Homeಮುಖಪುಟಏನಿದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ? ಯಾರೆಲ್ಲಾ ಪಡೆದಿದ್ದಾರೆ?

ಏನಿದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ? ಯಾರೆಲ್ಲಾ ಪಡೆದಿದ್ದಾರೆ?

- Advertisement -
- Advertisement -

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಚಿತ್ರರಂಗದಲ್ಲಿ ಜೀವಮಾನದ ಸಾಧನೆ ಮಾಡಿದವರಿಗೆ ಭಾರತ ಸರ್ಕಾರವು ನೀಡುವ ಅತ್ಯುತ್ತಮ ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರು ಪಡೆದಿರುವ ದಾದಾಸಾಹೇಬ್ ಫಾಲ್ಕೆಯವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಭಾರಿ ಈ ಪ್ರಶಸ್ತಿಗೆ ಹಿಂದಿ ಚಿತ್ರರಂಗದ ಹಿರಿಯ ಪ್ರಸಿದ್ದ ನಟ ಅಮಿತಾಬ್ ಬಚ್ಚನ್‌ರವರು ಭಾಜನರಾಗಿದ್ದಾರೆ.

ಚಿತ್ರಕೃಪೆ: ಸತೀಶ್ ಆಚಾರ್ಯ

ಈ ಪ್ರಶಸ್ತಿಯನ್ನು 1969ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿತು. ಈ ಪ್ರಶಸ್ತಿಯನ್ನು ಪ್ರತಿ ವರ್ಷ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ’ದಲ್ಲಿ ನೀಡಲಾಗುತ್ತದೆ. ಮೊಟ್ಟ ಮೊದಲ ಪ್ರಶಸ್ತಿಯನ್ನು ಬಾಲಿಹುಡ್‌ನ ಖ್ಯಾತ ನಟಿ ದೇವಿಕಾರಾಣೀಯವರಿಗೆ 1969ರಲ್ಲಿ ನೀಡಲಾಯಿತು. 43ನೇ ಪ್ರಶಸ್ತಿಯನ್ನು 1995ರಲ್ಲಿ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ. ರಾಜ್ ಕುಮಾರ್ ಅವರು ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡ ಚಿತ್ರರಂಗದ ಏಕೈಕ ನಟರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಈ ಪ್ರಶಸ್ತಿಯನ್ನು ಕೇವಲ ಬೆರಳೆಣಿಕೆಯ ಸಿನಿಮಾಗಳಲ್ಲಿ ಮಿಂಚಿದವರಿಗೆ ನೀಡಲಾಗುವುದಿಲ್ಲ. ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಮತ್ತು ಚಿತ್ರರಂಗದಲ್ಲಿ ಸುಧೀರ್ಘ ಕೊಡುಗೆ ನೀಡಿದವರಿಗೆ ಭಾರತ ಸರ್ಕಾರ ನೀಡಲಾಗುವ ಪ್ರಶಸ್ತಿ ಇದು.

ಯಾರೂ ಈ ದಾದಾಸಾಹೇಬ್ ಫಾಲ್ಕೆ?

ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ ಫಾಲ್ಕೆಯವರು ವಿಜೃಂಭಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಪಿತಾಮಹರೆಂದು ಕರೆಯಲ್ಪಡುವ ದಾದಾ ಸಾಹೇಬ್ ಫಾಲ್ಕೆಯವರ ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. ಇವರು ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಫಾಲ್ಕೆಯವರು ವೃತ್ತಿ ಜೀವನಕ್ಕಾಗಿ ಮುಂಬಯಿಯಲ್ಲಿ ನೆಲೆಸಿದ್ದರು.

ಅದೃಷ್ಟವಶಾತ್ ಇವರಿಗೆ ಮುಂಬೈನ ಪ್ರಸಿದ್ಧ ‘ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿ’ಗೆ ಪ್ರವೇಶ ದೊರಕಿತು. ನಂತರ ಮುಂದಿನ ಕಲಿಕೆಗಾಗಿ ‘ಬರೋಡದ ಕಲಾಭವನ’ ಸೇರಿದರು. ಶಿಕ್ಷಣವನ್ನು ಮುಗಿಸಿದ ಇವರಿಗೆ ‘ಸರಕಾರಿ ಪ್ರಾಚ್ಯವಸ್ತು ಇಲಾಖೆ’ಯಲ್ಲಿ ‘ಚಿತ್ರಕಾರ’ರಾಗಿ, ‘ಛಾಯಾಚಿತ್ರಗಾರ’ರಾಗಿ 1903 ರಲ್ಲಿ ‘ಖಾಯಂ ನೌಕರಿ’ಯಲ್ಲಿ ಭರ್ತಿಯಾದರು. ಅಲ್ಲಿ ‘ಪ್ರೊ.ಗುಜ್ಜರ್’ ಎಂಬುವವರು ಇವರ ಆಸಕ್ತಿಯನ್ನು ನೋಡಿ ಛಾಯಾಚಿತ್ರ ವಿಭಾಗದ ಮೇಲ್ವಿಚಾರಕನಾಗಿ ನೇಮಿಸಿದರು. ಅಲ್ಲಿಂದ ಧುಂಡಿರಾಜರು ‘ಫೋಟೋ-ಕೆಮಿಕಲ್ ರಂಗ’ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು.

