ಜಗತ್ತಿನ ಹಲವಾರು ಜನರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಕತಾರ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದ ಮೆಸ್ಸಿಯ ಅರ್ಜೆಂಟೀನಾ ಮೂರನೇ ಬಾರಿಗೆ ಕಪ್ ತನ್ನದಾಗಿಸಿಕೊಂಡಿತು. ಕೊನೆಯ ಕ್ಷಣದವರೆಗೂ ದಿಟ್ಟ ಹೋರಾಟ ನಡೆಸಿದ ಫ್ರಾನ್ಸ್ ಪೆನಾಲ್ಟಿ ಶೂಟೌಟ್‌ನಲ್ಲಿ ಎಡವಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಆರಂಭದಿಂದಲೇ ಮೇಲುಗೈ ಸಾಧಿಸಿತ್ತು. ತಂಡದ ನಾಯಕ ಲಿಯೊನೆಲ್ ಮೆಸ್ಸಿ 23ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸಿದರೆ, ಮತ್ತೊಬ್ಬ ಆಟಗಾರ ಡಿ ಮರಿಯಾ 36ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಚೆಂಡು ಬಹುತೇಕ ಸಮಯದಲ್ಲಿ ಅರ್ಜೆಂಟೀನಾ ಕಾಲಡಿಯಲ್ಲಿಯೇ ಇಟ್ಟುಕೊಳ್ಳುವ ಮೂಲಕ ಫ್ರಾನ್ಸ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು.
Perfect viewing for your morning, afternoon or evening 🍿
Relive Argentina's emotional journey to glory in our special film 📺 #FIFAWorldCup #Qatar2022
— FIFA World Cup (@FIFAWorldCup) December 19, 2022
ಆದರೆ ಪಂದ್ಯದ 80ನೇ ನಿಮಿಷದಲ್ಲಿ ಫ್ರಾನ್ಸ್ ತಂಡದ ಯುವ ಆಟಗಾರ ಕಿಲಿಯನ್ ಎಂಬಾಪೆ ಮ್ಯಾಜಿಕ್ ಮಾಡಿದರು. ಪೆನಾಲ್ಟಿ ಕಿಕ್ ಅನ್ನು ಗೋಲ್ ಆಗಿ ಪರಿವರ್ತಿಸಿದ ಅವರು, ಮತ್ತೆ ಒಂದು ನಿಮಿಷದ ಅಂತರದಲ್ಲಿ ಅದ್ಭುತ ಗೋಲ್ ಬಾರಿಸುವ ಮೂಲಕ ಪಂದ್ಯವನ್ನು 2-2 ಕ್ಕೆ ತಂದು ಸಮಬಲ ಸಾಧಿಸುವಂತೆ ಮಾಡಿದರು. ಫ್ರಾನ್ಸ್ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೇಳುವಂತೆ, ಆಟಗಾರರು ಮತ್ತೆ ಕೆಚ್ಚೆದೆಯಿಂದ ಆಡುವಂತೆ ಮಾಡಿದ ಎಂಬಾಪೆ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ತೆಗೆದುಕೊಂಡು ಹೋದರು. ನಿರಾಶೆಯ ಮಡಿಲಲ್ಲಿದ್ದ ಫ್ರಾನ್ಸ್ ಆಟಗಾರರು ಮತ್ತೆ ಪುಟಿದೇಳುವಂತೆ ಮಾಡಿದರು.
ನಿಗಧಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು 2-2 ಗೋಲುಗಳೊಂದಿಗೆ ಸಮಬಲ ಸಾಧಿಸಿದ್ದರಿಂದ ಮತ್ತೆ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಆಗ 108 ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ತಪ್ಪಿಸದ ಅರ್ಜೆಂಟೀನಾದ ಮೆಸ್ಸಿ ಸುಂದರ ಗೋಲು ಗಳಿಸುವ ಮೂಲಕ 3-2 ಅಂತರ ಸಾಧಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಛಲ ಬಿಡದಂತೆ ಆಡಿದ ಫ್ರಾನ್ಸ್‌ನ ಎಂಬಾಪೆ ಕಡೆಯ ಹಂತದಲ್ಲಿ ಪೆನಾಲ್ಟಿ ಕಿಕ್ ಅವಕಾಶವನ್ನು ನೇರ ಗೋಲ್ ಬಾರಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಗೆ ಪಾತ್ರರಾದರು. ಅಲ್ಲದೆ ಪಂದ್ಯವನ್ನು 3-3 ಸಮಬಲಕ್ಕೆ ತಂದು ಕಪ್ ಆಸೆಯನ್ನು ಜೀವಂತವಾಗಿರಿಸಿದರು.

