Homeಮುಖಪುಟಪಡುಕೋಣೆಯವರ ‘ಪಠಾಣ್’ ಸಿನಿಮಾ ಬ್ಯಾನ್‌ ಮಾಡುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ಬೆದರಿಕೆ

ಪಡುಕೋಣೆಯವರ ‘ಪಠಾಣ್’ ಸಿನಿಮಾ ಬ್ಯಾನ್‌ ಮಾಡುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ಬೆದರಿಕೆ

- Advertisement -
- Advertisement -

ಬಾಲಿವುಡ್ ಚಿತ್ರ ‘ಪಠಾನ್‌’ನ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರಿಗೆ ಬಳಸಲಾಗಿರುವ ವೇಷಭೂಷಣದ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಕೆಲವು ದೃಶ್ಯಗಳನ್ನು ‘ತಿದ್ದುಪಡಿ’ ಮಾಡದಿದ್ದರೆ, ಸಿನಿಮಾ ಪ್ರದರ್ಶನದ ಬಗ್ಗೆ ಸರ್ಕಾರ ಏನು ಮಾಡಬೇಕು ಎಂದು ಯೋಚಿಸುತ್ತದೆ” ಎಂದಿದ್ದಾರೆ.

ರಾಜ್ಯ ಸರ್ಕಾರದ ವಕ್ತಾರರಾದ ಮಿಶ್ರಾ, “ದೀಪಿಕಾ ಪಡುಕೋಣೆ ಅವರು ಜೆಎನ್‌ಯು ಪ್ರಕರಣದಲ್ಲಿ ಕಂಡುಬಂದಂತೆ ತುಕ್ಡೆ ತುಕ್ಡೆ ಗ್ಯಾಂಗ್‌ನ ಬೆಂಬಲಿಗರಾಗಿದ್ದಾರೆ” ಎಂದು ದೂರಿದ್ದಾರೆ.

ಶಾರುಖ್ ಖಾನ್- ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾದ ನಂತರ ಮಿಶ್ರಾ ಅವರ ಹೇಳಿಕೆ ಹೊರಬಿದ್ದಿದೆ. ಹಾಡಿನಲ್ಲಿ ಕಂಡುಬರುವ ವೇಷಭೂಷಣಗಳು ಮೇಲ್ನೋಟಕ್ಕೆ ಅತ್ಯಂತ ಆಕ್ಷೇಪಾರ್ಹವಾಗಿವೆ ಎಂದು ಅವರು ತಕರಾರು ತೆಗೆದಿದ್ದಾರೆ. ಈ ಹಾಡನ್ನು ಕಲುಷಿತ ಮನಸ್ಥಿತಿಯಿಂದ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

“ದೃಶ್ಯಗಳನ್ನು ಮತ್ತು ಪಡುಕೋಣೆ ಅವರ ವೇಷಭೂಷಣಗಳನ್ನು (ಹಾಡಿನಲ್ಲಿ) ಸರಿಪಡಿಸಲು ನಾನು ವಿನಂತಿಸುತ್ತೇನೆ. ಇಲ್ಲದಿದ್ದರೆ ಈ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಪ್ರದರ್ಶಿಸಲು ಅನುಮತಿಸಬೇಕೇ ಅಥವಾ ಬೇಡವೇ ಎಂಬುದು ಪರಿಗಣಿಸಬೇಕಾದ ಪ್ರಶ್ನೆಯಾಗಿದೆ” ಎಂದು ಮಿಶ್ರಾ ಎಚ್ಚರಿಕೆ ನೀಡಿದ್ದಾರೆ.

ಇಂದೋರ್ ಜಿಲ್ಲೆಯ ಮೋವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಜೆಎನ್‌ಯು ಪ್ರಕರಣದಲ್ಲಿ ಕಂಡುಬರುವಂತೆ ಪಡುಕೋಣೆ ತುಕ್ಡೆ ತುಕ್ಡೆ ಗ್ಯಾಂಗ್‌ನ ಬೆಂಬಲಿಗರಾಗಿದ್ದಾರೆ” ಎಂದು ದೂರಿದ್ದಾರೆ.

2016ರಲ್ಲಿ ಜವಾಹರಲಾಲ್‌ ನೆಹರೂ ಯೂನಿವರ್ಸಿಟಿಯಲ್ಲಿ ನಡೆದ ಪ್ರತಿಭಟನೆಯ ನಂತರ ‘ತುಕ್ಡೆ-ತುಕ್ಡೆ ಗ್ಯಾಂಗ್’ ಪದವನ್ನು ಬಿಜೆಪಿ ಬಳಸಲಾರಂಭಿಸಿದೆ.

ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾದ ಪಠಾನ್ ಅನ್ನು ಜನವರಿ 25, 2023 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಗಮನಾರ್ಹ ಸಂಗತಿಯೆಂದರೆ ಮಧ್ಯಪ್ರದೇಶದ ಬಿಜೆಪಿಯ ಹಿರಿಯ ನಾಯಕ ಮಿಶ್ರಾ ಅಕ್ಟೋಬರ್‌ನಲ್ಲಿ ಇದೇ ರೀತಿಯ ಆಕ್ಷೇಪಗಳ ಮೂಲಕ ಸುದ್ದಿಯಲ್ಲಿದ್ದರು. ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಬಾಲಿವುಡ್ ಚಲನಚಿತ್ರ ‘ಆದಿಪುರುಷ್‌’ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದರು. ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು ತಪ್ಪಾದ ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

ಈ ವರ್ಷದ ಜುಲೈನಲ್ಲಿ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ‘ಕಾಳಿ’ಯ ವಿವಾದಾತ್ಮಕ ಪೋಸ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಅದರ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲು ಸೂಚಿಸಿದ್ದರು.

ಪ್ರಕಾಶ್ ರಾಜ್ ಆಕ್ಷೇಪ

ಈಗ ಎದ್ದಿರುವ ವಿವಾದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕೇಸರಿ ತೊಟ್ಟವರು ಅತ್ಯಾಚಾರಿಗಳಾದಾಗ ಪರವಾಗಿಲ್ಲ, ದ್ವೇಷ ಭಾಷಣ ಮಾಡಿದರೂ ಪರವಾಗಿಲ್ಲ, ದಲ್ಲಾಳಿ ಶಾಸಕರಾದರೂ ಓಕೆ, ಕೇಸರಿ ಧರಿಸಿದ ಸ್ವಾಮೀಜಿ ಅಪ್ರಾಪ್ತರನ್ನು ರೇಪ್‌ ಮಾಡಿದರೂ ಸರಿ- ಆದರೆ ಸಿನಿಮಾದಲ್ಲಿ (ಕೇಸರಿ) ಬಟ್ಟೆ ಧರಿಸುವಂತಿಲ್ಲ” ಎಂದು ಟೀಕಿಸಿದ್ದಾರೆ.

ನರೋತ್ತಮ ಮಿಶ್ರಾ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ಅಸಹ್ಯಕರ, ನಾವು ಇವುಗಳನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು. ಬಣ್ಣದ ಕುರುಡು” ಎಂದಿದ್ದಾರೆ. ‘ಅಂಧಭಕ್ತ್‌’ ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...