Homeಕರ್ನಾಟಕಮೂಗಿಗೆ ತುಪ್ಪ ಸವರಲು ಉಪಸಮಿತಿ ರಚನೆ: 4ನೇ ದಿನಕ್ಕೆ ಕಾಲಿಟ್ಟ ಒಳಮೀಸಲಾತಿ ಹೋರಾಟ

ಮೂಗಿಗೆ ತುಪ್ಪ ಸವರಲು ಉಪಸಮಿತಿ ರಚನೆ: 4ನೇ ದಿನಕ್ಕೆ ಕಾಲಿಟ್ಟ ಒಳಮೀಸಲಾತಿ ಹೋರಾಟ

- Advertisement -
- Advertisement -

ಡಿಸೆಂಬರ್‌ 11ರಂದು ಆರಂಭವಾದ ಒಳಮೀಸಲಾತಿ ಹೋರಾಟ ಬುಧವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ರಚಿಸಿರುವ ಉಪಸಮಿತಿಯ ವಿರುದ್ಧ ಒಳಮೀಸಲಾತಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ನೂಕಾಟದಲ್ಲಿ ಗಾಯಗೊಂಡ ಬಳಿಕ ಚಿಕಿತ್ಸೆ ಪಡೆದು ಮತ್ತೆ ಹೋರಾಟಕ್ಕೆ ಮರಳಿರುವ ಹಿರಿಯ ಮುಖಂಡರಾದ ಕರಿಯಪ್ಪ ಗುಡಿಮನಿಯವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು.

“ಮಳೆಯಲ್ಲಿ ನೆನೆಯದಂತೆ ಶಾಶ್ವತವಾದ ಟೆಂಟ್‌ ನಿರ್ಮಾಣ ಮಾಡಿದ್ದೇವೆ. ಈ ಭಾರಿಯ ಸದನದಲ್ಲಿ ಒಳಮೀಸಲಾತಿಯ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಒಳಮೀಸಲಾತಿ ಸಂಬಂಧ ಸರ್ಕಾರ ರಚಿಸಿರುವ ಉಪಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಸಮುದಾಯವನ್ನು ವಂಚಿಸಲು ಉಪಸಮಿತಿ ರಚಿಸಿದ್ದಾರೆ. ಮೂಗಿಗೆ ತುಪ್ಪ ಸವರಲು ಈ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ನಾವು ಕದಲುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಒಳಮೀಸಲಾತಿ ಹೋರಾಟಕ್ಕೆ ಶಾಶ್ವತವಾದ ವೇದಿಕೆ ನಿರ್ಮಿಸುತ್ತಿರುವುದು

“ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಒಳಮೀಸಲಾತಿ ಜಾರಿ ಕುರಿತು ಮುಂಬರುವ ಅಧಿವೇಶನದಲ್ಲಿ ಗಟ್ಟಿಯಾಗಿ ಮಾತನಾಡಬೇಕು. ತಾವು ಅಧಿಕಾರ ಬರುವ ಮೂಲಕವೇ ಸದಾಶಿವ ಆಯೋಗದ ವರದಿಯನ್ನು ಸಿದ್ದರಾಮಯ್ಯನವರು ಜಾರಿಗೊಳಿಸಬೇಕೆಂದೇನೂ ಇಲ್ಲ. ವಿರೋಧ ಪಕ್ಷದ ನಾಯಕರಾಗಿ ಅವರು ಸದನದಲ್ಲಿ ಈ ಕುರಿತು ಮೊದಲ ಆದ್ಯತೆಯ ಮೇರೆಗೆ ಮಾತನಾಡಬೇಕು. ವರದಿಯನ್ನು ಬಿಡುಗಡೆ ಮಾಡಲು ಒತ್ತಾಯ ತರಬೇಕು” ಎಂದು ಆಗ್ರಹಿಸಿದರು.

