Homeಸಂದರ್ಶನನೀರು-ನೆಲವನ್ನು ಜಾಗರೂಕವಾಗಿ ನಿರ್ವಹಿಸದ ಸಮುದಾಯ ಬಹುಕಾಲ ಉಳಿಯಲಾರದು

ನೀರು-ನೆಲವನ್ನು ಜಾಗರೂಕವಾಗಿ ನಿರ್ವಹಿಸದ ಸಮುದಾಯ ಬಹುಕಾಲ ಉಳಿಯಲಾರದು

- Advertisement -
- Advertisement -

ಆತ್ಮೀಯ ಸಂಪಾದಕೀಯ ಮಂಡಳಿಯವರೇ,

ನಿಮ್ಮ ಪತ್ರಿಕೆಯ “ನೆಲ-ಮುಗಿಲು ಒಂದಾದ ಸಂಕಟ”- ನಿಜಕ್ಕೂ ನೆಲ ಮತ್ತು ಮುಗಿಲು ಒಂದಾಗಿ ಕಾಡಿದ ಕೊಡಗು ಹಾಗೂ ಕೇರಳದ ಪ್ರಸ್ತುತ ಪರಿಸರವನ್ನು ಕುರಿತಾದ ಸಂವಾದ ಎಲ್ಲರೂ ತಿಳಿಯಬೇಕಾದ ಸಂಗತಿಯಾಗಿದೆ. ಹವಾಮಾನ ಬದಲಾವಣೆಯು ಸಂವಾದದಲ್ಲಿ ಪ್ರಸ್ತಾಪಿಸಿದಂತೆ, ಎಲ್ಲಿ ಯಾವಾಗ ಬೇಕಾದರೂ ಸಂಭವಿಸುವಂತಹದ್ದು. ಜೊತೆಗೆ ಇದು ಮಾನವರು ಪ್ರಕೃತಿಯನ್ನು ಬಳಸಿಕೊಳ್ಳುತ್ತಿರುವದರ ಪರಿಣಾಮ ಎಂಬುದರಲ್ಲಿ ಸ್ವಲ್ಪವೂ ಅನುಮಾನಗಳಿಲ್ಲ. ಈ ಭೂಮಿ ಅನುಭವಿಸುತ್ತಿರುವ ತಾಪಮಾನ ಏರಿಕೆಯು ನಾವು ವಾತಾವರಣದಲ್ಲಿ ದಿನೇದಿನೇ ಸೇರಿಸುತ್ತಿರುವ ಇಂಗಾಲದ ಡೈ ಆಕ್ಸೈಡ್ ಮತ್ತಿತರ ಅನಿಲಗಳಿಂದ ಎಂಬುದು ಈಗಾಗಲೇ ಜಗಜ್ಜಾಹೀರಾದ ಸಂಗತಿ. ಇಷ್ಟಕ್ಕೂ ನಾವು ಇಂಗಾಲ, ಮೀಥೆನುಗಳಂತಹಾ ಅನಿಲಗಳನ್ನು ಸೇರಿಸುತ್ತಿರುವ, ಜೊತೆಗೆ ಇತರೇ ಹತ್ತು ಹಲವು ಅನೈಸರ್ಗಿಕ ವಿಚಿತ್ರಗಳನ್ನು ನೆಲದ ಮೇಲೆ ನಡೆಸುತ್ತಿರುವ ಹಿನ್ನೆಲೆಯಿಂದಾಗಿ ಹೀಗೆ ಇದ್ದಕ್ಕಿದ್ದಂತೆ ನಡೆಯುತ್ತಿರುವ ಅನುಭವಗಳಾಗುತ್ತಿವೆ. ಅದರಲ್ಲೂ ಈ ಭೂಮಿಯ ನಿವಾಸಿಗಳೆಲ್ಲರೂ ಭೂಮಿಯನ್ನು ತಿಳಿವಳಿಕೆಯಿಂದ ನಿಭಾಯಿಸಿದ ಉದಾಹರಣೆಗಳು ಅಪರೂಪ. ಅದಕ್ಕೆ ಕಾನೂನುಗಳು-ಮತ್ತು ಅದನ್ನು ಮುರಿಯುವ ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಕೇವಲ ಯಜಮಾನಿಕೆಯಿಂದಲೇ ನಿಭಾಯಿಸುವ, ನಿರ್ವಹಿಸುವ ರೀತಿ-ನೀತಿಗಳು ಸರ್ವೇಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನವನ್ನು ಈ ಪರಿಸರ ಮತ್ತು ಮಣ್ಣು ವಿಜ್ಞಾನದ ತಿಳಿವಳಿಕೆಯಿಂದ ಮಾಡಲು ಇಚ್ಚಿಸಿದ್ದೇನೆ.

