Homeಮುಖಪುಟಮಾಯಾಜಾಲದ ಪರದೆ ಸರಿದಾಗ; ಉಪಚುನಾವಣೆ ಫಲಿತಾಂಶಗಳು ಹೇಳುವ ಸುನಾಮಿ ಸತ್ಯ

ಮಾಯಾಜಾಲದ ಪರದೆ ಸರಿದಾಗ; ಉಪಚುನಾವಣೆ ಫಲಿತಾಂಶಗಳು ಹೇಳುವ ಸುನಾಮಿ ಸತ್ಯ

- Advertisement -
- Advertisement -

ಡಿಸೆಂಬರ್ 8ರಂದು ಚುನಾವಣಾ ಫಲಿತಾಂಶ ಹೊರಬಿದ್ದ ಕ್ಷಣದಿಂದಲೂ ಮಾಧ್ಯಮಗಳು ’ಮೋದಿ ಸುನಾಮಿ’ ಬಗ್ಗೆಯೇ ಬೊಂಬಡಾ ಬಾರಿಸುತ್ತಿವೆ. ಮಾರಿಕೊಂಡ ಮಾಧ್ಯಮಗಳ ಮಿತಿಮೀರಿದ ಪ್ರಲಾಪದ ಹಿಂದಿನ ಉದ್ದೇಶ ಒಂದೇ. 2024ರ ಲೋಕಸಭಾ ಚುನಾವಣೆಯಲ್ಲೂ ಇದೇ ತರದ ಫಲಿತಾಂಶ ಬರಲಿದೆ ಎಂಬ ಫೇಕ್ ನರೇಟಿವ್ ಕಟ್ಟುವುದು, ’ಮೋದಿ ಸುನಾಮಿ’ಗೆ ಎದುರಾಳಿಯೇ ಇಲ್ಲವೆಂಬಂತೆ ಬಿಂಬಿಸುವುದು.

ಆದರೆ ಗುಜರಾತ್‌ನ ಜೊತೆಜೊತೆಗೇ ನಡೆದ ಚುನಾವಣೆಗಳ ಫಲಿತಾಂಶಗಳು ಬೇರೆಯದೇ ಕತೆ ಹೇಳುತ್ತಿವೆ. ಹಿಮಾಚಲ ಪ್ರದೇಶದ ವಿಧಾನಸಭೆ, ದೆಹಲಿಯ ನಗರಸಭೆ ಹಾಗೂ ಐದು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮಣ್ಣುಮುಕ್ಕಿರುವುದು ಹಗಲಿನಷ್ಟೇ ಸತ್ಯ. ಗೋದಿ ಮೀಡಿಯಾಗಳು ಈ ಅಂಶಗಳಿಗೆ ಯಾವುದೇ ಮಹತ್ವ ನೀಡದೆ ಗುಜರಾತ್ ಗೆಲುವನ್ನು ತಮ್ಮದೇ ಗೆಲುವೆಂಬಂತೆ ಸಂಭ್ರಮಿಸುತ್ತಿರುವ ಸನ್ನಿವೇಶದಲ್ಲಿ ಈ ವಿದ್ಯಮಾನವನ್ನು ಸ್ವಲ್ಪ ಆಳವಾಗಿ ಕೆದಕಿ ನೋಡಬೇಕಾದ ಅಗತ್ಯವಿದೆ.

