Homeಅಂಕಣಗಳುಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

ಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 07/ ಜಾಗತಿಕ ಸಿನಿಮಾ/ ಗ್ರೀಸ್/ ಪಾನೋಸ್ ಕೌತ್ರಾಸ್

ಕ್ಸೇನಿಯಾ (2014): ಕ್ಸೇನಿಯಾ ಎಂದರೆ ಗ್ರೀಕ್ ಪುರಾಣಗಳ ಪ್ರಕಾರ ಅತಿಥಿದೇವೋಭವ. ದೂರದೂರಿನಿಂದ ಬಂದ ಎಲ್ಲರಿಗೂ ಅವರ ಕುರಿತಾಗಿ ಯಾವುದೇ ಪ್ರಶ್ನೆಗಳನ್ನು ಕೇಳದೆ, ಊಟ, ವಸತಿ ಮತ್ತು ರಕ್ಷಣೆಯನ್ನು ಒದಗಿಸಿಬೇಕು ಎಂಬ ಮತ್ತು ಅವರ ನಂಬಿಕೆಯ ಪ್ರಕಾರ ಅತಿಥಿಗಳ ರೂಪದಲ್ಲಿ ದೇವರೇ ಬಂದಿರಬಹುದೆಂಬ ಪದ್ದತಿ.

ತಾಯಿ ಅಲ್ಬೇನಿಯನ್, ತಂದೆ ಗ್ರೀಸಿಗ. ಅವರ ಇಬ್ಬರೂ ಮಕ್ಕಳು ಅತಿ ಸಣ್ಣವರಿದ್ದಾಗಲೇ ತಂದೆ ಅವರನ್ನು ಬಿಟ್ಟು ಗ್ರೀಸಿಗೆ ಬಂದುಬಿಟ್ಟಿರುತ್ತಾನೆ. ಅತಿಯಾದ ಮದ್ಯಪಾನದಿಂದ ತಾಯಿ ತೀರಿಕೊಂಡ ನಂತರ, ಹದಿನೈದು ವರ್ಷಗಳ ಸಲಿಂಗಿ ಬಾಲಕ (ಮಕ್ಕಳಲ್ಲಿ ಒಬ್ಬ) ಗ್ರೀಸಿಗೆ ಬರುತ್ತಾನೆ. ಈಗಾಗಲೇ ಅವನ ಅಣ್ಣ ಹತ್ತೊಂಬರ ಯುವಕ ಗ್ರೀಸಿನ ರೆಸ್ಟರೆಂಟೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ, ಇವರಿಬ್ಬರೂ ಸೇರಿ ತಂದೆಯನ್ನು ಹುಡುಕುವ ಪ್ರಯಾಣವೇ ಈ ಸಿನಿಮಾದ ಕಥಾನಕ.

ಹದಿನೈದು ವರ್ಷಗಳ ಸಲಿಂಗಿ ಹುಡುಗ ಅತಿ ಸಣ್ಣ ಮಗುವಿನಂತೆ ಸದಾ ಲಾಲಿಪಾಪ್ ಚೀಪುತ್ತಿರುತ್ತಾನೆ. ತನ್ನ ಹಾವ ಭಾವಗಳು ಮತ್ತು ತೊಡುವ ಬಟ್ಟೆಗಳಲ್ಲೇ ತನ್ನ ಲೈಂಗಿಕ ಮನೋಧರ್ಮವನ್ನು ಪ್ರದರ್ಶಿಸುತ್ತಿರುತ್ತಾನೆ. ಮೊದಮೊದಲು ಅಣ್ಣ ತನ್ನ ತಮ್ಮನ ನಡತೆಯಿಂದ ಮುಜುಗರಗೊಂಡರೂ, ಅವನನ್ನು ಪ್ರೀತಿಸುತ್ತಾನೆ.

ಕ್ಸೇನಿಯಾ (2014)

ಇವರಿಬ್ಬರ ತಾಯಿ ಉತ್ತಮ ಗಾಯಕಿಯಾಗಿರುತ್ತಾಳೆ. ಅವಳ ಧ್ವನಿ ಇವರಿಬ್ಬರಿಗೂ ಬಂದಿದೆ ಎಂದೆಣೆಸಿ, ಇಬ್ಬರೂ ಸೇರಿ ಟಿವಿ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲಲೇಬೇಕೆಂದುಕೊಳ್ಳುತ್ತಾರೆ. ಈ ಸ್ಪರ್ಧೆಯನ್ನು ಗೆದ್ದರೆ ಅವರಿಗೆ ದುಡ್ಡು ಸಿಗುತ್ತೆ ಹಾಗೂ ತಂದೆಯನ್ನು ಹುಡುಕಿ ಗ್ರೀಸಿನ ಪೌರತ್ವ ಪಡೆಯುವುದೇ ಮೂಲಗುರಿಯಾಗಿರುತ್ತದೆ.