ಪ್ರಶ್ನೆ 1. ಬೇಕಾಬಿಟ್ಟಿಯಾಗಿ ನೆಲದ ಬಳಕೆಯ ಕಾರಣದ ವಾದ. ನಿಜಕ್ಕೂ ಈ ಪ್ರಶ್ನೆಯನ್ನು ಕೇಳುವ ಅಗತ್ಯವೇ ಇಲ್ಲ. ಅಷ್ಟರಮಟ್ಟಿಗೆ ಈ ವಾದದ ಪರವಾದ ಸಂಗತಿಗಳು ವೈಜ್ಞಾನಿಕ ಹಿನ್ನೆಲೆಯಿಂದ ವಿವರಿಸಬಹುದು. ಕಳೆದ ಮೂರು ದಶಕಗಳಿಂದ ಅಧ್ಯಯನ ಮತ್ತಿತರ ಕಾರಣಗಳಿಂದ ಹಲವಾರು ಬಾರಿ ಕೊಡಗು ಮತ್ತು ಕೇರಳವನ್ನು ಅಡ್ಡಾಡಿದ್ದೇನೆ. ಪ್ರತೀ ವರ್ಷಕ್ಕೂ ಅಲ್ಲಿ ಪ್ರವಾಸೋದ್ಯಮದ ಹಿತದಿಂದ ಎಲ್ಲೆಂದರಲ್ಲಿ ಹುಟ್ಟಿಕೊಂಡ, ವಸತಿಗಳು, ಅದಕ್ಕಾಗಿ ಓಡಾಡಲು ಅನುಕೂಲಕರವಾದ ದಾರಿಗಳು ತೆರೆದುಕೊಂಡಿವೆ. ಹಿಂದೊಮ್ಮೆ ಅಧ್ಯಯನಕ್ಕಾಗಿ ಒಳಗೆಲ್ಲೋ ಸುತ್ತಾಡಲೂ ವಾಹನಗಳು ಸುಲಭಕ್ಕೆ ಸಿಗುತ್ತಿರಲಿಲ್ಲ. ಇಂದು ಎಲ್ಲಿಗೆ ಬೇಕಲ್ಲಿಗೆ ತಲುಪಿಸಲು ಹಲವಾರು ಜಾಲಗಳಿವೆ. ನೆರವುಗಳಿವೆ. ಹಾಗಂತ ಇವೆಲ್ಲವೂ ಅವಶ್ಯಕವಾಗಿ ಬೇಕಾದ ಆಂಬ್ಯುಲೆನ್ಸ್ ಮಾದರಿಯ ಸೌಕರ್ಯಗಳಲ್ಲ. ಹೇಗೋ ಎಲ್ಲಿಗಾದರೂ ಸೈ ಎನ್ನುವ ಬೇಕಾಬಿಟ್ಟಿಯಾದ ಸೌಕರ್ಯಗಳೇ ಹೌದು. ನೆಲದ ದಾಹ ಮನುಕುಲವನ್ನು ಕಾಡಿರುವಷ್ಟು, ಬೇರೇನೂ ಕಾಡಿರದು. ಅದಕ್ಕಾಗಿ ಇಡೀ ಜಗತ್ತನ್ನು ಅಲೆದಾಡಿದ ಐರೋಪ್ಯರು ಅಂತಹ ವಸಾಹತು ನಿರ್ಮಿತಿಯ ಧ್ವಂಸಕಾರ್ಯವನ್ನು ಅಸಾಧಾರಣವಾಗಿ ಕಲಿಸಿದ್ದಾರೆ. ಈ ವಸಾಹತೀಕರಣದ ಲಾಭ-ನಷ್ಟಗಳ ಹಲವಾರು ಅಧ್ಯಯನಗಳು ನೆಲದ ಮೇಲೆ ಮಾನವನು ಮಾಡಿದ ದೌರ್ಜನ್ಯವನ್ನು ಸಾರಿ-ಸಾರಿ ಹೇಳಿವೆ. ಒರೆ ಹಚ್ಚಿ ನೋಡುವ ಗೋಜಿಗೇ ಹೋಗಬೇಕಿಲ್ಲ. ಹಾಗಾಗಿ ನಮ್ಮದಲ್ಲದ ನೆಲದ ಮೇಲೆ ಮನುಕುಲವು ಮಾಡುವ ಬೇಕಾಬಿಟ್ಟಿಯಾದ ಕೆಲಸಗಳು ಖಂಡಿತಾ ಅತಿವೃಷ್ಟಿಗೆ ಬಲಿಯಾಗಿವೆ.

