Homeಮುಖಪುಟವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್

ವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್

- Advertisement -
- Advertisement -

ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹ ಪ್ರಕರಣದ ಎಫ್‌ಐಆರ್‌ಅನ್ನು ಸುಪ್ರೀಂ ಕೋರ್ಟ್ ನ್ಯಾಯಬದ್ಧವಾಗಿ ರದ್ದುಪಡಿಸಿದೆ. ಎಫ್‌ಐಆರ್ ಹಲವಾರು ಸುಳ್ಳು ಆರೋಪಗಳನ್ನು ಮಾಡಿದೆ ಎಂದು ನ್ಯಾಯಾಧೀಶರು ಕಂಡುಕೊಂಡಿದ್ದಾರೆ ಎಂದು ತೀರ್ಪು ಸೂಚಿಸುತ್ತದೆ. ಭಯೋತ್ಪಾದನಾ ಕೃತ್ಯಗಳ ಮೂಲಕ ಪ್ರಧಾನಮಂತ್ರಿ ಮತಗಳನ್ನು ಗಳಿಸಿದ್ದಾರೆ ಎಂದು ಹೇಳುವ ಮೂಲಕ ವಿನೋದ್ ದುವಾ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿಗಳನ್ನು ಹರಡಿದ್ದಾರೆ, ಇದು ನೇರವಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬ ಪ್ರಮುಖ ಆರೋಪವನ್ನು ಪರಿಶೀಲಿಸಿದ ನ್ಯಾಯಾಲಯ, ತನ್ನ ಮುಂದೆ ಇರುವ ಸಾಕ್ಷ್ಯಗಳ ಪ್ರಕಾರ, ಅರ್ಜಿದಾರರ ಹೇಳಿಕೆ ಅಂತಹ ಯಾವುದೇ ಪ್ರಚೋದನೆಯನ್ನು ಮಾಡಿಲ್ಲ ಎಂದು ತೀರ್ಮಾನಿಸಿತು.

ವಿನೋದ್ ದುವಾ ವಿರುದ್ಧದ ಇನ್ನೊಂದು ಆರೋಪವೆಂದರೆ, “ನಮ್ಮ ದೊಡ್ಡ ವೈಫಲ್ಯವೆಂದರೆ (ಕೊರೊನಾ) ಟೆಸ್ಟಿಂಗ್ ನಡೆಸಲು ನಮಗೆ ಸಾಕಷ್ಟು ಸೌಲಭ್ಯಗಳಿಲ್ಲ ಮತ್ತು ಸರಬರಾಜು ಸರಪಳಿಗಳನ್ನು ಮುಚ್ಚಿದಾಗ ಹಾಗೂ ಅಂಗಡಿಗಳನ್ನು ಮುಚ್ಚಿದಾಗ, ಕೆಲವು ಜನರು (ನಮ್ಮ ದೇಶದಲ್ಲಿ ಈವರೆಗೂ ಸಂಭವಿಸದ) ಆಹಾರ ಗಲಭೆಗಳು ಸಂಭವಿಸಬಹುದು ಎಂದು ಗಾಬರಿಗೊಂಡಿದ್ದರು” ಎಂದು ದುವಾ ಹೇಳಿದ್ದರೆಂಬುದು.

ಕೇದಾರನಾಥ್ v/s ಯೂನಿಯನ್ ಆಫ್ ಇಂಡಿಯಾ ಪ್ರಕರಣದ ಐದು ನ್ಯಾಯಾಧೀಶರ ನ್ಯಾಯಪೀಠದ ತೀರ್ಪಿನ ಪ್ರಕಾರ ಇಂತಹ ಹೇಳಿಕೆಗಳು ದೇಶದ್ರೋಹ ಪ್ರಕರಣಕ್ಕೆ ಅರ್ಹವಾದವಲ್ಲ ಎಂದು ಸುಪ್ರೀಂ ಕೋರ್ಟ್ ಸರಿಯಾಗಿ ತೀರ್ಮಾನಿಸಿದೆ. ಆದರೆ ಅದು (ದುವಾ ಅಭಿಪ್ರಾಯ) ಸಾಂವಿಧಾನಿಕ ರಕ್ಷಣೆಯನ್ನು ಹೊಂದಿದ ಟೀಕೆ/ವಿಮರ್ಶೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಸಾರಾಂಶದಲ್ಲಿ, ಕೇದಾರನಾಥ ಪ್ರಕರಣದ ಮೂರು ಪ್ರಮುಖ ಅಂಶಗಳನ್ನು ಮುಂದಿಟ್ಟಿತ್ತು:

