ಕೆಲಸ ಕಳೆದುಕೊಂಡ ಒತ್ತಡದಲ್ಲಿದಲ್ಲಿ ಜೀವನ ನಿರ್ವಹಣೆ ಮಾಡಲು ವಿಫಲವಾದ ಸಾಫ್ಟ್‌ವೇರ್ ದಂಪತಿಯೊಂದು ತನ್ನ ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜರುಗಿದೆ.
ಇಂದೋರ್‌ನ ಖುಡೆಲ್ ಪ್ರದೇಶದ ರೆಸಾರ್ಟ್‌ನಲ್ಲಿ ಅಭಿಷೇಕ್ ಸಕ್ಸೇನಾ (45), ಅವರ ಪತ್ನಿ ಪ್ರೀತಿ ಸಕ್ಸೇನಾ (42), ಅವರ 14 ವರ್ಷದ ಅವಳಿ ಮಕ್ಕಳಾದ ಮಗ ಅಡ್ವಿತ್ ಮತ್ತು ಮಗಳು ಅನನ್ಯಾ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.
ಅಭಿಷೇಕ್ ಸಕ್ಸೇನಾ ಸೋಡಿಯಂ ನೈಟ್ರೇಟ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿದ ಸಾಕ್ಷಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಬಹುಶಃ ಅವನು ತನ್ನ ಕುಟುಂಬ ಮತ್ತು ತನ್ನನ್ನು ಕೊಲ್ಲಲು ಅದನ್ನು ಬಳಸಿರಬಹುದು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಳು ಬಂದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.
ಆನ್‌ಲೈನ್ ವಹಿವಾಟಿನಲ್ಲಿ ಆತ ನಷ್ಟ ಅನುಭವಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೂ ಅವರ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳಲ್ಲಿ ಬ್ಯಾಂಕ್ ಖಾತೆಗಳ ವಿವರಗಳು, ಇ-ಮೇಲ್ಗಳು ಮತ್ತು ಇತರ ವಿಷಯಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ..
ಅಪೋಲೋ ಡಿಬಿ ಸಿಟಿಯಲ್ಲಿರುವ ತಮ್ಮ ಬಾಡಿಗೆ ಫ್ಲ್ಯಾಟ್‌ನಲ್ಲಿ ಅಭಿಷೇಕ್ ಅವರ 82 ವರ್ಷದ ತಾಯಿ ಒಬ್ಬಂಟಿಯಾಗಿರುವಾಗ ಕುಟುಂಬವು ಬುಧವಾರ ರೆಸಾರ್ಟ್‌ಗೆ ತೆರಳಿತ್ತು. ಗುರುವಾರ ಸಂಜೆ ತನಕ ಅವರು ತಮ್ಮ ಕೊಠಡಿಯಿಂದ ಹೊರಗೆ ಬರದಿದ್ದಾಗ, ರೆಸಾರ್ಟ್ ಸಿಬ್ಬಂದಿ ಅನುಮಾನ ಬಂದು ಬಾಗಿಲು ಬಡಿದಾಗ ತೆರೆದಿರಲಿಲ್ಲ. ಕೊನೆಗೆ ಮಾಸ್ಟರ್ ಕೀ ಸಹಾಯದಿಂದ ಬಾಗಿಲು ತೆರೆದಾಗ ಮೃತ ದೇಹಗಳು ಪತ್ತೆಯಾಗಿವೆ.
ಖುಡೆಲ್ ಪೊಲೀಸ್ ಠಾಣೆಯ ಪೊಲೀಸ್ ತಂಡ ರೆಸಾರ್ಟ್ ತಲುಪಿದ್ದು, ಪರೀಕ್ಷೆಯಲ್ಲಿ ಮೃತ ವ್ಯಕ್ತಿಯ ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿದ್ದು ಅವರ ಬಾಯಿಯಲ್ಲಿ ನೊರೆ ಇರುವುದು ಕಂಡುಬಂದಿದೆ. ಒಂದು ಕೋಣೆಯಲ್ಲಿ ಬಾಟಲಿಯಲ್ಲಿನ ರಾಸಾಯನಿಕವೂ ಕಂಡುಬಂದಿದೆ.
ನಾಲ್ಕು ವರ್ಷಗಳ ಹಿಂದೆ ಈ ಕುಟುಂಬವು ದೆಹಲಿಯ ದ್ವಾರಕಾದಿಂದ ಇಂದೋರ್‌ಗೆ ಸ್ಥಳಾಂತರಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ನಡೆಸುತ್ತಿರುವ ಅಧಿಕಾರಿಯೊಬ್ಬರು, “ನಾವು ಮರಣೋತ್ತರ ವರದಿಗಾಗಿ ಕಾಯುತ್ತಿದ್ದರೂ, ಸಾಂದರ್ಭಿಕ ಸಾಕ್ಷ್ಯಗಳು ದಂಪತಿಗಳು ತಮ್ಮನ್ನು ಕೊಲ್ಲುವ ಮೊದಲು ತಮ್ಮ ಮಕ್ಕಳನ್ನು ಕೊಂದಿದ್ದಾರೆ” ಎಂದು ಸೂಚಿಸುತ್ತದೆ ಎಂದಿದ್ದಾರೆ.
ಅಭಿಷೇಕ್ ಮೊದಲು ತನ್ನ ಹೆಂಡತಿ ಮತ್ತು ಮಕ್ಕಳನ್ನು ಒಂದು ನಿರ್ದಿಷ್ಟ ಪ್ರಮಾಣದ ರಾಸಾಯನಿಕವನ್ನು ಕೊಟ್ಟು ಕೊಂದು ನಂತರ ತನ್ನನ್ನು ತಾನೇ ಕೊಂದಿರುವ ಸಾಧ್ಯತೆಯೂ ಇದೆ. ಸೋಡಿಯಂ ನೈಟ್ರೇಟ್ ಖರೀದಿಗೆ ನೀಡಿರುವ ಬೇಡಿಕೆಯ ಕುರಿತು ನಾವು ಎಂಜಿನಿಯರ್‌ನ ಲ್ಯಾಪ್‌ಟಾಪ್‌ನಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಎಂದಿದ್ದಾರೆ.
ಇಂದೋರ್‌ನ ಪಲಾಸಿಯಾದಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಕಳೆದುಕೊಂಡಿದ್ದರಿಂದ ಟೆಕ್ಕಿ ಅಭಿಷೇಕ್ ಸಕ್ಸೇನಾ ಬಹುಶಃ ಒತ್ತಡಕ್ಕೆ ಒಳಗಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಅವರ ಪತ್ನಿ ಬಹುರಾಷ್ಟ್ರೀಯ ಇ-ಕಾಮರ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಜೀವನ ನಡೆಸುವಷ್ಟು ಸಂಬಳ ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯ ನಂತರ ಶುಕ್ರವಾರ ಶವಗಳನ್ನು ದೆಹಲಿಯ ಕೆಲವು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


