ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ ಫ್ರೆಡೆರಿಕ್ ಏಂಗೆಲ್ಸ್‌ರವರ ಜನ್ಮ ದ್ವಿಶತಮಾನೋತ್ಸವದ ಅಂಗವಾಗಿ ಅವರ ಫ್ರೆಡೆರಿಕ್ ಏಂಗೆಲ್ಸ್ ಮತ್ತು ಜರ್ಮನ್ ಸಿದ್ಧಾಂತ ಕನ್ನಡ ಪುಸ್ತಕಗಳು ಜುಲೈ 20, 21 ರಂದು ಲೋಕಾರ್ಪಣೆಗೊಳ್ಳಲಿವೆ.
ಮಾರ್ಕ್ಸ್‌ವಾದ ಎಂದು ಕರೆಯಲಾಗುತ್ತಿರುವ ವಿಶಿಷ್ಟ ಲೋಕದೃಷ್ಟಿಯನ್ನು ಬೆಳೆಸುವಲ್ಲಿ ಮಾರ್ಕ್ಸ್‌ರ ಜತೆ ಏಂಗೆಲ್ಸ್ ಅವರ ಪಾತ್ರ ಹೆಚ್ಚು ಕಡಿಮೆ ಸಮಾನವಾಗಿತ್ತು. ಹಾಗಾಗಿ ಏಂಗೆಲ್ಸ್ ಅವರ ಜನ್ಮ ದ್ವಿಶತಮಾನೋತ್ಸವವನ್ನು ಮಾರ್ಕ್ಸ್ ವಾದದ ಲೋಕದೃಷ್ಟಿಯ ಆಧಾರಸ್ತಂಭಗಳು ಎನಿಸಿಕೊಂಡಿರುವ ಅವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಾದ (ಈ ಹಿಂದೆ ಮಾರ್ಕ್ಸ್200–ಕ್ಯಾಪಿಟಲ್ 150 ಯೋಜನೆಯನ್ನು ಸಫಲವಾಗಿ ಪೂರ್ಣಗೊಳಿಸಿದ) ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಜಂಟಿಯಾಗಿ ಯೋಜಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಿರಿಯ ಹೋರಾಟಗಾರರಾದ ಡಾ.ಜಿ.ರಾಮಕೃಷ್ಣರವರು ರಚಿಸಿರುವ ಫ್ರೆಡೆರಿಕ್ ಎಂಗೆಲ್ಸ್ ಪುಸ್ತಕವನ್ನು ಜುಲೈ 20 ರಂದು ಝೂಮ್ ಆನ್‌ಲೈನ್ ಕಾರ್ಯಕ್ರದಲ್ಲಿ ಹಿರಿಯ ಮಾರ್ಕ್ಸ್ ವಾದಿ ವಿದ್ವಾಂಸರಾದ ಪ್ರೊ. ಕೆ.ಕೆ.ತೆಕ್ಕೆಡೆತ್ ರವರು ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ “ವೈಜ್ಞಾನಿಕ ಸಮಾಜವಾದಕ್ಕೆ ಏಂಗೆಲ್ಸ್ ಕೊಡುಗೆ” ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಅದೇ ರೀತಿಯಲ್ಲಿ ಜುಲೈ 21ರಂದು ಪ್ರೊ.ವಿ.ಎನ್.ಲಕ್ಷ್ಮಿನಾರಾಯಣರವರು ರಚಿಸಿರುವ “ಜರ್ಮನ್ ಸಿದ್ಧಾಂತ’ದ ಪುಸ್ತಕವನ್ನು ಪ್ರೊ.ರಾಜೇಂದ್ರ ಚೆನ್ನಿಯವರು ಬಿಡುಗಡೆಗೊಳಿಸಿ ‘ಕರ್ನಾಟಕದ ಬೌದ್ಧಿಕ ಪರಂಪರೆ ಮತ್ತು ಸಂಕಥನಗಳಲ್ಲಿ ಭಾವನಾವಾದದ ಪ್ರಭಾವ’ ದ ಕುರಿತು ಸಂವಾದದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಇದರೊಂದಿಗೆ ಏಂಗೆಲ್ಸ್ 200 ಮಾಲಿಕೆಯಲ್ಲಿ ಮುಂದೆ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವದ ಉಗಮ (ಡಾ.ಎಚ್.ಜಿ.ಜಯಲಕ್ಷ್ಮಿ), ಪ್ರಕೃತಿಯ ಗತಿತಾರ್ಕಿಕತೆ (ಸುಬ್ರಮಣ್ಯ ಗುಡ್ಗೆ), ಜರ್ಮನಿಯ ರೈತ ಯುದ್ಧಗಳು (ನಾ. ದಿವಾಕರ್), ಬಂಡವಾಳ ಸಂಪುಟ- 2 (ಪ್ರೊ.ವಿ.ಎನ್.ಲಕ್ಷ್ಮಿನಾರಾಯಣ, ಪಿ.ಎ.ಕುಮಾರ್) ಪುಸ್ತಕಗಳನ್ನು ಕನ್ನಡದಲ್ಲಿ ತರುವುದಾಗಿ ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಘೋಷಿಸಿವೆ. ರೂ. 1800 ಬೆಲೆಯ 6 ಪುಸ್ತಕಗಳ ಸೆಟ್ ಖರೀದಿಗೆ ರೂ. 1200 ವಿಶೇಷ ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನು ಖರೀದಿಸುವ ಮೂಲಕ ಪಡೆಯಬಹುದು.

ಈ ಎರಡು ಕಾರ್ಯಕ್ರಮಗಳು ಜನಶಕ್ತಿ ಮೀಡಿಯಾ (Janashakthi Media) ಫೇಸ್ ಬುಕ್ ಮತ್ತು ಯೂಟ್ಯೂಬ್ ತಾಣಗಳಲ್ಲಿ ಲೈವ್ ಆಗಿ ಪ್ರಸಾರವಾಗಲಿವೆ.
ಇದನ್ನೂ ಓದಿ: ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು


