ಇದೇ ಡಿಸೆಂಬರ್ 6ರಂದು ಸಿಎಂ ಸಿದ್ದರಾಮಯ್ಯನವರ ಸ್ವಗ್ರಾಮ ಸಿದ್ದರಾಮನಹುಂಡಿಯಿಂದ ಮೈಸೂರಿನವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಬಸವರಾಜ ಕೌತಾಳ್ ಮಾಹಿತಿ ನೀಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣದ ದಿನದಂದು ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಊರಾದ ಸಿದ್ದರಾಮನಹುಂಡಿಯಿಂದ ಬೆಳಗ್ಗೆ ಕಾಲ್ನಡಿಗೆ ಜಾಥ ಆರಂಭಿಸಿ, ‘ಒಳಮೀಸಲಾತಿ ಜಾರಿಗೊಳಿಸಿ, ಇಲ್ಲ ಕುರ್ಚಿ ಖಾಲಿ ಮಾಡಿ’ ಘೋಷಣೆಯೊಂದಿಗೆ ಸಾಗಲಿದೆ. ಬಳಿಕ ಟಿ. ನರಸೀಪುರ, ಬನ್ನೂರು, ವ್ಯಾಸರಾಯನಪುರ ಮೂಲಕ ಮೈಸೂರಿನ ಕಡೆಗೆ ತೆರಳಲಿರುವ ಜಾಥಾ ಡಿಸೆಂಬರ್ 11ರಂದು ಮೈಸೂರಿಗೆ ತಲುಪಿ, ಅಪರಾಹ್ನ 12ಕ್ಕೆ ಪುರಭವನ ಆವರಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಪೂರ್ಣಪ್ರಮಾಣದ ಒಳಮೀಸಲಾತಿ ಜಾರಿಗೆ ಕ್ರಮಕೈಗೊಳ್ಳದೆ ಇದ್ದರೆ ಎರಡನೇ ಹಂತದ ಹೋರಾಟವಾಗಿ ಬೆಂಗಳೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವಕೀಲರಾದ ಎಸ್. ಮಾರೆಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರು ಒಳಮೀಸಲಾತಿ ಜಾರಿಗೆ ಅಡ್ಡಗಾಲು ಹಾಕುತಿದ್ದಾರೆ. ಹೀಗಾಗಿ, ಸಂಬಂಧಪಟ್ಟವರನ್ನು ವರ್ಗಾಯಿಸಬೇಕು ಸಾಮಾಜಿಕ ನ್ಯಾಯ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೂಗೂರು ಸಿದ್ದರಾಜು, ಕನಕನಹಳ್ಳಿ ಕೃಷ್ಣಪ್ಪ, ರಾಜಣ್ಣ ದಂಡೋರ, ಬಸಪ್ಪ ಲಿಡ್ಕರ್, ಸ್ವಾಮಿ ಮೈಸೂರು, ವೆಂಕಟರಾಮು, ಆನಂದಕುಮಾರ್, ಹನುಮೇಶ್ ಗುಂಡೂರು, ಹುಣಸೂರು ಪುಟ್ಟಯ್ಯ ಇದ್ದರು.
ಹಕ್ಕೊತ್ತಾಯಗಳು:
ಶೈಕ್ಷಣಿಕ ಕ್ಷೇತ್ರವಾದ ಉನ್ನತ ಶಿಕ್ಷಣ ಸೇರಿದಂತೆ ಎಲ್ಲಾ ಶೈಕ್ಷಣಿಕ ರಂಗಗಳಲ್ಲಿ ಒಳಮೀಸಲಾತಿಯನ್ನು ಅನ್ವಯಿಸಬೇಕು ಮತ್ತು ಕೂಡಲೇ, ಕಂದಾಯ ಇಲಾಖೆಯು ಪರಿಶಿಷ್ಟ ಜಾತಿಗಳ ಪ್ರವರ್ಗವಾರು ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಬೇಕು. (ಸಂವಿಧಾನ ಪರಿಚ್ಛೇದ 15(4) ರಂತೆ ಶೇ.6: 6: 5 ನುಪಾತದಲ್ಲಿ ಜಾರಿಗೆಗೊಳಿಸಬೇಕು)
ಪರಿಶಿಷ್ಟಜಾತಿಗಳ ಒಳಮೀಸಲಾತಿಯನ್ನು ಅನುದಾನಿತ ಶಾಲೆಗಳು ಸೇರಿದಂತೆ ಸರಕಾರಿ, ಅರೆಸರಕಾರಿ ಹುದ್ದೆಗಳ ನೇರನೇಮಕಾತಿ, ಬಡ್ತಿ, ಬ್ಲಾಕ್‌ಲಾಗ್ ಹುದ್ದೆಗಳ ನೇಮಕಾತಿಗೂ ಅನ್ವಯಿಸಿ ಆದೇಶಿಸಬೇಕು. (ಸಂವಿಧಾನ ಪರಿಚ್ಛೇದ 16(4), 16 (4ಎ)- ಸಂವಿಧಾನ 77ನೇ ತಿದ್ದುಪಡಿ ಕಾಯ್ದೆ 1995 ರಂತೆ ಶೇ.6: 6: 5 ಅನುಪಾತದಲ್ಲಿ ಜಾರಿಗೆಗೊಳಿಸಬೇಕು)
