿದ್ದ
ಜನಸಮೂಹ.
ಬಹುಶಃ ಅದು 1919ರ ವರ್ಷ
ಅಮೃತಸರ್‌ನ ಜಲಿಯನ್‌ವಾಲಾ ಬಾಗ್.

ಅಥವಾ 1936ರ
ಲಾಹೋರ್‌ನ ಒಂದು ಬೀದಿಯ ದೃಶ್ಯ,
ಸ್ವತಂತ್ರ ಹೋರಾಟದ ವರ್ಷಾಚರಣೆಯ
ಮಾರನೆಯ ರಾತ್ರಿ.

ಈ ಚಿತ್ರಗಳಲ್ಲಿ
ಎಷ್ಟು ಸಾಮ್ಯತೆ ಇದೆ ನೋಡಿ
ಇದರಲ್ಲಿನ ಜನರು,
ಅವರ ಮುಖದಲ್ಲಿನ ನೋವು,
ಎದೆಯಲ್ಲಿನ ಸಿಟ್ಟು,
ಆ ಹರೆಯ, ಆ ಭಾವನೆಗಳು
ಯಾವದೂ ನನಗೆ
ಅನಿಸುವುದಿಲ್ಲ ಅಪರಿಚಿತ.

ಅದು 1942ರ ವರ್ಷ ಇರಬಹುದು
ಅಲಹಾಬಾದ್‌ನ
ಒಂದು ಚೌಕದ ನಟ್ಟನಡುವೆ,
ಜನಸಾಗರವನ್ನು ಸುತ್ತುವರಿದಿದ್ದ
ಬ್ರಿಟಿಷ್ ಸೈನಿಕರು
ಅವರ ಕೈಯಲ್ಲಿ ಮತ್ತೆ ಅದೇ ಬಂದೂಕು
ಎದುರಿಗೆ ಮತ್ತೆ ಅದೇ ಜನ
ಅದೇ ಘೋಷಣೆಗಳು
ಅದೇ ಬಿಗಿದ ಮುಷ್ಟಿಗಳು,
ಅವತ್ತೂ ಜನರ ಕೈಯಲ್ಲಿ ಅದೇ ಧ್ವಜ.

ಇಂದೂ ಕೂಡ ಬಂದೂಕು
ಬೆಂಕಿ ಉಗುಳಿತು, ಜನ ಹಾಗೆ ಸತ್ತರು
ಮತ್ತೆ ಅದೇ ರಕ್ತ ಬೀದಿಯ ಮೇಲೆಲ್ಲ.
ಹೌದು, ಅದೇ ಚೌಕದ ನಟ್ಟನಡುವೆ
ಕಬ್ಬಿಣ, ಕಾಂಕ್ರೀಟುಗಳ ಕಾಡಿನಲ್ಲಿ.

ಮೊದಲೇನೋ ಇಲ್ಲೊಂದು
ಬ್ರಿಟಿಷ್ ಅಧಿಕಾರಿಯ ಮೂರ್ತಿ ಇತ್ತಂತೆ
ಇವತ್ತು ಗಾಂಧಿಯ ಮೂರ್ತಿ ಇದೆ
ಆದರೆ ಇದು
1992ರ ವರ್ಷ.
ನನಗೆ
ಯಾವದೂ ಅನಿಸುವುದಿಲ್ಲ ಅಪರಿಚಿತ.

***

9.

ದೇವರೆ,
ಪ್ರಾರ್ಥನೆ ಮಾಡುವಾಗ
ನಾನು ಆಕಳಿಸಿದ್ದನ್ನು ನೋಡಿ
ನಿನಗೆ ಸಿಟ್ಟು ಬಂದಿರಬೇಕಲ್ಲ?
ಈ ಕಾಟಾಚಾರ ಮಾಡಿ ಮಾಡಿ
ಬೇಜಾರಾಗಿಬಿಟ್ಟಿದೆ ನನಗಂತೂ.

ಬುದ್ಧಿ ಬಂದಾಗಿನಿಂದ
ಇದನ್ನೇ ಕೇಳುತ್ತಿದ್ದೇನೆ ನಾನು,
ಹಗಲು ರಾತ್ರಿ ಅವನ ದಯೆ,
ಒಳ್ಳೆಯದು ಕೆಟ್ಟದ್ದು ಎಲ್ಲ
ಅವನ ಕೈಯಲ್ಲೇ ಇದೆ.
ಪ್ರಾರ್ಥನೆ ಮಾಡು!

ಒಳ್ಳೆ ಗ್ರಹಚಾರ ಇದು.
ವಿಚಿತ್ರ ಸುಳ್ಳಿನ ಸಂಭಾಷಣೆ
ಅದೂ ಒಂದೇ ಕಡೆಯಿಂದ.
ಹೀಗೆ ಗುದ್ದಾಡುವುದಾದರೂ
ಯಾರೊಂದಿಗೆ?
ಅವನ ಮುಖ ಅಷ್ಟೇ ಅಲ್ಲ
ಅಸ್ತಿತ್ವವನ್ನೂ ಕೂಡ
ನಾವು
ಕಲ್ಪಿಸಿಕೊಳ್ಳಬೇಕಷ್ಟೆ.

***

10.