ಪ್ರಶ್ನೆ 2. ಎರಡೂ ಪ್ರದೇಶಗಳಲ್ಲಿನ ನಷ್ಟಗಳಿಗೆ ಖಂಡಿತಾ ಪ್ರಕೃತಿ ಕಾರಣವಲ್ಲ. ಪ್ರಕೃತಿ ಕಾರಣ ಎಂದರೆ ಹೇಗೆ ಅನ್ನಿಸುವುದೆಂದರೆ, ಹಾಗೇ ಸೂಕ್ಷ್ಮ ಪ್ರದೇಶವಾಗಿಸಿಕೊಂಡಿರುವುದೇ ನಿಸರ್ಗ ಮಾಡಿದ ಅನ್ಯಾಯ ಎನ್ನುವಂತಾಗುತ್ತದೆ. ಭೂಮಿಯು ವೈವಿಧ್ಯತೆಯನ್ನು ಕಾಪಾಡಿಕೊಂಡಿರುವುದೇ ಅದರ ಬಾಳಿಕೆಯ ಹಿತಕ್ಕಾಗಿ. ಇದೊಂದನ್ನೂ ಅರಿಯದ ಮಾನವ ವಿಧ್ವಂಸಕ ಕೃತ್ಯಗಳು ಕಳೆದ ಎರಡು-ಮೂರು ಶತಮಾನಗಳಿಂದ ಹಲವಾರು ಅಸಂಗತ ಕಾರ್ಯಗಳನ್ನು ದಾಖಲಿಸಿವೆ. ಈ ಹಿಂದೆಯೂ ಅತಿಮಳೆಯನ್ನು ಕಾಣುತ್ತಿದ್ದ ನೆಲಗಳವು. ಈಗ ಇದ್ದಕ್ಕಿದ್ದಂತೆ ಗುಡ್ಡ-ಬೆಟ್ಟಗಳು ಸವೆಯುವುದೆಂದರೆ, ಅಲ್ಲಿ ನಾವು ಮಾಡಿದ ಅದಕ್ಕೊಲ್ಲದ ಕೆಲಸಗಳಿಂದ. ಸಾಕಷ್ಟು ಜನ ತುಂಬಿರುವ ನಗರಗಳಲ್ಲೇ ಹೇಳುವವರು ಕೇಳುವವರು ಇಲ್ಲ ಎಂದರೆ ಬೇಕಾಬಿಟ್ಟಿಯಾದ ಒತ್ತುವರಿಗಳು ನಡೆಯುತ್ತವೆ. “ಅಕ್ರಮ-ಸಕ್ರಮ” ಎಂಬ ಮಾತುಗಳನ್ನು ನಾವು ಅದೆಷ್ಟು ಕೇಳಿಲ್ಲ. ಅಕ್ರಮಗಳನ್ನು ನಿಭಾಯಿಸಲು ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೇ ವಿನಾಃ, ಸಕ್ರಮವನ್ನೂ ಸಕಾರಣವಾಗಿಸುವುದು ಸರಿಯಲ್ಲ. ಹಾಗಾಗಿ ಕೊಡಗು-ಕೇರಳ ಎರಡೂ ಗುಡ್ಡಬೆಟ್ಟಗಳ, ಸಹಜವಾಗಿ ತೆರೆದುಕೊಳ್ಳದ ನೆಲಗಳು ಅಲ್ಲಿ “ಅಕ್ರಮ”ಕ್ಕೆ ತುಂಬಾ ಅನುಕೂಲಕರವಾದ ವಾತಾವರಣವಿದೆ. ಹೋಂ ಸ್ಟೇ, ರೆಸಾರ್ಟುಗಳು, ವಾರಾಂತ್ಯದಲ್ಲಿ ಅನುಕೂಲ ಕಲ್ಪಿಸಿಕೊಡುವ ವಸತಿಗಳು, ಸಾಕಷ್ಟು ಬಂದಿರುವುದೇ ಅಲ್ಲಿನ ನೆಲ ಸರಿಯಲು ಕಾರಣವಾಗಿದೆ.