ಸಿನಿಮಾದ ಮೊದಲ ಫ್ರೇಮಿನಿಂದಲೂ ಸಣ್ಣ ಮಗ ಅವನ ಜೊತೆಯಲ್ಲಿ ಮೊಲವೊಂದನ್ನು ಸಾಕುತ್ತಿರುವುದನ್ನು ತೋರಿಸುತ್ತಾರೆ. ಗ್ರೀಸಿನ ’ಗೇ’ಕ್ಲಬಿನಲ್ಲಿ ತಮ್ಮನ ಗಲಾಟೆಯಿಂದ ಅಣ್ಣ ಪೊಲೀಸ್ ಸ್ಟೇಷನ್ನಿಗೆ ಹೋಗಬೇಕಾಗುತ್ತದೆ. ಅಲ್ಲಿ ಪೊಲೀಸರು ವಲಸಿಗರ ಮೇಲೆ ವಿನಾ ಕಾರಣ ದೌರ್ಜನ್ಯ ನಡೆಸುವ ಮನಕಲಕುವ ದೃಶ್ಯವೂ ಇದೆ.

ಹಾಗೆಯೇ ತನ್ನ ತಮ್ಮನನ್ನು ನೋಡಿ ಕೆಲ ಹುಡುಗರು ಗೇಲಿ ಮಾಡಿದಾಗ, ಅವರಿಗೆ ಭಯಪಡದೇ ಧೈರ್ಯವಾಗಿ ಅವರೊಂದಿಗೆ ಜಗಳಕ್ಕೆ ಇಳಿಯುತ್ತಾನೆ. ಈ ಸಮಯದಲ್ಲಿ ತಮ್ಮ ಅವನ ಬ್ಯಾಗಿನಿಂದ ಪಿಸ್ತೂಲನ್ನ ಹೊರತೆಗೆದು ಹುಡುಗರತ್ತ ಗುಂಡು ಹಾರಿಸುತ್ತಾನೆ. ಇದರಿಂದ ಒಬ್ಬ ಹುಡುಗನೊಬ್ಬನಿಗೆ ಪೆಟ್ಟಾಗುತ್ತದೆ. ಈ ಭಯದಿಂದ ಇವರಿಬ್ಬರೂ ಕಾಡಿನಂತಿರುವ ಜಾಗದಲ್ಲಿ ಅವಿತು ಕುಳಿತಿರುತ್ತಾರೆ. ಇಲ್ಲಿ ಅಣ್ಣ-ತಮ್ಮಂದಿರ ನಡುವಿನ ಸಂಬಂಧ ಗಾಢವಾಗುತ್ತದೆ.

ತಮ್ಮನ ದೃಷ್ಟಿಕೋನದಿಂದ ಸಿನಿಮಾ ಕಥೆ ಚಿತ್ರಿತವಾಗುವಾಗ, ಜೀವಂತವಾಗಿರುವ ಮೊಲ ಕೇವಲ ಬೊಂಬೆ ಎಂಬುದನ್ನು ಕಾಣಬಹುದು. ಬಹುಶಃ ಹುಡುಗನ ಖುಷಿಯನ್ನು ಭ್ರಮೆಯೆಂದು ಸಂಕೇತಿವಾಗಿ ಬೊಂಬೆಯಲ್ಲಿ ನಿರ್ದೇಶಕ ತೋರಿಸುತ್ತಿದ್ದಾರೆ.

ಕೊನೆಗೆ ಅವರ ತಂದೆಯನ್ನು ಹುಡುಕಿ ಅವನ ಮುಂದೆ ಪಿಸ್ತೂಲನ್ನಿಟ್ಟು ಸತ್ಯಾಸತ್ಯತೆಗಳನ್ನು ಕೇಳಿದಾಗ, ಅವನಿಗೆ ಇಲ್ಲೊಂದು ಕುಟುಂಬವಿರುತ್ತದೆ. ತಮ್ಮನ ಉದ್ರೇಕವನ್ನು ಅಣ್ಣ ತಡೆದು ಸಮಾಧಾನ ಮಾಡಿ ಅಲ್ಲಿಂದ ಮುಂದೆ ಸಾಗುತ್ತಾ, ಅಲೆಮಾರಿಗಳಾಗಿ ಮುಂದೆ ಹೋಗುವುದರಲ್ಲಿ ಸಿನಿಮಾ ಅಂತ್ಯವಾಗುತ್ತದೆ.

ಈ ಸಿನಿಮಾದಲ್ಲಿ ಹದಿಹರೆಯುವ ವಯಸ್ಸಿನಲ್ಲಿ ಕಾಣುವ ಸ್ಕಿಝೋಪ್ರೇನಿಯಾ, ಅಲ್ಬೇನಿಯನ್ ಮತ್ತು ಗ್ರೀಸ್ ದೇಶಗಳ ನಡುವಿನ ವಲಸಿಗರ ನೋವನ್ನು, ಸಮಾಜದಲ್ಲಿ ಗಾಢಾವಾಗಿರುವ ’ಹೋಮೊಫೋಬಿಯಾ’ವನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಅತಿಥಿದೇವೊಭವ ಎಂದು ಹೇಳಿದರೂ, ಬೇರೆ ಭಾಷೆಯವರು ಅಥವಾ ದೇಶದವರು ಬಂದೊಡನೆ ಅವರನ್ನು ಹೊರಗೆ ತಳ್ಳಲು ಮತ್ತು ಶತ್ರುಗಳಂತೆ ನೋಡುವ ದ್ವಂದ್ವ ಮತ್ತು ವಿರೋಧಾಭಾಸವನ್ನು ನಿರ್ದೇಶಕ ಕಟ್ಟಿಕೊಟ್ಟಿದ್ದಾನೆ.

ಸ್ಟ್ರೆಲ್ಲಾ (2009): ಸತತ ಹದಿನೈದು ವರ್ಷಗಳ ಜೈಲು ಶಿಕ್ಷೆಯ ನಂತರ ಹೊರ ಬಂದ ಯೊರ್ಗೊಸ್ ಐವತ್ತರ ಗಂಡಸ್ಸು. ಹೊರಗೆ ಬಂದು ಬದಲಾದ ಜಗತ್ತಿಗೆ ಹೊಂದಿಕೊಳ್ಳುತ್ತಾ, ತಿಳಿದವರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುವ ಸಮಯದಲ್ಲಿ, ಅವನು ತಂಗಿದ್ದ ಹೋಟಿಲಿನಲ್ಲಿ ಯುವ ಟ್ರಾನ್ಸ್‌ಜೆಂಡರ್ ಒಬ್ಬರ ಪರಿಚಯವಾಗುತ್ತದೆ. ಅವಳ ಸೌಂದರ್ಯಕ್ಕೆ ಮರುಳಾದ ಯೊರ್ಗೊಸ್ ಕೂಡಲೇ ಲೈಂಗಿಕ ಸಂಪರ್ಕವನ್ನು ಸಾಧಿಸುತ್ತಾನೆ. ಆ ಟ್ರಾನ್ಸ್‌ಜೆಂಡರ್ ಸ್ಟೆಲ್ಲಾ, ಆದರೆ ಅವಳ ಗೆಳತಿಯರೆಲ್ಲರೂ ಅವಳನ್ನು ಸ್ಟ್ರೆಲ್ಲಾ ಎಂದು ಕರೆಯುತ್ತಾರೆ, ಅದರರ್ಥ ಹುಚ್ಚಿ ಎಂದು.

ಹೀಗೆ ಯಾರು ಇಲ್ಲದ ಯೊರ್ಗೊಸ್ ಮತ್ತು ಸ್ಟೆಲ್ಲಾರ ಸಂಬಂಧ ಏರ್ಪಟ್ಟು, ಸ್ಟೆಲ್ಲಾ ಅವನನ್ನು ತನ್ನ ಮನೆಗೆ ಆಹ್ವಾನಿಸುತ್ತಾಳೆ. ಅವಳೊಂದಿಗೆ ತಂಗಲೂ ಅನುಮತಿಸುತ್ತಾಳೆ. ಸಮಯ ಕಳೆದಂತೆ ಯೊರ್ಗೊಸ್ ಹಳ್ಳಿಯಲ್ಲಿರುವ ಅವನ ಕುಟುಂಬವನ್ನು ನೋಡಲು ತೆರಳುತ್ತಾನೆ. ಅಲ್ಲಿನ ಹೆಂಡತಿ ತೀರಿಕೊಂಡ ವಿಷಯ ತಿಳಿಯುತ್ತದೆ. ಇದ್ದೊಬ್ಬ ಮಗ ಅಥೆನ್ಸಿನಲ್ಲಿ ಇರುವುದಾಗಿ ಮಾಹಿತಿ ಸಿಗುತ್ತದೆ. ಅಲ್ಲಿರುವ ಮನೆಯನ್ನು ಮಾರುವುದಾಗಿ ಗೆಳೆಯನ ಬಳಿ ಹೇಳಿ, ಗಿರಾಕಿ ಹುಡುಕಲು ತಿಳಿಸಿ ಅಥೆನ್ಸ್‌ಗೆ ಬರುತ್ತಾನೆ.