ತಂಗಳು ಉಸಿರಿಗೆ
ಜಾಗ ಕೊಡಬೇಡ ಎದೆಯಲ್ಲಿ,
ಉಸಿರು ದೀರ್ಘವಾದಷ್ಟು
ಸರಾಗವಂತೆ
ಸರ್ಪಗಳಿಗೆ ಬದುಕು.
ಇಂಥದೇ ಒಂದು ಉಸಿರು
ಒಮ್ಮೆ ಕಚ್ಚಿತ್ತು
ಕ್ಲಿಯೋಪಾತ್ರಾಳ ನಗೆಯನ್ನು.

ನನ್ನ ತುಟಿ ಮೇಲೊಮ್ಮೆ
ನಿನ್ನ ತುಟಿಗಳನ್ನಿಟ್ಟು
ಭುಸುಗುಟ್ಟಿಬಿಡು ಗೆಳತಿ.

ವಿಷ ಕುಡಿಯುವುದು
ಅಭ್ಯಾಸವಾಗಿಬಿಟ್ಟಿದೆ ನನಗೆ.

***

11.

ಒಬ್ಬ ಹಳ್ಳಿಯ ಹುಡುಗ
ತಲೆಯ ಮೇಲೆ
ಬೆಲ್ಲದ ಪೆಂಟಿಯನ್ನು ಹೊತ್ತು
ಹೊಲದಂಚಿನಲ್ಲಿ ನಡೆಯುತ್ತಾ
ಎಲ್ಲೋ ಹೋಗುತ್ತಿದ್ದಾನೆ.

ಬಿಸಿಲು ಏರಿದಂತೆಲ್ಲಾ
ಬೆಲ್ಲ ಕರಗಿ
ಹರಿಯತೊಡಗಿದೆ.

ಮುಗ್ಧ ಹಳ್ಳಿಯ ಹುಡುಗ
ಹಣೆಯಿಂದ
ಇಳಿಯುತ್ತಿರುವ
ಸಿಹಿ ರಸವನ್ನ
ಗಾಬರಿಯಿಂದ ಚಪ್ಪರಿಸುತ್ತಿದ್ದಾನೆ.

ನಾನೇ
ಆ ಹಳ್ಳಿಯ ಹುಡುಗ

ಯಾರು ನನ್ನ ತಲೆಯ ಮೇಲೆ
ಟಾಗೋರರ ಕವಿತೆಗಳ
ಗಂಟು ಇಟ್ಟದ್ದು?

***

12.

ಒಂದು ಹುಣ್ಣಿಮೆಯ ಸಂಜೆ
ಲಾಹೋರ್‌ನ ಸಣ್ಣಸಣ್ಣ ಗಲ್ಲಿಗಳಲ್ಲೆಲ್ಲ
ಅಮಾವಾಸ್ಯೆಯ ಭೀತಿ.

ಚಂದ್ರ
ಅವಸರದಿಂದ ಓಡುತ್ತಾ
ಜೈಲಿನ ಎತ್ತರದ ಗೋಡೆಗಳನ್ನ
ಕಮಾಂಡೊಗಳ ಥರ ಹಾರಿ
ಕತ್ತಲ ಸೆಲ್‌ನೊಳಗೆ ಪ್ರತ್ಯಕ್ಷನಾಗಿದ್ದಾನೆ.
ಒಂದಿಷ್ಟೂ ಸದ್ದಿಲ್ಲ
ಒಂದು ಹುಳಕ್ಕೂ ಗೊತ್ತಿಲ್ಲ.

ಚಂದ್ರ
ಫೈಜ್‌ನ ಭೆಟ್ಟಿಗೆ ಬಂದಿದ್ದಾನೆ.
ಒಂದೇ ಒಂದು ಹಾಡಿಗಾಗಿ
ಮನವಿ ಮಾಡಿಕೊಳ್ಳಲು.

ಕಾಲನ ನಾಡಿ ಮಿಡಿಯಬೇಕೆಂದರೆ
ಮತ್ತೆ ಫೈಜ್ ಹಾಡಲೇಬೇಕು.

***

ಗುಲ್ಜಾರ್
ಸಂಪೂರಣ್ ಸಿಂಗ ಕಾರ್ಲಾ, ಗುಲ್ಜಾರ್ ಅವರ ಮೂಲ ಹೆಸರು. ಉರ್ದುವಿನಲ್ಲಿ ಕವಿತೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಹಿಂದಿ ಸಿನಿಮಾಗಳಿಗೆ ಚಿತ್ರಗೀತೆಗಳನ್ನು ಬರೆದು, ಸಿನಿಪ್ರೇಮಿಗಳ ನಡುವೆ ಮನೆಮಾತಾಗಿದ್ದಾರೆ. ಅನುವಾದಕರೂ ಅಗಿರುವ ಗುಲ್ಜಾರ್ ಅವರಿಗೆ 2024ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು.

ಚಿದಂಬರ ನರೇಂದ್ರ

ಕನ್ನಡಕ್ಕೆ:ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೇವರಾಗಿದ್ದರೆ ರಾಜಕೀಯ ಮಾಡಬಾರದು’: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್‌

0
'ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ' ಎಂಬ ಪ್ರಧಾನಿ ಮೋದಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇವರುಗಳು ರಾಜಕೀಯ ಮಾಡಬಾರದು ಮತ್ತು ಗಲಭೆಗಳನ್ನು ಪ್ರಚೋದಿಸಬಾರದು, ನಾವು ದೇವಾಲಯ...