ಉಪಚುನಾವಣೆ ಬಿಚ್ಚಿಟ್ಟ ಸತ್ಯಗಳು

ಗುಜರಾತಿನಲ್ಲಿ ಡಿಸೆಂಬರ್ 5ರಂದು ಎರಡನೇ ಹಂತದ ಚುನಾವಣೆ ನಡೆದ ದಿನವೇ ಐದು ರಾಜ್ಯಗಳ ಏಳು ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಉತ್ತರಪ್ರದೇಶದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆ ಹಾಗೂ ಒರಿಸ್ಸಾ, ಛತ್ತೀಸ್‌ಘಡ, ಬಿಹಾರ ಮತ್ತು ರಾಜಸ್ಥಾನಗಳ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶವೂ ಡಿಸೆಂಬರ್ 8ರಂದೇ ಹೊರಬಿದ್ದಿದೆ. ಒಟ್ಟು ಏಳು ಸ್ಥಾನಗಳಲ್ಲಿ ಮೋದಿಯವರ ಪಕ್ಷ ಐದು ಸ್ಥಾನಗಳಲ್ಲಿ ಮಕಾಡೆ ಬಿದ್ದಿದೆ. ಉಳಿದ ಎರಡು ಸ್ಥಾನಗಳಲ್ಲೂ ಬಿಜೆಪಿ ಸೀದಾಸಾದಾ ದಾರಿಯಲ್ಲಿ ಗೆಲುವು ಸಾಧಿಸಿದ್ದಲ್ಲ. ಆ ಕ್ಷೇತ್ರಗಳಲ್ಲಿ ನಡೆದಿದ್ದೇನು ಎಂಬುದನ್ನು ಒಳಹೊಕ್ಕು ನೋಡಿದರೆ ಹಲವು ವಿವಾದಾಸ್ಪದ ಕತೆಗಳು ಹೊರಬೀಳುತ್ತವೆ.

ಆಜಂಖಾನ್

ಉತ್ತರಪ್ರದೇಶದ ರಾಂಪುರ ವಿಧಾನಸಭಾ ಕ್ಷೇತ್ರದ ಕತೆಯನ್ನೇ ನೋಡಿ. ಈಗ ಬಿಜೆಪಿಯ ಅಭ್ಯರ್ಥಿ ಇಲ್ಲಿನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಲ್ಲೊಂದು ವಿಶೇಷ ಅಂಶವಿದೆ. ಅದೇನೆಂದರೆ ಇಲ್ಲಿ ಮುಸ್ಲಿಂ ಜನಸಂಖ್ಯೆ ಶೇಕಡ 60ಕ್ಕಿಂತ ಹೆಚ್ಚು. ಹಾಗಾದಲ್ಲಿ ಬಿಜೆಪಿ ಗೆದ್ದದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆಯೆ? ಅಲ್ಲೇ ಇರೋದು ಮಸಲತ್ತು.

ಸ್ವಲ್ಪ ಇತಿಹಾಸ ನೋಡೋಣ. ಸಹಜವಾಗಿಯೇ ಈ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಮುಸ್ಲಿಂ ಅಭ್ಯರ್ಥಿಗಳೇ ಅನಾಯಾಸವಾಗಿ ಆರಿಸಿ ಬರುತ್ತಿದ್ದರು. ಕಳೆದೆರಡು ದಶಕಗಳಿಂದ ಈ ಕ್ಷೇತ್ರ ಸಮಾಜವಾದಿ ಪಕ್ಷದ ಹಿಡಿತದಲ್ಲಿದೆ. ಆಜಂಖಾನ್ ಎಂಬ ಸಮಾಜವಾದಿ ಪಕ್ಷದ ನಾಯಕ, ಮಾಜಿ ಡಾನ್ ಕಂ ಹಾಲಿ ಉದ್ಯಮಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ. ಇದೇ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಆಜಂಖಾನ್ ವಿರುದ್ಧ ಬಿಜೆಪಿ ಅಭ್ಯರ್ಥಿ 55,141 ಮತಗಳ ಅಂತರದಲ್ಲಿ ಸೋತಿದ್ದರು. 2017ರ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಅಂತರ 46,842 ಮತಗಳು. 2012ರಲ್ಲಿ ಸಮೀಪ ಸ್ಪರ್ಧಿ ಕಾಂಗ್ರೆಸ್‌ಗಿಂತಲೂ 63,269 ಮತಗಳ ಅಂತರದಿಂದ ಆಜಂಖಾನ್ ಗೆದ್ದು ಬಂದಿದ್ದರು. ಹೀಗಾಗಿ ರಾಂಪುರ ಆಜಂಖಾನ್‌ನ ಭದ್ರಕೋಟೆಯೆಂದೇ ಪ್ರಸಿದ್ಧಿ.

