ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವಕ್ಕೆ ತೆರಳಲು ಆಂಬ್ಯುಲೆನ್ಸ್ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ವಿರುದ್ಧ ಕೇರಳ ಪೊಲೀಸರು ಭಾನುವಾರ (ನ.3) ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಗೋಪಿ ಜೊತೆಗೆ ಆಂಬ್ಯುಲೆನ್ಸ್‌ನಲ್ಲಿದ್ದ ಅಭಿಜಿತ್ ನಾಯರ್ ಎಂಬವರು ಮತ್ತು ಆಂಬ್ಯುಲೆನ್ಸ್ ಚಾಲಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಲೋಕಸಭಾ ಚುನಾವಣಾ ಪ್ರಚಾರ ಕಾರ್ಯತಂತ್ರದ ಭಾಗವಾಗಿ ಗೋಪಿ ಮತ್ತು ಇತರರು ಆಂಬ್ಯುಲೆನ್ಸ್ ದುರುಪಯೋಗಪಡಿಸಿಕೊಂಡಿದ್ದಾರೆ. ಪೂರಂ ಉತ್ಸವದ ದಿನ ರಾತ್ರಿ ತ್ರಿಶೂರ್‌ನ ಜನನಿಬಿಡ ರಸ್ತೆಯಲ್ಲಿ ಸುಖಾಸುಮ್ಮನೆ ಆಂಬ್ಯುಲೆನ್ಸ್ ಓಡಿಸಿದ್ದಾರೆ ಎಂದು ಆರೋಪಿಸಿ ವಕೀಲ ಸುಮೇಶ್ ಭವದಾಸನ್ ಎಂಬವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 279 ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗದ ಮತ್ತು ನಿರ್ಲಕ್ಷ್ಯದ ಚಾಲನೆ, 34 ಕ್ರಿಮಿನಲ್ ಕೃತ್ಯ ಮತ್ತು ಮೋಟಾರು ವಾಹನ ಕಾಯ್ದೆಯಡಿ ಅರೋಪ ಹೊರಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಏಪ್ರಿಲ್ 19, 2024 ರಂದು ಜನಸಂದಣಿ ನಿರ್ವಹಣೆಗಾಗಿ ಪೊಲೀಸರು ವಿಧಿಸಿದ ನಿರ್ಬಂಧಗಳಿಂದಾಗಿ ಪೂರಂ ಉತ್ಸವದ ಕೆಲವು ಕಾರ್ಯಕ್ರಮಗಳನ್ನು ಮಧ್ಯದಲ್ಲಿಯೇ ಕೈಬಿಟ್ಟಿದ್ದರಿಂದ ರಾಜಕೀಯ ಗದ್ದಲ ಭುಗಿಲೆದ್ದಿತ್ತು. ಕಾರ್ಯಕ್ರಮಗಳನ್ನು ಅರ್ಧಕ್ಕೆ ನಿಲ್ಲಿಸಿದ್ದನ್ನು ವಿರೋಧಿಸಿದ್ದ ಸುರೇಶ್ ಗೋಪಿ, ಏಪ್ರಿಲ್ 20ರಂದು ಮುಂಜಾನೆ ದೇವಸ್ಥಾನದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ, ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸಿಡಿಮದ್ದು ಪ್ರದರ್ಶನ ಹಗಲು ಹೊತ್ತಿನಲ್ಲಿ ನಡೆದಿತ್ತು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಉತ್ಸವವನ್ನು ಅರ್ಧಕ್ಕೆ ನಿಲ್ಲಿಸಿ ಮರುದಿನ ಹಗಲೊತ್ತು ಸಿಡಿಮದ್ದು ಪ್ರದರ್ಶನ ನಡೆಸಲಾಗಿದೆ. ಇದರ ಹಿಂದೆ ಸುರೇಶ್ ಗೋಪಿ ಕೈವಾಡ ಇದೆ. ಅಧಿಕಾರಿಗಳು ಕೂಡ ಈ ತಂತ್ರಕ್ಕೆ ಕೈ ಜೋಡಿಸಿದ್ದಾರೆ ಎಂದು ಕೇರಳದ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸೇರಿದಂತೆ ಹಲವರು ಆರೋಪಿಸಿದ್ದರು.
