ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಕಿಟ್‌ಗಳ ಖರೀದಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಮೊದಲ ಎಫ್‌ಐಆರ್ ದಾಖಲಿಸಿದ್ದಾರೆ.
ಶುಕ್ರವಾರ (ಡಿ.13) ರಂದು ನೀಡಲಾದ ದೂರಿನ ಆಧಾರದ ಮೇಲೆ 10 ಪುಟಗಳ ಎಫ್‌ಐಆರ್ ದಾಖಲಾಗಿದೆ.ಅದರಲ್ಲಿ ರಾಜ್ಯದ ಬೊಕ್ಕಸಕ್ಕೆ 167 ಕೋಟಿ ರೂಪಾಯಿ ನಷ್ಟ ಆಗಿರುವುದನ್ನು ಎತ್ತಿ ತೋರಿಸಲಾಗಿದೆ.ಆದರೆ, ಎಫ್‌ಐಆರ್‌ನಲ್ಲಿ ಯಾವುದೇ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಿಲ್ಲ ಎಂದು ವರದಿಗಳು ಹೇಳವೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ಡಿಎಂಇ) ಮುಖ್ಯ ಹಣಕಾಸು ಅಧಿಕಾರಿ ಎಂ. ವಿಷ್ಣು ಪ್ರಸಾದ್ ಅವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಡಿಎಂಇ ಮಾಜಿ ನಿರ್ದೇಶಕ ಪಿಜಿ ಗಿರೀಶ್, ಅಧಿಕಾರಿಗಳಾದ ರಘು ಜಿಪಿ, ಎನ್ ಮುನಿರಾಜು, ವೈದ್ಯರು ಮತ್ತು ಎರಡು ಖಾಸಗಿ ಸಂಸ್ಥೆಗಳಾದ ಯಶವಂತಪುರದ ಲಾಜ್ ಎಕ್ಸ್‌ಪೋರ್ಟ್ಸ್ ಹಾಗೂ ಅಂಧೇರಿಯ ಪ್ರುಡೆಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್ ವಿರುದ್ಧ ಅಕ್ರಮ ಆರೋಪ ಹೊರಿಸಿದ್ದಾರೆ.
‘ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ-1999 ಅನ್ನು ಉಲ್ಲಂಘಿಸಲು ಸಹಕರಿಸಿದ ಆರೋಪದ ಮೇಲೆ ಇತರ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಎಫ್‌ಐಆರ್‌ನಲ್ಲಿ ಯಾವುದೇ ರಾಜಕಾರಣಿಗಳನ್ನು ನೇರವಾಗಿ ಹೆಸರಿಸದಿದ್ದರೂ, ಕೋವಿಡ್ ಸಮಯದಲ್ಲಿ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ಮಾಡಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ಹಲವಾರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ.
ನ್ಯಾ.ಡಿ’ಕುನ್ಹಾ ಆಯೋಗವು ಮೊದಲ ವರದಿಯನ್ನು ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಎನ್ 95 ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳ ಖರೀದಿಯಲ್ಲಿ ನಡೆದ ಅಕ್ರಮಗಳನ್ನು ಬಹಿರಂಗಪಡಿಸಿತ್ತು. ನವೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ಕೋವಿಡ್ ಹಗರಣ ಆರೋಪಗಳ ತನಿಖೆಗಾಗಿ ಪೊಲೀಸ್ ಮಹಾನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
ಕೋವಿಡ್ ಅವಧಯಲ್ಲಿ ವೈದ್ಯಕೀಯ ಸಾಮಾಗ್ರಿಗಳ ಖರೀದಿ ವೇಳೆ ಸಾರ್ವಜನಿಕ ಸರಬರಾಜು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮಗೆ ಬೇಕಾದವರಿಗೆ ಗುತ್ತಿಗೆ ನೀಡಲು ಅನುವು ಮಾಡಿಕೊಟ್ಟಿದ್ದಾರೆ. ಈ ಮೂಲಕ ಸರ್ಕಾರದ ಭೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ವಿಷ್ಣು ಪ್ರಸಾದ್ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಕರ್ನಾಟಕ ಸಾರ್ವಜನಿಕ ಸರಬರಾಜು ಪಾರದರ್ಶಕತೆ ಕಾಯ್ದೆ-1999 ಮತ್ತು ಅದರ ನಿಯಮಗಳು, 2000ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಹೆಚ್ಚುವರಿಯಾಗಿ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ (ಸೆಕ್ಷನ್ 406), ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ (ಸೆಕ್ಷನ್ 409), ಆಸ್ತಿಯ ಅಪ್ರಾಮಾಣಿಕ ದುರುಪಯೋಗ (ಸೆಕ್ಷನ್ 403), ಮತ್ತು ಕ್ರಿಮಿನಲ್ ಪಿತೂರಿ (ಸೆಕ್ಷನ್ 120 ಬಿ)ಅನ್ವಯಿಸಲಾಗಿದೆ.
ಇದನ್ನೂ ಓದಿ : ಒಂದು ರಾಷ್ಟ್ರ, ಒಂದು ಚುನಾವಣೆ: ಬಹುಮತ ಕಳೆದುಕೊಂಡಾಗ ಪರಿಹಾರವೇನು; ಸಿದ್ದರಾಮಯ್ಯ ಪ್ರಶ್ನೆ


