Homeಕರ್ನಾಟಕಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

ಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

- Advertisement -
- Advertisement -

ಮುಕ್ಕಾಲುಪಾಲು ಅರಣ್ಯದಿಂದ ಆವೃತವಾಗಿರುವ ಉತ್ತರ ಕನ್ನಡ ವಿಸ್ತೀರ್ಣದಲ್ಲಿ ಮೂರು ಗೋವಾ ರಾಜ್ಯಕ್ಕೆ ಸಮನಾಗಿದೆ. ಕರಾವಳಿ, ಮಲೆನಾಡು ಮತ್ತು ಅರೆ ಬಯಲುಸೀಮೆ ಒಳಗೊಂಡ ಈ ಜಿಲ್ಲೆ 10291 ಚ.ಕಿ.ಮೀ ನಷ್ಟು ದೊಡ್ಡದು. ವಾಸ್ತವ್ಯ ಹಾಗೂ ಸಾಗುವಳಿಗೆ ಯೋಗ್ಯವಾದ ಪ್ರದೇಶವಿರುವುದು ಶೇ.10 ರಷ್ಟು ಮಾತ್ರ. ಈ ವಿಶಾಲವಾದ ಜಿಲ್ಲೆಯನ್ನು ಎರಡಾಗಿ ವಿಭಾಗಿಸುವುದು ಆಡಳಿತಾತ್ಮಕವಾಗಿ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ನೈಸರ್ಗಿಕ ನ್ಯಾಯತತ್ವದಂತೆ ಸರಿಯಾದ ಕ್ರಮವೆಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಘಟ್ಟದ ಮೇಲಿನ ಘಟಾನುಘಟಿ ರಾಜಕೀಯ ಪಟುಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪೆದ್ದುತನದಿಂದ ಜನರು ತೊಂದರೆಗೀಡಾಗಿ ಪರದಾಡುತ್ತಿದ್ದಾರೆ.

ಘಟ್ಟದ ಮೇಲಿನ ಆರು ತಾಲ್ಲೂಕುಗಳನ್ನು ಒಳಗೊಂಡ ’ಕದಂಬ’ ಜಿಲ್ಲೆ ಮತ್ತು ಕರಾವಳಿಯ ಐದು ತಾಲ್ಲೂಕುಗಳ ಜೊತೆ ಜೋಯಿಡ ಸೇರಿಸಿ ಉತ್ತರ ಕನ್ನಡ ಜಿಲ್ಲೆ ರಚನೆ ಮಾಡುವ ಅನಿವಾರ್ಯತೆ ಎದುರಾಗಿ ದಶಕಗಳೇ ಉರುಳಿಹೋಗಿವೆ. ಹಾಗೆ ನೋಡಿದರೆ ಶಿರಸಿಯನ್ನು ಜಿಲ್ಲಾ ಕೇಂದ್ರವಾಗಿಸಿ ಶಿರಸಿ ಜಿಲ್ಲೆ ಮಾಡಬೇಕೆಂಬ ಕೂಗು ಮೂರು ದಶಕಗಳ ಹಿಂದಿನದು. ಭಾವನೆಗಳ ಬಂಧನ, ಅನುಕೂಲತೆ ಸಹಿಸಿಕೊಳ್ಳುವ ಮೂಗರ್ಜಿ ಸ್ವಭಾವ, ಹೋರಾಟದ ಹಠ ಮಾಡದಿರುವುದು ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಶಾಸಕ, ಸಂಸದ, ಸಚಿವರ ಉದಾಸೀನತೆಯಿಂದಾಗಿ ಜಿಲ್ಲೆಯ ಕನಸು ನನಸಾಗಲೇ ಇಲ್ಲ.

