ಲಾಕ್‌ಡೌನ್ ತೆರವಿನ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕನ್ನಡಿಗರ ಮನಗೆದ್ದಿರುವ ‘ಆಕ್ಟ್-1978′ ಸೇರಿ ನಾಲ್ಕು ಸಿನಿಮಾಗಳು ಭಾರತ ಸರಕಾರ ಆಯೋಜಿಸುವ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿವೆ.
‘ಹರಿವು’, ‘ನಾತಿಚರಾಮಿ’ ಸಿನಿಮಾಗಳ ನಿರ್ದೇಶಕರಾದ ಮಂಸೋರೆಯವರ ‘ಆಕ್ಟ್- 1978′, ಅಕಾಲಿಕ ಮರಣದಕ್ಕೆ ತುತ್ತಾದ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ತಲೆದಂಡ’, ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ (ನಿರ್ದೇಶಕ ಸಾಗರ್ ಪುರಾಣಿಕ್), ಗಣೇಶ್ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಸಿನಿಮಾಗಳು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿವೆ.

ನಿರ್ದೇಶಕ ಮಂಸೋರೆಯವರು ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ಅಪಘಾತದಲ್ಲಿ ನಿಧನರಾದ ಸಂಚಾರಿ ವಿಜಯ್ ಅವರನ್ನು ನೆನೆದಿದ್ದಾರೆ. “ಸಂಚಾರಿ ವಿಜಯ್ ಸರ್ ಅಭಿನಂದನೆಗಳು. ನೀವು ನಟಿಸಿರುವ ಎರಡು ಸಿನೆಮಾಗಳು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ. ನಿಮ್ಮೊಂದಿಗೆ ಹಂಚಿಕೊಂಡಿದ್ದ ದೀರ್ಘಕಾಲದ ಕನಸೊಂದು ಇಂದು ನನಸಾಗಿದೆ” ಎಂದಿದ್ದಾರೆ.
ಮುಂದುವರಿದು, “ನಮ್ಮ-ನಿಮ್ಮ ಆಕ್ಟ್-1978 ಸಿನಿಮಾ ‘ಭಾರತ ಸರಕಾರ’ ಆಯೋಜಿಸುವ ಪ್ರತಿಷ್ಟಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿರುವುದು ಹೆಮ್ಮೆ ಮತ್ತು ಖುಷಿಯ ವಿಚಾರ. ನಮ್ಮ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ. ಕೊರೋನಾ ನಂತರದ ದುರಿತ ಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಿದಾಗಲೂ ಕೈ ಹಿಡಿದು ಪೊರೆದು, ನಮಗೂ ಚಿತ್ರರಂಗಕ್ಕೂ ಧೈರ್ಯ ತುಂಬಿದ ಪ್ರೇಕ್ಷಕರಿಗೂ, ಎಲ್ಲಾ ಹಂತಗಳಲ್ಲೂ ನಮ್ಮ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ತಂಡದ ಪರವಾಗಿ ಧನ್ಯವಾದಗಳು” ಎಂದು ಮಂಸೋರೆ ತಿಳಿಸಿದ್ದಾರೆ.
ಭಾರತೀಯ ಪನೋರಮಾದ 52ನೇ ಆವೃತ್ತಿ ಗೋವಾದಲ್ಲಿ ನಡೆಯಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಗೋವಾ ಸರ್ಕಾರ ವತಿಯಿಂದ ನವೆಂಬರ್ 20ರಿಂದ 28ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ.
ಒಟ್ಟು 25 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. 221 ಸಮಕಾಲೀನ ಭಾರತೀಯ ಚಲನಚಿತ್ರಗಳ ಪೈಕಿ ಈ ಸಿನಿಮಾಗಳನ್ನು ಆಯ್ಕೆಮಾಡಲಾಗಿದೆ. ಬಂಗಾಳಿ ಭಾಷೆಯ ಐದು ಸಿನಿಮಾ, ಬೊಡೊ-1, ಸಿನಿಮಾ, ದಿಮಸ- 1, ಗುಜರಾತಿ- 1, ಹಿಂದಿ- 2, ಕನ್ನಡ- 4, ಮಲಯಾಳಂ- 2, ಮರಾಠಿ- 5, ಮಿಶಿಂಗ್-1, ಸಂಸ್ಕೃತ- 1, ತಮಿಳು- 1, ತೆಲುಗು- 1 ಸಿನಿಮಾಗಳು ಪ್ರದರ್ಶನ ಕಾಣಲಿವೆ.
ಇದನ್ನೂ ಓದಿರಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…