ಪರಿಶಿಷ್ಟಜಾತಿ ಉಪ ಹಂಚಿಕೆ ಹಣದಲ್ಲೂ ಒಳಮೀಸಲಾತಿ ಶೇ.6: 6: 5 ಅನುಪಾತದಂತೆ ಆದೇಶ ಮಾಡಿ ಜಾರಿಗೊಳಿಸಬೇಕು. ಉಪಹಂಚಿಕೆ ಕಾಯ್ದೆ ಕಲಂ 7.(ಬಿ), 7 (ಸಿ) ಯನ್ನು ಕೂಡಲೆ ರದ್ದುಪಡಿಸಬೇಕು. (ಸಂವಿಧಾನ ಪರಿಚ್ಛೇದ 16(4) – ಆರ್ಥಿಕ ಸಬಲೀಕರಣಕ್ಕೆ ಸಮಾನ ಅವಕಾಶಗಳು, ಪರಿಶಿಷ್ಟ ಜಾತಿಗಳ ಉಪಯೋಜನೆ ಕಾಯ್ದೆ 2013 ರಂತೆ ಕೆಳ ಮಟ್ಟದ ಆದಾಯ ವರ್ಗವಾದ ಪರಿಶಿಷ್ಟ ಜಾತಿಗಳು ರೂ. 2.50 ಲಕ್ಷ ಆದಾಯ ತಲುಪಲು ಉದ್ದೇಶಿಸಲಾಗಿದ್ದು, ಮಧ್ಯಮ ವರ್ಗದ ಆದಾಯ ರೂ. 5.00 ಲಕ್ಷ ತಲುಪುವ ಗುರಿ ಹೊಂದಿದೆ. ಅದ್ದರಿಂದ ಪರಿಶಿಷ್ಟ ಜಾತಿ ಸಮುದಾಯಗಳು ಕಡಿಮೆ ಆದಾಯ ಹೊಂದಿರುವ ವರ್ಗವಾದ್ದರಿಂದ ಉಪಯೋಜನೆ ಹಣವನ್ನು ಶೇ.6.6:5 ಅನುಪಾತದಲ್ಲಿ ಒಳಮೀಸಲಾತಿ ಜಾರಿಗೊಳಿಸುವುದು ಸಮಂಜಸವಾಗಿದೆ)
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. (ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಮೂರು (3) ಹಂತದ ಸ್ಥಳೀಯ ಸ್ವಂತ ಸರಕಾರ ರಚನೆ, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪ.ಜಾತಿ/ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ಖಾತ್ರಿಪಡಿಸಿದೆ. 1992 ರ ಇಂದಿರಾ ಸಹಾನಿ ತೀರ್ಪಿನಲ್ಲಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮಾತ್ರ ಮೀಸಲಾತಿ ನಿಗದಿಪಡಿಸಲಾಗಿತ್ತು. ಆದರೆ, ಪಂಚಾಯತ್ ಕಾಯ್ದೆ 1993 ಹಿಂದುಳಿದವರಿಗೂ ಸ್ಥಳೀಯ ಚುನಾವಣೆಗಳಲ್ಲಿ ಪ್ರವರ್ಗವಾರು ಮೀಸಲಾತಿ ನಿಗದಿಪಡಿಸಿ ಜಾರಿಗೊಳಿಸಿದಂತೆ, ಪ.ಜಾತಿಗಳಿಗೆ ಶೇ.6: 65 ಅನುಪಾತದಂತೆ ಪ್ರವರ್ಗವಾರು ಒಳಮೀಸಲಾತಿ ಜಾರಿಗೊಳಿಸುವುದು ನ್ಯಾಯಯುತ, ಸಮಂಜಸವಾಗಿದೆ)
ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಿಲು ಪ್ರವರ್ಗ -ಎ ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು. (ಎಕೆ,ಎಡಿ,ಎಎ, ಹೆಸರಿನಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಯಲ್ಲಿ ಒಳಮೀಸಲಾತಿ ಪಡೆಯಬಹುದೆಂದು ಸರಕಾರ ದಿ-25-08-2025 ರಂದು ಆದೇಶಿಸಿದೆ. ಕಡಿಮೆ ಮೆರಿಟ್ ವರ್ಗವಾದ ಪ್ರವರ್ಗ-ಎ ಗೆ, ಮಾದಿಗರಲ್ಲದ ಎಕೆ,ಎಡಿ,ಎಎ, ಹೆಸರಿನಲ್ಲಿ ಪ್ರವರ್ಗ-ಬಿ ಸೇರಿದಂತೆ ಯಾರಾದರೂ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪ್ರವರ್ಗ-ಎ ಯಲ್ಲಿ ಒಳಮೀಸಲಾತಿ ಪಡೆಯುವ ಅಪಾಯವಿದೆ. ಸಫಾಯಿ ಕರ್ಮಚಾರಿ ಆಯೋಗಕ್ಕೆ ಮೇಲ್ವಿಚಾರಣ ಸಮಿತಿ ಇರುವಂತೆ ಪ.ಜಾತಿ ಪ್ರವರ್ಗ-ಎ ಗೆ ಕೂಡ ಜಾತಿ ಪ್ರಮಾಣ ಪತ್ರ ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿ ರಚಿಸಬೇಕು)