ಮೂರ್ನಾಲ್ಕು ತಾಲ್ಲೂಕುಗಳುಳ್ಳ ಉಡುಪಿ, ಹಾವೇರಿ, ಯಾದಗಿರಿಯಂತಹ ಜಿಲ್ಲೆಗಳನ್ನು ಹಿಂದೆ ರಚಿಸಲಾಗಿತ್ತು. ವಿವೇಚನೆ, ವಿವೇಕದಿಂದ ಉತ್ತರ ಕನ್ನಡ ವಿಭಾಗಿಸಿದರೆ ಆರಾರು ತಾಲ್ಲೂಕುಗಳ ಎರಡು ಜಿಲ್ಲೆ ಹುಟ್ಟುಹಾಕಬಹುದು. ಜೋಯಿಡ ಘಟ್ಟದ ಪ್ರದೇಶದಲ್ಲಿದ್ದರೂ, ಅದೂ ಕಾರವಾರಕ್ಕೆ ಹತ್ತಿರದಲ್ಲಿದೆ. ಅದನ್ನು ಶಿರಸಿ ಜಿಲ್ಲೆಗೆ ಸೇರಿಸಿದರೆ ಪ್ರಸ್ತಾವಿತ ಜಿಲ್ಲಾ ಕೇಂದ್ರ ಶಿರಸಿಯಿಂದ ನೂರೈವತ್ತು ಕಿ.ಮೀ ಅಂತರದಲ್ಲಿರುತ್ತದೆ. ಜೊತೆಗೆ ಜೋಯಿಡದ ಸಾಂಸ್ಕೃತಿಕ, ವ್ಯಾವಹಾರಿಕ, ಕೌಟುಂಬಿಕ ಭಾಷಾ ಬಾಂಧವ್ಯ ಹೆಚ್ಚಾಗಿ ಕಾರವಾರದೊಂದಿಗಿದೆ. ಜೋಯಿಡದಲ್ಲಿ ಕೊಂಕಣಿ ಮಾತನಾಡುವ ಮಂದಿಯೇ ಜಾಸ್ತಿ. ಹೀಗಾಗಿ ಕನ್ನಡ ಮಾತನಾಡುವ ಶಿರಸಿ ಸೀಮೆ ಜೊತೆ ಜೋಯಿಡಕ್ಕೆ ಹೊಂದಾಣಿಕೆ ಹಲವು ಕಾರಣದಿಂದ ಸಾಧ್ಯವಾಗದು. ಹಾಗಾಗಿ ಅದನ್ನು ಕರಾವಳಿಯ ಉತ್ತರ ಕನ್ನಡದ ಜೊತೆ ಇಡುವುದೇ ಸೂಕ್ತ.

ಈಚೆಗೆ ದಾಂಡೇಲಿ ತಾಲ್ಲೂಕು ರಚನೆಯಾಗಿದೆ. ಕನ್ನಡದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆಯ ಬನವಾಸಿ ತಾಲ್ಲೂಕು ರಚನೆಯ ಹೋರಾಟ ಜೋರಾಗಿದೆ. ಕರಾವಳಿಯ ಗೋಕರ್ಣ ತಾಲ್ಲೂಕು ಮಾಡುವ ಪ್ರಸ್ತಾಪವೂ ಇದೆ. ಈ ಎರಡೂ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದರೆ ಒಟ್ಟು 14 ತಾಲ್ಲೂಕುಗಳಾಗಿ ಎರಡೂ ಜಿಲ್ಲೆಗೆ ತಲಾ ಏಳೇಳು ತಾಲ್ಲೂಕುಗಳು ಸೇರುತ್ತವೆ. ಈ ಭೌಗೋಳಿಕ ಕಾರಣ ಹೊಸ ಜಿಲ್ಲೆಗೆ ಒತ್ತಾಸೆಯಾಗಿ ನಿಂತಿದೆ. ಶಿರಸಿ, ಸಿದ್ಧಾಪುರ, ಮುಂಡಗೋಡ, ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳಿರುವ ಶಿರಸಿ ಜಿಲ್ಲೆ ಮತ್ತು ಜೋಯಿಡ, ಕಾರವಾರ, ಅಂಕೋಲಾ, ಕುಮುಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ಉತ್ತರ ಕನ್ನಡ (ಕರಾವಳಿ) ಜಿಲ್ಲೆ ರಚನೆ ಮಾಡುವುದರಿಂದ ಅಭಿವೃದ್ಧಿಯೂ ವೇಗ ಪಡೆದುಕೊಳ್ಳುತ್ತದೆ. ಆಡಳಿತಾತ್ಮಕವಾಗಿ ಅಧಿಕಾರಿಗಳ ಕಾರ್ಯಕ್ಷಮತೆ ಎಚ್ಚರ ತಪ್ಪದಂತೆ ನಿಗಾ ವಹಿಸುತ್ತದೆ. ಅವಳಿ ಜಿಲ್ಲಾ ರಚನೆಯಿಂದ ವೈವಿಧ್ಯತೆ, ವೈಶಿಷ್ಟ್ಯತೆ, ಪ್ರಾಕೃತಿಕ ಸೊಬಗಿಗೂ ಭಂಗ ಬರದು. ಉಡುಪಿ ದಕ್ಷಿಣ ಕನ್ನಡದ ಸಂಬಂಧದಂತೆ ಕಾರವಾರ-ಶಿರಸಿ ಜಿಲ್ಲೆಗಳ ನಂಟು ಅನ್ಯೋನ್ಯವಾಗೇ ಇರುತ್ತದೆ.