ಇದನ್ನೂ ಓದಿ: ಹಿಮಾಚಲ ಪ್ರದೇಶ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಸೋಲು

2012ರ ಚುನಾವಣೆಗೆ ಮುಂಚೆ ಈ ಕ್ಷೇತ್ರದಲ್ಲಿ ಬಿಜೆಪಿ ನಾಲ್ಕನೇ ಅಥವ ಐದನೇ ಸ್ಥಾನದಲ್ಲಿರುತ್ತಿತ್ತು. ಯಾಕೆಂದರೆ ಆಗಿನ್ನೂ ಮುಝಫರ್‌ನಗರ ದಂಗೆ ನಡೆದಿರಲಿಲ್ಲ. 2013ರಲ್ಲಿ ಮುಝಫರ್‌ನಗರ ದಂಗೆಯ ನಂತರದ ಕೋಮು ಧ್ರುವೀಕರಣದ ಪರಿಣಾಮವೆಂಬಂತೆ, ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರಪ್ರದೇಶದ ಒಟ್ಟು 80 ಸ್ಥಾನಗಳ ಪೈಕಿ 71 ಸ್ಥಾನಗಳ ಭರ್ಜರಿ ಗೆಲುವು ಸಾಧಿಸಿ ಮೋದಿಯವರನ್ನು ಪಟ್ಟಕ್ಕೇರಿಸಲು ದೊಡ್ಡ ಮಟ್ಟದಲ್ಲಿ ಸಹಕರಿಸಿತ್ತು. ನಂತರ 2017ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 403 ಸ್ಥಾನಗಳ ಪೈಕಿ 312 ಸ್ಥಾನಗಳಲ್ಲಿ ಗೆದ್ದು ಆದಿತ್ಯನಾಥ ಎಂಬ ಹೆಸರಿನ ’ಸನ್ಯಾಸಿ’ ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ.

2017ರಲ್ಲಿ ಅಧಿಕಾರ ಹಿಡಿದ ನಂತರ ವಿರೋಧ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕೇಸುಗಳನ್ನು ದಾಖಲಿಸುವುದು, ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡುವ ಪರ್ವ ಶುರುವಾಯ್ತು. ಅದರಲ್ಲೂ ಮುಸ್ಲಿಂ ಅಭ್ಯರ್ಥಿ ಮೇಲಾಗಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ಸಿಕ್ಕಾಗ ಸುಮ್ಮನಿರುತ್ತಾರೆಯೆ? ಆಜಂಖಾನ್ ವಿರುದ್ಧ ಕೇಸುಗಳ ಸುರಿಮಳೆಯಾಯ್ತು. ಇದ್ದದ್ದು ಇಲ್ಲದ್ದು ಎಲ್ಲವೂ. ಒಟ್ಟು 80ಕ್ಕೂ ಅಧಿಕ ಕೇಸುಗಳು. ಅದರಲ್ಲಿ ಯಾರದೋ ಕುರಿ ಕದ್ದ ಅಂತಲೂ, ಲೈಬ್ರರಿಯಿಂದ ಪುಸ್ತಕ ಕದ್ದ ಅಂತಲೂ ಕೇಸುಗಳು ದಾಖಲಾಗಿದ್ದವು. ಮುಸ್ಲಿಂ ಸಮುದಾಯವನ್ನು ವಿಲನ್‌ಗಳಂತೆ ಚಿತ್ರಿಸಲು ಆಜಂಖಾನ್‌ನನ್ನು ಒಂದು ಅಸ್ತ್ರವನ್ನಾಗಿ ಬಳಸಲಾಯ್ತು.