“ಹೋರಾಟದ ವೇಳೆ ಪೊಲೀಸರ ನೂಕಾಟದಲ್ಲಿ ನನಗೆ ಪೆಟ್ಟಾಗಿದೆ. ಸುಮಾರು 380 ಕಿಮೀ ನಡೆದು ಬಂದಾಗಲೂ ಯಾವುದೇ ತೊಂದರೆಯಾಗಲಿಲ್ಲ. ಆದರೆ ಮೊನ್ನೆಯ ಘಟನೆಯಲ್ಲಿ ಗಾಯಗೊಂಡೆ. ಈಗ ಕೊಂಚ ಚೇತರಿಸಿಕೊಂಡು ಹೋರಾಟಕ್ಕೆ ಮರಳಿದ್ದೇನೆ. ಹೋರಾಟದ ಮುಂಚೂಣಿಯಲ್ಲಿರುವ ಅಂಬಣ್ಣ ಅರೋಲಿಕರ್‌ ಅವರ ತಂದೆ ನಿಧನರಾಗಿದ್ದಾರೆ. ಹೀಗಾಗಿ ಅಂಬಣ್ಣ ಎಲ್ಲ ಕಾರ್ಯಗಳನ್ನು ಮುಗಿಸಿಕೊಂಡು ಇನ್ನೆರಡು ದಿನಗಳಲ್ಲಿ ವಾಪಸ್‌ ಬಂದು ಹೋರಾಟದೊಂದಿಗೆ ಕೂಡಿಕೊಳ್ಳಲಿದ್ದಾರೆ” ಎಂದು ಅವರು ಮಾಹಿತಿ ನೀಡಿದರು.

ಒಳಮೀಸಲಾತಿ ಹೋರಾಟಗಾರರಾದ ಬಿ.ಆರ್‌.ಭಾಸ್ಕರ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದು, “ಉಪ ಸಮಿತಿ ಎನ್ನುವ ನಾಟಕ ಬಂದ್ ಮಾಡಬೇಕು. ಹತ್ತು ಪರ್ಸೆಂಟ್‌ ಇಡಬ್ಲ್ಯೂಎಸ್‌ ಮೀಸಲಾತಿ‌ ಕೊಡುವಾಗ ಯಾವ ಉಪಸಮಿತಿ ಮಾಡಿದ್ದರು? ಪ್ರತೇಕ ಲಿಂಗಾಯತ ಧರ್ಮದ ಶಿಫಾರಸು ಮಾಡುವಾಗ ಯಾವ ಉಪಸಮಿತಿ ಕತೆ ಕೇಳಿದ್ದರು? ಸುಮ್ನೆ ಇದೆಲ್ಲಾ ಕತೆ, ಕವನಗಳನ್ನು ಬದಿಗಿಟ್ಟು ಒಳಮೀಸಲಾತಿ ಜಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ ಅಷ್ಟೇ” ಎಂದಿದ್ದಾರೆ.

“2018ರಲ್ಲಿ ರಚನೆಯಾದ ಉಪ ಸಮಿತಿ ಒಂದೂ ಸಭೆ ನಡೆಸಲಿಲ್ಲ. ಒಳಮೀಸಲಾತಿ ಜಾರಿಯೂ ಆಗಲಿಲ್ಲ. ಅದರ ಪರಿಣಾಮವಾಗಿ ಇವತ್ತು ಸಿದ್ದರಾಮಯ್ಯನವರು ಒಂದು ಕ್ಷೇತ್ರಕ್ಕಾಗಿ ಊರೂರು ಅಲೆಯುವಂತೆ ಮಾಡಿದ್ದಾಗಿದೆ. ಇಷ್ಟಾದರೂ ಈ ಬಿಜೆಪಿ ಸರ್ಕಾರ ಉಪಸಮಿತಿ ಎನ್ನುವ ನಾಟಕ ಶುರು ಮಾಡಿದೆ. ಮರ್ಯಾದೆಯಿಂದ ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಿ. ಇಲ್ಲದಿದ್ದರೆ ಬಿಜೆಪಿಗೆ ಹೇಗೆ ಪಾಠ ಕಲಿಸಬೇಕೆಂದು ಈ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ” ಎಂದು ತಿಳಿಸಿದ್ದಾರೆ.

“ಹೊಲೆ ಮಾದಿಗರಿಬ್ಬರೂ ಮನಸ್ಸು ಮಾಡಿದರೆ ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ. ಈ ಎರಡು ಸಮುದಾಯದ ಜಾತಿ ಜನಸಂಖ್ಯೆಗೆ ಅಷ್ಟು ಮಹತ್ತರ ಪಾತ್ರವಿದೆ” ಎಂದು ಗುಡುಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...