ಅಕ್ಟೋಬರ್ 3ರಂದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಿಷಯದ ಬಗ್ಗೆ ಮೂರು ಹಂತಗಳ ತನಿಖೆಯನ್ನು ಘೋಷಿಸಿದ್ದರು. ಲೋಕಸಭೆ ಚುನಾವಣೆಗೆ ಲಾಭ ಪಡೆಯಲು ಸಿಡಿಮದ್ದು ಪ್ರದರ್ಶನವನ್ನು ವಿಳಂಬ ಮಾಡುವ ತಂತ್ರ ಹೂಡಲಾಗಿತ್ತೇ? ಎಂದು ವರದಿ ನೀಡಲು ಆದೇಶಿಸಿದ್ದರು.
ಬಳಿಕ, “ರಾಜ್ಯದ ಸಾಮಾಜಿಕ ವ್ಯವಸ್ಥೆಯನ್ನು ಹಾಳುಗಡೆವುವ ಪ್ರಯತ್ನ ನಡೆದಿದೆ” ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು.
ಈ ವಿಚಾರವಾಗಿ ಕಳೆದ ಅಕ್ಟೋಬರ್ 28ರಂದು, ಕೇರಳದ ಆಡಳಿತರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರಕ್ಕೆ ಸವಾಲೆಸೆದಿದ್ದ ಸುರೇಶ್ ಗೋಪಿ, ತ್ರಿಶೂರ್ ಪೂರಂ ಗೊಂದಲದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿ ಎಂದಿದ್ದರು. ಉತ್ಸವದ ಸ್ಥಳಕ್ಕೆ ತೆರಳಲು ಆಂಬ್ಯುಲೆನ್ಸ್ ಬಳಸಲಾಗಿದೆ ಎಂಬ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದರು.
ಚೇಲಕ್ಕರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಗೋಪಿ, “ನಾನು ಬಿಜೆಪಿ ಜಿಲ್ಲಾಧ್ಯಕ್ಷರ ಕಾರಿನಲ್ಲಿ ಪೂರಂ ಸ್ಥಳಕ್ಕೆ ತೆರಳಿದ್ದೆ. ಪಿಣರಾಯಿ ಪೊಲೀಸರಿಗೆ ಸತ್ಯ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದ್ದರು.
ಬಳಿಕ, ಮಾತು ಬದಲಿಸಿದ್ದ ಗೋಪಿ, ಆಂಬ್ಯುಲೆನ್ಸ್ ದುರ್ಬಳಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು. “ನನಗೆ ಕಾಲು ನೋವಿದ್ದ ಕಾರಣ ಜನಸಂದಣಿಯಲ್ಲಿ ನಡೆಯಲು ಕಷ್ಟವಾಗಿತ್ತು. ಹಾಗಾಗಿ, ಕೆಲ ಯುವಕರು ಯಾವುದೇ ರಾಜಕೀಯ ಅಜೆಂಡಾ ಇಲ್ಲದೆ ನನಗೆ ಆಂಬ್ಯುಲೆನ್ಸ್‌ಗೆ ಸಹಾಯ ಮಾಡಿದ್ದರು” ಎಂದಿದ್ದರು. ಈ ಹೇಳಿಕೆಯನ್ನು ಅಕ್ಟೋಬರ್ 31 ರಂದು ‘ದಿ ಹಿಂದೂ‘ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ಆರೋಪ ಪ್ರತ್ಯಾರೋಪಗಳ ನಡುವೆ ಇದೀಗ ಸುರೇಶ್ ಗೋಪಿ ಸೇರಿದಂತೆ ಮೂವರ ವಿರುದ್ದ ಆಂಬ್ಯುಲೆನ್ಸ್ ದುರ್ಬಳಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಮೂಲಕ ಪ್ರಕರಣ ಮತ್ತೊಂದು ಮಜಲಿಗೆ ಕಾಲಿಟ್ಟಿದೆ.
ಇದನ್ನೂ ಓದಿ : ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ; 24 ವರ್ಷದ ಯುವತಿಯನ್ನು ಬಂಧಿಸಿದ ಮುಂಬೈ ಪೊಲೀಸ್