ಈಗಿನ ಜಿಲ್ಲಾ ಕೇಂದ್ರ ಕಾರವಾರದಿಂದ ಘಟ್ಟದ ಮೇಲಿನ ಎಲ್ಲಾ ತಾಲ್ಲೂಕುಗಳು ತುಂಬಾ ದೂರದಲ್ಲಿದೆ. ಮುಂಡಗೋಡದವರು ಸರ್ಕಾರಿ ಕೆಲಸ, ಕಾರ್ಯಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರಬೇಕೆಂದರೆ ಬರೋಬ್ಬರಿ 140 ಕಿ.ಮೀ ಕ್ರಮಿಸಬೇಕು. ಅವರು ಜಿಲ್ಲಾ ಕೇಂದ್ರ ತಲುಪುವಾಗಲೇ ಅರ್ಧ ದಿನ ಕಳೆದಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸಿಕ್ಕರೆ ಪುಣ್ಯ. ಮರಳಿ ಮನೆ ಸೇರುವಾಗ ನಡುರಾತ್ರಿ ಆಗಿರುತ್ತದೆ. ಅಧಿಕಾರಿಗಳಿಗೂ ಅಷ್ಟೆ. ಸಭೆ, ಸಮಾಲೋಚನೆ, ತರಬೇತಿ ಎಂದು ಜಿಲ್ಲಾ ಕೇಂದ್ರಕ್ಕೆ ಓಡಾಡಿ ಸ್ಥಳೀಯ ಕೆಲಸ ಕರ್ತವ್ಯ ನಿಭಾಯಿಸಲು ಸಾಧ್ಯವಾಗುವುದಿಲ್ಲ. ವ್ಯರ್ಥ ತಿರುಗಾಟ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಶಾಪದಂತೆ ಕಾಡುತ್ತಲೇ ಇದೆ. ಹೀಗಾಗಿ ವಿಭಜನೆ ಎರಡು ಜಿಲ್ಲೆಗಳ ಪ್ರಗತಿಗೂ ಪೂರಕ. ಎರಡೆರಡು ಆಡಳಿತ ವ್ಯವಸ್ಥೆ, ಎರಡೆರಡು ಅನುದಾನದಿಂದ ಅವಳಿ ಜಿಲ್ಲೆಗಳ ಅಭಿವೃದ್ಧಿ ನಕ್ಷೆಯೇ ಬದಲಾಗಲಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಶಿರಸಿ ಜಿಲ್ಲೆ ಮಾಡುವ ಪ್ರಯತ್ನ ಪಡದಿದ್ದರೂ ಹಲವು ಪ್ರತ್ಯೇಕ ಜಿಲ್ಲಾ ಮಟ್ಟದ ಕಚೇರಿ ಶಿರಸಿಗೆ ತಂದಿದ್ದರು. ಆಗ ಶಿಕ್ಷಣ ಮಂತ್ರಿಯಾಗಿದ್ದರಿಂದ ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯಾಗಿಸಿ ಉತ್ತರ ಕನ್ನಡದಿಂದ ಬೇರ್ಪಡಿಸಿದ್ದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಕಚೇರಿಗಳು ಶಿರಸಿಯಲ್ಲಿದೆ. ಶಿರಸಿಗೆ ಜಿಲ್ಲಾ ಕೇಂದ್ರವಾಗುವ ಅರ್ಹತೆ, ಅನುಕೂಲತೆ ಎರಡೂ ಇದೆ. ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರವಾದರೂ ವಾಣಿಜ್ಯ, ಆರ್ಥಿಕ ಮತ್ತು ರಾಜಕೀಯ ಆಡಂಬೋಲ ಶಿರಸಿಯೇ. ವಾಣಿಜ್ಯ, ಕೃಷಿ, ಸಹಕಾರಿ ಕ್ಷೇತ್ರದ ಬೃಹತ್ ಸಂಸ್ಥೆಗಳು ಶಿರಸಿಯಲ್ಲಿವೆ. ತೋಟಗಾರಿಕೆ, ಅರಣ್ಯ, ಕಾನೂನು ಮಹಾವಿದ್ಯಾಲಯಗಳಿವೆ. ಜಿಲ್ಲಾ ಮಟ್ಟದ ನ್ಯಾಯಾಲಯ, ಕೃಷಿ ಸಂಶೋಧನಾ ಕೇಂದ್ರ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗೀಯ ಕಚೇರಿಗಳಿವೆ.