ಪ್ರಶ್ನೆ 3. ಮೇಲಿನ ಎರಡೂ ವಿವರಗಳಲ್ಲಿ ಉದಾಹರಿಸಿರುವಂತೆ ಇಲ್ಲೆಲ್ಲಾ ನೆಲವನ್ನು ತೀರಾ ಅಸಹಜವಾಗಿ ನಿರ್ವಹಿಸುತ್ತಿರುವ ಪರಿಣಾಮವೇ ಇದೀಗ ಸಮಸ್ಯೆಯಾಗಿದೆ. ಖಂಡಿತಾ ಕೊಡಗಿನ ನೆಲವನ್ನು ಅದರ ಪಾರಂಪರಿಕ ನಿರ್ವಹಣೆಯಿಂದ ವಂಚಿಸಿದ್ದು ಅನ್ಯಾಯವೇ ಸರಿ. ಹಾಗಾಗಿ ಅಸಹಜವಾದ ನೆಲದ ಮೇಲ್ಮೈ ನಿರ್ವಹಣೆ ಎಲ್ಲೂ ಮಾಡುವ ಮನುಷ್ಯ, ಅಲ್ಲೂ ಅಸಹಜವಾಗಿಯೇ ಮಾಡುತ್ತಿದ್ದಾನೆ. ಇದು ವಸಾಹತುಗಳು ನಮಗೆ ಕಲಿಸಿದ ಆದರೆ, ಕಲಿಯಬಾರದಾಗಿದ್ದ ಪಾಠ. ಅದನ್ನು ಅನುಭವಿಸದೇ ಗತ್ಯಂತರವಿಲ್ಲ.

ಪ್ರಶ್ನೆ 4. ಭೂಗೋಳವನ್ನು ಅದರ ಮೇಲ್ಮೈಯಲ್ಲಿ ಉಂಟಾದ ನೈಸರ್ಗಿಕವಾದ ಬದಲಾವಣೆಗಳಿಂದ ತಿಳಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಆಧುನಿಕ ಜಗತ್ತು ಬದಲಾವಣೆಗಳಿಗೆ ಅನುಕೂಲವಾಗುವಂತಹಾ ಅದೆಷ್ಟು ತರ್ಕ, ತಾಂತ್ರಿಕತೆ, ರಾಜಕೀಯ ತೀರ್ಮಾನಗಳನ್ನು ಮಾಡಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ನಮ್ಮ ಅಭಿವೃದ್ಧಿಯ ಎಲ್ಲ ಬದಲಾವಣೆಗಳೂ ಮೇಲ್ಮೈಯನ್ನು ಪರಿವರ್ತಿಸುವ ದೊಡ್ಡ ಕಾರ್ಯಯೋಜನೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆಂದೇ ಭೂಸ್ವಾಧೀನ ವಿಭಾಗವನ್ನೇ ಸರ್ಕಾರ ನಿರ್ಮಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ ಅರಿವೆಗೆ ತೇಪೆ ಹಾಕುವ ಕ್ಷಣಿಕವಾದ ಅನುಕೂಲಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಉದಾಹರಣೆಗೆ ಇಡೀ ರಾಜ್ಯದಲ್ಲಿ ಸಹಸ್ರಾರು ಕೆರೆಗಳು ಕೇವಲ ಕಳೆದ ದಶಕಗಳಲ್ಲಿ ಕಣ್ಮರೆಯಾಗಿವೆ. ಅಳಿದುಳಿದ ಕೆರೆಗಳಿಗೂ ನೀರು ಬರುತ್ತಿಲ್ಲವೆಂಬ ಕಾರಣಕ್ಕೆ ಅಣೆಕಟ್ಟುಗಳಿಂದ ನೀರು ತುಂಬಿಸುವ ತೇಪೆದಾರಿಕೆ ಕೆಲಸ ನಡೆಯುತ್ತಿದೆ. ಹಿಂದೆ ಇವೆಲ್ಲವೂ ಸ್ವಾಭಾವಿಕವಾಗಿಯೇ ನೀರು ತುಂಬಿಸಿಕೊಳ್ಳುತ್ತಿದ್ದ ತಾಣಗಳು. ಈಗ ಅವುಗಳ ಜಲಾನಯನ ಪ್ರದೇಶಗಳಲ್ಲಿ ಒತ್ತುವರಿಯಿಂದ ಹರಿವ ನೆಲವೆಲ್ಲಾ ಬದಲಾವಣೆಯಾಗಿ ಸ್ವಾಭಾವಿಕವಾದ ನೀರಿನ ಹರಿವಿಗೆ ಅಡೆ-ತಡೆಗಳಾಗಿವೆ. ಇದರಿಂದ ನೀರು ಎಲ್ಲೆಂದರಲ್ಲಿ ನುಗ್ಗುವುದು ಸಹಜವೇ ಆಗಿದೆ. ಒತ್ತುವರಿಗಳ ಕಾರಣಗಳು ರಾಜಕೀಯ ಪ್ರೇರಿತವಾಗಿದ್ದು ನಿಸರ್ಗದ ಹಿತಕ್ಕೆ ಮತ್ತಷ್ಟು ಧಕ್ಕೆಯಾಗಿದೆ. ಮೇಲ್ಮೈಯ ಅರಿವಿನಿಂದ ಮಣ್ಣನ್ನು ನಿಭಾಯಿಸುವ ಬಗ್ಗೆ ಆಧುನಿಕ ವಿಜ್ಞಾನದ ಕಲಿಕೆಯಲ್ಲೂ ಆಘಾತಕಾರಿಯಾದ ಸಂಗತಿಗಳನ್ನು ಹಲವು ಅಧ್ಯಯನಗಳು ಗುರುತಿಸಿದ್ದು, ಮತ್ತೀಗ ಪಾರಂಪರಿಕ ಮಣ್ಣು ನಿರ್ವಹಣಾ ತಿಳಿವನ್ನು ಪುನರ್ ಭೇಟಿಯಿಂದ ಅಳವಡಿಸುವ ಪ್ರಯತ್ನಗಳನ್ನು ಪಾಶ್ಚಾತ್ಯ ಅಧ್ಯಯನಗಳು ಗುರುತಿಸಿವೆ. ಮಣ್ಣನ್ನು ಸಾಂಸ್ಕøತಿಕ ಹಿತದಿಂದ ತಿಳಿವಾಗಿಸಲು ಭಾರತೀಯ ಮಣ್ಣು ವಿಜ್ಞಾನದ ಕಲಿಕೆಯನ್ನು ಪುನರ್ ವಿಮರ್ಶಿಸುವ ಅಗತ್ಯದ ಪ್ರಯತ್ನಗಳನ್ನು ನಾನೇ ಖುದ್ದಾಗಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಜೊತೆಯಲ್ಲಿ ಮಾಡಿ ಸೋಲುಂಡಿದ್ದೇನೆ. ನೆಲದ ನಿರ್ವಹಣೆಯಲ್ಲಿ ಅರ್ಥವಿಜ್ಞಾನದ ತಿಳಿವುಗಳೇ ಭಾರತೀಯ ನೆಲದ ಅಧ್ಯಯನಗಳಲ್ಲಿ ಇಲ್ಲ. ಆಧುನಿಕ ನೆಲದ ನಿರ್ವಹಣೆಯ ಯಾವ ಮಾತುಗಳೂ ಕೃಷಿ ವಿಜ್ಞಾನದ ಮಣ್ಣುವಿಜ್ಞಾನದ ಕಲಿಕೆಯಲ್ಲಿ ಶೈಕ್ಷಣಿಕವಾಗಿ ಚರ್ಚಿತವಾಗುವುದಿಲ್ಲ. ನಮ್ಮ ಯಾವುದೇ ಕೃಷಿವಿಶ್ವವಿದ್ಯಾಲಯಗಳೂ ನೆಲದ ಬದಲಾವಣೆಯ ಆಧುನಿಕ ಕಾಲದ ಹಿನ್ನೆಲೆಯ ಅರಿವನ್ನು ಹೊಂದಿಲ್ಲ.