ಮೊದಲನೆಯದಾಗಿ, ಸೆಕ್ಷನ್ 124-ಎನಲ್ಲಿ ವ್ಯಾಖ್ಯಾನಿಸಿರುವಂತೆ, ಸರ್ಕಾರ ಮತ್ತು ‘ಕಾನೂನಿನಿಂದ ಸ್ಥಾಪಿತವಾದ ಸರ್ಕಾರ’ – ಇವೆರಡರ ನಡುವೆ ವ್ಯತ್ಯಾಸವಿದೆ. ಆಡಳಿತವನ್ನು ನಿರ್ವಹಿಸುವಲ್ಲಿ ನಿರತರಾಗಿರುವ ವ್ಯಕ್ತಿಗಳ ವಿರುದ್ಧ ಅಸಮಾಧಾನವನ್ನು ಉತ್ತೇಜಿಸಿದರೆ ಅದು ದೇಶದ್ರೋಹದ ಆರೋಪದಡಿ ಬರುವುದಿಲ್ಲ. ಅದು ಕಾನೂನಿನಿಂದ ಸ್ಥಾಪಿತವಾದ ಸರ್ಕಾರವಾದ ಪ್ರಭುತ್ವದ ಗೋಚರ ಸಂಕೇತಗಳನ್ನು ಅಲ್ಲಗೆಳೆದು ಅವಮಾನಿಸಿದ್ದರೆ ಮಾತ್ರ…, ಸರಳ ಪದಗಳಲ್ಲಿ ಹೇಳುವುದಾದರೆ, ಮೋದಿಯವರ ವಿರುದ್ಧದ ಟೀಕೆ ‘ಕಾನೂನಿನಿಂದ ಸ್ಥಾಪಿತವಾದ ಸರ್ಕಾರ’ದ ವಿರುದ್ಧದ ಟೀಕೆಯಲ್ಲ. ಆದ್ದರಿಂದ ಸೆಕ್ಷನ್ 124-ಎ ಇಲ್ಲಿ ಅನ್ವಯವಾಗುವುದಿಲ್ಲ.

ಎರಡನೆಯದಾಗಿ, ಸರ್ಕಾರದ ವಿರುದ್ಧದ ಅಸಮಾಧಾನ ಅಥವಾ ಸರ್ಕಾರವನ್ನು ನಿಂದಿಸಿವುದು ಅಥವಾ ದ್ವೇಷಿಸುವುದು ಅಂದರೆ, ‘ನಿಜವಾದ ಹಿಂಸಾಚಾರ ಅಥವಾ ಹಿಂಸಾಚಾರಕ್ಕೆ ನೀಡುವ ಪ್ರಚೋದನೆಯಿಂದ ಸಾರ್ವಜನಿಕ ಅರಾಜಕತೆಗೆ ಕಾರಣವಾಗುವ ಪ್ರವೃತ್ತಿಯನ್ನು ಆ ಹೇಳಿಕೆ ಹೊಂದಿರಬೇಕು.’ ನ್ಯಾಯಾಲಯವು ಸಂಕ್ಷಿಪ್ತವಾಗಿ ಗಮನಿಸಿದಂತೆ, ಹಿಂಸೆಗೆ ಪ್ರಚೋದನೆ ನೀಡುವ ಅಂಶವನ್ನು ಬಿಡಿ, ವಿನೋದ್ ದುವಾ ಅವರ ಕಾಮೆಂಟ್‌ಗಳು ಸಾರ್ವಜನಿಕರ ಮೇಲೆ ಪರಿಣಾಮ ಬೀರಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ. ವಿನೋದ್ ದುವಾ ಅವರ ಪ್ರತಿಕ್ರಿಯೆಗಳನ್ನು ಆಧರಿಸಿ ವಲಸೆ ಕಾರ್ಮಿಕರು ಚಲಿಸಲು ಪ್ರಾರಂಭಿಸಿದರು ಎಂಬ ಆರೋಪ ಕೂಡ ವಾಸ್ತವದಲ್ಲಿ ತಪ್ಪಾಗಿದೆ.