ಜಿಲ್ಲಾ ಕೇಂದ್ರಕ್ಕೆ ಬೇಕಾದ ಹಲವು ಅನುಕೂಲಗಳು, ಸೌಲಭ್ಯಗಳು ಕಟ್ಟಡ ಇನ್ನಿತರ ಸೌಕರ್ಯ ಶಿರಸಿಯಲ್ಲಿದೆ. ಸರ್ಕಾರದ ಅಂಕಿಅಂಶಗಳು ಶಿರಸಿ ಪ್ರತ್ಯೇಕ ಜಿಲ್ಲೆಯ ಪ್ರಸ್ತುತತೆಯನ್ನು ಮನದಟ್ಟು ಮಾಡುತ್ತದೆ. ಹಾಗಂತ ಶಿರಸಿಯ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ದೀರ್ಘ ಕಾಲ ಉತ್ತರ ಕನ್ನಡ ಆಳಿದ ಆರ್.ವಿ. ದೇಶಪಾಂಡೆಯಾಗಲಿ ಈಗ ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಠಾಕುಠೀಕಿಂದ ಓಡಾಡುತ್ತಿರುವ ಶಿವರಾಮ ಹೆಬ್ಬಾರರಾಗಲಿ, ಸಂಸದ ಅನಂತ್ ಕುಮಾರ್ ಹೆಗಡೆಯಾಗಲಿ ಶಿರಸಿ ಜಿಲ್ಲಾ ರಚನೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳ ತ್ರಿಕೋನ ಒಣಪ್ರತಿಷ್ಠೆಯ ಮೋಗಮ್ ಕಾಳದಲ್ಲಿ ಶಿರಸಿ ಜಿಲ್ಲಾ ರಚನೆ ಬೇಡಿಕೆಗೆ ಮಹತ್ವ ಬರುತ್ತಿಲ್ಲ.

ಹೀಗಿದ್ದರೂ ಶಿರಸಿಯಲ್ಲಿ ಜಿಲ್ಲಾ ರಚನೆಯ ಹೋರಾಟ ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆ ಕಂದಾಯ ಮಂತ್ರಿಯನ್ನು ಹೋರಾಟ ಸಮಿತಿಯ ನಿಯೋಗ ಭೇಟಿಯಾಗಿ ಇದೇ ಬಜೆಟ್‌ನಲ್ಲಿ ಶಿರಸಿ ಜಿಲ್ಲೆ ರಚನೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸರಣಿ ಪ್ರತಿಭಟನೆಗಳು ಘಟ್ಟದ ಮೇಲೆ ನಡೆಯುತ್ತಿದೆ. ನಿಧಾನಕ್ಕೆ ಜಿಲ್ಲಾ ಬೇಡಿಕೆಯ ಹೋರಾಟ ಹುರಿಗಟ್ಟುತ್ತಿದೆ. ಈ ವರದಿ ಬರೆಯುವ ಹೊತ್ತಿಗೆ ಶಿರಸಿ ಬಾರ್ ಅಸೋಸಿಯೇಶನ್ ಮೂಲಕ ಜಿಲ್ಲಾ ಬೇಡಿಕೆ ಮಂಡಿಸಲು ನಿರ್ಧರಿಸಲಾಗಿದೆ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳಿಗೆ ತಮ್ಮನ್ನು ಆರಿಸಿ ಕಳಿಸಿದವರ ಕೂಗು ಕೇಳಿಸುವುದೇ?


ಇದನ್ನೂ ಓದಿ: ಕುರುಬ ಸಮುದಾಯ ಒಡೆಯುವುದೇ RSS, BJPಯವರ ಉದ್ದೇಶ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಭಿವೃದ್ಧಿಯ ಹೆಸರಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ.
    ಇವತ್ತು, ಉತ್ತರಕನ್ನಡ ವಿಭಿನ್ನವಾಗಿ ನಿಲ್ಲುವುದೇ ಅದರ ವಿಸ್ತಾರ ಮತ್ತು ಎಲ್ಲ ತರಹದ ಭೂ ಪ್ರದೇಶದಿಂದ. ಜಿಲ್ಲೆಯ ವಿಭಜನೆಯಿಂದ ಇನ್ನಷ್ಟು ಕಾಡು ನಾಶ ಮಾಡ್ತಾರೆಯೇ ಹೊರತೂ ಇನ್ನೇನು ಆಗಲ್ಲ…

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....