ಪ್ರಶ್ನೆ 5. ಅತೀವೃಷ್ಟಿ -ಅನಾವೃಷ್ಟಿ ಎರಡರಲ್ಲೂ ಮಾನವನ ಕೊಡುಗೆಯನ್ನು ಒಂದೆರಡು ಮಾತುಗಳಲ್ಲಿ ಹೇಳುವುದು ಕಷ್ಟ. ಒಂದಂತೂ ನಿಜ. ಈ ಹಿನ್ನೆಲೆಯಲ್ಲಿ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವಿನ್ನೂ ಇರಬೇಕಾದಷ್ಟು ಚತುರರಲ್ಲ. ಇಡೀ ವಿಜ್ಞಾನದ ಇತಿಹಾಸವು ಕೇವಲ

 

400 ವರ್ಷಗಳಷ್ಟು ಹಳೆಯದು. ಆದರೆ ಇಳೆಯ ಮಳೆಯ ಇತಿಹಾಸ ಲಕ್ಷಾಂತರ ವರ್ಷದಷ್ಟು ಹಳೆಯದು. ಹಾಗಾಗಿ ನಿಸರ್ಗದೊಡನೆ ಮಾನವನ ತಿಳಿವಳಿಕೆಯ ಮುಖಾಮುಖಿ ಮಳೆಯ ಅಳತೆಯನ್ನು ಐತಿಹಾಸಿಕವಾಗಿ ಕಟ್ಟಲು ಕಷ್ಟ. ಕೆಲವೇ ದಶಕಗಳಿಂದ ಉಂಟಾದ ಒತ್ತಡಗಳ ಬೆಳವಣಿಗೆಗಳು ಅಸಾದಾರಣ ಬದಲಾವಣೆಗಳನ್ನು ತಂದಿಟ್ಟಿವೆ. ಹಾಗಾಗಿಯೇ ಇವೆಲ್ಲವೂ ಜಾಗತಿಕವಾಗಿ ಚರ್ಚಿಸುತ್ತಿರುವ ಸಂಗತಿಗಳಾಗಿವೆ. ಮಾನವನ ಕೊಡುಗೆಯನ್ನು ನಿರಾಕರಿಸುವ ಮನಸ್ಸುಗಳು ನಾಳಿನ ತಮ್ಮದೇ ಸಂತತಿಯ ಭವಿಷ್ಯದ ಬಗೆಗೆ ಏನನ್ನೂ ಚಿಂತಿಸದಷ್ಟು ಮೂರ್ಖ ಜಾಯಮಾನದ್ದು, ರಾಜಕೀಯ ಪ್ರೇರಿತವಾದದ್ದು. ಇವತ್ತಿನ ಲಾಭವನ್ನಷ್ಟೇ ಎಣಿಸುವ ಆತುರದ ಬುದ್ದಿಯುಳ್ಳವರು ಮಾತ್ರವೇ ಹವಾಮಾನದ ಬದಲಾವಣೆಯನ್ನು ಮಾನವ ನಿರ್ಮಿತಿ ಅಲ್ಲ ಎಂದು ನಿರಾಕರಿಸಬಹುದು.