ಮೂರನೆಯದಾಗಿ, ಹಿಂಸಾಚಾರದಿಂದ ಸಾರ್ವಜನಿಕ ಅರಾಜಕತೆಯನ್ನು ಉಂಟುಮಾಡುವ ಭಾವನೆಗಳನ್ನು ಉತ್ತೇಜಿಸದೆ, ಸರ್ಕಾರದ ಕ್ರಮಗಳ ಬಗ್ಗೆ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸುವ ಕಾಮೆಂಟ್‌ಗಳು ದಂಡ ಪ್ರಕ್ರಿಯೆ ವ್ಯಾಪ್ತಿಗೆ ಬರುವುದಿಲ್ಲ. ನ್ಯಾಯಾಲಯ ತೀರ್ಮಾನಿಸಿದಂತೆ, ದುವಾ ಅವರ ಟೀಕೆಗಳು ಸರ್ಕಾರ ಮತ್ತು ಅದರ ಇತರ ಅಂಗ ಸಂಸ್ಥೆಗಳ ಕ್ರಮಗಳ ಅಸಮ್ಮತಿಯ ಅಭಿವ್ಯಕ್ತಿ. ಅವರ ಹೇಳಿಕೆಗಳು ಇದಕ್ಕಿಂತ ಹೆಚ್ಚೇನೂ ಅಲ್ಲ. ಅಂತಹ ಅಭಿವ್ಯಕ್ತಿಗಳ ಏಕೈಕ ಉದ್ದೇಶವೆಂದರೆ, ಯಾತನೆ ಮತ್ತು ನೋವಿನಿಂದ ಕೂಡಿದ ‘ಪ್ರಸಕ್ತ ಪರಿಸ್ಥಿತಿಯನ್ನು’ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂಬುದಾಗಿತ್ತು.

ಕೇದಾರನಾಥ ಪ್ರಕರಣದ ತೀರ್ಪಿನ ಚೌಕಟ್ಟಿನೊಳಗೆ ವಿನೋದ್ ದುವಾ ಅವರ ಹೇಳಿಕೆಗಳನ್ನು ವಿಶ್ಲೇಷಿಸಿದ ನಂತರ ನ್ಯಾಯಾಲಯವು, ಈ ವಿಷಯದಲ್ಲಿ, ಯಾವುದೇ ಕಾನೂನು ಕ್ರಮ ಜರುಗಿಸುವುದು, ಸಂವಿಧಾನದ 19 (1) (ಎ) ಕಲಂ ಅಡಿಯಲ್ಲಿ ಖಾತರಿಪಡಿಸಿದ ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತೀರ್ಮಾನಿಸಿತು.

