ಉಚಿತವಾಗಿ ಕಾನೂನು ನೆರವು ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರು ಎಂಬ ಕಾರಣಕ್ಕೆ ಅವರಿಗೆ ನೀಡುವ ಕಾನೂನು ನೆರವು ಕಡಿಮೆ ಗುಣಮಟ್ಟದ್ದಾಗಿ ಇರಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ (ಅ.23) ಹೇಳಿದೆ.
ಕೈದಿಗೂ ಕೂಡ ಕಾನೂನು ನೆರವು ಪಡೆಯುವ ಮೂಲಭೂತ ಹಕ್ಕಿದೆ. ಈ ಅಂಶವನ್ನು ಸಂವಿಧಾನದ 21ನೇ ವಿಧಿಯಡಿ ಗುರುತಿಸಬಹುದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ಹೇಳಿದೆ.
ಸಾಮಾಜಿಕ ಕಾರ್ಯಕರ್ತ ಸುಹಾಸ್ ಚಕ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಪೀಠ ಮೇಲಿನಂತೆ ತಿಳಿಸಿದೆ.
ವಿಚಾರಣಾ ಕೈದಿಗಳು ಅಥವಾ ಅಪರಾಧಿಗಳು ಇರಲಿ ಎಲ್ಲಾ ಕೈದಿಗಳಿಗೆ ಉಚಿತ ಕಾನೂನು ನೆರವು ಸಿಗುವಂತಾಗಬೇಕು ಎಂದಿರುವ ನ್ಯಾಯಪೀಠ, ಈ ಕುರಿತು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ 1987ರ ಅಡಿ ಹಲವು ನಿರ್ದೇಶನಗಳನ್ನು ನೀಡಿದೆ.
ಒಂದು ವೇಳೆ ಬಡವರು ಮತ್ತು ನಿರ್ಗತಿಕರು ಖುದ್ದಾಗಿ ಕಾನೂನು ನೆರವನ್ನು ಕೋರದಿದ್ದರೂ, ಸಂವಿಧಾನದ ವಿಧಿ 21ರ ಅನ್ವಯ ಅಂಥವರಿಗೆ ಸರ್ಕಾರದ ವೆಚ್ಚದಲ್ಲಿ ಉಚಿತ ಕಾನೂನು ನೆರವು ಒದಗಿಸಬೇಕು ಎಂದಿದೆ.
ಈ ಕುರಿತಂತೆ ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಕಾನೂನು ಸೇವಾ ಪ್ರಾಧಿಕಾರಗಳು ಪ್ರಾಯೋಜಿಸುವ ಫಲಾನುಭವಿ ಯೋಜನೆಗಳು ದೇಶದ ಪ್ರತಿ ಮೂಲೆಯನ್ನೂ ತಲುಪುವಂತೆ ಮಾಡಬೇಕು. ನಿರ್ದಿಷ್ಟವಾಗಿ ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಅ.26ಕ್ಕೆ ಕಂಬಳ ನಡೆಸುತ್ತಿಲ್ಲ : ಹೈಕೋರ್ಟ್‌ಗೆ ಮಾಹಿತಿ ನೀಡಿದ ಕಂಬಳ ಸಮಿತಿ