ಸ್ಟ್ರೆಲ್ಲಾ (2009)

ಇತ್ತ ಸ್ಟೆಲ್ಲಾಳ ಜೊತೆ ಸಂಬಂಧ ಮಾನಸಿಕವಾಗಿ ಮತ್ತು ದೈಹಿಕವಾಗಿ ಗಾಢವಾಗುತ್ತದೆ. ಸ್ಟೆಲ್ಲಾ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡು ಹಣ ಸಂಪಾದಿಸುತ್ತಿರುತ್ತಾಳೆ, ಜೊತೆಗೆ ಮಂಗಳಮುಖಿಯರೆಲ್ಲ ಸೇರಿ, “ಡ್ರ್ಯಾಗ್-ಶೋ” ನಡೆಸುತ್ತಿರುತ್ತಾರೆ. ಅಂದರೆ ಗಾಯನಕೂಟ. ಇವೆಲ್ಲವನ್ನು ನೋಡಿ ಸ್ಟೆಲ್ಲಾ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.

ಆದರೆ ವಾಪಾಸ್ ಹಳ್ಳಿಯಲ್ಲಿರುವ ಮನೆಯನ್ನು ಮಾರುವ ಸಲುವಾಗಿ ಗಿರಾಕಿಯೊಂದಿಗೆ ಮಾತಾಡಿದಾಗ, ಅವನ ಕಾಣದ ಮಗನ ಕುರಿತಾಗಿ ಮಾಹಿತಿ ಕೇಳಿ ಅಘಾತಕ್ಕೊಳಾಗುತ್ತಾನೆ. ಅದು ಅವನ ಮಗನೇ ಸ್ಟೆಲ್ಲಾಳಾಗಿರುವುದು! ಸ್ಟೆಲ್ಲಾ ಒಪ್ಪಿಕೊಳ್ಳುತ್ತಾಳೆ.

ಯೊರ್ಗೊಸ್ ತನ್ನ ಮಗ ಚಿಕ್ಕವನಿದ್ದಾಗ ಮಾವನೊಬ್ಬ ಅವನೊಂದಿಗೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ನೋಡಿ, ಮಾವನನ್ನು ಕೊಂದು ಜೈಲಿಗೆ ಹೋಗಿರುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳದೆ ತನ್ನಲ್ಲೇ ಮುಚ್ಚಿಟ್ಟುಕೊಂಡಿರುತ್ತಾನೆ. ಕೊನೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಸ್ವತಃ ತಾನೇ ಮಗನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದರ ಕುರಿತು ನೈತಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡು, ಅಪರಾಧಿ ಮನೋಭಾವದಿಂದ ಸ್ಟೆಲ್ಲಾಳಿಂದ ದೂರವಾಗಿಬಿಡುತ್ತಾನೆ.

ಕೆಲ ಕಾಲದ ನಂತರ ಯೊರ್ಗೊಸ್ ಸ್ಟೆಲ್ಲಾಳನ್ನು ಭೇಟಿಯಾಗಿ ಅವಳನ್ನು ಅದೇ ಸ್ಥಿತಿಯಲ್ಲಿ ಒಪ್ಪಿಕೊಳ್ಳುತ್ತಾನೆ. ಕೊನೆಗೆ ಹೊಸ ವರ್ಷದ ಸಂಭ್ರಮದಲ್ಲಿ ಯೊರ್ಗೊಸ್‌ನ ಜೈಲಿನ ಗೆಳೆಯ, ಸ್ಟೆಲ್ಲಾ ಮತ್ತು ಅವಳ ಗೆಳತಿಯರೆಲ್ಲ ಸೇರಿ ಸಂಭ್ರಮಿಸುವುದನ್ನು ತೋರಿಸುವುದರ ಮೂಲಕ ಸಿನಿಮಾದ ಅಂತ್ಯವಾಗುತ್ತದೆ.