ದೇಶದ್ರೋಹ ಕಾನೂನಿನ ಮಿತಿಗಳನ್ನು ಎತ್ತಿ ತೋರಿಸುವವ ಸ್ವಾಗತಾರ್ಹ ಜ್ಞಾಪನೆಯಾಗಿ ಈ ತೀರ್ಪು ಕಾಣಿಸುತ್ತದೆ. ವಿಶೇಷವಾಗಿ ಸರ್ಕಾರವನ್ನು ಮುಕ್ತವಾಗಿ ಟೀಕಿಸುವ ಪತ್ರಕರ್ತರ ಹಕ್ಕಿಗೆ ಬಂದಾಗ, ನ್ಯಾಯಾಲಯವು ಹೀಗೆ ಹೇಳಿದೆ: ’ಕೇದಾರನಾಥ್ ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿದಂತೆ, ಪ್ರತಿಯೊಬ್ಬ ಪತ್ರಕರ್ತನು ರಕ್ಷಣೆಗೆ ಅರ್ಹನಾಗಿರುತ್ತಾನೆ ಎಂಬುದು ಸ್ಪಷ್ಟವಾಗಿರಬೇಕು. ಕೇದಾರ್ ನಾಥ್ ಸಿಂಗ್ ಪ್ರಕರಣದ ತೀರ್ಪಿನ ಪ್ರಕಾರ, ಐಪಿಸಿ 3ರ ಸೆಕ್ಷನ್ 124 ಎ ಮತ್ತು 505ರ ಅಡಿಯಲ್ಲಿ ನಡೆಯುವ ಪ್ರತಿಯೊಂದು ಕಾನೂನು ಕ್ರಮಗಳು, ಆ ಸೆಕ್ಷನ್‌ಗಳಲ್ಲಿ ವಿವರಿಸಿದ ವಿಭಾಗಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಗೆ ಕಟ್ಟುನಿಟ್ಟಾಗಿರಬೇಕು ಮತ್ತು ಕೇದಾರ್ ನಾಥ್ ಸಿಂಗ್ ಪ್ರಕರಣದ ಕಾನೂನಿನೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಬೇಕು’ ಎಂದು ನ್ಯಾಯಾಲಯ ತನ್ನ ಅಭಿಮತ ವ್ಯಕ್ತಪಡಿಸಿದೆ.

ವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದುಪಡಿಸಿದ ತೀರ್ಪು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಹಾಗೂ ಹಿಂಸಾಚಾರದ ಪ್ರಚೋದನೆ ಇಲ್ಲದಿರುವವರೆಗೂ ಪ್ರಭುತ್ವವನ್ನು ಮುಕ್ತವಾಗಿ ಟೀಕಿಸುವ ಪತ್ರಕರ್ತರ ಸ್ವಾತಂತ್ರ್ಯವನ್ನು ದೃಢವಾಗಿ ಅನುಮೋದಿಸುತ್ತದೆ. ಆದರೂ, ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವವರಿಗೆ ಯಾವುದೇ ಎಚ್ಚರಿಕೆ ಸಂದೇಶವನ್ನು ಕಳುಹಿಸಲು ನ್ಯಾಯಾಲಯ ವಿಫಲವಾಗಿದೆ.

ಸುಪ್ರೀಂಕೋರ್ಟ್ ಗಮನಿಸಿದಂತೆ, ಹಿಮಾಚಲ ಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡರು ಯಾವುದೇ ಆಧಾರವಿಲ್ಲದೆ ಎಫ್‌ಐಆರ್ ದಾಖಲಿಸಿದ್ದಾರೆ. ಈ ದುರುದ್ದೇಶಪೂರಿತ ತಪ್ಪು ಪ್ರತೀಕಾರದ ಕ್ರಮದ ಹೊರತಾಗಿಯೂ, ದೂರುದಾರರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿಲ್ಲ. ಎಫ್‌ಐಆರ್ ದಾಖಲಿಸಿದ ಬಿಜೆಪಿ ನಾಯಕನ ಕ್ರಮಗಳು, ಸರ್ಕಾರವನ್ನು ಟೀಕಿಸಲು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವ ಪತ್ರಕರ್ತರಿಗೆ ಕಿರುಕುಳ ನೀಡುವ ಏಕೈಕ ಉದ್ದೇಶವನ್ನು ಹೊಂದಿದ್ದು, ಆ ಕಾರಣಕ್ಕೆ ಆ ಬಿಜೆಪಿ ನಾಯಕನ ವಿರುದ್ಧವೇ ‘ದುರುದ್ದೇಶಪೂರಿತ ಕಾನೂನು ಕ್ರಮ’ ಪ್ರಕರಣವನ್ನು ದಾಖಲಿಸಲು ಅರ್ಹವಾಗಿರುತ್ತದೆ.