ಆಕಾಶ್ ಸಕ್ಸೇನಾ

ಇದರ ಭಾಗವಾಗಿಯೇ, ಚುನಾವಣಾ ಭಾಷಣದಲ್ಲಿ ಪ್ರಧಾನಿಯವರನ್ನು ನಿಂದಿಸಿದ ಎಂತಲೂ ಕೋಮುದ್ವೇಷ ಬಿತ್ತಲು ಪ್ರಯತ್ನಿಸಿದ ಎಂತಲೂ ಕೇಸುಗಳನ್ನು ದಾಖಲಿಸಲಾಯ್ತು. ಈ ಕೇಸುಗಳ ’ವಿಚಾರಣೆ’ ನಡೆದು ಆಜಂಖಾನ್ ತಪ್ಪಿತಸ್ಥನೆಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಆದಕಾರಣ ಆಜಂಖಾನ್‌ನ ಶಾಸಕ ಸ್ಥಾನ ಕೂಡ ರದ್ದಾಗಿ ಈ ಉಪಚುನಾವಣೆಗೆ ಕಾರಣವಾಯ್ತು. ಬಿಜೆಪಿಯಿಂದ ಹಿಂದೆ ಎರಡು ಬಾರಿ ಸೋತಿದ್ದ ಅಭ್ಯರ್ಥಿ ಆಕಾಶ್ ಸಕ್ಸೇನಾ ಕಣಕ್ಕಿಳಿದಿದ್ದರೆ ಸಮಾಜವಾದಿ ಪಕ್ಷದಿಂದ ಆಜಂಖಾನ್ ಹತ್ತಿರದ ಬಂಧು ಅಸೀಂ ರಾಜಾ ಕಣದಲ್ಲಿದ್ದರು.

ಈ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾರನ್ನು 34,136 ಮತಗಳ ಅಂತರದಿಂದ ಗೆಲ್ಲಿಸಿದೆ. ಇದೇ ಬಿಜೆಪಿ ಅಭ್ಯರ್ಥಿ 2022ರ ಮಾರ್ಚ್‌ಲ್ಲಿ 55,141 ಮತಗಳ ಭಾರೀ ಅಂತರದಲ್ಲಿ ಆಜಂಖಾನ್ ವಿರುದ್ಧ ಸೋತಿದ್ದರು. ಈ ಎಂಟು ತಿಂಗಳಿನಲ್ಲಿ ಫಲಿತಾಂಶ ತಿರುವುಮುರುವಾಗಲು ಅದೇನು ಮ್ಯಾಜಿಕ್ ನಡೆದಿರಬಹುದು? ಮುಸ್ಲಿಂ ಮತದಾರರು ಮತ ಚಲಾಯಿಸದಂತೆ ಪೊಲೀಸರು ಖುದ್ದಾಗಿ ಬೆದರಿಕೆ ಒಡ್ಡಿದ್ದರು ಎಂಬ ಘೋರ ಆರೋಪ ಕೇಳಿ ಬಂದಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಮುಸ್ಲಿಂ ಮತದಾರರನ್ನು ಓಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹೆಚ್ಚಿನ ಮುಸ್ಲಿಮರು ಚುನಾವಣೆಯ ದಿನದಂದು ಮನೆಗಳಿಂದ ಹೊರಗೇ ಬರಲಿಲ್ಲ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಸಮಾಜವಾದಿ ಪಕ್ಷ ದೂರು ಕೂಡ ದಾಖಲಿಸಿದೆ. ಮುಸ್ಲಿಂ ಸಮುದಾಯದ ಪರವಾಗಿ ವಕೀಲರೊಬ್ಬರು ಸುಪ್ರೀಂಕೋರ್ಟ್‌ನಲ್ಲೂ ಕೇಸು ದಾಖಲಿಸಿದ್ದಾರೆ. ಈ ದಾರುಣ ವಿದ್ಯಮಾನಕ್ಕೆ ಸಾಕ್ಷಿ ಎಂಬಂತೆ ಈ ಬಾರಿ ರಾಂಪುರದಲ್ಲಿ ಶೇಕಡಾವಾರು ಅತ್ಯಲ್ಪ ಮತದಾನ ದಾಖಲಾಗಿದೆ. ಮಾಮೂಲಿಯಾಗಿ 55 – 60% ಮತಗಳು ಚಲಾವಣೆಯಾಗುತ್ತಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಚಲಾವಣೆಯಾದ ಮತಗಳು ಶೇಕಡ 33.8 ಮಾತ್ರ!

