ದೇಶದಾದ್ಯಂತ ಸಾಂಕ್ರಮಿಕ ಹರಡಿ ಸುಮಾರು ಒಂದು ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ಸೋಮವಾರ ವರದಿಯಾಗಿದೆ.
ಇಂಡಿಯಾ ರಿಸರ್ವ್ ಬೆಟಾಲಿಯನ್‌ಗೆ ಸೇರಿದ ವ್ಯಕ್ತಿಯೊಬ್ಬರು ಜನವರಿ 3 ರಂದು ಕೊಚ್ಚಿಯಿಂದ ಹಡಗಿನಲ್ಲಿ ಲಕ್ಷದ್ವೀಪದ ಕವರಟ್ಟಿಗೆ ತೆರಳಿದ್ದರು. ಅವರು ಸೋಮವಾರ ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಪಾಸಿಟಿವ್ ಆಗಿರುವ ವ್ಯಕ್ತಿಯು ಲಕ್ಷದ್ವೀಪದ ನಿವಾಸಿ ಅಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಲಕ್ಷದ್ವೀಪ: ಒಂದೂ ಕೊರೊನಾ ಸೊಂಕಿತರಿಲ್ಲದ ಪ್ರದೇಶ!
ಕೊಚ್ಚಿಯಿಂದ ಆಗಮಿಸುವವರಿಗೆ ಕಡ್ಡಾಯವಾದ ಸಂಪರ್ಕತಡೆಯನ್ನು ಇಲ್ಲವಾಗಿಸುವ ಮೂಲಕ ಲಕ್ಷದ್ವೀಪ ಆಡಳಿತವು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪರಿಷ್ಕರಿಸಿದ ಎರಡೇ ವಾರಗಳಲ್ಲಿ ಈ ಪ್ರಕರಣ ವರದಿಯಾಗಿದೆ. ಲಕ್ಷದ್ವೀಪದಲ್ಲಿ ಇಲ್ಲಿಯವರೆಗೆ ಒಂದೇ ಕೊರೊನಾ ಪ್ರಕರಣ ವರದಿಯಾಗಿರಲಿಲ್ಲ.
ಪ್ರಸ್ತುತ ಪಾಸಿಟಿವ್ ಆಗಿರುವ ವ್ಯಕ್ತಿಯಿಂದ ವೈರಸ್ ಹರಡುವುದನ್ನು ತಡೆಗಟ್ಟಲು ಲಕ್ಷದ್ವೀಪ ಆಡಳಿತವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಾಸಿಟಿವ್ ಆಗಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಂಪರ್ಕತಡೆ ಮುಂದುವರಿಸಲು ನಿರ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಮೊದಲ ಕೊರೊನಾ ಪಾಸಿಟಿವ್ ವರದಿಯಾಗುತ್ತಿದ್ದಂತೆ ಮಂಗಳವಾರದಿಂದ ಹಡಗುಗಳು ಸೇರಿದಂತೆ ಲಕ್ಷದ್ವೀಪ ಸಮುಚ್ಚಯದ ಎಲ್ಲಾ ಅಂತರ ದ್ವೀಪಗಳ ಚಲನೆಯನ್ನು ಆಡಳಿತವು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು: ಸಾವಿಗೆ ಲಸಿಕೆ ಕಾರಣವಲ್ಲ ಎಂದ ಸಚಿವ ಸುಧಾಕರ್


