Homeಮುಖಪುಟರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಸಂಸದರಿಗೆ ಘೇರಾವ್- ಹಿಂಸಾಚಾರ

ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಸಂಸದರಿಗೆ ಘೇರಾವ್- ಹಿಂಸಾಚಾರ

ಒಬ್ಬ ರೈತನ ಸ್ಥಿತಿ ಗಂಭೀರವಾಗಿದ್ದು ಇಬ್ಬರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -
- Advertisement -

ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಾಂಗ್ರಾರವರಿಗೆ ಹರಿಯಾಣದ ಹಿಸಾರ್ ನಲ್ಲಿ ರೈತರು ಘೇರಾವ್ ಹಾಕಿದ್ದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಒಬ್ಬ ರೈತನ ಸ್ಥಿತಿ ಗಂಭೀರವಾಗಿದ್ದು ಇಬ್ಬರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರ ಮೇಲೆ ಹಲ್ಲೆ ಖಂಡಿಸಿ ಮತ್ತು ರೈತರ ಬಿಡುಗಡೆಗೆ ಒತ್ತಾಯಿಸಿ ರೈತರಲು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಸದರು ಹಿಸಾರ್ ಜಿಲ್ಲೆಯ ನಾರ್ನಾಂಡ್‌ನಲ್ಲಿ ಧರ್ಮಶಾಲೆಯನ್ನು ಉದ್ಘಾಟಿಸಲು ಆಗಮಿಸುತ್ತಿದ್ದ ವೇಳೆ, ಅವರ ವಿರುದ್ದ ರೈತರು ಘೋಷಣೆಗಳನ್ನು ಕೂಗಿ, ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾರಾಮಾರಿ ನಡೆದಿದ್ದು, ಜಂಗ್ರಾ ಅವರ ಕಾರಿನ ಗಾಜು ಪುಡಿಪುಡಿಯಾಗಿದೆ. ಪೊಲೀಸರು ನಡೆಸಿದ ಲಾಠಿ ಚಾರ್ಜ್‌ನಲ್ಲಿ ಹಲವಾರು ರೈತರು ಗಾಯಗೊಂಡಿದ್ದಾರೆ.

ಜಾಂಗ್ರಾ ಅವರು ನಿನ್ನೆ ರೋಹ್ಟಕ್‌ನ ಗೋಶಾಲೆಯಲ್ಲಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಆಗಲೂ ರೈತರಿಂದ ಇದೇ ರೀತಿಯ ಪ್ರತಿಭಟನೆಯನ್ನು ಎದುರಿಸಿದ್ದರು. ಕಾರ್ಯಕ್ರಮದ ನಂತರ ಪ್ರತಿಭಟನಾ ನಿರತ ರೈತರನ್ನ ಉದ್ಯೋಗವಿಲ್ಲದ ಮದ್ಯವ್ಯಸನಿಗಳು ಎಂದು ಕರೆದಿದ್ದರು. ಹಾಗಾಗಿ ಕ್ರೋಧಗೊಂಡ ರೈತರು ಇಂದು ಹಿಸಾರ್‌ನಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲು ಕಾರಣವಾಗಿದೆ ಎನ್ನಲಾಗಿದೆ.

ರೈತರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸಿ, ಬಿಜೆಪಿ ಸಂಸದರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದ ಭಾಗವಾಗಿ ನಾರ್ನಾಂಡ್‌ನಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ರೈತರನ್ನು ತಡೆಯಲು ಪೊಲೀಸರು ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ರೈತರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರೈತ ಪ್ರತಿಭಟನಾಕಾರರು ಪೊಲೀಸರು ಮತ್ತು ಅರೆಸೈನಿಕ ಪಡೆಗಳೊಂದಿಗೆ ವಾಗ್ವಾದ ನಡೆಸಿದರು. ಇಡೀ ಘಟನೆಯಲ್ಲಿ ಒಬ್ಬ ಅರೆಸೇನಾ ಪಡೆಯ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

“ನನ್ನ ಕಾರ್ಯಕ್ರಮವನ್ನು ಮುಗಿಸಿ, ಮತ್ತೊಂದು ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕೆಲವರು ನನ್ನ ಕಾರಿನ ಮೇಲೆ ಲಾಠಿಗಳನ್ನು ಎಸೆದರು. ಕಾರನ್ನು ಹಾನಿಗೊಳಿಸಿದರು. ಯಾರಿಗೂ ಗಾಯವಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನಾನು ಹರಿಯಾಣ ಡಿಜಿಪಿ ಮತ್ತು ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ. ನಾನು ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದೇನೆ. ಇದು ಸ್ಪಷ್ಟವಾಗಿ ಕೊಲೆ ಯತ್ನವಾಗಿದೆ” ಎಂದು ಜಾಂಗ್ರಾ ಹೇಳಿದ್ದಾರೆ.

ಅಲ್ಲಿ ಪ್ರತಿಭಟಿಸುತ್ತಿರುವವರು ರೈತರಲ್ಲ, ಅವರಿಗೆ ಕೃಷಿ ಕಾಯ್ದೆಗಳ ಬಗ್ಗೆ ತಿಳಿದಿಲ್ಲ. ನಿಹಾಂಗ್ ಗಳು ಒಬ್ಬನನ್ನು ಕೊಂದಿದ್ದಾರೆ. ಅವರು ಉದ್ಯೋಗವಿಲ್ಲದ ಮದ್ಯವ್ಯಸನಿಗಳು ಎಮದು ಜಾಂಗ್ರಾ ನಿನ್ನೆ ಹೇಳಿಕೆ ಕೊಟ್ಟಿದ್ದರು. ಸಿಟ್ಟಿಗೆದ್ದ ರೈತರು ಇಂದು ಪ್ರತಿಭಟನೆ ನಡೆಸಿದ್ದಾರೆ.

ಒಕ್ಕೂಟ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಎಂಎಸ್‌ಪಿ ಖಾತ್ರಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ 11 ತಿಂಗಳು ತುಂಬಿವೆ. ಇದೇ ನವೆಂಬರ್ 26ರವರೆಗೆ ಒಕ್ಕೂಟ ಸರ್ಕಾರಕ್ಕೆ ಸಮಯ ನೀಡಿರುವ ರೈತರು ತಮ್ಮ ಹಕ್ಕೊತ್ತಾಯಗಳು ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಸಚಿವರು, ಶಾಸಕರು, ಸಂಸದರು ಎಲ್ಲೆ ಹೋದರು ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ:ರೈತ ಹೋರಾಟದ ಕಣದಲ್ಲಿ ದೀಪಾವಳಿ ಆಚರಣೆ ಹೀಗಿದೆ? ಫೋಟೊಗಳಲ್ಲಿ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read