ಬಿಜೆಪಿಯ ಈ ಗೆಲುವಿನ ಗುಟ್ಟನ್ನು ಅರ್ಥ ಮಾಡಿಕೊಳ್ಳುವುದು ಓದುಗರಿಗೆ ಬಿಟ್ಟದ್ದು.

ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದ ಮತ್ತೊಂದು ಕ್ಷೇತ್ರ ಬಿಹಾರದ ಕುರ್ಹಾನಿ. ಈ ಕ್ಷೇತ್ರದ ಆರ್‌ಜೆಡಿ ಶಾಸಕ ಅನಿಲ್ ಕುಮಾರ್ ಸಾಹನಿ ಅವರು ಅನರ್ಹಗೊಂಡಿದ್ದರಿಂದ ತೆರವಾಗಿದ್ದ ಕ್ಷೇತ್ರ ಇದು. ಈ ಉಪಚುನಾವಣೆ ನಿಗದಿಯಾಗುವ ಕೆಲವು ವಾರಗಳ ಮೊದಲಷ್ಟೇ ಸಿಬಿಐನ ನ್ಯಾಯಾಲಯ ಅನಿಲ್ ಕುಮಾರ್ ಸಾಹನಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ವಿಮಾನ ಪ್ರಯಾಣ ಭತ್ಯೆ ಇತ್ಯಾದಿಗಳಿಗೆ ಸುಳ್ಳು ಬಿಲ್‌ಗಳನ್ನು ನೀಡಿ ಸರ್ಕಾರಿ ಬೊಕ್ಕಸಕ್ಕೆ ವಂಚಿಸಿದ್ದ ಕೇಸ್ ಅದು.

ಅನಿಲ್ ಕುಮಾರ್ ಸಾಹನಿ

ಹಿಂದಿನ ಅವಧಿಯ ಬಿಜೆಪಿ ಶಾಸಕ ಕೇದಾರ್ ಪ್ರಸಾದ್ ಗುಪ್ತ 2020ರ ಚುನಾವಣೆಯಲ್ಲಿ ಆರ್‌ಜೆಡಿಯ ಅನಿಲ್ ಕುಮಾರ್ ಸಾಹನಿ ಎದುರು ಕೇವಲ 712 ಮತಗಳ ಅಂತರದಿಂದ ಸೋತಿದ್ದರು. ಅನಿಲ್ ಸಾಹನಿ ಅನರ್ಹಗೊಂಡ ನಂತರ ಜೆಡಿಯು ಅಭ್ಯರ್ಥಿ ಎದುರು 3649 ಮತಗಳ ಅಂತರದಿಂದ ಮತ್ತೆ ಗೆಲುವು ಸಾಧಿಸಿದ್ದಾರೆ. ಇಷ್ಟು ಹೇಳಿದರೆ ಏನೂ ಅರ್ಥವಾಗೋಲ್ಲ. ಇಲ್ಲಿ ಮೂರನೇ ಸ್ಥಾನ ಪಡೆದ ಪಕ್ಷವೊಂದಿದೆ. ನಿಷಾದ್ (ಬೆಸ್ತರು) ಸಮುದಾಯದಲ್ಲಿ ಗಟ್ಟಿ ಬೆಂಬಲ ಹೊಂದಿರುವ ಈ ಪಕ್ಷದ ಹೆಸರು ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ). ಈ ಉಪಚುನಾವಣೆಯಲ್ಲಿ ಬರೋಬ್ಬರಿ 10,000 ಮತಗಳನ್ನು ಪಡೆದು ತಾನು ಠೇವಣಿ ಕಳೆದುಕೊಂಡು, ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಟ್ಟಿದೆ. ಆಶ್ಚರ್ಯದ ಸಂಗತಿಯೆಂದರೆ ಫಲಿತಾಂಶ ಹೊರಬಿದ್ದು ಠೇವಣಿ ಕಳೆದುಕೊಂಡ ನಂತರ ಲಾಡು ಹಂಚಿ ಸಂಭ್ರಮಾ ಆಚರಣೆ ಮಾಡಿದೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಈ ಪಕ್ಷದ ಎಲ್ಲ ಮೂರೂ ಜನ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸ್ಥಳೀಯ ಪಕ್ಷಗಳನ್ನು ಆಪೋಷನ ತೆಗೆದುಕೊಳ್ಳುವ ಬಿಜೆಪಿಯ ರಾಜಕಾರಣಕ್ಕೆ ಇದೂ ಒಂದು ನಿದರ್ಶನ.

