Homeಕರ್ನಾಟಕಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ವಿವಾದ: ಮಹನೀಯರ ಚಿತ್ರಗಳನ್ನಿಡಿದು ಕಾಂಗ್ರೆಸ್‌ ಧರಣಿ

ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ವಿವಾದ: ಮಹನೀಯರ ಚಿತ್ರಗಳನ್ನಿಡಿದು ಕಾಂಗ್ರೆಸ್‌ ಧರಣಿ

- Advertisement -
- Advertisement -

ಸುವರ್ಣಸೌಧದ ಸಭಾಂಗಣದಲ್ಲಿ ಸಾವರ್ಕರ್‌ ಭಾವಚಿತ್ರ ಅಳವಡಿಕೆ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಮಹನೀಯರ ಭಾವಚಿತ್ರಗಳನ್ನು ಹಿಡಿದು ಕಾಂಗ್ರೆಸ್ ನಾಯಕರು ಸುವರ್ಣಸೌಧದ ಹೊರಗೆ ಧರಣಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಮಹರ್ಷಿ ವಾಲ್ಮೀಕಿ, ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಬಾಯ್ ಪಟೇಲ್, ಕುವೆಂಪು ಮತ್ತಿತರ ಮಹನೀಯರ ಭಾವಚಿತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹನೀಯರ ಚಿತ್ರಗಳನ್ನಿಡಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರ ನಾಯಕರು ಬೆಳಗಾವಿ ಸುವರ್ಣಸೌಧದ ಪ್ರವೇಶದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ.ಶಿವಕುಮಾರ್ ಮಾತನಾಡಿ, “ವಿಧಾನಸಭೆ ಕಲಾಪ ನಡೆಯಬಾರದು ಎಂಬುದು ಅವರ ಅಪೇಕ್ಷೆ. ಕಲಾಪವನ್ನು ಅಡ್ಡಿಪಡಿಸಲು ಯೋಚಿಸಿದ್ದಾರೆ. ಸರ್ಕಾರದ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ವಿಚಾರಗಳನ್ನು ಎತ್ತಲಿದ್ದೇವೆ ಎಂಬ ಕಾರಣಕ್ಕೆ ಫೋಟೋ ವಿಚಾರವನ್ನು ತಂದಿದ್ದಾರೆ. ಸರ್ಕಾರ ಬಳಿ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ” ಎಂದು ತಿಳಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಯಾರ ಭಾವಚಿತ್ರ ಹಾಕುವುದಕ್ಕೂ ನನ್ನ ವಿರೋಧವಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಬಯಸಿದೆ” ಎಂದು ಆರೋಪಿಸಿದ್ದಾರೆ.

“ಏಕಾಏಕಿ ಭಾವಚಿತ್ರ ಅಳವಡಿಕೆ ಮಾಡಿದ್ದಾರೆ. ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಇರಲಿಲ್ಲ. ಮಾಧ್ಯಮದ ಮೂಲಕ ತಿಳಿದುಕೊಂಡೆ. ಯಾರದೇ ಫೋಟೋ ಇಡಲು ವಿರೋಧ ಇಲ್ಲ. ಆದರೆ ಚರ್ಚೆ ಆಗದೆ ಇಟ್ಟಿರುವುದಕ್ಕೆ ನಮ್ಮ ವಿರೋಧವಿದೆ.‌ ನಾವು ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಕಾನೂನು‌ ಸುವ್ಯವಸ್ಥೆ, ಭ್ರಷ್ಟಾಚಾರ ವಿಚಾರಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಫೋಟೋ ವಿವಾದ ಮುನ್ನಲೆಗೆ‌ ತಂದಿದ್ದಾರೆ” ಎಂದು ದೂರಿದ್ದಾರೆ.

ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಾವರ್ಕರ್ ಫೋಟೋವನ್ನು ಸುವರ್ಣಸೌಧದಲ್ಲಿ ಅನಾವರಣ ಮಾಡಲಾಗಿದೆ. ಸಾವರ್ಕರ್ ಜೊತೆಗೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಸ್ವಾಮಿ ವಿವೇಕಾನಂದ, ಬಸವಣ್ಣರ ಫೋಟೋಗಳನ್ನೂ ಇಡಲಾಗಿದೆ.

ಇದನ್ನೂ ಓದಿರಿ: ಮಾಯಾಜಾಲದ ಪರದೆ ಸರಿದಾಗ; ಉಪಚುನಾವಣೆ ಫಲಿತಾಂಶಗಳು ಹೇಳುವ ಸುನಾಮಿ ಸತ್ಯ

ರಾಷ್ಟ್ರ ಹಾಗೂ ರಾಜ್ಯದ ಮಹಾನ್‌ ವ್ಯಕ್ತಿಗಳ ಚಿತ್ರಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕುವೆಂಪು, ನಾರಾಯಣಗುರು ಅಂತಹ ದಾರ್ಶನಿಕರ ಫೋಟೋ ಏಕಿಲ್ಲ ಎಂದು ಕೇಳುತ್ತಿದೆ.

ಸಾವರ್ಕರ್ ವಿಚಾರವಾಗಿ ಚರ್ಚೆ ಮಾಡಿದರೆ ಬಿಜೆಪಿ ಹಿಂದುತ್ವ ವಿಚಾರವನ್ನ ಮುನ್ನಲೆಗೆ ತರಲಿದೆ. ಇದು ಚುನಾವಣೆಗೂ ಮೊದಲು ಧ್ರುವಿಕರಣಕ್ಕೆ ಸಹಾಯವಾಗಲಿದೆ. ಹೀಗಾಗಿ ಇದರ ಬದಲಿಗೆ ಇನ್ನಿತರ ಮಹಾನ್ ನಾಯಕರ ಚಿತ್ರಗಳಿಗೆ ಬೇಡಿಕೆ ಇಟ್ಟು ಹೋರಾಟ ರೂಪಿಸಲು ನಿರ್ಧರಿಸಿದೆ. ಸಾವರ್ಕರ್​ ಫೋಟೋ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಅಸೆಂಬ್ಲಿ ಹಾಲ್​ನಲ್ಲಿ ಹಲವು ಮಹನೀಯರ ಫೋಟೋ ಅಳವಡಿಸಬೇಕಿದೆ. ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನೆಹರು. ನಾರಾಯಣಗುರು, ಡಾ.ಬಿ.ಆರ್​.ಅಂಬೇಡ್ಕರ್​​, ವಲ್ಲಭ ಬಾಯಿ ಪಟೇಲ್, ಬಾಬು ಜಗಜೀವನ ರಾಮ್​​, ಕುವೆಂಪು ಭಾವಚಿತ್ರಗಳನ್ನು ಹಾಕಬೇಕು. ದಾರ್ಶನಿಕರು, ವಿಚಾರವಂತರು, ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...