ಪ್ರಶ್ನೆ 6. ಪ್ರವಾಸೋದ್ಯಮದ ಹಿತಕ್ಕಾಗಿ ಬಲಿಯಾದ ಸ್ಥಳೀಯತೆಯ ಕುರಿತು ತಿಳಿವಳಿಕೆಯು ನಮಗೆ ಖಂಡಿತಾ ಇಲ್ಲ. ಇವೆಲ್ಲವೂ ವ್ಯಸನಗಳನ್ನೇ ದೊಡ್ಡ ಲಾಭವಾಗಿ ವಿಮರ್ಶಿಸುವ ಹುನ್ನಾರದವು. ಥೈಲಾಂಡ್ ಈಗಾಗಲೇ ಸಾಕಷ್ಟು ನಲುಗಿದ ಸಂಗತಿ ಏನೂ ಗುಟ್ಟಾಗಿ ಉಳಿದಿಲ್ಲ. ಈಗಲೂ ಕೃಷಿ ರಸಾಯನಿಕ ಕಂಪನಿಗಳು, ಔಷಧಿಗಳ ಕಂಪನಿಗಳು, ತಮ್ಮ ಚಿಲ್ಲರೆ ಮಾರಾಟಗಾರರಿಗೆ, ದಾಸ್ತಾನುಗಾರರಿಗೆ ಆಗಾಗ್ಗೆ ಥೈಲಾಂಡ್ ದರ್ಶನ ಏರ್ಪಡಿಸುವ ಸಂಗತಿಗಳು ಪ್ರತೀ ಮೆಡಿಕಲ್ ಶಾಪಿನವರಿಗೂ, ರಸಗೊಬ್ಬರ, ಕೀಟನಾಶಕಗಳ ವ್ಯಾಪಾರಿಗಳಿಗೂ ಗೊತ್ತಿದೆ. ಅವೆಲ್ಲವೂ ಥೈಲಾಂಡ್, ಹಾಂಕಾಂಗ್, ಮಲೇಶಿಯಾ, ಸಿಂಗಪೂರ್‍ಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಕೇವಲ ಹತ್ತಿರ ಎಂಬ ಕಾರಣಕ್ಕಾಗಿ ಅಲ್ಲ. ಅಲ್ಲಿರುವ ನಮ್ಮ ತೆವಲುಗಳ ದಾಹ ತೀರಿಸಿಕೊಳ್ಳುವ ಅನುಕೂಲಗಳಿಗಾಗಿ. ಪ್ರವಾಸೋದ್ಯಮದಲ್ಲಿ ಕ್ಷಣಿಕವಾದ ಲಾಭಗಳಿವೆ, ಆದರೆ ಕಾಲಾಂತರದಲ್ಲಿ ಅನುಭವಿಸುವ ಬಲು ದೊಡ್ಡ ನಷ್ಟಗಳಿವೆ. ಆ ನಷ್ಟಗಳನ್ನೇ ಗುರುತಿಸದಂತಹಾ ಸಂಸ್ಕøತಿಯು ಸೃಷ್ಟಿಯಾದರೂ ಆಶ್ಚರ್ಯವಿಲ್ಲ. ಪ್ರವಾಸಿಗಳಾರೂ ಮತ್ತೊಂದು ನೆಲದಲ್ಲಿ ನಿಸರ್ಗದ ಹಿತವನ್ನು ಬಯಸುವ ಮನಸ್ಸುಳ್ಳವರಲ್ಲ. ನಮ್ಮದಲ್ಲದ ನೆಲಕ್ಕೆ ನಾವೇಕೆ ಗೌರವ ಕೊಡುತ್ತೇವಲ್ಲವೇ? ಇದೇ ಆಗಿದ್ದು ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಕೊಡಗು-ಕೇರಳದಲ್ಲಿ ಅದೆಷ್ಟು ರೆಸಾರ್ಟುಗಳು ಹುಟ್ಟಿಕೊಂಡು ಸ್ಥಳೀಯ ಗೌರವಕ್ಕೆ ಆಘಾತವನ್ನು ಉಂಟುಮಾಡಿವೆ ಎನ್ನುವುದನ್ನು ಮುಗ್ಧ ಮನಸ್ಸುಗಳು ತಕ್ಷಣ ತಿಳಿಯಲಾರವು.