ಇದನ್ನೂ ಓದಿ: ಪಡುಕೋಣೆಯವರ ‘ಪಠಾಣ್’ ಸಿನಿಮಾ ಬ್ಯಾನ್‌ ಮಾಡುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ಬೆದರಿಕೆ

ಗೆದ್ದ ಮೇಲಿನ ಎರಡು ಸ್ಥಾನಗಳಲ್ಲದೆ ಬಿಜೆಪಿ ಕಳೆದುಕೊಂಡ ಉತ್ತರಪ್ರದೇಶದ ಖಟೌಲಿ ಕ್ಷೇತ್ರದ ಕತೆ ಕೂಡ ಆಸಕ್ತಿಕರವಾಗಿದೆ. ಈ ಕ್ಷೇತ್ರದಿಂದ ಬಿಜೆಪಿ ಶಾಸಕನಾಗಿ 2017 ಮತ್ತು 2022ರ ಚುನಾವಣೆಯಲ್ಲಿ ಆರಿಸಿ ಬಂದಿದ್ದ ವ್ಯಕ್ತಿ ವಿಕ್ರಮ್ ಸಿಂಗ್ ಸೈನಿ. ಈತ 2017ಕ್ಕೆ ಮುಂಚೆ ಕರ್ವಾಲ್ ಗ್ರಾಮದ ಪ್ರಧಾನನಾಗಿದ್ದ. ಮುಝಫರ್‌ನಗರದ ಕೋಮು ದಂಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಈತನ ಮೇಲೆ ಕೇಸುಗಳು ದಾಖಲಾಗಿದ್ದವು. ಈತನ ’ಸಾಧನೆ’ಯನ್ನು ಪರಿಗಣಿಸಿ ಬಿಜೆಪಿ ಪಕ್ಷ ಈತನಿಗೆ ಟಿಕೆಟ್ ಕೊಟ್ಟು ಎರಡು ಬಾರಿ ಶಾಸಕನಾಗಿ ಆರಿಸಿ ಬರಲು ಅನುವು ಮಾಡಿಕೊಟ್ಟಿತ್ತು.