ಫಾಲ್ಕೆಯವರು ಒಮ್ಮೆ ಬೇಸರ ಕಳೆಯಲೆಂದು “ಲೈಫ್ ಆಫ್ ಕ್ರೈಸ್ಟ್” ಎಂಬ ಇಂಗ್ಲೀಷ್ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಚಿತ್ರಮಂದಿರದ ಬಳಿ ಎಸೆದಿದ್ದ ರೀಲಿನ ಸಣ್ಣ ಸಣ್ಣ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಮಸೂರದ ಸಹಾಯದಿಂದ ನೋಡಿದರು ನಂತರ ಆಟಿಕೆಯ ಸಿನಿಮಾ ಪ್ರದರ್ಶಿಸುವ ಯಂತ್ರವೊಂದನ್ನು, ಸಣ್ಣ ಪ್ರಮಾಣದ ರೀಲನ್ನು ತಂದು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು. ಅಲ್ಲಿಂದ ಇವರಿಗೆ ಅಪ್ಪಟ ಭಾರತೀಯ ಚಿತ್ರ ಮಾಡಬೇಕೆಂಬ ಹಂಬಲ ಮೂಡಿತು. ತಮ್ಮ ಸಮಸ್ತ ಆಸ್ತಿಯನ್ನು ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ತೆರಳಿದರು.

ಅಲ್ಲಿನ ‘ಚಿತ್ರ ನಿರ್ಮಾಪಕ ಸಿಸಿಲ್ ‘ ಅವರ ಗರಡಿಯಲ್ಲಿ ಚಲನಚಿತ್ರ ನಿರ್ಮಾಣದ ಎಲ್ಲಾ ವಿಭಾಗಗಳನ್ನು ಅಧ್ಯಯನ ಮಾಡಿ, ಚಿತ್ರ ನಿರ್ಮಾಣದ ಅಚಲ ನಿರ್ಧಾರದೊಂದಿಗೆ ಭಾರತಕ್ಕೆ ಹಿಂದಿರುಗಿದರು. ಫಾಲ್ಕೆಯವರು ತಮ್ಮ ಮನೆಯನ್ನೇ ಫಾಲ್ಕೆ ಫಿಲ್ಮ್ ಸಂಸ್ಥೆಯಾಗಿ ಬಳಸಿಕೊಂಡಿದ್ದರು. ‘ರಾಜಾ ಹರಿಶ್ಚಂದ್ರನ ಕಥೆ’ಯನ್ನು ಸಿನಿಮಾ ಮಾಡಲು ಮುಂದಾದ ಫಾಲ್ಕೆಯವರು ಲೇಖನ, ನಿರ್ಮಾಣ ಕಾರ್ಯ, ನಿರ್ದೇಶನ, ಹಾಗೂ ನಟನೆ ಮತ್ತು ಛಾಯಾಗ್ರಹಣವನ್ನೂ ಒಬ್ಬರೇ ಸಮರ್ಪಕವಾಗಿ ನಿರ್ವಹಿಸಿದರು. ಈ ಚಿತ್ರವೂ ಭಾರತದ ಪ್ರಪಥಮ ಸಿನಿಮಾವೆಂದು ಖ್ಯಾತಿ ಪಡೆಯಿತು.

ಈ ಸಿನಿಮಾದ ಮೂಲಕ ಭಾರತೀಯ ಚಲನಚಿತ್ರರಂಗದ ಮಾಯಾಲೋಕವನ್ನು ಸೃಷ್ಟಿಸಿದ ಕೀರ್ತಿ ಫಾಲ್ಕೆಯವರದ್ದು. ಹಾಗಾಗಿಯೇ ಇವರನ್ನು ಭಾರತೀಯ ಚಿತ್ರರಂಗದ ಪಿತಾಮಹನೆಂದು ಕರೆಯಲಾಗುತ್ತಿದೆ. ಇವರ ನೆನಪಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಪ್ರಶಸ್ತಿ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ. ಜೊತೆಗೆ ಸರ್ಕಾರ ಇವರ ಹೆಸರಿನಲ್ಲಿ ಅಂಚೇ ಚೀಟಿಯನ್ನು ಸಹ ಬಿಡುಗಡೆ ಮಾಡಿತ್ತು.

ನಟ ಯಶ್ ಪಡೆದ ದಕ್ಷಿಣ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಯಾವುದು.

ಭಾರತ ಸರ್ಕಾರ ನೀಡುವ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಅಲ್ಲದೆ, ಫಾಲ್ಕೆಯವರ ಹೆಸರಿನಲ್ಲಿ ಹಲವಾರು ಅಕಾಡೆಮಿಗಳು ಮತ್ತು ಅವಾರ್ಡ್‌ಗಳು ಹುಟ್ಟಿಕೊಂಡಿವೆ. ಅಂತೆಯೆ ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ ಫೆಸ್ಟ್ ಕೂಡ ಒಂದು. ಇದು ಮೊನ್ನೆ ಹೈದರಾಬಾದ್‌ನಲ್ಲಿ ಕಾರ್ಯಕ್ರಮವನ್ನು ನಡೆಸಿತು. ಮೊತ್ತಮೊದಲ ಬಾರಿಗೆ ಅದು ‘ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ’ಯನ್ನು ನೀಡಿದೆ. ಇದು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಆ ವರ್ಷ ಹೆಚ್ಚು ಖ್ಯಾತಿ ಪಡೆದ ಮತ್ತು ಉತ್ತಮ ನಟನೆಗೆ ನೀಡಲಾಗುವ ಪ್ರಶಸ್ತಿ. ಕೆಜಿಎಫ್-1 ಸಿನಿಮಾದ ಅಭಿನಯಕ್ಕಾಗಿ ನಟ ಯಶ್ ಈ ಪ್ರಶಸ್ತಿ ವಿಜೇತರಾಗಿದ್ದಾರೆ. ಆದರೆ ಇದು ಭಾರತ ಸರ್ಕಾರ ಪ್ರತಿ ವರ್ಷ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಗುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಯಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...