ಪೆನಾಲ್ಟಿ ಶೂಟೌಟ್
ಹೆಚ್ಚುವರಿ ಸಮಯದಲ್ಲಿಯೂ ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪೆನಾಲ್ಟಿ ಶೂಟೌಟ್ ನೀಡಲಾಯಿತು. ಮೊದಲು ಕಿಕ್ ಮಾಡುವ ಅವಕಾಶ ಪಡೆದ ಫ್ರಾನ್ಸ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಎಂಬಾಪೆ ಚೆಂಡನ್ನು ಗೋಲ್ ಪೋಸ್ಟ್ ತಲುಪಿಸಿದರು. ಅದೇ ರೀತಿ ಅರ್ಜೆಂಟೀನಾದ ಮೆಸ್ಸಿ ಸಹ ಗುರಿ ತಪ್ಪಲಿಲ್ಲ. ಆದರೆ ಫ್ರಾನ್ಸ್ ತನ್ನ ಎರಡನೆ ಪ್ರಯತ್ನದಲ್ಲಿ ವಿಫಲವಾಯಿತು. ಅರ್ಜೆಂಟೀನಾ ತನ್ನ ನಾಲ್ಕು ಪ್ರಯತ್ನಗಳಲ್ಲಿ ನಾಲ್ಕು ಪೆನಾಲ್ಟಿ ಗೋಲ್ ಗಳಿಸಿದರೆ, ಫ್ರಾನ್ಸ್ ಕೇವಲ ಎರಡು ಗೋಲು ಗಳಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಎಂಬಾಪೆಯ ಶ್ರಮ ವ್ಯರ್ಥವಾಯಿತು. ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ (4-2 ಅಂತರದಲ್ಲಿ) ಗೆದ್ದು ಸಂಭ್ರಮಿಸಿತು. ಮೆಸ್ಸಿ ತನ್ನ ಬಹುದಿನದ ವಿಶ್ವಕಪ್ ಗೆಲುವಿನ ಕನಸು ನನಸಾಗಿಸಿಕೊಂಡರು. ಅವರ ವಿದಾಯಕ್ಕೆ ಸೂಕ್ತ ಗೌರವ ದೊರಕಿತೆಂಬ ಭಾವ ಎಲ್ಲರಲ್ಲಿ ಮೂಡಿತು.

ಗೋಲ್ಡನ್ ಬೂಟ್ ಗೆದ್ದ ಎಂಬಾಪೆ, ಗೋಲ್ಡನ್ ಬಾಲ್ ತನ್ನದಾಗಿಸಿಕೊಂಡ ಮೆಸ್ಸಿ
ಈ ವಿಶ್ವಕಪ್‌ನಲ್ಲಿ 8 ಗೋಲು ಗಳಿಸಿದ ಕಿಲಿಯನ್ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆದರೆ ಫ್ರಾನ್ಸ್ ಸೋತ ನಿರಾಸೆಯಲ್ಲಿ ಅವರು ಅದನ್ನು ಸಂಭ್ರಮಿಸಲೇ ಇಲ್ಲ. ಇನ್ನೊಂದೆಡೆ 7 ಗೋಲ್ ಗಳಿಸಿದ ಮೆಸ್ಸಿಗೆ ಗೋಲ್ಡನ್ ಬಾಲ್ ಪ್ರಶಸ್ತಿ ದಕ್ಕಿತು. ಗೋಲ್ಡನ್ ಗ್ಲೋವ್ ಪ್ರಶಸ್ತಿ ಅರ್ಜೆಂಟೀನಾದ ಎಮಿಲಿಯಾನೋ ಮಾರ್ಟಿನೆಜ್ ಪಾಲಾದರೆ, FIFA ಯುವ ಆಟಗಾರ ಪ್ರಶಸ್ತಿಯನ್ನು ಅದೇ ದೇಶದ ಎಂಝೋ ಫೆರ್ನಾಂಡಿಸ್ ತನ್ನದಾಗಿಸಿಕೊಂಡರು.
ಇದನ್ನೂ ಓದಿ: ವರ್ಡ್‌ಕಪ್ ಗೆಲುವಿನ ನಂತರ ನಿವೃತ್ತಿಯ ಯೋಚನೆಯಿಂದ ಹಿಂದೆ ಸರಿದ ಮೆಸ್ಸಿ