ಪಾನೋಸ್ ಕೌತ್ರಾಸ್: ಪಾನೋಸ್‌ರ ಸಿನಿಮಾಗಳು ಮುಕ್ತವಾಗಿ LGBT ಸಮುದಾಯದವರ ಬದುಕನ್ನು ಕಟ್ಟಿಕೊಡುತ್ತವೆ. ನಗ್ನವಾಗಿ ನಟ ನಟಿಯರನ್ನು ಚಿತ್ರಿಸಿದರೂ, ಅದು ಅವರ ನಡುವಿನ ಅನ್ಯೋನ್ಯತೆ ಮತ್ತು ಪ್ರೀತಿಯನ್ನು ಪ್ರೇಕ್ಷಕರಿಗೆ ದಾಟಿಸಲು ಮಾತ್ರ.

ನಿರ್ದೇಶಕರ ಪ್ರಕಾರ ಸಮಾಜದಲ್ಲಿರುವ ’ಹೋಮೊಪೋಬಿಯಾ’ವನ್ನು ಹೊರಹಾಕಿ, ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್ ಮುಂತಾದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಎಲ್ಲರಂತೆ ಸಹಜವಾಗಿ ಕಾಣಬೇಕೆಂಬುದೇ ಇವರ ಸಿನಿಮಾಗಳ ಮೂಲ ಧ್ಯೇಯ.

ಪಾನೋಸ್ ಕೌತ್ರಾಸ್

ಪಾನೋಸ್‌ರ ಸಿನಿಮಾಗಳು ಬದುಕಿನ ಸಹಜತೆಯನ್ನು ಚಿತ್ರಿಸುತ್ತಾ, ಪಾತ್ರಗಳು ನಮ್ಮಲ್ಲಿ ಒಂದಾಗಿಬಿಡುತ್ತಾರೆ. ಸಹಜವಾದ ಕಷ್ಟಗಳು, ಸಂಬಂಧಗಳಲ್ಲಿನ ಸಂಕೀರ್ಣತೆಗೆ ಕನ್ನಡಿ ಹಿಡಿದು ಎಲ್ಲ ಪ್ರೇಕ್ಷಕರೂ ಸಿನಿಮಾ ಜೊತೆಗೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗಿಸುತ್ತಾರೆ.

ಇವರ ಸಿನಿಮಾಗಳಲ್ಲಿ LGBT ಸಮುದಾಯದ ನೋವು ನಲಿವಿನ ಜೊತೆಗೆ, ಗ್ರೀಸಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗಳನ್ನು ಅತಿ ಸ್ಫುಟವಾಗಿ ಹಿಡಿದಿಟ್ಟಿದ್ದಾರೆ. ಬಣ್ಣಗಳ ಮೂಲಕವೇ ಕಥೆ ಅಥವಾ ಪಾತ್ರಗಳ ಕುರಿತು ಹೇಳುವುದು, ಪಾತ್ರಗಳು ಸದಾ ಕಿರಿದಾದ ಜಾಗಗಳಲ್ಲಿ ವ್ಯವಹರಿಸುವುದು ವಿಶೇಷ.

ಪಾನೋಸ್ ತನ್ನೆಲ್ಲಾ ಸಿನಿಮಾಗಳಿಗೂ ಕಥೆ ಬರೆದಿದ್ದು, ಮೂರು ಸಿನಿಮಾಗಳಲ್ಲಿ ನಿರ್ಮಾಪಕನಾಗಿಯೂ ತೊಡಗಿಸಿಕೊಂಡಿದ್ದಾನೆ. ಹಾಗೂ ಕೆಲ ಸಿನಿಮಾಗಳಲ್ಲಿ ಕ್ಯಾಮಿಯೋ/ಸಣ್ಣ ಪಾತ್ರವಾಗಿ ಕಾಣಿಸಿಕೊಳ್ಳುವುದರ ಮೂಲಕ ನಟನೆಯನ್ನೂ ಮಾಡಿರುವುದು ವಿಶೇಷ.


ಇದನ್ನೂ ಓದಿ: ಪಿಕೆ ಟಾಕೀಸ್: ಬಹುತ್ವ ಮತ್ತು ಸಹಬಾಳ್ವೆಯೇ ನಮ್ಮ ಮುಂದಿರುವ ಏಕೈಕ ದಾರಿಯೆನ್ನುವ ಸಿತೋಸ್ ಸಿನಿಮಾಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...