ಬಿಹಾರದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ಭರವಸೆ ನೀಡಿದ ಕೆಲವು ದಿನಗಳ ನಂತರ, ಮಧ್ಯಪ್ರದೇಶದಲ್ಲಿ ನವೆಂಬರ್ 3 ರಂದು ನಡೆಯಲಿರುವ 28 ವಿಧಾನಸಭಾ ಉಪಚುನಾವಣೆಗಾಗಿ ಅಲ್ಲಿನ ಆಡಳಿತಾರೂಢ ಬಿಜೆಪಿ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೊನ ಲಸಿಕೆ ನೀಡುವುದಾಗಿ ಘೋಷಿಸಿದೆ.
ಪ್ರತಿಪಕ್ಷ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇಡೀ ರಾಜ್ಯಕ್ಕೆ 52 ಅಂಶಗಳ ಅಭಿವೃದ್ಧಿ ಯೋಜನೆಯ ಭರವಸೆ ನೀಡಿದೆ.
ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ
ಆಡಳಿತಾರೂಢ ಬಿಜೆಪಿಯೂ ಸಹ ಉಪ-ಚುನಾವಣಾ ಪ್ರಣಾಳಿಕೆಯ ಭಾಗವಾಗಿ, ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ಸೇರಿದಂತೆ ಇಡೀ ರಾಜ್ಯಕ್ಕೆ ಕೆಲವು ಸಾಮಾನ್ಯ ಭರವಸೆಗಳನ್ನು ನೀಡಿದೆ.
ಕಾಂಗ್ರೆಸ್ ಪಕ್ಷವು ಸಾಲಮನ್ನಾ ಭರವಸೆಗೆ ಕೌಂಟರ್ ಆಗಿ ಬಿಜೆಪಿಯು ಉಚಿತ ಲಸಿಕೆಯ ಪ್ರಸ್ತಾವವನ್ನು ಮುಂದಿಟ್ಟಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ನಮ್ಮ ಜನತೆಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯೇ ನಳಿನ್ ಕುಮಾರ್?- ಸಿದ್ದು ಗರಂ
ಬಿಜೆಪಿಯ ಭರವಸೆಯನ್ನು ಪ್ರಶ್ನಿಸಿದ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಭೂಪೇಂದ್ರ ಗುಪ್ತಾ, “ಇಡೀ ಜಗತ್ತು ಇನ್ನೂ ಕೊರೊನಾ ವೈರಸ್ ವಿರುದ್ಧ ಪ್ರಬಲವಾದ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುತ್ತಿರುವಾಗ, ಬಿಜೆಪಿಯು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಲಸಿಕೆ ನೀಡುವ ಭರವಸೆ ಹೇಗೆ ನೀಡುತ್ತಿದೆ? ಸಿಎಂ ಚೌಹಾನ್ ತಮ್ಮ ಜೂ಼ತ್‌ಕಿ ಸರ್ಕಾರ್ (ಸುಳ್ಳಿನ ಸರ್ಕಾರ) ನಡೆಸುವುದನ್ನು ನಿಲ್ಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಪ್ರಣಾಳಿಕೆಯನ್ನು ಅನುಪ್ಪೂರು ಜಿಲ್ಲೆಯಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮತ್ತು ಮಾಜಿ ಸಿಎಂ ಉಮಾ ಭಾರತಿ ರೈಸನ್ ಜಿಲ್ಲೆಯ ಸಾಂಚಿ ಕ್ಷೇತ್ರದಲ್ಲಿ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಇನ್ನೂ ಆವಿಷ್ಕಾರವಾಗದ ಕೊರೊನಾ ಲಸಿಕೆಯನ್ನು ಉಚಿತ ನೀಡುತ್ತೇವೆಂದ BJP!
ಆ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಗಳನ್ನು ಪರಿಹರಿಸಲು ನರ್ಮದಾ, ಬೆಟ್ವಾ, ಚಂಬಲ್ ಮತ್ತು ಪಾರ್ವತಿಯಿಂದ ನೀರನ್ನು ಈ ನದಿಗಳಿಗೆ ಹತ್ತಿರವಿರುವ ಪ್ರದೇಶಗಳಿಗೆ ಕೊಂಡೊಯ್ಯುವಂತಹ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಇದರಲ್ಲಿ ಭರವಸೆ ನೀಡಲಾಗಿದೆ.
ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಕೂಟವು ಉಚಿತ ಲಸಿಕೆಯ ಭರವಸೆ ನೀಡಿದ ನಂತರ ತಮಿಳುನಾಡು ಸರ್ಕಾರವೂ ಕೂಡ ಇದೇ ಭರವಸೆಯನ್ನು ನೀಡಿದೆ. ಬಿಜೆಪಿಯ ಈ ಧೋರಣೆಯನ್ನು ಖಂಡಿಸಿ ವಿರೋಧ ಪಕ್ಷಗಳೂ ಸೇರಿದಂತೆ ಅನೇಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್ ಆದ ಬಿಜೆಪಿ ಪ್ರಣಾಳಿಕೆ!
ಬಿಜೆಪಿಯು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೂ ಒಳಗಾಗಿತ್ತು. ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ ಎಂದು ಶಿವಸೇನೆ ಪ್ರಶ್ನೆ ಮಾಡಿತ್ತು. ನಮ್ಮ ಜನತೆಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯೇ ನಳಿನ್ ಕುಮಾರ್? ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದರು. ಇನ್ನೂ ಕೆಲವರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇದು ಬಿಜೆಪಿಯ ಕೊಳಕು ರಾಜಕೀಯ ಎಂದು ಖಂಡಿಸಿದ್ದಾರೆ.
ಇನ್ನೂ ಬಾರದ ಲಸಿಕೆಯನ್ನು ಉಚಿತವಾಗಿ ಕೊಡುತ್ತೇವೆ ಎಂದಿರುವ ಬಿಜೆಪಿ ಸರ್ಕಾರ ಕೊರೊನಾ ಸಾಂಕ್ರಾಮಿಕ ರೋಗವನ್ನು ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ಬಿಜೆಪಿಯ ಸ್ಪಷ್ಟ ಧೋರಣೆ ವ್ಯಕ್ತವಾಗುತ್ತಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಲಸಿಕೆ ಮರೀಚಿಕೆಯಾಗಬಹುದು. ಬೇಜವಾಬ್ದಾರಿಯುತ ಸರ್ಕಾರದ ಈ ನಿಲುವು ಭಾರತದ ಎಷ್ಟು ಸಾಮಾನ್ಯ ಜನರನ್ನು ಬಲಿತೆಗೆದುಕೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೊರೊನಾ ನೆಪ: 10ಸಾವಿರ ಕೋಟಿ ಹಗರಣ- ಎಎಪಿಯ ಪೃಥ್ವಿ ರೆಡ್ಡಿ ಆರೋಪ