ಆದರೆ ಕೋಮು ಹಿಂಸಾಚಾರದಲ್ಲಿ ಈತನ ಪಾತ್ರದ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳಿದ್ದ ಕಾರಣ ವಿಶೇಷ ನ್ಯಾಯಾಲಯವೊಂದು ಈತನಿಗೆ ಇತ್ತೀಚೆಗೆ ಜೈಲು ಶಿಕ್ಷೆ ವಿಧಿಸಿತ್ತು. ಹೀಗೆ ಅನರ್ಹಗೊಂಡ ಸ್ಥಾನಕ್ಕೆ ಉಪಚುನಾವಣೆ ಅನಿವಾರ್ಯವಾಗಿತ್ತು. ಕೋಮು ಹಿಂಸಾಚಾರಿಗಳಿಗೆ ಸನ್ಮಾನ ಮಾಡುತ್ತಲೇ ಉನ್ನತಿಗೇರಿರುವ ಬಿಜೆಪಿ ಪಕ್ಷ ಈತನ ಪತ್ನಿ ರಾಜಕುಮಾರಿ ಸೈನಿ ಅವರಿಗೆ ಟಿಕೆಟ್ ನೀಡಿತ್ತು. ಪ್ರತಿ ತಂತ್ರ ಹೂಡಿದ ಎಸ್‌ಪಿ ಮತ್ತು ಆರ್‌ಎಲ್‌ಡಿ ಪಕ್ಷಗಳು ಬಾಹುಬಲಿ ಖ್ಯಾತಿಯ ಮದನ್ ಭಯ್ಯಾನನ್ನು ಕಣಕ್ಕಿಳಿಸಿದವು. ಸ್ವತಃ ಗುರ್ಜರ್ ಜಾತಿಗೆ ಸೇರಿದ ಈತನಿಗೆ ಜಾಟ್ ಸಮುದಾಯದಲ್ಲಿ ಅಪಾರ ಬೆಂಬಲವಿದೆ. ಪಕ್ಕದ ಕ್ಷೇತ್ರವೊಂದರಲ್ಲಿ ನಾಲ್ಕು ಬಾರಿ ಶಾಸಕನಾಗಿದ್ದ ವ್ಯಕ್ತಿ ಈತ. ಡಿಸೆಂಬರ್ 8ರಂದು ಫಲಿತಾಂಶ ಹೊರಬಿದ್ದಾಗ ಬಿಜೆಪಿ ಅಭ್ಯರ್ಥಿ 22,143 ಮತಗಳ ಅಂತರದಿಂದ ಸೋತಿದ್ದರು.

ನೆನಪಿಡಿ. ಇಲ್ಲಿ ’ಡಬಲ್ ಇಂಜಿನ್’ ಸರ್ಕಾರ ಇದೆ. ’ಹಿಂದೂ ಹೃದಯ ಸಾಮ್ರಾಟ್’ ಎಂದು ಕೋಮು ಪಡೆಗಳಿಂದ ಬಿರುದಾಂಕಿತರಾಗಿರುವ ಸಿಎಂ ಯೋಗಿಯಾಗಲಿ, ’ಸುನಾಮಿ’ ಎಬ್ಬಿಸಿದ್ದಾರೆಂಬ ಮೋದಿಯವರಾಗಲಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬುದು ಸೂರ್ಯನಷ್ಟೇ ಸತ್ಯ.

ಡಿಂಪಲ್ ಯಾದವ್

ಮೈನ್ಪುರಿ ಲೋಕಸಭಾ ಕ್ಷೇತ್ರದಲ್ಲಿ ಮುಲಾಯಂಸಿಂಗ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 6,18,120 ಮತಗಳನ್ನು ಪಡೆದ ಡಿಂಪಲ್ ಬಿಜೆಪಿ ಅಭ್ಯರ್ಥಿಯನ್ನು 2,88,461 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ಸ್ಪಷ್ಟವಾಗಿ ಬಿಜೆಪಿ ವಿರುದ್ಧದ ಅಲೆ ಕೆಲಸ ಮಾಡಿರುವುದು ಈ ಭಾರಿ ಅಂತರ ಗೋಚರಿಸುತ್ತದೆ.

ಇನ್ನು ರಾಜಸ್ಥಾನ ಮತ್ತು ಛತ್ತಿಸ್‌ಘಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಹಾಗೆಯೇ ಒರಿಸ್ಸಾದಲ್ಲಿ ಬಿಜು ಜನತಾದಳ ಅಧಿಕಾರದಲ್ಲಿರುವುದರಿಂದ ಅನಾಯಾಸವಾಗಿ ಆ ಪಕ್ಷಗಳು ಗೆಲುವು ಸಾಧಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಆಲ್ ಐಸ್ ಆನ್ ರಫಾ’: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡ ಪೋಸ್ಟ್‌ನ ಅರ್ಥವೇನು?

0
ಇಸ್ರೇಲ್‌ ರಫಾ ಮೇಲಿನ ಆಕ್ರಮಣದ ಮಧ್ಯೆ 'ಆಲ್ ಐಸ್ ಆನ್ ರಫಾ' ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡಿದೆ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಈ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಟ ದುಲ್ಕರ್...