ಪ್ರಶ್ನೆ 7. ಇಂತಹಾ ಅನಾಹುತಗಳನ್ನು ತಡೆಗಟ್ಟಲು ವೈಯಕ್ತಿವಾದ, ಸಾಮುದಾಯಿಕವಾದ ಜವಾಬ್ದಾರಿಗಳು ಬೇಕಾಗುತ್ತವೆ. ರಾಜಕೀಯ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಜಾತಾಂತ್ರಿಕ ಸಮಾನತೆಯಿಂದ ನಿರ್ವಹಿಸುವ ರೀತಿ ರಿವಾಜುಗಳೂ ಬೇಕಾಗುತ್ತವೆ. ಕೈಗಾರಿಕಾ ಕ್ರಾಂತಿಯಿಂದ ಹಾಗೂ ಮಹಾಯುದ್ಧಗಳಿಂದ ಅನುಭವಿಸಿದ ನೋವು-ನಲಿವುಗಳ ನಿಭಾಯಿಸಲು ಯುರೋಪು ಕಂಡುಕೊಂಡ ಉಪಾಯಗಳು, ಜೊತೆಗೆ ಅಣುಬಾಂಬಿನ ನೋವುಂಡ ಜಪಾನ್ ಕಟ್ಟಿಕೊಂಡ ಶಿಸ್ತು ನಮಗೆ ಪಾಠಗಳಾಗಬೇಕು. ಅಲ್ಲೆಲ್ಲೋ ಉತ್ತರಗಳಿವೆ ಎಂದು ನಮ್ಮ ಶಾಸಕರೂ, ಸಂಸದರು, ಕಾರ್ಪೊರೇಟರುಗಳು ವಿದೇಶಿ ಪ್ರಯಾಸವನ್ನು ಕೈಗೊಳ್ಳುವಂತಹಾ ಕ್ರಮಗಳಿಂದ ಖಂಡಿತಾ ಅನಾಹುತಗಳನ್ನು ತಡೆಗಟ್ಟಲಾಗದು. ಹಾಗೇನೇ ತಿಳಿವಳಿಕೆಯಿಲ್ಲದ ಕೇವಲ ಭಾವಾವೇಶದ ಚಳವಳಿಗಳಿಂದಲೂ ಪ್ರಯೋಜನವಾಗದು. ಬದಲಾಗಿ ನಿಸರ್ಗದ ನಿಯಮಕ್ಕೆ ಅನುಸಾರವಾಗಿ ಸಾಕಷ್ಟು ತಿಳಿವಳಿಕೆಯನ್ನು ಸಾರ್ವಜನಿಕವಾಗಿಸುವ ಮೂಲಕ ಮಾತ್ರವೇ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ.
ನೀರು-ನೆಲವನ್ನು ಜಾಗರೂಕವಾಗಿ ನಿರ್ವಹಿಸದ ಯಾವುದೇ ಸಮುದಾಯವು ಬಹುಕಾಲ ಉಳಿಯಲಾರದು. ಭೂಮಿಯಲ್ಲಿನ ಎಲ್ಲವೂ ಮೇಲ್ಮೈಗೆ ಸೇರಿದ್ದು. ಮಾನವ ಚಟುವಟಿಕೆಗಳೂ ಮೇಲ್ಮೈಯನ್ನು ನಿಭಾಯಿಸುವಿಕೆಯಲ್ಲಿ ಇವೆಯೇ ವಿನಾಃ ಇನ್ನೆಲ್ಲೋ ಇಲ್ಲ. ನಮ್ಮ ಊರಿನ ನೆಲವನ್ನು ನಾವಷ್ಟೇ ಕಾಯ್ದುಕೊಳ್ಳಬೇಕು ಅದಕ್ಕೆ ಬೇಕಾದ ಎಲ್ಲವನ್ನೂ ಮಾಡುವ ಇಚ್ಚೆಯುಳ್ಳವರಾಗಿರಬೇಕು.

– ಡಾ. ಟಿ.ಎಸ್. ಚನ್ನೇಶ್
ನಿರ್ದೇಶಕರು, ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ ಕೇಂದ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...