ಉತ್ತರಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಮೊದಲ ವಿಡಿಯೋವನ್ನು ರಕ್ಷಣಾ ಸಿಬ್ಬಂದಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಕುಸಿದ ಸುರಂಗದ ಅವಶೇಷಗಳಡಿಯಲ್ಲಿ 6 ಇಂಚಿನ ಪೈಪ್‌ಲೈನ್ ಮೂಲಕ ಕಳುಹಿಸಲಾದ ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಬಳಸಿಕೊಂಡು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಸೋಮವಾರ ಸಂಜೆ ದೆಹಲಿಯಿಂದ ಕ್ಯಾಮೆರಾ ತರಿಸಿ ಸುರಂಗಕ್ಕೆ ಕಳುಹಿಸಲಾಗಿದೆ.
ವೀಡಿಯೊದಲ್ಲಿ ಕಾರ್ಮಿಕರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿ ಪೈಪ್‌ಲೈನ್ ಮೂಲಕ ಕಳುಹಿಸಲಾದ ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಪರಸ್ಪರ ಮಾತನಾಡುತ್ತಿರುವುದು ಕಂಡುಬರುತ್ತದೆ. ವಿಡಿಯೋ ವೈರಲ್ ಬಳಿಕ ಕಾರ್ಮಿಕರ ಕುಟುಂಬಗಳು ಕೊಂಚ ಸಮಾಧಾನದಲ್ಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಎನ್‌ಎಚ್‌ಐಡಿಸಿಎಲ್) ನಿರ್ದೇಶಕ ಅಂಶು ಮನೀಶ್ ಖಲ್ಖೋ ಈ ಮೊದಲು ಮಾತನಾಡಿ, ಕಾರ್ಮಿಕರು ಹೇಗಿದ್ದಾರೆ ಎಂಬುದನ್ನು ನೋಡಲು ಪೈಪ್‌ಲೈನ್ ಮೂಲಕ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದರು.
ನ.12ರಂದು ಭೂಕುಸಿತದಲ್ಲಿ ಸುರಂಗದ ಭಾಗಗಳು ಕುಸಿದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. 41 ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಸೋಮವಾರದವರೆಗೆ ಸುರಂಗದ ಕುಸಿದ ಭಾಗದ ಅವಶೇಷಗಳ ಒಳಗೆ ಆಮ್ಲಜನಕ ಮತ್ತು ಹಣ್ಣುಗಳು ಮತ್ತು ಔಷಧಿಗಳಂತಹ ವಸ್ತುಗಳನ್ನು ಪೂರೈಸಲು 4 ಇಂಚಿನ ಟ್ಯೂಬ್‌ನ್ನು ಬಳಸಲಾಗುತ್ತಿತ್ತು. ಈಗ ಬಳಕೆ ಮಾಡುತ್ತಿರುವ 6 ಇಂಚಿನ ಪೈಪ್‌ಲೈನ್ ಹೆಚ್ಚಿನ ಪ್ರಮಾಣದ ಆಹಾರವನ್ನು ಕಳುಹಿಸಲು ಸಹಾಯ ಮಾಡುತ್ತದೆ.
ಅಧಿಕಾರಿಗಳ ಪ್ರಕಾರ ಗಂಜಿ, ತುಂಡರಿಸಿದ ಸೇಬು ಮತ್ತು ಬಾಳೆಹಣ್ಣುಗಳನ್ನು ಹೊಸ ಪೈಪ್‌ಲೈನ್ ಮೂಲಕ ಕಳುಹಿಸಿಕೊಡಲಾಗುತ್ತಿದೆ. ಇದಲ್ಲದೆ ಕಾರ್ಮಿಕರಿಗೆ ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಉತ್ತರಕಾಶಿ ಜಿಲ್ಲಾ ಕೇಂದ್ರದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಮತ್ತು ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನಿಂದ 7 ಗಂಟೆಗಳ ಪ್ರಯಾಣದ ದೂರದಲ್ಲಿರುವ ‘ಸಿಲ್ಕ್ಯಾರಾ ಸುರಂಗ’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಭಾಗವಾಗಿದೆ. ನಾಲ್ಕೂವರೆ ಕಿಲೋಮೀಟರ್ ಉದ್ದದ ಸುರಂಗದಲ್ಲಿ 150 ಮೀಟರ್ ಉದ್ದದಷ್ಟು ಕುಸಿದಿದೆ.
VIDEO | First visuals of workers stuck inside the collapsed Silkyara tunnel in #Uttarkashi, Uttarakhand.
Rescuers on Monday pushed a six-inch-wide pipeline through the rubble of the collapsed tunnel allowing supply of larger quantities of food and live visuals of the 41 workers… pic.twitter.com/mAFYO1oZwv
— Press Trust of India (@PTI_News) November 21, 2023
ಇದನ್ನು ಓದಿ: ದ್ವೇಷ ಭಾಷಣ ಪ್ರಕರಣಗಳಿಗೆ ಸಂಬಂಧಿಸಿ ಸುಪ್ರೀಂ ನಿರ್ದೇಶನವನ್ನು ಪಾಲಿಸಲಾಗಿದೆ: ಕೇಂದ್ರ ಸರಕಾರ