ವಿನೋದ್ ದುವಾ ಅವರ ಎರಡನೆಯ ಅರ್ಜಿ ಏನಾಗಿತ್ತೆಂದರೆ, ರಾಜ್ಯ ಸರ್ಕಾರವು ರಚಿಸಿದ ಸಮಿತಿಯಿಂದ ಒಪ್ಪಿಗೆ ಪಡೆಯದ ಹೊರತು, ಕನಿಷ್ಠ ಹತ್ತು ವರ್ಷಗಳ ಕಾಲ ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ನೋಂದಾಯಿಸಬಾರದು ಎಂಬುದು. ಇದನ್ನು ಮಾಡುವುದರಿಂದ, ಶಾಸಕಾಂಗಕ್ಕೆ ಮೀಸಲಾಗಿರುವ ಕ್ಷೇತ್ರವನ್ನು ಅತಿಕ್ರಮಿಸುದಂತಾಗುತ್ತದೆ ಎಂಬ ಕಾರಣ ನೀಡಿ ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಹತ್ತು ವರ್ಷಗಳ ಸೇವೆಯ ಪತ್ರಕರ್ತರಿಗೆ ಮಾತ್ರ ರಕ್ಷಣೆ ಎಂಬುದು ಅಸ್ಪಷ್ಟತೆಯಿಂದ ಮತ್ತು ಅತಾರ್ಕಿಕತೆಯಿಂದ ಕೂಡಿದೆ. ಆದರೆ, ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದರೆ ಐಪಿಸಿಯ ಸೆಕ್ಷನ್ 124-ಎ ಬಳಕೆಯಲ್ಲಿ ಪ್ರಭುತ್ವದ ಉತ್ಸಾಹವನ್ನು ತಡೆಯುವುದು ಅತ್ಯಗತ್ಯ.

ಐಪಿಸಿಯ ಸೆಕ್ಷನ್ 124-ಎ ವಿರುದ್ಧದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದೇ ಸ್ವಾಗತಾರ್ಹ ಬೆಳವಣಿಗೆ. ಪ್ರಭುತ್ವ ಈ ಕಾನೂನನ್ನು ಬೇಕಾಬಿಟ್ಟಿ ದುರ್ಬಳಿಕೆ ಮಾಡಿಕೊಳ್ಳುತ್ತಿರುವ ಸಂಗತಿ ತಿಳಿಸುವುದೇನೆಂದರೆ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಈ ಕಾನೂನಿಗೆ ಜಾಗವಿರಬಾರದು ಮತ್ತು ಸಾಂವಿಧಾನಿಕ ಕಾನೂನು ಪುಸ್ತಕಗಳಿಂದ ಈ ಕಾನೂನನ್ನು ಹೊಡೆದುಹಾಕಬೇಕು.

– ಕನ್ನಡಕ್ಕೆ: ಪಿ ಮಲ್ಲನಗೌಡರ್

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್

ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್‌ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.

ಈ ವಿಷಯವಾಗಿ ಇಂದು ಸಂಜೆ ನಡೆಯಲಿರುವ ಜೂಮ್ ಚರ್ಚೆಯಲ್ಲಿ ಭಾಗಿಯಾಗಿ. ಹೆಚ್ಚಿನ ವಿವರಗಳು ಕೆಳಗಿವೆ.


ಇದನ್ನೂ ಓದಿ: ಹೈಕಮಾಂಡ್ ಭಿನ್ನಮತದ ಇತಿಹಾಸ ಮತ್ತು ವರ್ತಮಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...