ಪರಿಶಿಷ್ಟ ಜಾತಿಯ ಪಟ್ಟಿಯಿಂದ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳನ್ನು ಪರಿಶಿಷ್ಟ ಜಾತಿಯ 101 ಜಾತಿಗಳ ಪಟ್ಟಿಯಿಂದ ತೆಗೆಯಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಇನ್ನು ಮುಂದೆ ಸರ್ಕಾರ ಈ ಜಾತಿಗಳ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಬೇಕು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಮಾಜ ಕಲ್ಯಾಣ ಇಲಾಖೆಯನ್ನೇ ತಪ್ಪು ದಾರಿಗೆ ಎಳೆದು, ಒಳಮೀಸಲಾತಿ ಬಗ್ಗೆ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಇಲಾಖೆಯನ್ನು ನಿಷ್ಕ್ರಿಯಗೊಳಿಸುತ್ತಿರುವ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಇಲಾಖೆಯ ಆಯುಕ್ತರಾದ ರಾಕೇಶ್ ಕುಮಾರ, ಸಲಹೆಗಾರರಾದ ವೆಂಕಟಯ್ಯನವರನ್ನು ಕೂಡಲೇ ವರ್ಗಾಯಿಸಬೇಕು.
ಕೇಂದ್ರ ಸರಕಾರ ಹುದ್ದೆಗಳನ್ನು ಹೊರತುಪಡಿಸಿ, ರಾಜ್ಯ ಸರಕಾರದ ವ್ಯಾಪ್ತಿಗೊಳಪಡುವ ಗುತ್ತಿಗೆ ಕಾಮಗಾರಿ, ಗುತ್ತಿಗೆ ಕಾರ್ಮಿಕರ ನೇಮಕಾತಿ, ತಾತ್ಕಾಲಿಕ ನೇಮಕಾತಿ ಸೇರಿದಂತೆ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ನೇಮಕಾತಿಯಲ್ಲೂ ಶೇ.6:6:5 ಅನ್ವಯಿಸಿ ಆದೇಶಿಸಬೇಕು.
ಪ.ಜಾತಿ ಅಲೆಮಾರಿ ಸಮುದಾಯಿಗಳಿಗೆ ಶೇ.! ಒಳಮೀಸಲಾತಿಯನ್ನು ಜಾರಿಗೊಳಿಸಬೇಕು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಹೊರತುಪಡಿಸಿ, ರಾಜ್ಯದ ವಿವಿಧ ಪಾಲಿಕೆ, ವಿವಿಧ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು, ಯು.ಜಿ.ಡಿ. ಕಾರ್ಮಿಕರನ್ನು ಮತ್ತು ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್‌ಗಳನ್ನು ಕೂಡಲೇ ಕಾಯಂಗೊಳಿಸಬೇಕು.
2022-23ರ ಅವದಿಯಲ್ಲಿ ನೇರ ನೇಮಕಗೊಂಡ ರಾಜ್ಯದ 5533 ಪೌರ ಕಾರ್ಮಿಕರ ವೇತನ ಸರ್ಕಾರದಿಂದ ಶೇ. 65ರಷ್ಟು ಮಾತ್ರ ನೀಡುತ್ತಿದ್ದು, ಇತರೆ ಖಾಯಂ ಪೌರ ಕಾರ್ಮಿಕರಿಗೆ ನೀಡುವ ಶೇ. 100 ರಷ್ಟು ಸಂಪೂರ್ಣ ವೇತನ ಸರ್ಕಾರದಿಂದಲೇ ಪಾವತಿಸಬೇಕು.


